অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮೌಲ್ಯವರ್ಧನೆಗೆ ಮಾದರಿ

ಮೌಲ್ಯವರ್ಧನೆಗೆ ಮಾದರಿ

ಕೊಡಗಿನ ಸುಂಟಿಕೊಪ್ಪದ ವಸಂತಿ ಪೊನ್ನಪ್ಪ (60) ಕೃಷಿಯ ಜತೆ ಮನೆಮಟ್ಟದಲ್ಲಿ ಹಣ್ಣುಗಳ ಮೌಲ್ಯವರ್ಧನೆಗೆ ಅಪೂರ್ವ ಮಾದರಿ. ರಾಜ್ಯಕ್ಕೇ ದೊಡ್ಡ ಸಾಧನೆಯಾಗಿರುವ ಇವರ ಈ ಹವ್ಯಾಸಕ್ಕೆ ಈಗ ರಜತ ವರ್ಷ!ಇವರು ಲಕ್ಷ್ಮಿ ಎಸ್ಟೇಟಿನ ಒಡತಿ. ಪತಿ ಪೊನ್ನಪ್ಪ ಮುಖ್ಯ ಬೆಳೆಗಳಾದ ಕಾಫಿ, ಕರಿಮೆಣಸು ಮತ್ತು ಭತ್ತಕ್ಕೆ ಗಮನ ಕೊಡುತ್ತಾರೆ. ಕುಟುಂಬದ ಜವಾಬ್ದಾರಿಯ ಜತೆ  ಎರಡು ಸಹಾಯಕಿಯರನ್ನು ಇಟ್ಟುಕೊಂಡು ವಸಂತಿಯವರ ಉಪವೃತ್ತಿ ವರ್ಷವಿಡೀ ನಡೆಯುತ್ತದೆ. ಸುಮಾರು 20 - 25 ಥರ ಉತ್ಪನ್ನಗಳು. ವಿಶೇಷವೆಂದರೆ ಸಿಂಹಪಾಲು ಕಚ್ಚಾವಸ್ತುವೂ ಇವರದೇ ಎಸ್ಟೇಟಿನಲ್ಲಿ ಬೆಳೆದದ್ದು. ರಾಸಾಯನಿಕ ಸಂರಕ್ಷಕದ ಬಳಕೆ ಕನಿಷ್ಠ. ಅದೂ ಕೆಲವೊಂದು ಉತ್ಪನ್ನಗಳಿಗೆ ಮಾತ್ರ.

ನೀವು ಬೇರೆಲ್ಲೂ ಕೇಳದ, ಹಾಳಾಗಿ ಹೋಗುವ ಕೃಷ್ಯುತ್ಪನ್ನಗಳನ್ನೂ ಮೌಲ್ಯವರ್ಧಿಸುವುದು ವಸಂತಿ ಅವರ ಹೆಚ್ಚುಗಾರಿಕೆ. ಗುಮ್ಮಟೆ ಹಣ್ಣಿನಿಂದ (ಕೇಪ್ ಗೂಸ್ಬೆರಿ) ಇವರು ಪ್ರಿಸರ್ವ್, ವೈನ್ ತಯಾರಿಸುತ್ತಾರೆ. ಬಳಕೆಯಾಗದೇನೇ ಕೊಳೆಯುವ ಮಲೆನಾಡ ಅಂಜೂರದಿಂದ ಜಾಮ್, ವೈನ್ ಮತ್ತು ಮದುವೆಗಳಲ್ಲಿ ಐಸ್ ಕ್ರೀಮ್ ಗೆ ಸ್ಪ್ರೆಡ್ ಆಗಿ ಸುರಿದುಕೊಡುವ ಮಂದ ರಸ - ಪ್ರಿಸರ್ವ್ - ತಯಾರಿಸುತ್ತಾರೆ. ಪೇರಳೆಯ ಚೀಸ್ ಇನ್ನೊಂದು ಬಾಯಿ ಚಪ್ಪರಿಸುವಂಥ ತಯಾರಿ.  ಬಾರ್ಬಡೋಸ್ ಚೆರಿ, ಕೈಪುಳಿ, ಗ್ರೇಪ್ ಫ್ರುಟ್, ಸ್ಥಳೀಯ ಅಣಬೆ - ತೋಟದಲ್ಲಿ ಬೆಳೆಯುವ ಯಾವುದೇ ಹಣ್ಣನ್ನಿವರು ಕೊಳೆಯಬಿಡುವುದಿಲ್ಲ. ಕಲ್ಪನೆ ಮತ್ತು ಶ್ರಮ ಸೇರಿಸಿ ಬಾಯಿ ಚಪ್ಪರಿಸುವಂಥ ಉತ್ಪನ್ನವಾಗಿಸುತ್ತಾರೆ.

ದಾಳಿಂಬೆ, ದ್ರಾಕ್ಷಿ ಮತ್ತು ಲಿಂಬೆ - ಇವಿಷ್ಟೇ ಇವರು ಬೆಲೆ ಕೊಟ್ಟು ಖರೀದಿಸುವ ಕಚ್ಚಾವಸ್ತುಗಳು.ಮಾವಿನಕಾಯಿಯಿಂದ ಆರಂಭಿಸಿ ಪೀಚ್ ವರೆಗೆ ವಸಂತಿ ಉಳಿದವರು ಮಾಡದ ಉತ್ಪನ್ನ ಮಾಡುತ್ತಿರುತ್ತಾರೆ. ಮಾವಿನಕಾಯಿಯ ಸಿಹಿ ಉಪ್ಪಿನಕಾಯಿ, ಪೀಚ್ ಜಾಮ್, ವೈನ್ ಅಲ್ಲದೆ ಪ್ರಿಸರ್ವ್, ಕೈಪುಳಿಯ ಮಾರ್ಮಲೇಡ್ - ಹೀಗೆ. ಶುಂಠಿ ಮತ್ತು ಲಿಂಬೆಯ ಸ್ಕ್ವಾಶ್ ಇವರ ಅತ್ಯಧಿಕ ಬೇಡಿಕೆಯ ಉತ್ಪನ್ನ. ಮಾರುಕಟ್ಟೆಯಲ್ಲಿ ಸಿಗುವ ಶುಂಠಿಯಲ್ಲಿನ ವಿಷಾಂಶದ ಬಗ್ಗೆ ಅರಿವಿರುವ ಇವರು ತಮಗೆ ಬೇಕಾದಷ್ಟೂ ಶುಂಠಿ ತಾವೇ ಬೆಳೆಸುತ್ತಾರೆ. ‘ಸ್ಕ್ವಾಶ್  ಮಾಡಿದಾಗ  ಹಿಂಡಿದ ಲಿಂಬೆಯ ಸಿಪ್ಪೆ ಹಾಳುಮಾಡುವುದಿಲ್ಲ. ಅದನ್ನು ಬಳಸಿ ಸಿಹಿ ಉಪ್ಪಿನಕಾಯಿ ಮಾಡುತ್ತೇನೆ.’ ಸೀಬೆಹಣ್ಣಿನ ಜೆಲ್ಲಿ ಮತ್ತು ಚೀಸಿಗೆ ತುಂಬಾ ಡಿಮಾಂಡ್. ‘ಪೂರೈಸಲಿಕ್ಕೇ ಆಗುವುದಿಲ್ಲ.’ಈಚೆಗೆ ವಸಂತಿ ತಮ್ಮ ಉತ್ಪನ್ನಗಳಿಗೆ ‘ಲಕ್ಷ್ಮೀಸ್ ದಿವ್ಯಾಮೃತ’ ಎಂಬ ವ್ಯಾಪಾರಿನಾಮ ಕೊಟ್ಟಿದ್ದಾರೆ. ಇವರ ಮಾರಾಟ ವಿಧಾನವೂ ಅನನ್ಯ. “ಮೊದಮೊದಲು ಸ್ಥಳೀಯವಾಗಿ ಅಂಗಡಿಗಳಿಗೆ ಕೊಟ್ಟು ಮಾರುತ್ತಿದ್ದೆ.

ಪೈಪೋಟಿಯಿಂದ ತಯಾರಿಸುವ ಗುಣಮಟ್ಟವಿಲ್ಲದ ಉತ್ಪನ್ನಗಳೂ ಅಲ್ಲಿಗೆ ಬರುತ್ತವೆ. ಇದನ್ನು ನೋಡಿ ಬೇಸರಗೊಂಡು ಕ್ರಮ ಬದಲಿಸಿದೆ” ಎನ್ನುತ್ತಾರೆ.ಈಗ ಚೆನ್ನೈ, ಬೆಂಗಳೂರುಗಳ ರೆಸ್ಟೋರೆಂಟ್ ಗಳು  ಅಲ್ಲದೆ  ಇವರ  ಸ್ನೇಹಿತರು ನೇರವಾಗಿ ಕೊಂಡುಕೊಂಡು ಮಾರುತ್ತಿದ್ದಾರಂತೆ. ಇಂಥವರು ರಖಂ ಆಗಿ ಖರೀದಿಸಿ ತಾವೇ ಬಾಟ್ಲಿಂಗ್ ಮಾಡಿ ತಮ್ಮ ಲೇಬಲ್ ಅಂಟಿಸಿ ಮಾರುತ್ತಾರಂತೆ. ಹಾಗಾಗಿ ಇವರಿಗೆ ಉತ್ಪಾದನೆಯ ನಂತರದ ಕೆಲಸಗಳ ಉಸಾಬರಿ ಇಲ್ಲ. ಕೊಡಗಿನ ಮದುವೆ ಮನೆಗಳಿಂದ ಅಡ್ವಾನ್ಸ್ ಬೇಡಿಕೆ ಬರುತ್ತದೆ.

ಹಲವಾರು ಉತ್ಪನ್ನಗಳನ್ನು ಹೀಗೆ ಆದೇಶ ಬಂದ ಮೇಲೆ ತಯಾರಿಸಿ ಪೂರೈಸುವುದಿದೆ.ಉಡುಗೊರೆ ಕೊಡಲು ಮತ್ತು ಮದುವೆಗಳಿಗಾಗಿ ಇವರು ತಯಾರಿಸುವ ಉತ್ಪನ್ನಗಳಲ್ಲಿ ಐಸ್ ಕ್ರೀಮ್ ಜತೆ ಸೇರಿಸುವ ಪ್ಯಾಶನ್ ಫ್ರುಟ್, ಅಂಜೂರ ಇತ್ಯಾದಿಗಳ ಪ್ರಿಸರ್ವ್ ಅಲ್ಲದೆ ಮ್ಯಾಂಗೋ ಸೂಫ್ಲೆ, ಲಿಚ್ಚಿ ಸೂಫ್ಲೆ ಮೊದಲಾದ ವಿಶೇಷಗಳೂ ಇರುತ್ತವೆ.ತೋಟದಲ್ಲಿ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿದರೆ ವೈನ್ ಮಾಡುತ್ತಾರೆ. ಸ್ವಲ್ಪ ಹದವಾಗಿದ್ದರೆ ಅದನ್ನು ಫ್ರೀಜರಿನಲ್ಲಿ ಕಾಪಿಡುತ್ತಾರೆ. ಬೇಕಾದಾಗ, ಆರ್ಡರ್ ಬಂದಾಗ ಹೊರತೆಗೆದು ಉತ್ಪನ್ನ ತಯಾರಿಸುವುದು   ಇವರ  ಕ್ರಮ.  ‘ಮೊದಲೇ ಹೊರಗಿಡುವುದಾದರೆ ಪ್ರಿಸರ್ವೇಟಿವ್ ಹಾಕಬೇಕಾಗುತ್ತದಲ್ಲಾ, ಅದನ್ನು ತಪ್ಪಿಸಲು ಈ ಕ್ರಮ. ಮದುವೆಗಳಲ್ಲಿ ಅಂದಂದೇ ಮುಗಿಯುವ ಉತ್ಪನ್ನ ಗಳಿಗೆ ಪ್ರಿಸರ್ವೇಟಿವ್ ಹಾಕದೆ ಕೊಡಬಹುದಲ್ಲಾ’ ಎನ್ನುವ ಆರೋಗ್ಯಪ್ರಜ್ಞೆಯೂ ಇದರ ಜತೆಗಿದೆ.

“ಒಂದು ಕಾಲಘಟ್ಟದಲ್ಲಿ ಬದುಕಿನಲ್ಲೇ ಬೇಸರ ಬಂದಿತ್ತು. ಆಗ ಅಧ್ಯಾತ್ಮದ ಕಡೆಗೆ ವಾಲಿದೆ. ಅಡುಗೆ ಕೆಲಸ ಆದ ನಂತರ ಉಳಿದ ಸಮಯ ಹಾಳು ಮಾಡುವ ಬದಲು ಈಗ ಈ ಕೆಲಸ. ಇದೀಗ ರೊಟೀನ್ ಆಗಿಬಿಟ್ಟಿದೆ. ತುಂಬ ಸಂತಸ ಪಡೆಯುತ್ತಿದ್ದೇನೆ. ಸಮಾಜದಲ್ಲಿ ಹಿಂದೆ ಬಿದ್ದವರಿಗೆ ಸಹಾಯಮಾಡುವ, ಧೈರ್ಯ ತುಂಬುವಷ್ಟು ಹುಮ್ಮಸ್ಸು ಪಡೆದಿದ್ದೇನೆ “ಎನ್ನುತ್ತಾರೆ ವಸಂತಿ. ಈಚೆಗೆ ಚೆಟ್ಟಳ್ಳಿ ಸಂಶೋಧನಾ ಕೇಂದ್ರದಲ್ಲಿ ಅಲಕ್ಷಿತ ಹಣ್ಣುಗಳ ಬಗೆಗಿನ ವಿಚಾರ ಸಂಕಿರಣದಲ್ಲಿ ಇವರಿಗೆ ಸನ್ಮಾನ ಸಂದಿದೆ.

ಮೂಲ : ಶ್ರಮಜೀವಿ

ಕೊನೆಯ ಮಾರ್ಪಾಟು : 8/27/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate