ಬೆಳೆ ಪ್ರಾತ್ಯಕ್ಷಿಕೆಗೆ ಪೂರ್ವಭಾವಿ ಸಿದ್ದತೆ :
ಹಿಂದಿನ ವರ್ಷಗಳ ಮಳೆ ಪ್ರಮಾಣ, ಹಂಚಿಕೆ, ಒಣ ಅವಧಿ ಮುಂತಾದ ಮಾಹಿತಿ ಹಾಗೂ ಸದ್ಯದ ಭೂ ಉಪಯೋಗ, ಬೆಳೆಗಳ ವಿಸ್ತೀರ್ಣ, ಬಳಸುತ್ತಿರುವ ಪರಿಕರಗಳು (ಬೀಜ, ಸಾವಯವ ಗೊಬ್ಬರ, ರಸಗೊಬ್ಬರ, ಲಘು ಪೋಷಕಾಂಶಗಳು, ಬಯೋಪೆಸ್ಟಿಸೈಡ್, ರಾಸಾಯನಿಕ ಕೀಟನಾಶಕ ಇತ್ಯಾದಿ). ಉತ್ಪಾದನೆ ಮತ್ತು ಉತ್ಪಾದಕತೆ, ಇಳುವರಿ ಪ್ರಮಾಣ ಮಾಹಿತಿ ಸಂಗ್ರಹಿಸುವುದು ಅದರಂತೆ ಸೂಕ್ತ ಬೆಳೆ ಹಾಗೂ ತಳಿಯನ್ನು ಆಯ್ಕೆ ಮಾಡುವುದು.
ಬೆಳೆ ಪ್ರಾತ್ಯಕ್ಷಿಕೆಗೆ ತಾಕುಗಳ ಆಯ್ಕೆ :
- ಮಣ್ಣು ಮತ್ತು ನೀರು ಸಂರಕ್ಷಣಾ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಿದ ಕ್ಷೇತ್ರಗಳಲ್ಲಿ ಪ್ರಾತ್ಯಕ್ಷಿಕೆ ಕೈಗೊಳ್ಳಲು 0.5 ಹೆಕ್ಟೇರ್ ವಿಸ್ತೀರ್ಣವುಳ್ಳ ತಾಕುಗಳನ್ನು ಆಯ್ಕೆ ಮಾಡಬೇಕು.
- ಮುಖ್ಯ ಪ್ರಾತ್ಯಕ್ಷಿಕೆಯನ್ನು 0.4 ಹೆಕ್ಟೇರ್‍ನಲ್ಲಿ ಹಾಗೂ ನಿಯಂತ್ರಣ ತಾಕು 0.1 ಹೆಕ್ಟೇರ್‍ನಲ್ಲಿ ಕೈಗೊಳ್ಳಬೇಕು.
- ಆಯ್ಕೆ ಮಾಡಿದ ತಾಕುಗಳ ರೈತರು ಪ್ರಾತ್ಯಕ್ಷಿಕೆ ಕೈಗೊಳ್ಳಲು ಅಗತ್ಯ ಸಹಕಾರ ನೀಡುವಂತಿರಬೇಕು.
- ಆಯ್ಕೆ ಮಾಡಿದ ತಾಕಿನಿಂದ ಮಣ್ಣು ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಿ ಮುಖ್ಯ ಹಾಗೂ ಸೂಕ್ಷ್ಮ ಪೋಷಕಾಂಶಗಳ ವಿಶ್ಲೇಷಣೆಗಾಗಿ ಕೃಷಿ ಇಲಾಖೆಯ ಪ್ರಯೋಗಾಲಯಕ್ಕೆ ಅಗತ್ಯ ಮಾಹಿತಿಯನ್ನು ನಮೂನೆಯಲ್ಲಿ ಭರ್ತಿ ಮಾಡಿ ಕೊಡಬೇಕು. ಮಣ್ಣು ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ರಸಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸಬೇಕು.
- ತಾಕುಗಳ ಸಂಖ್ಯೆಯನ್ನು ಈ ಬಾಬ್ತಿಗಾಗಿ ಲಭ್ಯವಿರುವ ಅನುದಾನದ ಆಧಾರದಲ್ಲಿ ನಿರ್ಧರಿಸಬೇಕು.
ಪ್ರಾತ್ಯಕ್ಷಿಕೆಗಳಲ್ಲಿ ಅಳವಡಿಸಬಹುದಾದ ತಾಂತ್ರಿಕತೆಗಳ ಆಯ್ಕೆ :
ಜಲಾನಯನ ಪ್ರದೇಶದಲ್ಲಿ ನಡೆಸಿದ ಸಮೀಕ್ಷೆ ಬೆಳೆವಾರು, ಹಾಲಿ ಕಂಡುಬಂದಿರುವ ತಾಂತ್ರಿಕ ಕೊರತೆ ಹಾಗೂ ಅದನ್ನು ನೀಗಿಸಲು ಅಳವಡಿಸಬೇಕಾಗಿರುವ ಸುಧಾರಿತ ತಾಂತ್ರಿಕತೆಗಳನ್ನು ನಿರ್ಧರಿಸಬೇಕು. ಅವುಗಳಲ್ಲಿ ಮುಖ್ಯವಾದುವನ್ನು ಈ ಮುಂದೆ ನೀಡಲಾಗಿದೆ.
- ಪ್ರಾತ್ಯಕ್ಷಿಕೆ ತಾಕಿನಲ್ಲಿ ಅಂತರ ಬದು ನಿರ್ವಹಣಾ ಬೇಸಾಯ ಕ್ರಮಗಳನ್ನು, ಅಂದರೆ 30-40 ಅಡಿಗಳಿಗೆ ಸಣ್ಣ ಬದುಗಳ ನಿರ್ಮಾಣ, ಪ್ರತಿ 8-10 ಅಡಿಗೆ ಇಳಿಯಕಲಿಗೆ ಅಡ್ಡಲಾಗಿ ದೋಣಿ ಸಾಲುಗಳ ನಿರ್ಮಾಣ ಇಳಿಜಾರಿಗೆ ಅಡ್ಡಲಾಗಿ ಬಿತ್ತನೆ ಇತ್ಯಾದಿ ಕ್ರಮಗಳನ್ನು ಅನುಸರಿಸಬೇಕು.
- ಸೂಕ್ತ ಬೆಳೆ, ತಳಿ ಹಾಗೂ ಬೆಳೆ ಪದ್ಧತಿ (ಏಕ/ಬಹುಬೆಳೆ, ಅಂತರ ಬೆಳೆ/ಮಿಶ್ರ ಬೆಳೆ ಇತ್ಯಾದಿ)ಗಳನ್ನು ರೈತರೊಡನೆ ಜಲಾನಯನ ಸಮಿತಿಯೊಡನೆ ಚರ್ಚಿಸಿ ಆಯ್ಕೆ ಮಾಡಬೇಕು.
- ಬೆಳೆ ಪ್ರಾತ್ಯಕ್ಷಿಕೆಗಳಲ್ಲಿ ಸಮಗ್ರ ಪೋಷಕಾಂಶ ನಿರ್ವಹಣಾ ಪದ್ಧತಿಗಳನ್ನು ಅನುಸರಿಸಬೇಕು.
- (ಕಾಂಪೋಸ್ಟ್ /ಎರೆ ಗೊಬ್ಬರ/ಹಸಿರೆಲೆ ಗೊಬ್ಬರ/ಹಿಂಡಿ ಗೊಬ್ಬರಗಳು/ರೈಜೋಬಿಯಂ, ರಂಜಕ ಕರಗಿಸುವ ಸೂಕ್ಷ್ಮಾಣು ಜೀವಿ, ಲಘು ಪೋಷಕಾಂಶಗಳ ಉಪಯೋಗ ಮತ್ತು ಹೊದಿಕೆ (ಮಲ್ಟಿಂಗ್) ಇತ್ಯಾದಿ.
ಸಮಗ್ರ ಕಳೆ ನಿರ್ವಹಣೆಯ ಅಳವಡಿಕೆ:
- ಈ ವ್ಯವಸ್ಥೆಯಲ್ಲಿ ಯಾಂತ್ರಿಕ, ಭೌತಿಕ, ಜೈವಿಕ ರಾಸಾಯನಿಕ ಹಾಗೂ ಬೇಸಾಯ ಕ್ರಮಗಳ ವಿಧಾನಗಳ ಸಮ್ಮಿಶ್ರವಾಗಿದೆ. ಬಿತ್ತನೆಗೆ ಮೊದಲು, ನಂತರ ಬೆಳೆ ಕಾಲದಲ್ಲಿ ಹಾಗೂ ಕೊಯ್ಲಿನ ನಂತರ ಕಳೆಯನ್ನು ನಿಯಂತ್ರಿಸಬೇಕು. ಸಮಗ್ರ ಕಳೆ ನಿರ್ವಹಣೆಯನ್ನು ಎಫ್‍ಎಫ್‍ಎಸ್ ಮಾದರಿಯಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ಅನುಷ್ಠಾನಗೊಳಿಸಬಹುದು.
- ಬೆಳೆ ಪ್ರಾತ್ಯಕ್ಷಿಕೆಗಳಲ್ಲಿ ಸಮಗ್ರ ಕೀಟ ಮತ್ತು ರೋಗ ನಿಯಂತ್ರಣಾ ಕ್ರಮಗಳನ್ನು (ಐಪಿಡಿಎಂ) ಅನುಸರಿಸಬೇಕು.
- ಐಪಿಡಿಎಂ ಪದ್ಧತಿಯಲ್ಲಿ ಯಾಂತ್ರಿಕ, ಬೇಸಾಯಿಕ, ಜೈವಿಕ, ರಾಸಾಯನಿಕ ಪ್ರತಿ ರೋಗ ವಿಧದ ಬಳಕೆ ಆರ್ಥಿಕ ಹಾನಿಮಟ್ಟದಿಂದ ಕೆಳಗಿರುವಂತೆ ನಿರ್ವಹಿಸಲಾಗುತ್ತದೆ.
- ಇದು ರೈತ ಹಾಗೂ ಪರಿಸರ ಸ್ನೇಹಿ ಕ್ರಮವಾಗಿದ್ದು ಕೀಟನಾಶಕಗಳ ಬಳಕೆ ಕಡಿಮೆ ಮಾಡುತ್ತವೆ. ಈ ವಿಧಾನವನ್ನು ಬೀಜದಿಂದ ಬೀಜಕ್ಕೆ, ಬಿತ್ತನೆ ಪೂರ್ವದಿಂದ ಕೊಯ್ಲಿನ ನಂತರದವರೆಗೆ ಅಳವಡಿಸಬಹುದು.
- ಪ್ರಾತ್ಯಕ್ಷಿಕೆಗಳ ಅನುಷ್ಠಾನ, ಉಸ್ತುವಾರಿ ಮತ್ತು ದಾಖಲೀಕರಣ :
- ಪ್ರಾತ್ಯಕ್ಷಿಕೆಗಳಿಗೆ ಬೇಕಾದ ಬೀಜ, ಜೀವಾಣು ಗೊಬ್ಬರ, ಜೈವಿಕ ಗೊಬ್ಬರ, ಹಿಂಡಿ, ಸೂಕ್ಷ್ಮ ಪೋಷಕಾಂಶಗಳು ಜೈವಿಕ ಪೀಡೆ ನಾಶಕಗಳು ಮುಂತಾದ ಪರಿಕರಗಳನ್ನು ಯೋಜನಾ ಮೊತ್ತದಿಂದ ಭರಿಸಬೇಕು.
- ಪರಿಕರಗಳನ್ನು ರೈತ ಸಂಪರ್ಕ ಕೇಂದ್ರಗಳು, ಸಹಕಾರಿ ಸಂಘ ಸಂಸ್ಥೆಗಳು, ಸ್ವಸಹಾಯ ಸಂಘಗಳು ಮುಂತಾದವುಗಳಿಂದ ಖರೀದಿಸಬೇಕು. ಎರೆ/ಕೊಟ್ಟಿಗೆ ಗೊಬ್ಬರ, ಜೀವಾಮೃತ/ಪಂಚಗವ್ಯ ಮುಂತಾದ ಪರಿಕರಗಳನ್ನು ರೈತರು ಭರಿಸಬೇಕು.
- ಇಲಾಖೆಯ ಕೃಷಿ ಘಟಕದ ಅಧಿಕಾರಿಗಳು / ಸಿಬ್ಬಂದಿಯವರು ಜಲಾನಯನ ಸಮಿತಿಯ ಕಾರ್ಯದರ್ಶಿಗಳ ಮೂಲಕ ಪ್ರಾತ್ಯಕ್ಷಿಕೆ ಚಟುವಟಿಕೆಗಳನ್ನು ಕಾರ್ಯಗತಗೊಳಿಸಬೇಕು. 4-5 ಕಿರುಜಲಾನಯನಗಳಲ್ಲಿ ಕೈಗೊಳ್ಳುವ ಪ್ರಾತ್ಯಕ್ಷಿಕೆಗಳಿಗೆ ಒಬ್ಬರು ಕೃಷಿ ಸಹಾಯಕರನ್ನು ಉಸ್ತುವಾರಿಗಾಗಿ ನೇಮಿಸಬೇಕು. ಜಲಾನಯನ ಅಭಿವೃದ್ಧಿ ತಂಡ ಹಾಗೂ ಮೇಲಾಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕು.
- ಮುಖ್ಯ ಪ್ರಾತ್ಯಕ್ಷಿಕೆಯು 0.4 ಹೆಕ್ಟೇರ್‍ನಲ್ಲಿ ಹಾಗೂ ನಿಯಂತ್ರಣ ತಾಕು 0.1 ಹೆಕ್ಟೇರ್‍ನಲ್ಲಿರಬೇಕು.
- ಪ್ರಾತ್ಯಕ್ಷಿಕೆ ಅವಧಿಯಲ್ಲಿ ಅಗತ್ಯವಿರುವ ಎಲ್ಲಾ ಅಂಶಗಳ ದಾಖಲೀಕರಣ ಮಾಡಬೇಕು.
- ಪ್ರಾತ್ಯಕ್ಷಿಕೆಯ ಸೂಕ್ತ ಕಾಲದಲ್ಲಿ ನಿಗಧಿಪಡಿಸಿದರೆ ಘಟಕದ ವೆಚ್ಚದೆ ಮೊತ್ತದಿಂದ ಕಾರ್ಯಕ್ರಮಕ್ಕೆ ಬೇಕಾದ ಕುರ್ಚಿಗಳು, ಮೈಕ್, ಶಾಮಿಯಾನ, ಲಘು ಉಪಹಾರ ಮುಂತಾದವುಗಳನ್ನು ಒದಗಿಸುವ ಉಪಯೋಗಿಸಬೇಕು.
ಪ್ರಾತ್ಯಕ್ಷಿಕೆ ಫಲಿತಾಂಶಗಳ ವಿವರಗಳನ್ನು ಇಲಾಖೆಗೆ ಸಲ್ಲಿಸಬೇಕು.
ವೈಜ್ಞಾನಿಕ ಪದ್ಧತಿಯಲ್ಲಿ ಕಾಂಪೋಸ್ಟ್ ತಯಾರಿಕೆ ಪ್ರಾತ್ಯಕ್ಷಿಕೆ :
- ವೈಜ್ಞಾನಿಕವಾಗಿ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಉಪಯೋಗಿಸುವ ಬಗ್ಗೆ ಹಲವಾರು ವರ್ಷಗಳಿಂದ ರೈತರಿಗೆ ಮಾಹಿತಿ ನೀಡುತ್ತಿದ್ದರೂ ಇನ್ನು ಈ ಚಟುವಟಿಕೆಯನ್ನು ಹೆಚ್ಚಿನ ರೈತರು ಅನುಸರಿಸುತ್ತಿಲ್ಲ ಜಲಾನಯನ ಯೋಜನೆಯ ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ 1 ಅಥವಾ 2 ಕಡೆ ಕಾಂಪೋಸ್ಟ್ ತಯಾರಿಕೆಯ ಮಾದರಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಅಳವಡಿಸಿಕೊಳ್ಳಲು ಪ್ರೇರೇಪಿಸಬಹುದು.
- ಕಾಂಪೋಸ್ಟ್ ತಯಾರಿಕೆಯಲ್ಲಿ ಜೈವಿಕ ರಾಸಾಯನಿಕ ಕಾರ್ಯ ವಿಧಾನವಿದ್ದು, ಸೂಕ್ಷ್ಮ ಜೀವಿಗಳು, ಸಾವಯುವ ವಸ್ತುಗಳನ್ನು ಕೊಳೆಸಿ ಇಂಗಾಲ, ಸಾರಜನಕ ಪ್ರಮಾಣವನ್ನು ಸುಮಾರು 12:1 ರ ಮಟ್ಟಕ್ಕೆ ತರುತ್ತದೆ. ಇಂತಹ ಸಾವಯವ ಗೊಬ್ಬರವು ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಪರಿಸ್ಥಿತಿಯನ್ನು ಸುಧಾರಿಸುವುದರ ಜೊತೆಗೆ ಸಸ್ಯಗಳಿಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಸ್ಥಳದಲ್ಲಿಯೇ ದೊರೆಯುವ ಕ್ಷೇತ್ರ ತ್ಯಾಜ್ಯ ವಸ್ತುಗಳು, ಬೆಳೆಗಳ ಉಳಿಕೆ ಭಾಗಗಳು, ಮರಗಿಡಗಳ ಎಲೆಗಳು ಮುಂತಾದ ಕಚ್ಚಾ ವಸ್ತುಗಳನ್ನು ಬಳಸಿ ಉತ್ತಮ ಕಾಂಪೋಸ್ಟ್ ತಯಾರಿಸಬಹುದು. ಇದರಿಂದ ಪರಿಸರ ಮಾಲಿನ್ಯ ತಡೆಗಟ್ಟಿ ಮಣ್ಣಿನ ಫಲವತ್ತತೆಯನ್ನು ಸುಧಾರಿಸಬಹುದು.
- ಕಾಂಪೋಸ್ಟ್ ತಯಾರಿಸಲು ಸುಮಾರು 2.5 ಮೀಟರ್ ಅಗಲ, 1.0ಮೀ. ಆಳ ಹಾಗೂ 10.00ಮೀ. ಉದ್ದವಿರುವ ನೀರು ನಿಲ್ಲದಿರುವಂತ ಸ್ಥಳವನ್ನು ಆಯ್ಕೆಮಾಡಿ ಇಟ್ಟಿಗೆ/ಕಲ್ಲು/ಬಿದಿರು ಅಥವಾ ಇತರೆ ಕಡ್ಡಿಗಳಿಂದ ಸಿದ್ಧಪಡಿಸಬೇಕು. ಕೃಷಿ ತ್ಯಾಜ್ಯ ವಸ್ತುಗಳು, ಸಗಣಿ, ಗಂಜಲ, ಟ್ರೈಕೋಡರ್ಮ, ಜೈವಿಕ ಗೊಬ್ಬರ, ಸೂಪರ್ ಪಾಸ್ಫೇಟ್ ಮುಂತಾದವನ್ನು ಪದರ ಪದರದಲ್ಲಿ ಹರಡಿ ಮಣ್ಣಿನಿಂದ ಮುಚ್ಚಿ ಸುಮಾರು ಶೇ. 60ರಷ್ಟು ತೇವಾಂಶವಿರುವ ಹಾಗೆ ನಿಗಾವಹಿಸಿ ಉತ್ತಮ ಕಾಂಪೋಸ್ಟ್ ತಯಾರಿಸಬಹುದಾಗಿದೆ
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.