ಅರಣ್ಯ ಪ್ರದೇಶದ ಸಮೀಪದಲ್ಲಿ ಕೃಷಿ ಭೂಮಿಯಿರುವ ರೈತರಿಗೆ ಬೆಳೆ ಬೆಳೆಯುವುದು ಒಂದು ಸವಾಲಾದರೆ, ಅದನ್ನು ರಕ್ಷಿಸಿ ದಕ್ಕಿಸಿಕೊಳ್ಳುವುದು ಇನ್ನೊಂದು ದೊಡ್ಡ ಸವಾಲು. ರೈತರು ಕಷ್ಟಪಟ್ಟು ಬೆಳೆಯುವ ಫಸಲೆಂದರೆ ಕಾಡುಪ್ರಾಣಿಗಳಿಗೂ ಬಲು ಪ್ರಿಯ. ಆಹಾರ ಬಲು ಸುಲಭವಾಗಿ ಸಿಗುವುದರಿಂದ ರೈತರ ಜಮೀನಿಗೆ ದಾಳಿ ಇಡುವುದು ಅವುಗಳಿಗೆ ಮಾವನ ಮನೆಗೆ ಭೇಟಿ ಕೊಟ್ಟಷ್ಟೇ ಸಲೀಸು. ಕೃಷಿಕ ಕಷ್ಟಬಿದ್ದು ಬೆಳೆದ ಬೆಳೆಯನ್ನು ಅವು ತಿಂದು ಹಾಕುವುದಲ್ಲದೆ, ಅಪಾರ ಪ್ರಮಾಣದಲ್ಲಿ ಹಾನಿ ಮಾಡುತ್ತವೆ. ಇದು ಅನ್ನದಾತನಿಗೆ ಆರ್ಥಿಕ ನಷ್ಟ ಉಂಟು ಮಾಡುವುದರಿಂದ ಸಹಜವಾಗಿಯೇ ಕಾಡು ಪ್ರಾಣಿಗಳ ಉಪಟಳ ನಿಯಂತ್ರಿಸಲು ರೈತ ಸಾಕಷ್ಟು ಹಣ ವ್ಯಯಿಸುತ್ತಾನೆ. ಇಲ್ಲಿ ಕೊಟ್ಟಿರುವ ಕೆಲ ಸಾಂಪ್ರದಾಯಿಕ ವಿಧಾನಗಳು ವನ್ಯಜೀವಿಗಳ ಕಾಟ ನಿಗ್ರಹಿಸಲು ರೈತರಿಗೆ ನೆರವಾಗಬಹುದು.
ಕಾಡಿನ ಯಾವುದೋ ಮೂಲೆಯಿಂದ ರೈತರ ಜಮೀನಿಗೆ ನುಸುಳುವ ಕಾಡು ಹಂದಿಗಳಿಂದ ರೈತರು ಪಡುವ ಕಷ್ಟಗಳು ಅಷ್ಟಿಷ್ಟಲ್ಲ. ತೆಂಗಿನ ಗಿಡಗಳಿಂದ ಹಿಡಿದು ತರಕಾರಿ, ಕಾಯಿಪಲ್ಯೆ ಸೇರಿದಂತೆ ಬಹುತೇಕ ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ಫಸಲು ನಷ್ಟ ಮಾಡುತ್ತವೆ. ತೋಟಕ್ಕೆ ಇರುಳಿನಲ್ಲಿ ನುಸುಳುವ ವೇಳೆ ಪದೇಪದೆ ದಾರಿಗಳ ಬದಲಾವಣೆ ಮಾಡುತ್ತವೆ. ತೀಕ್ಷ್ಣ ಆಘ್ರಾಣ ಶಕ್ತಿ ಹೊಂದಿರುವ ಇವು ರೈತರು ತೋಟದಲ್ಲಿ ಕಾದು ಕುಳಿತರೆ ಹತ್ತಿರಕ್ಕೂ ಸುಳಿಯುವುದಿಲ್ಲ. ಆದರೂ ವರಾಹಗಳ ಆಟಾಟೋಪಗಳನ್ನು ಈ ಕೆಲ ತಂತ್ರಗಳಿಂದ ನಿಗ್ರಹಿಸಬಹುದು
ಮನುಷ್ಯನ ಕೂದಲನ್ನು ತೋಟದ ಸುತ್ತ ಹರಡುವ ಮೂಲಕ ಕಾಡು ಹಂದಿಗಳು ತೋಟದೊಳಗೆ ನುಸುಳದಂತೆ ಮಾಡಬಹುದು. ಈ ವಿಧಾನದ ಮೂಲಕ ಕಾಡುಹಂದಿಗಳು ಬೆಳೆ ಹಾಳು ಮಾಡದಂತೆ ತಡೆಯಬಹುದು ಎನ್ನುತ್ತಾರೆ ಕೃಷಿ ತಜ್ಞರು.
'ಕಾಡು ಹಂದಿಗಳು ಗುಂಪುಗೂಡಿ ತೋಟದೊಳಗೆ ಪ್ರವೇಶಿಸುವಾಗ ನೆಲದ ಮೇಲ್ಮೈಯನ್ನು ಆಘ್ರಾಣಿಸಿಕೊಂಡು ಬರುತ್ತದೆ. ಈ ರೀತಿ ಆಘ್ರಾಣಿಸಿಕೊಂಡು ಬರುವಾಗ ತೋಟದ ಸುತ್ತ ಮನುಷ್ಯನ ಕೂದಲನ್ನು ಹರಡುವುದರಿಂದ ಕೂದಲು ಕಾಡುಹಂದಿಗಳ ಮೂಗಿನೊಳಗೆ ಹೋಗಿ ಕಿರಿಕಿರಿ ಉಂಟುಮಾಡುತ್ತವೆ. ಹೀಗಾಗಿ ಮತ್ತೆಂದೂ ಅವುಗಳು ತೋಟದತ್ತ ಸುಳಿಯುವುದಿಲ್ಲ'' ಎನ್ನುತ್ತಾರೆ ಧಾರವಾಡ ಕೃಷಿ ವಿವಿ ಜತೆ ಕೃಷಿ ಚಟುವಟಿಕೆಯಲ್ಲಿ ಸಾಕಷ್ಟು ಬಾರಿ ತೊಡಗಿಸಿಕೊಂಡಿರುವ ರಾಜ್ಯ ಕೃಷಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಡಾ. ಶಿವಯೋಗಿ ಎಂ. ಮರಗಾಲ.
ರೈತರು ಸೆಲೂನಿನಿಂದ ಕೂದಲನ್ನು ಸಂಗ್ರಹಿಸಿ ಬಳಸಬಹುದು. ಹಂದಿಗಳು ಸಾಮಾನ್ಯವಾಗಿ ಕಾಡಿನಿಂದ ತೋಟಕ್ಕೆ ಪ್ರವೇಶಿಸುವ ಜಾಗದಲ್ಲಿ ಕೂದಲನ್ನು ಹರಡಿದರೆ ರೈತರಿಗೆ ಪ್ರಯೋಜನ ಖಂಡಿತ ಎನ್ನುವುದು ಡಾ. ಶಿವಯೋಗಿ ಸಲಹೆ.
ಸಾಮಾನ್ಯವಾಗಿ ಕಾಡುಹಂದಿಗಳು ಒಂದು ನಿರ್ದಿಷ್ಟ ದಾರಿಯ ಮೂಲಕ ರೈತರ ತೋಟಕ್ಕೆ ನುಸುಳುತ್ತವೆ. ಈ ಹಿನ್ನೆಲೆಯಲ್ಲಿ ಕಾಡು ಹಂದಿಗಳು ಬರುವ ದಾರಿಗೆ ಸುಣ್ಣದ ಹುಡಿಯನ್ನು ಎರಚಲಾಗುತ್ತದೆ. ಆಘ್ರಾಣಿಸಿಕೊಂಡು ದಾರಿಯಲ್ಲಿ ಮುಂದೆ ಸಾಗುವ ಕಾಡುಹಂದಿಗಳು ಸುಣ್ಣದ ಬಿಳಿ ಬಣ್ಣ ಮತ್ತು ಅದರ ಘಾಟಿಗೆ ಮತ್ತೆ ತೋಟದ ಹತ್ತಿರ ಬರುವುದಿಲ್ಲ ಎನ್ನುವುದು ಕೊಡಗಿನ ಅನೇಕ ರೈತರ ಅನುಭವ.
ಬಿಲ ತೋಡಿಕೊಂಡು ಬದುಕುವ ಏಡಿಗಳು ರೈತನ ಪಾಲಿಗೆ ಶಾಪ. ಇವು ನೀರಿನಾಶ್ರಯದಲ್ಲಿ ನೆಲೆಸಿ ಭೂಮಿ ತೋಡುವ ಮೂಲಕ ಗದ್ದೆಯ ಬದು ದುರ್ಬಲವಾಗಲು ಕಾರಣವಾಗುತ್ತವೆ. ಆದರೆ ಇದನ್ನು ಸುಲಭವಾಗಿ ನಿಗ್ರಹಿಸಬಹುದು ಎಂದು ಡಾ. ಶಿವಯೋಗಿ ಮರಗಾಲ ಅಭಿಪ್ರಾಯ ಪಡುತ್ತಾರೆ.
ಉದ್ದನೆಯ ಹೂಜಿಯಂಥ ಮಡಿಕೆಯಲ್ಲಿ ತಂಗಳು ಅನ್ನವನ್ನು ಮುಕ್ಕಾಲು ಭಾಗದಷ್ಟು ಹಾಕಬೇಕು. ಬಳಿಕ ಇದನ್ನು ಏಡಿಗಳು ಹೆಚ್ಚಾಗಿ ಇರುವ ಪ್ರದೇಶದಲ್ಲಿ ಮಣ್ಣನ್ನು ಕೊರೆದು ಇಡಬೇಕು. ಏಡಿಗಳು ಒಮ್ಮೆ ಹೂಜಿಯೊಳಗೆ ಹೋದರೆ ಹೊರಗೆ ಬಾರದ ಹಾಗೆ ಭೂಮಿಗೆ ಸಮನಾಂತರವಾಗಿ ಕೂರಿಸುವುದು ಮುಖ್ಯ. ಏಡಿಗಳಿಗೆ ಹಳಸಿದ ಅನ್ನ ಬಹಳ ಇಷ್ಟವಾದ ಕಾರಣ ಇವುಗಳನ್ನು ಹುಡುಕಿಕೊಂಡು ಬರುವ ಏಡಿಗಳು ಹೂಜಿಯೊಳಗೆ ಬೀಳುತ್ತವೆ. ಏಡಿಗಳು ಒಂದು ಬಾರಿ ಬಿದ್ದರೆ ಮುಗಿಯಿತು. ಮತ್ತೆ ಅವು ಹೊರ ಬರುವ ಪ್ರಮೇಯವೇ ಇಲ್ಲ. ಒಂದು ಏಡಿಯನ್ನು ಇನ್ನೊಂದು ಏಡಿ ಹೊರ ಹೋಗದಂತೆ ಎಳೆದಾಡುತ್ತವೆ ಎನ್ನುತ್ತಾರೆ ಮರಗಾಲ. ಹೂಜಿಯಲ್ಲಿ ಸಂಗ್ರಹವಾದ ಏಡಿಗಳನ್ನು ಪುಡಿ ಮಾಡಿ ಗದ್ದೆಗೂ ಬಳಸಬಹುದು. ಇದು ಸಸ್ಯಗಳಿಗೆ ರಂಜಕವನ್ನು ಒದಗಿಸುತ್ತದೆ ಎನ್ನುವುದು ಕೃಷಿ ವಿಜ್ಞಾನಿಗಳ ವಿವರಣೆ.
ಭತ್ತದ ಗದ್ದೆಗೆ ಕಾಡುವ ಕ್ರಿಮಿ ಕೀಟಗಳ ನಿಯಂತ್ರಿಸಲು ಕರಾವಳಿ ಭಾಗದಲ್ಲಿ ಅನೇಕ ಸಾಂಪ್ರದಾಯಿಕ ವಿಧಾನಗಳಿವೆ. ಆದರೆ ಇವುಗಳ ಬಗ್ಗೆ ಈಗಿನ ತಲೆಮಾರಿಗೆ ಅರಿವಿಲ್ಲದಿರುವುದರಿಂದ ಇಂಥ ಜೈವಿಕ ತಂತ್ರಗಳು ರೈತರಿಂದ ದೂರವಾಗುತ್ತಿದೆ. ಕಳ್ಳಿಯುಳ್ಳ ಬಿದಿರು ಗೂಟ ನೆಡುವುದು ಅವುಗಳಲ್ಲೊಂದು. ಕರಾವಳಿ ಭಾಗದಲ್ಲಿ ಭತ್ತದ ಗದ್ದೆಯ ಮಧ್ಯದಲ್ಲಿ ಕಳ್ಳಿಯುಳ್ಳ ಬಿದುರು ಗೂಟ ನೆಡುವ ಕ್ರಮವಿದೆ. ಬಿದಿರಿನ ಗೂಟದ ತುದಿಯಲ್ಲಿ ಕಳ್ಳಿ ಹಸಿರಾಗಿ ಇರುವ ಕಾರಣ ಹಕ್ಕಿಗಳು ಇದರ ಕಡೆ ಕುಳಿತು ಕೀಟಗಳನ್ನು ಭಕ್ಷಿಸುತ್ತವೆ. ಇದಲ್ಲದೆ ಬಲಿ ಪಾಡ್ಯಮಿ ವೇಳೆ ಗದ್ದೆಯಲ್ಲಿ ಬಿದಿರಿನಿಂದ ಮಾಡಿದ ಕೋಲಿನ ತುದಿಗೆ ಬಟ್ಟೆ ಕಟ್ಟಿ ಇದನ್ನು ಗದ್ದೆಯ ಬದುಗಳಲ್ಲಿ ಇಡಲಾಗುತ್ತದೆ. ಬೆಂಕಿಯ ಕಡೆಗೆ ಆಕರ್ಷಣೆಗೊಳ್ಳುವ ಕೀಟಗಳು ಕೊನೆಗೆ ಬೆಂಕಿಗೆ ಬಲಿಯಾಗುತ್ತವೆ.
ಕಾಡುಹಂದಿ ಬರುವ ದಾರಿಯಲ್ಲಿ ಬಿಳಿ ಬಟ್ಟೆಯನ್ನು ನೇತು ಹಾಕುವುದರಿಂದಲೂ ಸಾಕಷ್ಟು ಪ್ರಮಾಣದಲ್ಲಿ ಕಾಡುಹಂದಿಗಳ ಕಾಟಕ್ಕೆ ತಡೆಯೊಡ್ಡಬಹುದು. ಬಿಳಿ ಬಟ್ಟೆ ಕಂಡಕೂಡಲೇ ಮನುಷ್ಯ ಕಾವಲು ಇರಬೇಕೆಂದು ಹೆದರಿ ಅವು ಓಡುತ್ತವೆ.
ಗದ್ದೆ, ತೋಟದ ಬದಿಯಲ್ಲಿ ಮಡಕೆ, ಬಟ್ಟೆ ಬಳಸಿ ಮನುಷ್ಯಾಕೃತಿಯನ್ನು ಹೋಲುವ ಬೆರ್ಚಪ್ಪನನ್ನು ಅಳವಡಿಸಲಾಗುತ್ತದೆ. ಇದರಿಂದ ಮನುಷ್ಯ ಇರಬೇಕೆಂದು ಹೆದರುವ ಕಾಡು ಪ್ರಾಣಿಗಳು ಗದ್ದೆಯತ್ತ ನುಸುಳುವುದಿಲ್ಲ ಎನ್ನುವುದು ಎಲ್ಲೆಡೆ ಬಳಕೆಯಲ್ಲಿರುವ ಪದ್ಧತಿ.
ಕಾರು, ದ್ವಿಚಕ್ರ ವಾಹನಗಳಲ್ಲಿ ಬಳಸಲಾಗುವ ರಿಫ್ಲೆಕ್ಟರ್ನ್ನು ಬಳಸಿ ಕಾಡುಹಂದಿಯ ಕಾಟಕ್ಕೆ ಕಡಿವಾಣ ಹಾಕಲು ಬಳಸುವ ರೈತರು ಕರಾವಳಿ, ಕೊಡಗು ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಾರೆ. ಬೆಳಕು ಬಿದ್ದಾಗ ಹೊಳೆಯುವ ರಿಫ್ಲೆಕ್ಟರ್ ಕಾಡುಹಂದಿಗಳಲ್ಲಿ ಭಯ ಹುಟ್ಟಿಸುತ್ತದೆ. ಹೀಗಾಗಿ ಹಂದಿಗಳು ತೋಟದತ್ತ ಸುಳಿಯಲು ಅಂಜುತ್ತವೆ ಎನ್ನುವುದು ವಿಶೇಷ.
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 1/28/2020
ಭತ್ತದ ಬೆಳೆಗೆ ಬೆಂಕಿರೋಗ, ಕಂದು ಜಿಗಿ ಹುಳುವಿನ ಬಾಧೆ ಕಂಡು...
ಬೆಳೆಗಳಲ್ಲಿ ರೋಗ ನಿರ್ವಹಣೆ ಅವಶ್ಯ
ರಾಷ್ಟ್ರೀಯ ವ್ಯವಸಾಯ ವಿಮಾ ಯೋಜನೆ ರಾಷ್ಟ್ರೀಯ ಕೃಷಿ ವಿ ಮಾ ...
ಬೆಳೆ ಪ್ರಾತ್ಯಕ್ಷಿಕೆಗೆ ತಾಕುಗಳ ಆಯ್ಕೆ ಇದರ ಬಗ್ಗೆ