অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಳೆಯಾಶ್ರಿತ ಬೇಸಾಯದಲ್ಲಿ ಮರಗಳ ಜೋಡಣೆ

ಮಳೆಯಾಶ್ರಿತ ಬೇಸಾಯದಲ್ಲಿ ಮರಗಳ ಜೋಡಣೆ

ಮರಗಳು ನಮ್ಮ ಜಮೀನಿನಲ್ಲಿ ಹೇಗೆ ಕೆಲಸ ಮಾಡುತ್ತವೆ ಎಂದು ಅರ್ಥ ಮಾಡಿಕೊಳ್ಳೋಣ.

ಮರಗಳು ಮಣ್ಣಿನಲ್ಲಿ ತೇವಾಂಶವನ್ನು ಹೇಗೆ ಕಾಪಾಡುತ್ತವೆ?

ಇದು ಅನೇಕ ರೀತಿಯಲ್ಲಿ ಆಗುತ್ತದೆ.

  1. ಸಾಮಾನ್ಯವಾಗಿ ಖಾಲಿ ನೆಲದ ಮೇಲೆ ಗಾಳಿ ನೇರವಾಗಿ ಬೀಸುವಾಗ ಮೆಲ್ಮಣ್ಣೀನಲ್ಲಿರುವ ತೇವಾಂಶ ಸಾಕಷ್ಟು ಆವಿಯಾಗಿ ನಷ್ಟವಾಗುತ್ತದೆ. ಇದು ಸಾಮಾನ್ಯವಾಗಿ ಕೃಷಿ ಜಮೀನಲ್ಲಿ ಕಂಡು ಬರುವ ಸಮಸ್ಯೆ. ಗಾಳಿ ಬೀಸುವ ದಿಕ್ಕಿಗೆ ಮರಗಳಿದ್ದಾಗ, ಅವು ಮಣ್ಣಿನ ಮೇಲ ಗಾಳಿ ನೇರವಾಗಿ ಹಾದು ಹೋಗುವುದನ್ನು ತಡೆಯುತ್ತವೆ. ಮೊದಲಿಗೆ, ರಭಸವಾಗಿ ಬೀಸುವ ಗಾಳಿಯನ್ನು ಮರದ ಸಾಲು ತಡೆದು ರಭಸವನ್ನು ತಗ್ಗಿಸುತ್ತದೆ. ಗಾಳಿ ಮರದ ಸಾಲಿನ ಮೇಲೆ ಹಾಯುವಾಗ ಮಣ್ಣಿನಿಂದ ಸಾಕಷ್ಟು ಎತ್ತರದಲ್ಲಿ  (೨೦ ಅಡಿಗೂ ಹೆಚ್ಚು) ಹಾದುಹೊಗುವುದರಿಂದ ಮೇಲ್ಮಣ್ಣಿನ ತೇವಾಂಶ ಆವಿಯಾಗಲು ಅವಕಾಶವಾಗುವುದಿಲ್ಲ. ಹೀಗಾಗಿ ತೇವಾಂಶ ಉಳಿಯುತ್ತದೆ.
  2. ಮರಗಳ ಬೇರುಗಳು ಮಣ್ಣಿನ ಪದರಗಳಲ್ಲಿ ಎಲ್ಲ ದಿಕ್ಕಿಗೂ ಸಾಕಷ್ಟು ಹರಡಿಕೊಂಡಿರುತ್ತವೆ. ಈ ಬೇರುಗಳು  ನೀರು ಸಿಕ್ಕಿದಾಗ ಹೀರಿಕೊಂಡು ಚನ್ನಾಗಿ ಉಬ್ಬಿರುತ್ತವೆ. ಮತ್ತೆ ನೀರಿನ ಕೊರತೆಯಾದಾಗ ಸಂಕುಚಿತಗೊಳ್ಳುತ್ತವೆ. ಹೀಗೆ ಬೇರುಗಳು ಸಂಕುಚಿತಗೊಂಡಾಗ ಮಣ್ಣಿನಲ್ಲಿ ಸಣ್ಣ ಸಣ್ಣ ದೊಗರೆ (ಕ್ಯಾವಿಟಿ) ಗಳು ಉಂಟಾಗಿ ನೀರು ಮತ್ತು ಗಾಳಿಯಾಡಲು ಅವಕಾಶವಾಗುತ್ತದೆ.
  3. ಮರಗಳ ಬೇರುಗಳು ಮಣ್ಣಿನಲ್ಲಿ ಚನ್ನಾಗಿ ಹರಡಿಕೊಂಡಿರುವುದರಿಂದ ಬಿದ್ದ ನೀರನ್ನು ಅಲ್ಲೇ ಹಿಡಿದು ಮೆಲ್ಪದರಗಳಿಗೆ ಸಿಗುವಂತೆ ಮಾಡುತ್ತದೆ. ಬೇರುಗಳು ಹೆಚ್ಚಾದ ನೀರನ್ನು ಮಾತ್ರ ಭೂಜಲಕ್ಕೆ ಸೇರಿಸುತ್ತವೆ. ಇದರಿಂದ ಬೆಳೆಗಳಿಗೆ ನೀರು ಸರಾಗವಾಗಿ ಸಿಗುವಂತಾಗುತ್ತದೆ.
  4. ಒಂದು ಮರ ಎಷ್ಟು ಎತ್ತರಕ್ಕೆ ನಿಂತಿರುತ್ತದೆಯೋ ಅಷ್ಟು ಎತ್ತರ ಅದರ ತೂಕದ ೫೦-೬೦% ರಷ್ಟು ನೀರು ಗಾಳಿಯಲ್ಲಿ ನಿಂತಿದೆ ಎಂದೇ  ಲೆಕ್ಕ. ಅಷ್ಟು ಯತೇಚ್ಛವಾಗಿ ಅದರಲ್ಲಿ ನೀರಿರುತ್ತದೆ. ಈ ಮರಗಳಲ್ಲಿ ಎಲೆಗಳಿಂದ ನೀರು ಹೊರಸೂಸುವ ಕ್ರಿಯೆ (ಬಾಷ್ಪೀಕರಣ)  ಕೂಡ ನಿರಂತರವಾಗಿ ನಡೆಯುತ್ತಿರುತ್ತದೆ. ಇದರಿಂದ ವಾತಾವರಣದ ಗಾಳಿಯಲ್ಲಿ ತೇವಾಂಶ ಹೆಚ್ಚಿ ಅದು ಬೆಳೆಗಳಿಗೆ ಸಿಗುವಂತಾಗುತ್ತದೆ.
  5. ಮರಗಳ ಉದುರೆಲೆ ನೆಲದಲ್ಲಿ ಬಿದ್ದು ಮಣ್ಣಿನಲ್ಲಿ ಸೇರುತ್ತಾ ಕಾಲಕ್ರಮೇಣ ಉತ್ತಮವಾದ ಹ್ಯುಮಸ್ ತಯಾರಾಗಿ ಅದು ತೇವಾಂಶ ಹಿಡಿದಿಡುತ್ತದೆ.

ಮರಗಳಿಂದ ಮಣ್ಣಿಗೆ ಪೋಷಕಾಂಶಗಳು ಸಿಕ್ಕಿ ಫಲವತ್ತತೆ ಹೆಚ್ಚುತ್ತದೆ ಹೇಗೆ?

 

  1. ಮರಗಳ ದೊಡ್ಡ ಮತ್ತು ಸೂಕ್ಷ್ಮ ಬೇರುಗಳು ಮಣ್ಣಿನ ಕೆಳಪದರಗಳಲ್ಲಿ ಯತೇಚ್ಛವಾಗಿ ಹರಡಿಕೊಂಡಿರುತ್ತವೆ. ಈ ಬೇರುಗಳು ನಿರಂತರವಾಗಿ ಸಾಯುತ್ತಾ ಮತ್ತೆ ಹೊಸ ಬೇರುಗಳು ಹುಟ್ಟುತ್ತಿರುತ್ತವೆ. ಹೀಗೆ ಅಪಾರ ಪ್ರಮಾಣದ ದ್ರವ್ಯ ರಾಶಿ ಸೃಷ್ಟಿಯಾಗುತ್ತಿರುತ್ತದೆ. ಇದರಿಂದ ಮಣ್ಣಿಗೆ ಯತೇಚ್ಛವಾಗಿ ಪೋಷಕಾಂಶಗಳು ದಕ್ಕುತ್ತದೆ.
  2. ಮರಗಳು ಆಳವಾಗಿ ಬೇರು ಬಿಡುವುದರಿಂದ ಮಣ್ಣಿನ ಆಳ ಪದರಗಳಲ್ಲಿ ಲಭ್ಯವಿರುವ ಲಘು ಪೋಷಕಾಂಶಗಳನ್ನು ತೆಗೆದುಕೊಂಡು ಬೆಳೆಯುತ್ತದೆ. ಈ ಲಘು ಪೋಷಕಾಂಶಗಳನ್ನು  ಎಳೆಗಳು ಬಳಸಿಕೊಳ್ಳುತ್ತವೆ. ಎಲೆಗಳು ಉದುರಿ ಅಥವಾ ಹಸಿರೆಲೆ ಗೊಬ್ಬರಾಗಿ ಮಣ್ಣಿನಲ್ಲಿ ಸೇರಿದಾಗ ಈ ಲಘು ಪೋಷಕಾಂಶಗಳು ಮಣ್ಣು ಸೇರಿ ಬೆಳೆಗಳಿಗೆ ಲಭ್ಯವಾಗುತ್ತವೆ. ಹೀಗಾಗಿ ಮರಗಳಿದ್ದ ಜಮೀನಲ್ಲಿ ಬೆಳೆಯುವ ಬೆಳೆಗಳಿಗೆ, ತಮಗೆ ನೇರವಾದ ಮಣ್ಣಿನಿಂದ ತೆಗೆದುಕೊಳ್ಳಲು ಸಾಧ್ಯವಿರದ ಪೋಷಕಾಂಶಗಳನ್ನು ಮರಗಳ ಮೂಲಕ ಪಡೆಯುವ ಅವಕಾಶವಿರುತ್ತದೆ. ಬೇರೆ ಬೇರೆ ಮರಗಳು ಮಣ್ಣಿನ ಬೇರೆ ಬೇರೆ ಆಳಗಳಿಂದ ಪೋಷಕಾಂಶಗಳನ್ನು ತೆಗೆದುಕೊಳ್ಳುವುದರಿಂದ ಬೆಳೆಗಳಿಗೆ ಬಹು ಬಗೆಯ ಪೋಷಕಾಂಶಗಳು ಮರಗಳಿಂದ ದೊರಕುತ್ತವೆ.
  3. ಮರಕ್ಕೆ ಯಾವುದೋ ಒಂದು ಪೋಷಕಾಂಶ ಬೇಕಿದ್ದು ಅದು ಮಣ್ಣಿನಲ್ಲಿ ಸಿಗದೇ ಹೋಗಬಹುದು. ಆಗ ಅದು ತನಗೆ ಲಭ್ಯವಿರುವ ಒಂದು ಪೋಷಕಾಂಶವನ್ನೆ ತನಗೆ ಬೇಕಾದ ಇನ್ನೊಂದು ಪೋಷಕಾಂಶವಾಗಿ  ಪರಿವರ್ತಿಸಬಲ್ಲುದು. ಇದು ಸಾವಿರಾರು ವರ್ಷಗಳಿಂದ ನಡೆಯುತ್ತಿದೆ. ತಾಮ್ರ ಚಿನ್ನವಾಗಿ ಪರಿವರ್ತಿತವಾಗುವುದು ಒಂದು ಉದಾಹರಣೆ. ಅಂದರೆ ಬಹಳ ಹತ್ತಿರದ ಸಂಬಂಧ ಇರುವ ದಾತುಗಳು ಹೀಗೆ ಒಂದರಿಂದ ಒಂದಾಗಿ ಪರಿವರ್ತಿತವಾಗಬಲ್ಲವು. ಮರಗಳಿಗೆ ಹೀಗೆ ಪರಿವರ್ತಿಸುವ ವಿಶೇಷ ಸಾಮರ್ಥ್ಯ ಇದೆ. ಇದನ್ನು 'ಟ್ರಾನ್ಸ್ ಮ್ಯುಟೆಶನ್' ಎನ್ನುತ್ತಾರೆ. ಮರಗಳ ಈ ಸಾಮರ್ಥ್ಯದಿಂದಾಗಿ ಬೆಳೆಗಳಿಗೆ ಅಪರೂಪದ ಪೋಷಕಾಂಶಗಳು ಕೂಡ ಸಿಗುವಂತಾಗುತ್ತದೆ.
  4. ಕೆಲವು ಮರಗಳು ಕೆಲವು ರೀತಿಯ ಪೋಷಕಾಂಶಗಳನ್ನು ವಿಶೇಷವಾಗಿ ಆಯ್ಕೆ ಮಾಡಿಕೊಂಡು ಬಳಸಿಕೊಳ್ಳುತ್ತವೆ. ಇದನ್ನು ಸೆಲೆಕ್ಟಿವ್ ಅಬ್ಸಾರ್ಪ್ಶನ್ ಎನ್ನುತ್ತಾರೆ. ಇದರಿಂದ ಕೂಡ ಅಲ್ಲಿ ಬೆಳೆಯುವ ಬೆಳೆಗಳಿಗೆ ಮೇಲೆ ಹೇಳಿದ ರೀತಿಯಲ್ಲಿ ಹೆಚ್ಚಿನ ಲಾಭವಿರುತ್ತದೆ. ಆದ್ದರಿಂದ ನಾವು ಅನೇಕ ಜಾತಿಯ ಮರಗಳನ್ನು ಆಯ್ಕೆ ಮಾಡಿಕೊಂಡು ಬೆಳೆಸುವುದು ಬಹಳ ಮುಖ್ಯವಾಗುತ್ತದೆ. ಈ ವೈವಿಧ್ಯತೆ ಬಹಳ ಮುಖ್ಯ.
  5. ಮರಗಳ ಪರಿಸರ ವ್ಯವಸ್ಥೆಯಲ್ಲಿ ಕೃಷಿ ಭೂಮಿಯಲ್ಲಿ ಆದಂತೆ ಮಣ್ಣಿನ ಸವಕಳಿಯಿಂದ ಪೋಷಕಾಂಶಗಳ ನಷ್ಟ ಆಗುವುದಿಲ್ಲ.

ಮರಗಳು ತಾಪಾಂಶವನ್ನು ಹೇಗೆ ನಿಯಂತ್ರಿಸುತ್ತವೆ

ಪ್ರದೆಶಕ್ಕನುಗುಣವಾಗಿ ಮಣ್ಣು ತನಗೆ ಹಿತಮಿತವಾದ ಮಟ್ಟದ / ಪ್ರಮಾಣದ ತಾಪಾಂಶ ಹೊಂದಿರುತ್ತದೆ. ಈ ತಾಪಾಂಶ ಕಾಪಾಡುವುದು ಅಲ್ಲಿ ಬೆಳೆಯುವ ಬೆಳೆಗಳಿಗೆ ಬಹಳ ಮುಖ್ಯ. ಮರಗಳಿದ್ದಾಗ ಈ ತಾಪಾಂಶವನ್ನು ಕಾಪಾಡಿಕೊಳ್ಳಲು ಅವು ಮಣ್ಣಿಗೆ ಸಹಾಯ ಮಾಡುತ್ತವೆ. ಅಲ್ಲಿ ಕಿರು / ಸೂಕ್ಷ್ಮ ವಾತಾವರಣವನ್ನು ಸೃಷ್ಟಿ ಮಾಡುತ್ತವೆ.

ಬದುಗಳ ಮೇಲೆ ಮರಗಿಡ

ಜಮೀನಿನಲ್ಲಿ ಮರಗಳನ್ನು ಬದುಗಳಲ್ಲೂ ಮತ್ತು ಅಂಚಿನಲ್ಲಿಯೂ ಬೆಳೆಸಬಹುದು. ಬದುಗಳ ಮೇಲೆ ಹಾಕಬೇಕೆಂದರೆ ಸಸಿಗಳನ್ನು ಹಾಕಬಾರದು. ಬೀಜಗಳನ್ನು ಹಾಕಬೇಕು. ಸಸಿಗಳು  ಬದುಗಳ ಮೇಲೆ ಬೆಳೆಯುವ ಸಾಧ್ಯತೆ ಬಹಳ ಕಡಿಮೆ.ಇದು ನಮ್ಮ ಅನುಭವ. ಸಸಿಗಳನ್ನು ಹಾಕುವಾಗ ಟ್ರೆಂಚ್ (ಗುಂಡಿ) ವಿಧಾನದಲ್ಲೇ ಹಾಕಬೇಕು. ಬದುವಿನ ಪಕ್ಕದಲ್ಲಿ 2/2/2 ಅಡಿ  ಅಳತೆಯ ಟ್ರೆಂಚ್ ಗಳನ್ನು ಮಾಡಿಕೊಂಡು ಅದರಲ್ಲಿ ಸಸಿಗಳನ್ನು ಹಾಕಬೇಕು. ಆಗ ಅದು ಬೆಳೆಯುವ ಸಾಧ್ಯತೆ ಹೆಚ್ಚು.

ಗ್ಲಿರಿಸಿಡಿಯಾ, ಅಗಸೆ, ಹೊಂಗೆ ಇದೆಲ್ಲ ಬದುಗಳ ಮೇಲೆ ಹಾಕಲು ಬಹಳ ಸೂಕ್ತ.

ಸಾಗಾಣಿಕೆಯಲ್ಲಿ ಉಂಟಾದ ಆಘಾತಕ್ಕೆ ಸಸಿಗಳು ಸಾಮಾನ್ಯವಾಗಿ ಸಾಯುತ್ತವೆ.

 

ವಾರ್ಷಿಕ ಸರಾಸರಿ ೮೦೦ ಮಿ.ಮೀ  ಮಳೆ ಇದ ಕಡೆ ಬದುವುನಲ್ಲಿ ಬೀಜ ಹಾಕಿ ಗಿಡಗಳನ್ನು ಬೆಳೆಸಬಹುದು. ತುಂಬಾ ಕಡಿಮೆ ಮಳೆ ಬರುವ ಕಡೆ ಟ್ರೆಂಚ್ ವಿಧಾನದಲ್ಲೇ ಹಾಕುವುದು ಒಳ್ಳೆಯದು. ನಾವೇ ನರ್ಸರಿಯಲ್ಲಿ ಸಸಿಗಳನ್ನು ಬೆಳೆಸಿಕೊಂಡಿದ್ದು ಹಾಕುವುದು ಯಾವ ಕಾರಣಕ್ಕೂ ಅತ್ಯುತ್ತಮ. ಬೇರೆಡೆಯಿಂದ ಸಸಿಗಳನ್ನು ತಂದು ಹಾಕುವಾಗ ಕೆಲ ಸಮಸ್ಯೆಗಳಿವೆ. ಸಾಗಾಣಿಕೆಯಲ್ಲಿ ಉಂಟಾದ ಆಘಾತಕ್ಕೆ ಸಸಿಗಳು ಸಾಮಾನ್ಯವಾಗಿ ಸಾಯುತ್ತವೆ. ಆದ್ದರಿಂದ ಬೇರೆಡೆಯಿಂದ ತಂದು ಹಾಕುವ ಸಂದರ್ಭದಲ್ಲಿ, ಸಸಿಗಳನ್ನು ಒಂದು ತಿಂಗಳಾದರೂ ಮೊದಲೇ ತನ್ದಿಟ್ಟುಕೊಂಡಿದ್ದುಅದನ್ನು ಹಾಕುವ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡಿ ನಂತರ ನೆಡಬೇಕು.

ಎಷ್ಟು ಗಿಡಗಳಿರಬೇಕು

ಕೃಷಿ ಭೂಮಿಯಲ್ಲಿ ಮರಗಳು ಎನ್ನುವಾಗ ಕನಿಷ್ಠ ಕೃಷಿ ಭೂಮಿಯ ೩೦% ರಷ್ಟಾದರೂ ಮರಗಳು ಇರಬೇಕು. ಅಂದರೆ ಒಂದು ಹೆಕ್ಟೇರಿಗೆ  (ಎರಡೂವರೆ ಎಕರೆ) ೪೦೦೦ ಗಿಡಗಳನ್ನಾದರೂ ಹಾಕಬೇಕು. ಆಗಲೂ ಅದು ಕೃಷಿ ಭೂಮಿಯ ೨೦-೨೫ ರಷ್ಟಾಗುತ್ತದೆ. ಮರದ ಜಾತಿ  ಮತ್ತು ನಿರ್ವಹಣೆಯ ಕ್ರಮವನ್ನವಲಂಬಿಸಿ ೨ ಅಡಿಯಿಂದ ಒಂದು ಮೀಟರ್  ಅಂತರದಲ್ಲಿ ಹಾಕಬಹುದು. ಇದು ಹೊಲದ ಬದುಗಳಲ್ಲಿ ಮತ್ತು ಹೊಲದ ಅಂಚಿನಲ್ಲಿ ಬೇಲಿಯಾಗಿ ಹಾಕುವ ಮರಗಳನ್ನು ಒಳಗೊಂಡಿರುತ್ತದೆ. ಹೊಲದ ಅಂಚಿನಲ್ಲಿ ಬೇಲಿಯಾಗಿ ನಿರ್ಮಾಣವಾಗಬೇಕು. ನಾವು ೩೦೦೦ ಮರಗಳನ್ನು ಒಂದು ಹೆಕ್ಟೇರು ನಲ್ಲಿ ಹಾಕಿ ಯಶಸ್ವಿಯಾಗಿ ಬೆಳೆಸಿದ್ದೇವೆ.

ಆದರೆ ಜಮೀನಿನಲ್ಲಿ ಮರ ಬೆಳೆಸುವುಸುದು ಎಂದರೆ ಎಕರೆಗೆ ಒಂದು ಹತ್ತು ಮರ ಹಾಕಿದರೆ ನಡೆದೀತು ಎಂದು ಭಾವಿಸುವವರೇ ಹೆಚ್ಚು. ಇದಕ್ಕೆ ನಾನು ಒಂದು ಸ್ವಾರಸ್ಯಕರ ಸಂಗತಿ ಹೇಳಬಯಸುತ್ತೇನೆ. ನಾನೊಮ್ಮೆ ಸರ್ಕಾರದ ಉನ್ನತ ಮಟ್ಟದ ಸಭೆಯಲ್ಲಿ ಕೃಷಿ ಜಮೀನಲ್ಲಿ ಮರಗಳ ಬೆಳೆಸುವ ಬಗ್ಗೆ  ಮಾತನಾಡುತ್ತಿದ್ದೆ. ಸಭೆ ಎಷ್ಟು ಆಸಕ್ತಿಯಿಂದ ಕೇಳಿಸಿಕೊಂಡಿತೆಂದರೆ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ. ಕೊನೆಯಲ್ಲಿ ಈ ವಿಷಯದ ಬಗ್ಗೆ ಎಲ್ಲರಿಗೂ ಮನದಟ್ಟಾಗುವಂತೆ ಮಾತನಾಡಿದ್ದೇನೆ ಎಂದು ನಾನು ಸಂತೋಷದಿಂದ ಕುಳಿತೆ. ಸಭೆಯ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳೊಬ್ಬರು ಕೊನೆಯಲ್ಲಿ ಮಾತನಾಡುತ್ತಾ, "ಹೌದು, ರೆಡ್ಡಿಯವರು ಹೇಳಿದ್ದು ನಿಜ, ಎಕರೆಗೆ ಹತ್ತಾದರೂ ಮರಗಳನ್ನು ನಾವು ಬೆಳೆಸಬೇಕು" ಎಂದು ಹೇಳಬೇಕೇ!

ಆದ್ದರಿಂದ ಇದೆಲ್ಲ ರೈತರ ಕಣ್ಣಲ್ಲಿ ಕುಳಿತುಕೊಳ್ಳಬೇಕು, ಅವರು ಅದನ್ನು ಕಣ್ಣಾರೆ ನೋಡಬೇಕು. ಇಲ್ಲೇ ತಿಪಟೂರಿನ ಹತ್ತಿರ ಮಂಜುನಾಥಪುರ, ಹುಣಸೇಘಟ್ಟ, ಕಲ್ಲುಹುಲ್ಲೇನಹಳ್ಳಿ ಮುಂತಾದ ಹಳ್ಳಿಗಳಲ್ಲಿ ನಾವು ರೈತರ ಹೊಲದಲ್ಲಿ ಮರ ಬೆಳೆಸುವ ಕಾರ್ಯವನ್ನು ಕೈಗೆತ್ತಿಕೊಂಡೆವು. ಇಲ್ಲಿ ರೈತರು ಹೊಲದ ಬೇಲಿಯಲ್ಲಿ ಹೊಂಗೆ, ಬಂಗಾಳಿ ಜಾಲಿ, ಸಾಗುವಾನಿ, ಗಾಳಿಮರ, ಹೆಬ್ಬೇವು, ಗ್ಲಿರಿಸಿಡಿಯಾ, ಯೋಫೋರ್ಬಿಯಾ, ನುಗ್ಗೆ, ಸೀಮೆ ತಂಗಡಿ, ತಂಗಡಿ, ಸಿಲ್ವರ್ ಓಕ್ ಇನ್ನೂ ಅನೇಕ ಜಾತಿಯ ಮರಗಳನ್ನು ಹಾಕಿದ್ದಾರೆ. ಎಲೆಕಳ್ಳಿ  ಕೂಡ ಇದೆ. ಈ ಮರಗಳಿಗೆಲ್ಲ ಈಗ ೫-೭ ವರ್ಷಗಳಾಗಿವೆ. ಹೆಬ್ಬೇವಿನ ಮರಗಳು ಬಹಳ ದೊಡ್ಡದಿವೆ. ಕೆಲವೊಂದನ್ನು ಈಗಾಗಲೇ ಕಡಿದಿದ್ದಾರೆ. ಮರದ ಎಳೆಗಳು ಒಳ್ಳೆಯ ಮಲ್ಚಿಂಗ್ ಮಾಡುತ್ತವೆ.ವರ್ಷಪೂರ್ತಿ ಭೂಮಿಗೆ ಭಾಗಶಃ ನೆರಳನ್ನು ಒದಗಿಸುತ್ತವೆ. ಮತ್ತು ಎಲೆಗಳಿಂದ ಮಲ್ಚಿಂಗ್ ಮಾಡುತ್ತದೆ.

ಇದು ಬಹಳ ಮುಖ್ಯವಾದ ಅಂಶ. ಮರದ ಬೇಲಿಯಿಂದ ಈ ರೀತಿ ಸಿಗುವ ಬಹುಬಗೆಯ ಉಪಯೋಗಗಳನ್ನು ಮಂಜುನಾಥಪುರದ ರೈತರು ಈಗ ಅನುಭವಿಸುತ್ತಿದ್ದಾರೆ. ಗಾಳಿತಡೆ, ಭೂಮಿಗೆ ಭಾಗಶಃ ನೆರಳು, ಯತೆಚ್ಚವಾದ ಹಸಿರೆಲೆ ಮತ್ತು ಒಣತರಗು, ಮೇವು, ಸೌದೆ ಇತ್ಯಾದಿ ಪ್ರಯೋಜನಗಳು ನೇರವಾಗಿ ಸಿಕ್ಕಿವೆ. ಅಲ್ಲದೆ ಕಡಿದ ಮರಗಳನ್ನು ಮಾರಿ ಸಾಕಷ್ಟು ಆದಾಯ ಮಾಡಿಕೊಂಡಿದ್ದಾರೆ. ೨ ಎಕರೆ ಜಮೀನಲ್ಲಿ ೨ ಲಕ್ಷ ರೂಪಾಯಿವರೆಗೂ ಆದಾಯ ಮಾಡಿಕೊಂಡಿದ್ದಾರೆ. ೨ ಎಕರೆ ಜಮೀನಲ್ಲಿ ೨ ಲಕ್ಷ ರೂಪಾಯಿವರೆಗೂ ಆದಾಯ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಪಿ .ಆರ್. ಶೇಷಗಿರಿರಾವ್ ಅಧ್ಯಯನ ಮಾಡಿದ್ದಾರೆ. ಬೇಲಿಯ ಗಿಡಗಳನ್ನು ಮತ್ತೆ ಮತ್ತೆ ಪ್ರೋನಿಂಗ್ ಮಾಡಿ ಕೆಲವನ್ನು ನೆಟ್ಟಗೆ ಮೇಲಕ್ಕೆ ಹೋಗುವಂತೆಯೂ, ಕೆಲವನ್ನು ಮೇಲಕ್ಕೆ ಹೋಗದೆ ಹರಡುವಂತೆಯೂ ಮಾಡಿದ್ದಾರೆ. ಬೇಲಿಗೆ ಈ ಥರದ ವಿವಿಧ ಎತ್ತರಗಳು ಮುಖ್ಯ.

ಇನ್ನೂ ಇಲ್ಲಿ ಹೊಲದ ಒಳಗಡೆಯ ಬದುಗಳಲ್ಲಿ ಪ್ರತಿ ಮೀಟರ್ನಲ್ಲೂ  ಒಂದು ಗಿಡ ಇದೆ. ಸಸಿಗಳಿಗೆ ನೀರು ಒದಗಿಸುವುದು ದೊಡ್ಡ ಸಮಸ್ಯೆ, ಇದಕ್ಕೇನು ಮಾಡಬೇಕು ?

ಮರಗಳನ್ನು ಬೆಳೆಸುತ್ತೆವೆನ್ನುವಾಗ ಸರಿಯಾದ ಮಣ್ಣು ಮತ್ತು ನೀರು ನಿರ್ವಹಣೆ ಅಗತ್ಯವಾಗುತ್ತದೆ. ಆದ್ದರಿಂದ ನೀವು ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳ ಜೊತೆಗೇ ಮರ ಬೆಳೆಸುವ ಕಾರ್ಯವನ್ನು ಕೈಗೆತ್ತಿಕೊಳ್ಳಬೆಕಾಗುತ್ತದೆ. ಮಣ್ಣಿನಲ್ಲಿ ತೇವಾಂಶದ ಸೆಲೆ ಇರದಿದ್ದರೆ ಅದು ಮರಕ್ಕೆ ಆಧಾರ ನೀಡಲಾರದು.

ಮರ ಆಧಾರಿತ ಕೃಷಿಯಲ್ಲಿ ಮೂಲಭೂತವಾದದ್ದೆಂದರೆ ನೀರಿನ ಸುಗ್ಗಿ ಮಾಡುವುದು. ಹೊಲಗಳಲ್ಲಿ ಕೃಷಿ ಹೊಂಡಗಳು ಇದಕ್ಕೆ ಬಹಳ ಸಹಾಯವಾಗುತ್ತವೆ. ತಿಪಟೂರಿನ ಸಮೀಪ ಮೈಲನಹಳ್ಳಿಯಲ್ಲಿ ೩೦/೩೦/೧೦ ಅಡಿ ಅಳತೆಯ ಕೃಷಿ ಹೊಂಡ ಪ್ರತಿ ಎರಡು ಹೆಕ್ಟೇರು ಜಮೀನಿಗೆ ಇದೆ. ಇದರಿಂದ ಎಷ್ಟೊಂದು ನೀರು ಇಂಗುತ್ತದೆ ಎಂದರೆ ಬೇಸಿಗೆಯಲ್ಲಿ ಕೂಡ ಈ ಆ ಪ್ರದೇಶ ಜೀವಂತಿಕೆಯಿಂದ ಕೂಡಿರುತ್ತದೆ. ಇಷ್ಟೊಂದು ಕೃಷಿ ಹೊಂಡಗಳಿದ್ದಾಗ ಮಣ್ಣಿನಲ್ಲಿ ಉತ್ತಮ ತೇವಾಂಶವನ್ನು ಕಾಪಾಡಿ ಮರವನ್ನು ಸಪೋರ್ಟ್ ಮಾಡಲು ಸಹಾಯ ಮಾಡುತ್ತವೆ.

ಒಮ್ಮೆ ನೀರಿನ ಆಕರ ಅಲ್ಲಿ ಬಂತೆಂದರೆ ಅಸಂಖ್ಯಾತ ಜೀವಚರಗಳು ಬರಲು ಶುರುವಾಗುತ್ತದೆ. ಸಣ್ಣ ಗುಡಿಸಲು ಏಳುತ್ತದೆ, ಜನ ಅಲ್ಲಿ ವಾಸಿಸಲು ತೊಡಗುತ್ತಾರೆ. ಹೆಚ್ಚು ಸಮಯ ಅಲ್ಲಿ ಕಳೆಯಲು ಪ್ರಾರಂಬಿಸುತ್ತಾರೆ. ಹೊಂಡದ ಸುತ್ತಲೂ ಅಸಂಖ್ಯಾತ ಸಸ್ಯ ರಾಶಿ ಬರಲು ಶುರುವಾಗುತ್ತದೆ. ಹೊಂಡ ಕೇಂದ್ರ ಬಿಂದುವಾಗಿ ಅದರ ಸುತ್ತಲೂ ಅನೇಕಾನೇಕ ವಿದ್ಯಮಾನಗಳು ನಡೆಯುತ್ತಿರುತ್ತವೆ.

ಹಿಂದೆ ಹೇಳಿದ ೨/೨/೨ ಅಡಿ ಟ್ರೆಂಚ್ಗಳನ್ನು ತೆಗೆದು ಅದರ ಪಕ್ಕಗಳಲ್ಲಿ ಗಿಡಗಳನ್ನು ಹಾಕುವುದು ಉತ್ತಮ ವಿಧಾನ. ಟ್ರೆಂಚ್ ನಲ್ಲೂ ಗಿಡಗಳನ್ನು ಹಾಕಬಹುದು.

ನೆರಳಿನಿಂದ ಇಳುವರಿ ಇಳಿಕೆ

ಈ ವಿಚಾರದಲ್ಲಿ ಯಾವ ರೈತರೂ ಆತಂಕ ಪಡಬೇಕಾಗಿಲ್ಲ. ನಾವು ಜಮೀನಿನಲ್ಲಿ ಬೆಳೆ ಬೆಳೆಯುವ ಪ್ರದೇಶವನ್ನು ೭೦% ಇಟ್ಟುಕೊಂಡು ಉಳಿದ ೩೦% ಮರಗಳಿಗೆ ಬಿಡಬೇಕು. ನಮ್ಮ ಜಮೀನಿಗೆ ಬೇಕಾದ ಗೊಬ್ಬರ ತಯಾರಿ ಮಾಡಿಕೊಳ್ಳಲು ನಮಗೆ ಇಷ್ಟು ಭಾಗದಲ್ಲಿ ಮರ ಬೇಕೇ ಆಗುತ್ತದೆ. ಈ ೭೦% ಪ್ರದೇಶದಲ್ಲೇ ೧೦೦% ಇಳುವರಿ ತೆಗೆದುಕೊಳ್ಳುವುದು ಇಲ್ಲಿ ನಮಗೆ ಸಾಧ್ಯವಾಗುತ್ತದೆ. ವಾಸ್ತವದಲ್ಲಿ ನಮಗೆ ಇಳುವರಿ ಇನ್ನೂ ಹೆಚ್ಚಿಗೆಯೇ ಬರುತ್ತದೆಯೇ ವಿನಃ ಕಡಿಮೆಯಂತೂ ಆಗುವುದಿಲ್ಲ.

ನೆರಳನ್ನು ಕಡಿಮೆ ಮಾಡಲು ಕೆಲ ಸಲಹೆ ನೀಡುವುದನ್ನು ನಾನು ನೋಡಿದ್ದೇನೆ. ಕೆಲವರು ಪೂರ್ವ ಪಶ್ಚಿಮಾಭಿಮುಖವಾಗಿ ನೆಡುವುದರಿಂದ ನೆರಳು ಕಡಿಮೆಯಾಗುತ್ತದೆ  ಎಂದು ಹೇಳುತ್ತಾರೆ. ಇದು ಪಠ್ಯ ಪುಸ್ತಕಗಳಲ್ಲಿ ಕಂಡು ಬರುವ ವಿಚಾರವೇ ಹೊರತು ಇದರಲ್ಲಿ ಅಂಥ ಸತ್ಯಾಂಶವೇನೂ  ಇಲ್ಲ. ಇದು ಅವೈಜ್ಞಾನಿಕ ಕೂಡ. ಏಕೆಂದರೆ, ನಮ್ಮ ಬೌಗೋಳಿಕ ಸನ್ನಿವೇಶದಲ್ಲಿ ನೆರಳಿನ ನಡವಳಿಕೆ ಬೇರೆಯೇ ಎಂದು ಹೇಳಬಹುದು. ಇಲ್ಲಿ ಯಾವಾಗಲೂ ನೆರಳು ಪೂರ್ವ ಪಶ್ಚಿಮಾಭಿಮುಖವಾಗಿರುವುದಿಲ್ಲ . ಹಾಗಾಗಿ ಮರ ಯಾವ ದಿಕ್ಕಿನಲ್ಲಿ ಬೆಳೆಸುತ್ತೇವೆ ಎಂಬುದು ಚರ್ಚೆಯ ವಿಷಯವಲ್ಲ. ಉತ್ತರ ದಕ್ಷಿಣಾಭಿಮುಖವಾಗಿ  ಹಾಕುವುದೇ ಒಳ್ಳೆಯದು. ಎಂದೇ ನನ್ನ ಭಾವನೆ. ಏಕೆಂದರೆ ೬ ಗಂಟೆ ನೆರಳಿದ್ದರೂ ಕನಿಷ್ಠ ೬-೭ ಗಂಟೆ ಅದಕ್ಕೆ ಬಿಸಿಲು ಸಿಗುತ್ತದೆ.

ಬೆಳೆಗಳೊಂದಿಗೆ ಬೇರಿನ ಸ್ಪರ್ಧೆ

ಯಾವುದೇ ಗಿಡ / ಮರದ ಬೇರು ವಲಯ ಅದರ ಕೆನೋಪಿ  (ಪತ್ರ ಚಾಮರ) ಯ ಪ್ರತಿಬಿಂಬವೇ ಆಗಿರುತ್ತದೆ. ಅಂದರೆ ಮೇಲೆ ಗಿಡದ ಹರಹು ಎಷ್ತಿರುತ್ತದೆಯೋ ಕೆಳಗೆ ಬೇರುಗಳ ಹರಹು ಕೂಡ ಅಷ್ಟೇ ಇರುತ್ತದೆ. ಬೇರು ಕೃಷಿ ಭೂಮಿಯಲ್ಲಿ ಹರಡಿದ್ದಾಗ ಬೆಳೆಗಳ ಜೊತೆ ನೇರವಾಗಿ ಸ್ಪರ್ಧೆಗೆ ಇಳಿಯುತ್ತೆ ಎನ್ನುವುದು ಭಾಗಶಃ ನಿಜ. ನೀವು ಗಿಡವನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ  ಹೀಗಾಗುತ್ತದೆ. ಅದು ಕೃಷಿ ಜಮೀನಿನಿಂದ ಪೋಷಕಾಂಶ ಮತ್ತು ತೇವಾಂಶವನ್ನು ತೆಗೆದುಕೊಳ್ಳುತ್ತದೆ.  ಹೀಗಾಗಿ ಮೇಲ್ಮೈ ಬೇರುಗಳನ್ನು ಸಮರುವುದರಿಂದ ಅಷ್ಟರಮಟ್ಟಿಗಿನ ಸ್ಪರ್ಧೆ ಇರುವುದಿಲ್ಲ. ಗಿಡವಿದ್ದಾಗಲೇ ಬೇರು ಸಮರುತ್ತಾ ಮರಗಳನ್ನು ತರಬೇತುಗೊಳಿಸಬಹುದು. ಆದರೆ ಮರ ದೊಡ್ಡದಾದಾಗ ಬೇರನ್ನು ಸಮರುವುದು ಅಸಾಧ್ಯ. ನೆಟ್ಟ ಮರಗಳ ಸಾಲಿನ ಪಕ್ಕ ಸರಳವಾದ, ಅಂದರೆ, ಒಂದು ಅಡಿ ಅಳತೆಯ ಟ್ರೆಂಚ್ ಮಾಡಿದರೆ ಮೇಲ್ಮೈ ಬೇರುಗಳು ಜಮೀನಿಗೆ ಹರಡುವುದು ತಪ್ಪುತ್ತದೆ. ಸಂಪರ್ಕ ಕಳೆದುಕೊಳ್ಳುತ್ತವೆ. ಆದರೆ ಟ್ರೆಂಚ್ ಮಾಡಿ ಬಿಟ್ಟುಬಿಟ್ಟರೆ ಸಾಲದು. ಬೇರುಗಳು ಕ್ರಮೇಣ ಟ್ರೆಂಚಲ್ಲು ಇಳಿದು ಅದನ್ನು ದಾಟಿಕೊಂಡು ಜಮೀನಿನೆಡೆಗೆ ಹೋಗುತ್ತವೆ. ಇದಕ್ಕಾಗಿ ನೀವು ಪ್ರತಿ ಹಂಗಾಮಲ್ಲೂ ಟ್ರೆಂಚನ್ನು ಸ್ವಚ್ಚಗೋಲಿಸುತ್ತಿರಬೇಕು, ಅಂದರೆ ಬೇರುಗಳನ್ನು ಸಮರುತ್ತಿರಬೇಕು. ಮರವನ್ನು ನಿರ್ವಹಿಸುತ್ತಿರಬೇಕು. ಮರಗಳನ್ನು ನೆಡುವಷ್ಟೇ ಮುಖ್ಯ ಅವುಗಳ ನಿರ್ವಹಣೆ ಕೂಡ. ಇಲ್ಲದಿದ್ದರೆ ಸಮಸ್ಯೆಯೇ ಹೆಚ್ಚು.

ಮರ ಕೃಷಿ ಜಮೀನಿನಿಂದ ಪೋಷಕಾಂಶಗಳನ್ನು ತೆಗೆದುಕೊಂಡರೂ ಅದನ್ನು ಎಳೆಗಳ ಮುಖಾಂತರ ಮತ್ತೆ ಕೃಷಿ ಭೂಮಿಗೆ ಕೊಟ್ಟೇ ಕೊಡುತ್ತದೆ. ಅದನ್ನು ನೀವು ಕಡಿದು ಬೇರೆಲ್ಲೋ ತೆಗೆದುಕೊಂಡು ಹೋದರೆ ಆಗ ಎಲ್ಲ ನಾಶವಾದಂತೆ. ಎಲೆಗಳನ್ನು ಸಮರಿ ಅದನ್ನು ಅಲ್ಲೇ ಜಮೀನಿಗೆ ಕೊಟ್ಟರೆ ಪೋಷಕಾಂಶಗಳು ಮತ್ತೆ ಭೂಮಿಗೆ ವಾಪಸ್ಸು ಸಿಗುತ್ತವೆ.

ಆಲದ ಚಮತ್ಕಾರ

ಇಲ್ಲಿ ನಾನು ಕಂಡ ಒಂದು ಕುತೂಹಲಕರ ವಿಷಯ ಹೇಳಬಯಸುತ್ತೇನೆ. ಮಳವಳ್ಳಿ ತಾಲೂಕಿನ ೪೦-೫೦ ಹಳ್ಳಿಗಳಲ್ಲಿ ಒಂದು ವಿಶಿಷ್ಟವಾದ ಆಚರಣೆ ಇದೆ. ಅಲ್ಲಿ ಕೃಷಿ ಜಮೀನಲ್ಲಿ ಅಸಂಖ್ಯಾತ ಆಲದ ಮರಗಳನ್ನು ನೆಟ್ಟಿದ್ದಾರೆ. ಇನ್ನು ನೆಡುತ್ತಲೇ ಇದ್ದಾರೆ. ಯಾವ ಪುಸ್ತಕವೂ ನಮಗೆ ಕೃಷಿಯಲ್ಲಿ ಆಲದ ಮರಗಳನ್ನು ಹಾಕಲು ಹೇಳುವುದಿಲ್ಲ. ಇದೆಲ್ಲ ಹೇಗಾಯಿತು ಎಂದು ವಿಚಾರಣೆ ಮಾಡಿದಾಗ ಗೊತ್ತಾದ್ದೆಂದರೆ, ಒಂದು ನೂರು ವರ್ಷಗಳ ಹಿಂದೆ ಯಾರೋ ಒಬ್ಬ ಸಾಧು ಬಂದು ಒಂದು ಆದೇಶ ನೀಡಿದನಂತೆ. 'ಪ್ರತಿ ವರ್ಷ ಮಹಾಲಯ ಅಮಾವಾಸೇಗೆ ಮನೆಗೊಬ್ಬ ಗಂಡಸಿದ್ದಂತೆ ಒಂದು ಆಲದ ಕೊಂಬೆ ನೆಡಬೇಕು. ಹಾಗಾದಾಗ ನಿಮ್ಮ ಪಿತೃಗಳು ಸ್ವರ್ಗಕ್ಕೆ ಹೋಗ್ತಾರೆ'. ಇವತ್ತಿಗೂ ಪ್ರತಿ ಮಹಾಲಯ ಅಮಾವಾಸೆಗೆ ಅವರು ಒಂದು ಆಲದ ಕೊಂಬೆ ನೆಡುತ್ತಾರೆ. ಹೀಗೆ ಈಗ ಸಾವಿರಾರು ಆಲದ ಮರಗಳಾಗಿವೆ.

ಹಾಗಾದರೆ ಅವರು ಮರಗಳನ್ನು, ಬೆಳೆಗಳನ್ನು ಹೇಗೆ ನಿರ್ವಹಣೆ ಮಾಡುತ್ತಾರೆ. ಅದಿನ್ನೂ ತುಂಬಾ ಆಸಕ್ತಿದಾಯಕ. ಅಲ್ಲಿ ಪ್ರತಿ ಮನೆಯವರಿಗೂ ೧೦-೧೫ ಕುರಿಗಳಿವೆ. ಪ್ರತಿ ವರ್ಷ ಬೆಲೆ ಕಟಾವಾದ ಕೂಡಲೇ ಜಮೀನಿಗೆ ಕುರಿ, ಆಡು ತಂದು ನಿಲ್ಲಿಸಿಕೊಳ್ಳುತ್ತಾರೆ. ಒಂದು ದೊಡ್ಡ ಗಳು ತಂದು ಎಲೆಗಳನ್ನು ತರಿದು ಮೇಯಲು ಹಾಕುತ್ತಾರೆ. ಜೊತೆಗೆ ಕುರಿಗಳನ್ನು ದಿನವೆಲ್ಲ ಜಮೀನಲ್ಲಿ ಮೇಯಲು ಬಿಡುವುದರಿಂದ ಅವುಗಳ ಹಿಕ್ಕೆ ಮತ್ತು ಗಂಜಲ ಬಿದ್ದು ಜಮೀನಿಗೆ ಸಾಕಷ್ಟು ಪೋಷಕಾಂಶ ಸಿಗುತ್ತದೆ. ಮುಂದಿನ ಬೆಳೆ ಅಲ್ಲಿ ಬಹಳ ಚನ್ನಾಗಿ ಬರುತ್ತದೆ,. ಸಾಮಾನ್ಯವಾಗಿ ಮರದ ಕೆಳಗೆ ಏನೂ ಬೆಳೆಯುವುದಿಲ್ಲ ಎನ್ನುತ್ತಾರೆ. ಸರಿಯಾಗಿ ನಿರ್ವಹಣೆ ಮಾಡಿದರೆ ಖಂಡಿತಾ ಬರುತ್ತದೆ. ಎನ್ನುವುದಕ್ಕೆ ಇದೇ ಉದಾಹರಣೆ. ಬೇರುಗಳು ಆಳ ಹೋಗಿರುವುದರಿಂದ ಬೆಳೆಗಳ ಜೊತೆ ಸ್ಪರ್ಧೆ ಇಲ್ಲ. ಜನರ ವಿವೇಕದಿಂದ ಕಲಿಯಬೇಕಾದ ಬಹು ದೊಡ್ಡ ಪಾಠ ಇದು. ಮಾಗಡಿ, ಕುಣಿಗಲ್ ಇಂಥ ಕಡೆಗಳಲ್ಲೂ ಹೊಲದಲ್ಲಿ ಆಲದ ಮರಗಳನ್ನು ಸರ್ವೇಸಾಮಾನ್ಯವಾಗಿ ಕಾಣುತ್ತೇವೆ.

ಪ್ರೋನಿಂಗ್

ಕೃಷಿ ಜಮೀನಿನಲ್ಲಿ ಹಾಕಿದ ಗಿಡಗಳ ಬೇರು ನೆಲದಲ್ಲಿ ನೆಟ್ಟಗೆ ಇಳಿಯುತ್ತಾ ಮರ ಕೂಡ ನೆಟ್ಟಗೆ ಹೋಗಲಿ ಎಂಬ ಕಾರಣಕ್ಕೆ ಪ್ರೋನಿಂಗ್ (ಸಮರುವುದು) ಮಾಡಬೇಕೆಂದು ಹೇಳುತ್ತಾರೆ. ಇದು ನಿಜ ಮತ್ತು ಬಹಳ ಮುಖ್ಯ ಕೂಡ. ಆದರೆ ಪ್ರೋನಿಂಗ್ ಮಾಡುವುದು ಇದಕ್ಕಿಂತ ಮುಖ್ಯವಾಗಿ ನೆರಳು ಕಡಿಮೆಯಾಗಲಿ ಎಂಬ ಕಾರಣಕ್ಕೆ. ಬಿಸಿಲು ಚನ್ನಾಗಿ ಒಳ ಹೋಗಲು ನಾವು ಅದನ್ನು ಪ್ರೋನ್ ಮಾಡಬೇಕು. ಪ್ರೋನಿಂಗ್ ಮಾಡಿದಾಗ ಗಿಡ ನೆಟ್ಟಗೆ ಹೋಗಲು ಶುರು ಮಾಡುತ್ತದೆಯಾಗಿ ಜನ ಓಡಾಡಲು, ಎತ್ತು ಏರು ಕಟ್ಟಲು ಸಮಸ್ಯೆ ಇರುವುದಿಲ್ಲ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ವಿಚಾರ ಎಂದರೆ, ಕೆಲ ಜಾತಿಯ ಮರಗಳು ಪ್ರೋನಿಂಗಿಗೆ ಸ್ಪಂದಿಸುವುದಿಲ್ಲ. ಜಾಲಿ ಮರ ಪ್ರೋನಿಂಗ್ ಮಾಡಿದಾಗ ಸಾಯುತ್ತದೆ, ಬೇವು ಕೂಡ ಸಾಯುತ್ತದೆ. ಕೆಲ ಜಾತಿಯ ಮರಗಳು ಚನ್ನಾಗಿ ಸ್ಪಂದಿಸುತ್ತವೆ. ಉದಾಹರಣೆಗೆ ಗ್ಲಿರಿಸಿಡಿಯಾ, ಸುಬಾಬುಲ್, ನುಗ್ಗೆ, ಹೊಂಗೆ, ಅಗಸೆ ಇತ್ಯಾದಿ.

ಪ್ರೋನಿಂಗ್ ಮಾಡಿದ ಎಲೆಯನ್ನು ಅಲ್ಲೇ ಕೆಳಗೆ ಟ್ರೆಂಚ್ ಮಾಡಿ ತುಂಬಿ ಕೃಷಿ ಭೂಮಿಯಲ್ಲಿ ಕಾಂಪೋಸ್ಟ್ ಮಾಡಬಹುದು.  ಮರದ ಒಣ ಎಲೆಗಳು ಕೃಷಿ ಭೂಮಿಯಲ್ಲಿ ಹರಡುತ್ತಿರುತ್ತವೆ. ಅವನ್ನು ಕೂಡ ಇದಕ್ಕೆ ತುಂಬುತ್ತಿರಬಹುದು.

ಸಸಿ ರಕ್ಷಣೆ

ಇದು ಬಹಳ ಕಷ್ಟಕರವಾದ ಕೆಲಸ. ಆದರೆ ನಾವು ಅದನ್ನು ಮಾಡಬಹುದು. ಗಿಡಗಳನ್ನು ಜಾನುವಾರುಗಳಿಂದ, ನಂತರ ಕಳ್ಳರಿಂದ ರಕ್ಷಿಸುವುದು ಅತ್ಯಂತ ಮುಖ್ಯ. ಅನೇಕಾನೇಕ ರೈತರು ಇಲ್ಲಿ ಸೋತಿದ್ದಾರೆ. ಇಲ್ಲಿ ಗಿಡಗಳ ಸುತ್ತಲೂ ಮುಳ್ಳಿನ ಜೀವಂತ ಬೇಲಿ ಮಾಡಿಯೇ ಗಿಡವನ್ನು ರಕ್ಷಿಸಬೇಕಾಗುತ್ತದೆ,ಬೇರೆ ದಾರಿಯೇ ಇಲ್ಲ. ಹೊಲದಲ್ಲೇ ಮನೆ ಮಾಡಿಕೊಂಡಿದ್ದು ಅಲ್ಲೇ ವಾಸ ಮಾಡುವ ರೈತ ಕುಟುಂಬಗಳು ಮಾತ್ರ ಉತ್ತಮವಾಗಿ ರಕ್ಷಿಸಬಹುದು. ಕಾರ್ಯಕರ್ತರೆನಾದರೂ ಇದನ್ನು ಕಾರ್ಯಕ್ರಮವಾಗಿ ಕೈಗೆತ್ತಿಕೊಂಡರೆ ಅವರು ಆ ಹಳ್ಳಿಯಲ್ಲೇ ವಾಸ ಇರಬೇಕು. ಬೇರೆ ಕಡೆಯಿಂದ ಓಡಾಡಿಕೊಂಡು ಮಾಡಲು ಸಾಧ್ಯವಿಲ್ಲ. ನಮ್ಮ ಸಹದ್ಯೋಗಿ ಅಂಬಿಕಾ ಮಂಜುನಾಥಪುರದಲ್ಲೇ ವಾಸ ಇದ್ದು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದರು. ನಿಜ ಹೇಳಬೇಕೆಂದರೆ, ಒಂದೇ ಬೌಂಡರಿ ಯಲ್ಲಿ ನೂರಾರು ಗಿಡಗಳಿದ್ದು ಎಲ್ಲರೂ ಒಟ್ಟಿಗೆ ನೋಡಿಕೊಳ್ಳುವುದರಿಂದ ರಕ್ಷಣೆ ಸಾಧ್ಯವಾಯಿತು. ಒಬ್ಬರೇ ಒಬ್ಬರು ಗಿಡ ನೆಟ್ಟು ಕಾಪಾಡಿಕೊಳ್ಳುವುದು ಬಹಳ ಕಷ್ಟ. ಬದುಗಳ ಅಕ್ಕ ಪಕ್ಕ ಬೇರೆ ಬೇರೆ ರೈತರ ಹೊಲ ಇದ್ದು ಇಬ್ಬರೂ ಸೇರಿ ಮರ ನೆಡಲು ತೀರ್ಮಾನಿಸಿದಾಗ ಮಾತ್ರ ಅದು ಯಶಸ್ವಿಯಾಗುವುದು . ಆದ್ದರಿಂದ ಇಡೀ ಹಳ್ಳಿ ಸಂಘಟಿತರಾಗಬೇಕು ಮತ್ತು ರಕ್ಷಣೆ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು.

ಈಗ ಮಂಜುನಾಥಪುರದಲ್ಲಿ ಮಳೆ ಬಿತ್ತು ಅಂದರೆ ಪ್ರೋನಿಂಗ್ ಮಾಡಲು ಶುರು ಮಾಡುತ್ತಾರೆ. ಈಗ ಅವರಿಗೆ ಮರಗಳನ್ನು ನೋಡಿಕೊಳ್ಳುವುದು ಕೃಷಿ ಮಾಡುವಷ್ಟೇ ಅಭ್ಯಾಸವಾಗಿಬಿಟ್ಟಿದೆ.

ಸಮಷ್ಟಿ ಪ್ರಜ್ಞೆಯಾಗಬೇಕು

ಒಟ್ಟಿನಲ್ಲಿ ಹೇಳಬೇಕಂದರೆ, ಮರ ಬೆಳೆಸುವ ವಿಚಾರ ರೈತರ ಅಂತರಾಳಕ್ಕೆ ಇನ್ನೂ ಹೊಕ್ಕಿಲ್ಲ. ಯಾವ ರೈತರೂ ಬೆಳೆಗಳನ್ನು ಏಕೆ ಹಾಕಬೇಕು ಎಂದು ಕೇಳುವುದಿಲ್ಲ. ಆದರೆ ಮರಗಳ ವಿಚಾರದಲ್ಲಿ ನೋರು ಪ್ರಶ್ನೆ. ಹೀಗಾಗಿ ಮರ ಬೆಳೆಸಬೇಕೆನ್ನುವುದು ಒಂದು ಸಂಸ್ಕೃತಿಯಾಗಿ, ಸಮಷ್ಟಿ ಪ್ರಜ್ಞೆಯಾಗಿ ಬೆಳೆದು ಬರದ ಹೊರತು ಸಾಧ್ಯವಿಲ್ಲ.

ನಾವು ಮೊದಲೆಲ್ಲ ರೈತರ ಹೊಲದಲ್ಲಿ ಮರಗಳನ್ನು ಬೆಳೆಸುವ ಕೆಲಸವನ್ನು ಕೈಗೆತ್ತಿಕೊಂಡು ಪೂರ್ತಿ ಸೋತಿದ್ದೇವೆ. ಇವತ್ತು ಹಾಕಿದ ಗಿಡ ನಾಳೆ ನೋಡಲು ಸಿಗುವುದಿಲ್ಲ. ಹೀಗಾಗಿ ರೈತರು ಒಬ್ಬೊಬ್ಬರೇ ಪ್ರತ್ಯೇಕವಾಗಿ ಮರ ನೆಡುವ ಕೆಲಸವನ್ನು ಕೈಗೆತ್ತಿಕೊಲ್ಲುತ್ತೆವೆಂದರೆ ಅದು ಯಶಸ್ವಿಯಾಗುವುದಿಲ್ಲ. ಎಂದೇ ನಮ್ಮ ಅನುಭವ. ಅದರಿಂದ ಸಮಸ್ಯೆಗಳೇ ಹೆಚ್ಚು. ಹೀಗಾಗಿ ನಾವು ಮರ ನೆಡುವುದನ್ನು ಇಡೀ ಗ್ರಾಮದ ಆಚರಣೆಯಾಗಿ ಪರಿವರ್ತಿಸುವಂತಹ 'ಹಸಿರು ಹಬ್ಬ' ಗಳನ್ನು ಈಗ ಮಾಡುತ್ತಿದ್ದೇವೆ. ಎಲ್ಲ ಹಳ್ಳಿಗಳಲ್ಲೂ ಊರಹಬ್ಬದ ಆಚರಣೆ ಮಾಡೇ ಮಾಡುತ್ತಾರೆ ಬಡವರು, ಶ್ರೀಮಂತರೆನ್ನದೆ ಪ್ರತಿಯೊಬ್ಬರೂ ಭಾಗವಹಿಸುತ್ತಾರೆ. ಅದೇ ರೀತಿಯಲ್ಲಿ ಸಸಿಗಳನ್ನು ನೆಡುವ ಒಂದು ಹಬ್ಬವನ್ನು ಕೂಡ ಆಚರಿಸುತ್ತಾರೆ.

ಇದು ಬೆಳಿಗ್ಗೆ ೬ ಘಂಟೆಗೆ ಪ್ರಾರಂಭವಾಗುತ್ತದೆ. ಸಸಿಗಳನ್ನು ನರ್ಸರಿಗಳಲ್ಲಿ ಬೆಳೆಸಿಕೊಂಡಿರುತ್ತಾರೆ, ಇಲ್ಲ ಮೊದಲೇ ತಂದು ಇಟ್ಟುಕೊಂಡಿರುತ್ತಾರೆ. ಹತ್ತಿರದ ತೊರೆ ಬಾವಿಯಿಂದ ನೀರು ತಂದು ಗಂಗಾ ಪೂಜೆ ಮಾಡಿ, ತಲೆಯ ಮೇಲೆ ಕಲಶ ಹೊತ್ತು ಎಲ್ಲರೂ ತಮ್ಮ ತಮ್ಮ ಹೊಲಗಳಿಗೆ ಹೋಗಿ ದಿನದಲ್ಲಿ ಸಾವಿರಾರು ಸಸಿಗಳನ್ನು ನೆಡುತ್ತಾರೆ. ಹಸಿರು ಕಂಕಣ ಕಟ್ಟಿಕೊಳ್ಳುತ್ತಾರೆ. ನಂತರ ಪ್ರತಿಜ್ಞೆ ಕೈಗೊಳ್ಳುತ್ತಾರೆ. ಈ ಹಬ್ಬವನ್ನು ತಮ್ಮ ಬಂಧು ಬಾಂದವರ ಜೊತೆ ಊರ ಹಬ್ಬವಾಗಿ ಆಚರಿಸುತ್ತೇವೆ. ಎನ್ನುವ ಪ್ರತಿಜ್ಞೆ. ಇದು ಬಹಳ ಮುಖ್ಯ. ಇದನ್ನು ಕೈಗೊಂಡ ಮೇಲೆಯೇ ಮರ ಬೆಳೆಸುವ ಕೆಲಸ ಸುಸೂತ್ರವಾಗಿ ನಡೆಯುತ್ತಿರುವುದು.

ಮರಗಳನ್ನು ಬೆಳೆಸುವಲ್ಲಿ ನಾವು ಎದುರಿಸುತ್ತಿರುವ ಮುಖ್ಯ ಸಮಸ್ಯೆ ಕೋ- ಆರ್ಡಿನೆಶನ್ ಇಲ್ಲದಿರುವುದು. ಬೇಕಾದ ಸಮಯದಲ್ಲಿ ಬೇಕಾದ ಸಸಿಗಳು ನಮಗೆ ಸಿಗುವುದಿಲ್ಲ. ಇನ್ನು ಮಳೆ ಬರುವ ಸಮಯದಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ಬಿದುವಿಲ್ಲದಂತಿರುತ್ತಾರೆ. ಅದೇ ಸಮಯದಲ್ಲಿ ಸಸಿಗಳನ್ನು ಕೂಡ ನೆದಬೇಕಾಗಿರುತ್ತದೆ ಆಗ ರೈತರು ಇದರ ಬಗ್ಗೆ ಅಷ್ಟು ಗಮನ ಕೊಡುವುದಿಲ್ಲ. ಬೆಳೆಗಳಿಗೆ ಇರುವಂತೆ ಮರಗಳಿಗೆ ನಿರ್ದಿಷ್ಟ ಮಾರುಕಟ್ಟೆ ಇಲ್ಲ. ಇನ್ನು ಮರ ಕಡಿದರೆ ಕಾನೂನಿನ ಕ್ರಮ ಎನಿರುತ್ತದೆಯೋ ಎಂಬ ಭಯ.

ಮೂಲ : ಸಹಜ ಸಾಗುವಳಿ

ಕೊನೆಯ ಮಾರ್ಪಾಟು : 4/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate