ನವ ಮಾಸಗಳ ಕಾಲ ಜೀವವೊಂದನ್ನು ತನ್ನೊಡಲಲ್ಲಿ ಬೆಳೆಸಿ, ಜನ್ಮ ನೀಡುವುದೆಂದರೆ ಮಹಿಳೆ ತಾನೇ ಮರುಜನ್ಮ ಪಡೆದಂತೆ. ಮಗು ಜನಿಸಿದ ಕ್ಷಣದಿಂದ ಅನೇಕ ಮಹಿಳೆಯರಲ್ಲಿ ಭಾವನಾತ್ಮಕ ಬದಲಾವಣೆ ಗೋಚರಿಸತೊಡಗುತ್ತದೆ. ಬಾಣಂತಿ - ಖಿನ್ನತೆ ಗಂಭೀರವಾದ ವಿಷಯವಾಗಿದ್ದು, ಇದು ನಿಮ್ಮ ಹಾಗೂ ನಿಮ್ಮ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಬದಲಾಗುತ್ತಿರುವ ನಿಮ್ಮ ಭಾವನೆಗಳನ್ನು, ಖಿನ್ನತೆಯನ್ನು ಸಮರ್ಥವಾಗಿ ನಿಭಾಯಿಸುವುದು ತುಂಬಾ ಅಗತ್ಯ.
ಈ ಲೇಖನದ ಮೂಲಕ ನಿಮ್ಮ ನಿರೀಕ್ಷೆಗಳಿಗೆ ನಾವು ದ್ವನಿಯಾಗಿದ್ದೇವೆ.
ಮಗು ಹುಟ್ಟಿ ಕೆಲವು ದಿನ ಅಥವಾ ವಾರಗಳಲ್ಲಿ ಅನೇಕ ಹೊಸ ಅಮ್ಮಂದಿರು ಕಿರಿಕಿರಿ ಮಾಡಿಕೊಳ್ಳುತ್ತಾರೆ, ದುಃಖ ಪಟ್ಟು ಕೊಳ್ಳುತ್ತಾರೆ, ಅಳುವುದು ಅಥವಾ ಆತಂಕಕ್ಕೊಳಗಾಗುತ್ತಾರೆ. ಆದರೆ ಇಂತಹ ಬೇಬಿ ಬ್ಲೂಸ್ ಸಾಮಾನ್ಯವಾಗಿರುತ್ತದೆ ಹಾಗು ಇದು ಪ್ರಸವ ಸಮಯದಲ್ಲಾಗುವ ದೈಹಿಕ ಬದಲಾವಣೆಗಳಿಂದಾಗಿ (ಹಾರ್ಮೋನುಗಳ ಬದಲಾವಣೆ, ಬಳಲಿಕೆ, ಮತ್ತು ಅನಿರೀಕ್ಷಿತ ಜನನ ಒಳಗೊಂಡಂತೆ) ಹಾಗೂ ನಿಮ್ಮ ಬದಲಾಗುತ್ತಿರುವ ಪಾತ್ರ ಮತ್ತು ಹೊಸ ಮಗುವಿಗೆ ಹೊಂದಿಕೊಳ್ಳುವಲ್ಲಿ ನಿಮ್ಮಲ್ಲಾಗುತ್ತಿರುವ ಭಾವನಾತ್ಮಕ ಪರಿವರ್ತನೆಗೆ ಸಂಬಂಧಿಸಿರಬಹುದು. ಬೇಬಿ ಬ್ಲೂಸ್ ಸಾಮಾನ್ಯವಾಗಿ ಒಂದು ವಾರದೊಳಗೆ ನಿವಾರಣೆಯಾಗುತ್ತದೆ.
ಬೇಬಿ ಬ್ಲೂಸ್ ಕಿಂತ ಹೆಚ್ಚು ಗಂಭೀರವಾದ ಮತ್ತು ಹೆಚ್ಚು ಕಾಲ ಇರುವ ಈ ಸನ್ನೆಯಲ್ಲಿ ಹೊಸ ತಾಯಿಯ ಮನಸ್ಥಿತಿ ಸತತವಾಗಿ ಬದಲಾಗುತ್ತಿರುತ್ತದೆ. ನಿರಂತರ ಆತಂಕ, ದುಃಖ, ತಪ್ಪಿತಸ್ಥ ಮನೋಭಾವನೆಗಳು ಇದರ ಲಕ್ಷಣಗಳಾಗಿವೆ. ಈ ಸನ್ನೆಯು 10% - 25% ರಷ್ಟು ಹೊಸ ಅಮ್ಮಂದಿರಲ್ಲಿ ಕಂಡುಬರುತ್ತದೆ. ಜನ್ಮ ನೀಡಿದ ನಂತರದಿಂದ ಒಂದು ವರ್ಷದ ವರೆಗೆ ಈ ರೋಗನಿರ್ಣಯ ಮಾಡಬಹುದು. ಖಿನ್ನತೆಯ ಇತಿಹಾಸದ ಅಥವಾ ಜೀವನದಲ್ಲಿ ಅನೇಕ ಒತ್ತಡಗಳೊಂದಿಗೆ ಬದುಕುತ್ತಿರುವ ಮಹಿಳೆಯರಲ್ಲಿ ಮತ್ತು ಖಿನ್ನತೆಯ ಇತಿಹಾಸ ಉಳ್ಳ ಕುಟುಂಬದ ಮಹಿಳೆಯರಲ್ಲಿ ಈ ಬಾಣಂತಿ ಸನ್ನೆ ಸಾಮಾನ್ಯವಾಗಿ ಕಂಡುಬರುತ್ತದೆ.
ಇನ್ನು ಲೈಂಗಿಕ ಸಂಬಂಧದ ವಿಷಯ ಬಂದಾಗ, ನೀವು ಮತ್ತು ನಿಮ್ಮ ಸಂಗಾತಿ ಸಂಪೂರ್ಣವಾಗಿ ವಿಭಿನ್ನ ಘಟ್ಟದಲ್ಲಿರುತ್ತೀರಿ. ನಿಮ್ಮ ಸಂಗಾತಿಯು ಮಗು ಹುಟ್ಟವದಕ್ಕಿಂತ ಮುಂಚೆ ನಿಮ್ಮೊಂದಿಗೆ ಹೇಗೆ ರಾತ್ರಿ ಕಳೆಯುತ್ತಿದ್ದರೋ ಈಗಲೂ ಹಾಗೆಯೇ ಇರಲು ಇಚ್ಛಿಸಿರಬಹುದು. ಆದರೆ ನೀವು ದೈಹಿಕವಾಗಿ ಅಥವಾ ಭಾವನಾತ್ಮಕವಾಗಿ ಸಾಕಷ್ಟು ಬಳಲಿರುತ್ತೀರಿ. ಒಂದು ಒಳ್ಳೆಯ ನಿದ್ದೆಗಾಗಿ ನಿಮ್ಮ ಮನ ಹಾತೊರೆಯುತ್ತಿರುತ್ತದೆ. ಆದ್ದರಿಂದಲೇ ವೈದ್ಯರು ಪ್ರಸವದ ನಂತರ ಲೈಂಗಿಕತೆಯಿಂದ ಕೆಲವು ವಾರ ದೂರ ಉಳಿಯುವಂತೆ ಸಲಹೆ ನೀಡುತ್ತಾರೆ. ಮಹಿಳೆಯಲ್ಲಿ ಪ್ರಸವದ ನೋವು ನಿವಾರಣೆಗೂ ಇದು ಸೂಕ್ತ ಸಲಹೆ.
ಶಸ್ತ್ರಚಿಕಿತ್ಸೆಯ ನಂತರದ ಕೆಲವು ದಿನಗಳಲ್ಲಿ ನೋವು ಸ್ವಲ್ಪ ಹೆಚ್ಚಾಗೇ ಇರುತ್ತದೆ. ಆದರೆ ಕ್ರಮೇಣ ಕಡಿಮೆಯಾಗುತ್ತದೆ. ನಿಮ್ಮ ವೈದ್ಯರು ನಿಮಗೆ, ಶಸ್ತ್ರಚಿಕಿತ್ಸೆಯ ನಂತರ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ , ಸ್ನಾನದ ಕ್ರಮ ಹಾಗೂ ಬೇಗ ಚೇತರಿಸಿಕೊಳ್ಳಲು ಮತ್ತು ಮಲಬದ್ಧತೆ ತಪ್ಪಿಸಲು ಸಹಾಯಕವಾಗುವಂತೆ ಲಘು ವ್ಯಾಯಾಮ ಆರಂಭಿಸಲು ಸಲಹೆ ನೀಡುತ್ತಾರೆ.
ನಿಮ್ಮ ಮಗುವಿಗೆ ಜನ್ಮ ನೀಡಲು ನಿಮ್ಮ ದೇಹವು ತಿಂಗಳುಗಟ್ಟಲೆ ತಯಾರಾಗಿತ್ತು, ಈಗ ಜನನದ ನಂತರ ಚೇತರಿಸಿಕೊಳ್ಳಲೂ ಅದಕ್ಕೆ ಸಮಯ ಬೇಕು. ಅದರಲ್ಲೂ ನೀವು ಸಿಸೇರಿಯನ್ (ಸಿ ವಿಭಾಗ) ಮಾಡಿಸಿಕೊಂಡಿದ್ದಲ್ಲಿ ನಿಮ್ಮ ದೇಹಕ್ಕೆ ಇನ್ನೂ ಸ್ವಲ್ಪ ಹೆಚ್ಚಿಗೇ ಸಮಯವೇ ಬೇಕಾಗುತ್ತದೆ. ಏಕೆಂದರೆ ಶಸ್ತ್ರಚಿಕಿತ್ಸೆಯು ಗುಣಮುಖವಾಗಲು ಹೆಚ್ಚು ಕಾಲಬೇಕಾಗುವುದು. ಆದರೆ ಮಗುವಿನ ಜನನ ಅನಿರೀಕ್ಷಿತವಾಗಿದ್ದಲ್ಲಿ ಇದು ಭಾವನಾತ್ಮಕ ಸಮಸ್ಯೆಗಳನ್ನುಂಟು ಮಾಡಬಹುದು.
ನಿಮ್ಮ ದೇಹ ಪುನಃ ಸಜ್ಜಾಗಲು ಸ್ವಲ್ಪ ಕಾಲಾವಕಾಶ ಬೇಕೇ ಬೇಕು. ಸೋಂಕಿನ ಅಪಾಯ, ಅತೀ ರಕ್ತಸ್ರಾವ ಹಾಗು ಚಿಕಿತ್ಸೆ ಮಾಡಿದ ಅಂಗಾಂಶಗಳು ಮತ್ತೆ ತೆರೆದು ಕೊಳ್ಳದಂತೆ ಕಾಪಾಡಲು ವೈದ್ಯರು ಸಾಮಾನ್ಯವಾಗಿ 4-6 ವಾರಗಳ ಕಾಲ ಲೈಂಗಿಕತೆಯಿಂದ ದೂರವಿರಲು ಶಿಫಾರಸ್ಸು ಮಾಡುವರು.
ಚುಂಬನ, ಬಿಸಿ ಅಪ್ಪುಗೆ ಮತ್ತಿತರ ನಿಕಟ ಚಟುವಟಿಕೆಗಳೊಂದಿಗೆ, ನಿಧಾನವಾಗಿ ನಿಮ್ಮ ಲೈಂಗಿಕಕ್ರಿಯೆಯನ್ನು ಆರಂಭಿಸಿ. ಯೋನಿಸ್ರವಿಕೆ ಕಡಿಮೆ ಇರುವುದನ್ನು ನೀವು ಗಮನಿಸಬಹುದು ( ಇದು ಸಾಮಾನ್ಯವಾಗಿ ಹಾರ್ಮೋನುಗಳ ಬದಲಾವಣೆಯಿಂದಾಗಿರುತ್ತದೆ ಹಾಗು ಇದು ತಾತ್ಕಾಲಿಕವಾಗಿರುತ್ತದೆ). ಆದ್ದರಿಂದ ನೀರು ಆಧಾರಿತ ಕೃತಕ ಸ್ರವಿಕೆಯನ್ನು ಬಳಸಬಹುದು. ನೋವಿರುವ ಜಾಗಗಳಲ್ಲಿ ಆದಷ್ಟೂ ಕಡಿಮೆ ಒತ್ತಡ ಹಾಕಿ ಹಾಗೂ ನಿಮಗೆ ಆರಾಮದಾಯಕ ಭಂಗಿಯಲ್ಲಿರಲು ಪ್ರಯತ್ನಿಸಿ. ಲೈಂಗಿಕ ಚಟುವಟಿಕೆಯ ಸಮಯದಲ್ಲಿ ನೋವಾಗುತ್ತಿದ್ದರೆ ಅಥವಾ ಅಂತಹ ನೋವಿಗೆ ನೀವು ಹೆದರುತ್ತಿದ್ದರೆ ನಿಮ್ಮ ಸಂಗಾತಿಗೆ ಆ ಬಗ್ಗೆ ನಯವಾಗಿ ತಿಳಿಹೇಳಿ. ಈ ರೀತಿ ಮುಕ್ತವಾಗಿ ಮಾತನಾಡುವುದರಿಂದ ನಿಮ್ಮ ಲೈಂಗಿಕ ಜೀವನ ಆಸಕ್ತಿದಾಯಕವೂ ಮತ್ತು ಹೆಚ್ಚು ಸುರಕ್ಷಿತವೂ ಆಗಿರುತ್ತದೆ.
ಮೂಲ : ಬೋಲ್ಡ್ ಸ್ಕೈ
ಕೊನೆಯ ಮಾರ್ಪಾಟು : 1/28/2020