ಹಿಪ್ಪುನೇರಳೆ ತೋಟವನ್ನು ಒಮ್ಮೆ ನಾಟಿ ಮಾಡಿದಲ್ಲಿ ಸೂಕ್ತ ಬೇಸಾಯ ಕ್ರಮಗಳೊಂದಿಗೆ 15-20 ವರ್ಷಗಳವರೆಗೆ ಸತತವಾಗಿ ಇಳುವರಿಯನ್ನು ನಿರೀಕ್ಷಿತ ಮಟ್ಟದಲ್ಲಿ ಪಡೆಯಬಹುದು. ಹಿಪ್ಪುನೇರಳೆಯು ಬಹುವಾರ್ಷಿಕ ಸಸ್ಯವಾಗಿದ್ದು ವಿವಿಧ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುವುದಲ್ಲದೆ, ರೇಷ್ಮೆ ಹುಳುವಿನ ಆಹಾರದ ಏಕೈಕ ಮೂಲವಾಗಿದೆ. ಹಿಪ್ಪುನೇರಳೆಯನ್ನು ಅವುಗಳ ಕಡ್ಡಿಗಳನ್ನು ಉಪಯೋಗಿಸಿ ವೃದ್ಧಿಸಲು ಸಾಧ್ಯವಿರುವುದರಿಂದ, ಮೂಲ ತಳಿಯ ಗುಣವಿಶೇಷಗಳು ಬದಲಾಗದೆ ಹಾಗೆಯೇ ಉಳಿಯುತ್ತವೆ. ಇದರಿಂದ ಯಾವುದೇ ಸುಧಾರಿತ ತಳಿಯನ್ನು ನಾಟಿ ಮಾಡುವಲ್ಲಿ ಹಾಗೂ ತೋಟವನ್ನು ವೃದ್ಧಿಸುವಲ್ಲಿ ರೈತನಿಗೆ ಸಹಾಯಕವಾಗುತ್ತದೆ. ಇತರೆ ಬೆಳೆಗಳಿಗಿರುವಂತೆಯೇ ಹಿಪ್ಪುನೇರಳೆಗೂ ಸಹ ವಿವಿಧ ಬೇಸಾಯ ಕ್ರಮಗಳು ರೂಢಿಯಲ್ಲಿವೆ. ಅನೇಕ ರೈತರು ಸಾಂಪ್ರದಾಯಿಕ ಬೇಸಾಯ ಕ್ರಮಗಳಿಂದ ಆಧುನಿಕ ಬೇಸಾಯ ಕ್ರಮಗಳ ಕಡೆಗೆ ಗಮನ ಕೊಡುತ್ತಿದ್ದಾರೆ. ಹಿಪ್ಪುನೇರಳೆ ತೋಟದ ನಿರ್ವಹಣೆಗೆ ಬಳಕೆಯಲ್ಲಿರುವ ಬೇಸಾಯ ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ.
ಸಾಂಪ್ರದಾಯಿಕ ಪ್ರದೇಶಗಳಲ್ಲಿ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ, ಈ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಗಿಡಗಳ ನಡುವೆ 3'x3' ಅಂತರ ಇರುತ್ತದೆ. ಈ ಪದ್ಧತಿಯನ್ನು ಸಾಂಪ್ರದಾಯಿಕವಲ್ಲದ ಪ್ರದೇಶದಲ್ಲೂ ಸಹ ನೀರಾವರಿ ಸೌಲಭ್ಯದೊಂದಿಗೆ ಗಿಡಗಳನ್ನು ಬೆಳೆಸಲು ಅನುಸರಿಸಲಾಗುತ್ತಿದೆ. ವಿವಿಧ ರೀತಿಯ ಗಿಡಗಳ ನಡುವಿನ ಅಂತರವನ್ನು (2'x2'; 2'x3'; 3'x3'; 2'x4'; 4'x4';) ಮತ್ತು ಜೋಡಿ ಸಾಲು ಪದ್ಧತಿ (2'x3'+4'/5') ಅಳವಡಿಸಿರುತ್ತಾರೆ. ಬುಡವನ್ನು ಸುಮಾರು 15-30 ಸೆಂ.ಮೀ. ಎತ್ತರಕ್ಕೆ ವಾರ್ಷಿಕ ಒಂದು ಅಥವಾ ಎರಡು ಕಟಾವು ಮಾಡುತ್ತಾರೆ. ರೆಂಬೆ ಹುಳು ಸಾಕುವ ಪದ್ಧತಿ ಇದ್ದಲ್ಲಿ ಪ್ರತಿ ಬೆಳೆಗೂ ಕಟಾವು ಮಾಡಲಾಗುತ್ತದೆ.
ಈ ಪದ್ಧತಿಯು ಕೋಲಾರ ಪದ್ಧತಿ ಎಂದೂ ಸಹ ಸಾಂಪ್ರದಾಯಿಕ ಪ್ರದೇಶಗಳಲ್ಲಿ ಪ್ರಚಲಿತದಲ್ಲಿದೆ. ಗಿಡದಿಂದ ಗಿಡಕ್ಕೆ 9 ಇಂಚು ಹಾಗೂ ಸಾಲಿನಿಂದ ಸಾಲಿಗೆ 2 ಅಡಿಗಳ ಅಂತರದಲ್ಲಿ ಸಣ್ಣಪೊದೆಗಳ ರೀತಿಯಲ್ಲಿ ಗಿಡಗಳನ್ನು ಬೆಳೆಸುತ್ತಾರೆ.
ಎಕರೆಯೊಂದಕ್ಕೆ ಆರು ತಿಂಗಳಿಗೊಮ್ಮೆ 4 ಟನ್ ಕೊಟ್ಟಿಗೆ ಗೊಬ್ಬರವನ್ನು ಬುಡ ಕಟಾವು ಹಾಗೂ ಮಧ್ಯಂತರ ಕಟಾವಿನ ನಂತರ ಕೊಡಬೇಕು. ಮಳೆಯಾಶ್ರಿತ ತೋಟವಾಗಿದ್ದರೆ ವರ್ಷಕ್ಕೊಮ್ಮೆ ವಾರ್ಷಿಕ ಕಟಾವಿನ ನಂತರ ಎಕರೆಗೆ 4 ಟನ್ ಕೊಟ್ಟಿಗೆ ಗೊಬ್ಬರ ಕೊಡಬೇಕು. ಕೊಟ್ಟಿಗೆ ಗೊಬ್ಬರ ದೊರೆಯದಿದ್ದಲ್ಲಿ ಕಾಂಪೋಸ್ಟ್ ಗೊಬ್ಬರ, ಎಣ್ಣೆ ಹಿಂಡಿ, ಎರೆಗೊಬ್ಬರ, ಹಸಿರೆಲೆಗೊಬ್ಬರ, ಕೋಳಿಗೊಬ್ಬರ ಮತ್ತು ಕೆರೆಯ ಗೋಡು ಮಣ್ಣು ಮುಂತಾದವುಗಳನ್ನು ಅವಶ್ಯವಾಗಿ ಬಳಸಬೇಕು. ಜೈವಿಕಗೊಬ್ಬರಗಳನ್ನು ಸಾವಯವ ಗೊಬ್ಬಗಳೊಂದಿಗೆ ನೀಡಬೇಕು.
ಶಿಫಾರಿತ ರಸಗೊಬ್ಬರಗಳ ಬಳಕೆಯಿಂದ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ. ರೆಂಬೆಗಳನ್ನು ಕಟಾವು ಮಾಡುವ ಪದ್ಧತಿಯಲ್ಲಿ ವರ್ಷಕ್ಕೆ 300:120:120 ಕಿ.ಗ್ರಾಂ. ಸಾರಜನಕ : ರಂಜಕ : ಪೊಟ್ಯಾಷ್ ಗೊಬ್ಬರಗಳನ್ನು 5 ಕಂತುಗಳಲ್ಲೂ, ಜೈಕ ಶಿಫಾರಿತ ಪದ್ಧತಿಯನ್ನು 350:140:140 ಕಿ.ಗ್ರಾಂ. ಸಾರಜನಕ:ರಂಜಕ:ಪೊಟ್ಯಾಷ್ ರಸಗೊಬ್ಬರಗಳನ್ನು 5 ಸಮಕಂತುಗಳಲ್ಲೂ, ಎಲೆ ಬಿಡಿಸುವ ಪದ್ಧತಿಯಲ್ಲಿ 280:120:120 ಕಿ.ಗ್ರಾಂ. ಸಾರಜನಕ:ರಂಜಕ:ಪೊಟ್ಯಾಷ್ ಗೊಬ್ಬರಗಳನ್ನು 6 ಕಂತುಗಳಲ್ಲೂ, ಗುಡ್ಡಗಾಡು ಪ್ರದೇಶಗಳಲ್ಲಿ 250:100:100 ಕಿ.ಗ್ರಾಂ. ಸಾರಜನಕ:ರಂಜಕ:ಪೊಟ್ಯಾಷ್ ಗೊಬ್ಬರಗಳನ್ನು 5 ಕಂತುಗಳಲ್ಲೂ ಹಾಗೂ ಮಳೆಯಾಶ್ರಿತ ತೋಟಗಳಲ್ಲಿ 100:50:50: ಕಿ.ಗ್ರಾಂ. ಸಾರಜನಕ:ರಂಜಕ:ಪೊಟ್ಯಾಷ್ ರಸಗೊಬ್ಬರಗಳನ್ನು 2 ಕಂತುಗಳಲ್ಲಿ ಒದಗಿಸಲು ಶಿಫಾರಸ್ಸು ಮಾಡಲಾಗಿದೆ.
ಮೂಲ : ಕರ್ನಾಟಕ ರೇಷ್ಮೆ ಇಲಾಖೆ
ಕೊನೆಯ ಮಾರ್ಪಾಟು : 4/22/2020
ಗಿಡಗಳಿಗೆ ಹಾಕುವ ಕೀಟನಾಶಕಗಳಿಂದ ಹಲವಾರು ಕಾಯಿಲೆಗಳು ಬರುತ್...
ಈ ಕಾರ್ಯಕ್ರಮವನ್ನು 1981-82ರಲ್ಲಿ ರಾಷ್ಟ್ರೀಯ ಜೈವಿಕ ಅನಿಲ...
ಕಬ್ಬಿಣ,ಮ್ಯಾಂಗನೀಸ್,ತಾಮ್ರರಸಗೊಬ್ಬರಗಳು
ಕಕೂನು ಉತ್ಪಾದನೆ ಯ ಆರ್ಥಿಕತೆ ಬಗ್ಗೆ ತಿಳಿಸಲಾಗಿದೆ.