অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಂಜಕ ಕರಗಿಸುವ ಜೈವಿಕ ಗೊಬ್ಬರಗಳು

ಕೆಲವೊಂದು ಸೂಕ್ಷ್ಮಾಣುಜೀವಿಗಳು ಸಾವಯವ ಪದಾರ್ಥಗಳ ಮೇಲೆ ಬೆಳೆದು ಸಾವಯವ ಆಮ್ಲಗಳನ್ನು ಉತ್ಪಾದಿಸುತ್ತವೆ. ಈ ಸಾವಯವ ಆಮ್ಲಗಳ ಕ್ರಿಯೆಯಿಂದ ಮಣ್ಣಿನಲ್ಲಿ ಸ್ಥಿರೀಕರಿಸಲ್ಪಟ್ಟ ಹಾಗೂ ಶಿಲಾರಂಜಕದಲ್ಲಿರುವ ಅಲಭ್ಯ ರಂಜಕವು ಕರಗಿ ಬೆಳೆಗಳಿಗೆ ಹೆಚ್ಚಿನ ರಂಜಕ ಲಭ್ಯವಾಗುವುದಕ್ಕೆ ಸಹಾಯವಾಗುತ್ತದೆ. ಈ ಸೂಕ್ಷ್ಮಾಣುಗಳೆಂದರೆ ಬ್ಯಾಸಿಲಸ್ ಮತ್ತು ಸುಡೋಮೋನಾಸ್ ಪ್ರಭೇದಗಳು (ರಂಜಕ), ಕರಗಿಸುವ ದುಂಡಾಣುಗಳು ಹಾಗೂ ಶಿಲೀಂಧ್ರಗಳಾದ ಆಸ್ಪರ್‍ಜಿಲ್ಲಸ್ ಮತ್ತು ಪೆನ್ಸಿಲಿಯಂ ಪ್ರಭೇದಗಳು ( ರಂಜಕ ಕರಗಿಸುವ ಶಿಳೀಂಧ್ರಗಳು ಪಿ.ಎಸ್.ಎಫ್). ಈ ಜೈವಿಕ ಗೊಬ್ಬರಗಳನ್ನು ಎಲ್ಲಾ ಬೆಳೆಗಳಿಗೂ ಉಪಯೋಗಿಸಬಹುದು. ರಂಜಕ ಕರಗಿಸುವ ಜೈವಿಕ ಗೊಬ್ಬರದ ಬಳಕೆಯಿಂದ ರಂಜಕ ರಸಗೊಬ್ಬರ ಬಳಕೆಯನ್ನು ಮಿತಿಗೊಳಿಸಬಹುದು ಹಾಗೂ ಹೆಚ್ಚಿನ ಇಳುವರಿ ಪಡೆಯಬಹುದು.

ರಂಜಕ ಒದಗಿಸುವ ಶಿಲೀಂಧ್ರಗಳು

ಮೈಕೋರೈಜಾ

ಈ ಶಿಲೀಂಧ್ರವು ಕರಗಿದ ರೂಪದಲ್ಲಿರುವ ರಂಜಕವನ್ನು ನೇರವಾಗಿ ಒದಗಿಸುವುದಲ್ಲದೆ ಇತರ ಲಘು ಪೋಷಕಾಂಶಗಳಾದ ತಾಮ್ರ, ಕಬ್ಬಿಣ, ಸತು, ಅಲ್ಯೂಮಿನಿಯಂ, ಮೆಗ್ನೀಶಿಯಂ ಮ್ಯಾಂಗನೀಸ್, ಗಂಧಕವನ್ನು ಗಿಡಕ್ಕೆ ಒದಗಿಸುವಲ್ಲಿ ಸಹಾಯಕವಾಗಿದೆ. ಈ ಶಿಲೀಂಧ್ರ ಬೇರಿನ ಒಳ ಹೋಗುವುದರಿಂದ ಬೇರು ಹೋದೆಡೆಯಲ್ಲಿ ಇವೂ ಸಹ ನೆಲೆಸಿ ಹೆಚ್ಚಿನ ಪೋಷಕಾಂಶ ಮತ್ತು ನೀರನ್ನು ಸರಾಗವಾಗಿ ಎಳೆದು ಗಿಡಕ್ಕೆ ತಲುಪಿಸುತ್ತವೆ. ಹಾಗೂ ಗಿಡದಲ್ಲಿ ರೋಗ ನಿರೋಧಕತೆಯನ್ನು ಪ್ರಚೋದಿಸಿ ಬೇರು ಕೊಳೆಕಾರಕ ರೋಗಗಳನ್ನು ತಡೆಯುತ್ತದೆ. ಪ್ರತಿ ಚದರ ಅಡಿಗೆ 0.5 ಕಿ.ಗ್ರಾಂ ಮೈಕೊರೈಝಾ ಶಿಲೀಂಧ್ರ ಜೈವಿಕ ಗೊಬ್ಬರ ಬೇಕಾಗುತ್ತದೆ.

ಟ್ರೈಕೋಡರ್ಮ

ಈ ಶಿಲೀಂಧ್ರದ ಬಳಕೆಯು ಆಹಾರ ಮತ್ತು ತೋಟದ ಬೆಳೆಗಳಲ್ಲಿ ಹೆಚ್ಚು ಮಹತ್ವವನ್ನು ಪಡೆಯುತ್ತಿದೆ. ಈ ಶಿಲೀಂಧ್ರವು ಸಸ್ಯದ ಬೆಳವಣಿಗೆಯ ಪೋಷಣೆ, ರೋಗ ನಿರೋಧಕ ( ಸೊರಗು ರೋಗ ಬಾಡುವಿಕೆಯನ್ನು ) ಸಾವಯವ ಅಂಶ ಹಾಗೂ ಮಣ್ಣಿನಲ್ಲಿ ಕರಗದ ರಂಜಕವನ್ನು ಕರಗಿಸಬಲ್ಲವು. ಈ ಶಿಲೀಂಧ್ರವನ್ನು ಶೇಂಗಾ, ಸೋಯಾ ಅವರೆ, ಬಾಳೆ, ಏಲಕ್ಕಿ ಮುಂತಾದ ಬೆಳೆಗಳಲ್ಲಿ ಬಳಸುವುದರಿಂದ ಸೊರಗು ರೋಗವನ್ನು ತಡೆಗಟ್ಟಬಹುದು ಹಾಗೂ ಅತ್ಯತ್ತಮವಾದ ಬೆಳೆ ಇಳುವರಿಯನ್ನು ಪಡೆಯಬಹುದು.

ಗೊಬ್ಬರ ಕೊಳೆಸುವ ಸೂಕ್ಷ್ಮಾಣುಜೀವಿಗಳು

ತ್ಯಾಜ್ಯ ವಸ್ತುಗಳನ್ನು ಶೀಘ್ರವಾಗಿಕಳೆಯುವಿಕೆಗೆ ಕೆಲವೊಂದು ಸೂಕ್ಷ್ಮಾಣುಜೀವಿಗಳಿವೆ. ಸೆಲುಲೋಮೋನಾಸ್, ಅರ್ಥೊಬ್ಯಾಕ್ಟರ್, ಸೈಟೊಫೇಜಾ ಹಾಗೂ ಶಿಲೀಂಧ್ರಗಳಾದ ಅಣಬೆ ಬೀಜ, ಅಸಪರ್‍ಜಿಲ್ಲಸ್, ಪೆನಿಸೀಲಿಯಂ ಮತ್ತು ಆಕ್ಟಿನೋಮೈಸೀಟ್ ಪ್ರಭೇದಗಳಾದ ನೊಕಾರ್‍ಡಿಯಾ ಸ್ಟ್ರೆಪ್ಟೋಮೈಸಿಸ್ ಸೂಕ್ಷ್ಮಾಣುಜೀವಿಗಳು ಶೀಘ್ರವಾಗಿ ತ್ಯಾಜ್ಯ ವಸ್ತುಗಳನ್ನು ಸಹಾಯಮಾಡುತ್ತದೆ. ಅಲ್ಲದೆ ಗೊಬ್ಬರಕ್ಕೆ ಅಜೋಟೋಬ್ಯಾಕ್ಟರ್. ಟ್ರೈಕೋಡರ್ಮ, ರಂಜಕ ಕರಗಿಸುವ ಜೈವಿಕ ಗೊಬ್ಬರವನ್ನು (2 ಕಿ.ಗ್ರಾಂ/ಟನ್ ) ಸೇರಿಸುವುದರಿಂದ ಫಲವತ್ತಾದ ಸಾವಯವ ಗೊಬ್ಬರವನ್ನು  ಅತಿ ಕಡಿಮೆ ಅವಧಿಯಲ್ಲಿ ಪಡೆದುಕೊಳ್ಳುಲು ಸಹಾಯಕವಾಗುತ್ತದೆ.

ಮೂಲ :

ದೂರ ಶಿಕ್ಷಣ ಘಟಕ

ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ

ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

ಕೊನೆಯ ಮಾರ್ಪಾಟು : 1/8/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate