1) ಆರೋಗ್ಯ ವ್ಯವಸ್ಥೆ ಎಂದರೇನು?
ಆರೋಗ್ಯವೇ ಭಾಗ್ಯ. ಇದು ನಮ್ಮೆಲ್ಲರ ಆಶಯ. ಈ ಆಶಯ ಈಡೇರಬೇಕಾದರೆ ಪೌಷ್ಠಿಕ ಆಹಾರ, ಶುದ್ಧ ಕುಡಿಯುವ ನೀರು, ಗಾಳಿ, ಪರಿಸರ, ನಮಗೆ ಲಭ್ಯವಿರಬೇಕು, ಅನಾರೋಗ್ಯಉಂಟಾದಾಗ ನಮ್ಮ ಆರೋಗ್ಯ ರಕ್ಷಣೆಗಾಗಿ ಚಿಕಿತ್ಸೆ ನೀಡುವ ಸಿಬ್ಬಂದಿ, ಆಸ್ಪತ್ರೆ, ಪ್ರಯೋಗಾಲಯ ಮುಂತಾದವುಗಳನ್ನು ನಮ್ಮ ಹಿರಿಯರು ಕಾಲ ಕಾಲಕ್ಕೆ ರೂಪಿಸಿಕೊಳ್ಳುತ್ತಲೇ ಬಂದಿದ್ದಾರೆ. ಈ ರೀತಿಯಲ್ಲಿ ಮನುಷ್ಯನ ಆರೋಗ್ಯ ರಕ್ಷಣೆಗಾಗಿ ನಮ್ಮ ಸಮಾಜವು ರೂಪಿಸಲ್ಪಟ್ಟಿರುವ ಒಟ್ಟು ವ್ಯವಸ್ಥೆಗೆ ಆರೋಗ್ಯ ವ್ಯವಸ್ಥೆ ಎಂದು ಹೇಳಬಹುದು.
2) ಆಸ್ಪತ್ರೆ, ವೈದ್ಯರು ಹಾಗೂ ಔಷಧಿಗಳು ಮಾತ್ರ ಆರೋಗ್ಯ ವ್ಯವಸ್ಥೆಯಲ್ಲವೇ?
ಮೇಲೆ ಹೇಳಿದಂತೆ ಅಸ್ಪತ್ರೆ ವೈದ್ಯರು ಹಾಗೂ ಔಷಧಿಗಳು ಆರೋಗ್ಯ ವ್ಯವಸ್ಥೆಯ ಒಂದು ಮುಖ್ಯ ಭಾಗವಾಗಿವೆಯೇ ಹೊರತು ಅವೇ ಸಂಪೂರ್ಣ ವ್ಯವಸ್ಥೆ ಅಲ್ಲ. ಅವುಗಳನ್ನು ನಾವು ಆರೋಗ್ಯ ಸೇವೆಗಳು ಎಂದು ಕರೆಯುತ್ತೇವೆ. ಆರೋಗ್ಯ ಸೇವೆಗಳು ಮನೆ ಮದ್ದಾಗಿರಬಹುದು ಅಥವಾ ವ್ಯವಸ್ಥಿತ ಆರೋಗ್ಯ ಪದ್ದತಿಗಳಾದ ಆಯುರ್ವೇದ, ಹೋಮಿಯೋಪತಿ, ಯುನಾನಿ, ಯೋಗ, ಅಲೋಪತಿ ವ್ಯವಸ್ಥೆಗಳಿರಬಹುದು.
3) ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಂದರೇನು?
ಆರೋಗ್ಯ ಸೇವೆಗಳು ಸಮುದಾಯಕ್ಕೆ ಹಳ್ಳಿಯಲ್ಲಿ ನಾಟಿ ಔಷಧಿ ಮೂಲಕ, ಖಾಸಗಿ ಆಸ್ಪತ್ರೆ ಹಾಗೂ ಸರಕಾರದ ಆರೋಗ್ಯ ಕೇಂದ್ರಗಳ ಮೂಲಕ ದೊರೆಯುತ್ತಿವೆ. ಆರೋಗ್ಯ ಸೇವೆಗಳನ್ನು ಎಲ್ಲರಿಗೂ ಉಚಿತವಾಗಿ ಅಥವಾ ಕಡಿಮೆ ಖರ್ಚಿನಲ್ಲಿ ಪಡೆದುಕೊಳ್ಳಲು ಸರಕಾರ ಸ್ಥಾಪಿಸಿರುವ ವ್ಯವಸ್ಥೆಯನ್ನು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎನ್ನಬಹುದು.
4) ಆರೋಗ್ಯ ವ್ಯವಸ್ಥೆಯನ್ನು ಸರಕಾರ ನಮಗೆ ಉಚಿತವಾಗಿ ನೀಡುತ್ತಿದೆಯಾ?
ಇಲ್ಲ. ಆರೋಗ್ಯ ವ್ಯವಸ್ಥೆಯ ಎಲ್ಲಾ ಖರ್ಚು ವೆಚ್ಚವನ್ನು ಸರಕಾರವು ನಾವು ಕೊಡುವ ವಿವಿಧ ರೀತಿಯ ತೆರಿಗೆಗಳಿಂದ ಭರಿಸುತ್ತಿದೆ.
ನಮ್ಮ ಊರಿನಲ್ಲಿ ಬಡವರಿರಲಿ ಶ್ರೀಮಂತರಿರಲಿ ತಮ್ಮ ದೈನಂದಿನ ಬದುಕಲ್ಲಿ ವಿವಿಧ ರೀತಿಯ ತೆರಿಗೆ ಕಟ್ಟಿತ್ತಿದ್ದಾರೆ. ಇದು ಸಾಮಾನುಗಳನ್ನು ಖರೀದಿಸುವಾಗ ಹಣದ ರೂಪದಲ್ಲಿರ ಬಹುದು (ಉದಾಹರಣೆಗೆ ಸೋಪು, ಸಕ್ಕರೆ, ಉಪ್ಪು ಖರೀದಿಸುವಾಗ ಹಾಗೂ ಮನೆ ಪಟ್ಟಿ, ಕುಡಿಯುವ ನೀರು, ಜಮೀನು ಕರ ನೀಡಿದಾಗ) ಮತ್ತು ದೇಶದ ಉನ್ನತಿಗಾಗಿ ದುಡಿತದ ರೂಪದಲ್ಲಿರಬಹುದು (ಉದಾಹರಣೆ ಕೂಲಿ, ಹೊಲ ಉಳಿಮೆ, ನೌಕರಿ). ಹೀಗೆ ನಮ್ಮಿಂದ ತೆರಿಗೆ ರೂಪದಲ್ಲಿ ಪಡೆದ ಹಣದ ಒಂದು ಭಾಗವನ್ನು ಸರಕಾರ ಆರೋಗ್ಯ ಸೇವೆಗಳನ್ನು ಒದಗಿಸಲು ಖರ್ಚು ಮಾಡುತ್ತಿದೆ. ಹಾಗಾಗಿ ನಮಗೆ ಮೇಲ್ನೋಟಕ್ಕೆ ಉಚಿತವಾಗಿ ಕಂಡರೂ ನಿಜರೂಪದಲ್ಲಿ ಅದರ ಖರ್ಚನ್ನು ಎಲ್ಲಾ ಸಾರ್ವಜನಿಕರೂ ಭರಿಸುತ್ತಿದ್ದಾರೆ.
5) ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅಂದರೆ ಕೇವಲ ರೋಗಿಗಳಿಗೆ ಔಷಧ ನೀಡುವ ವ್ಯವಸ್ಥೆಯೇ?
ಇಲ್ಲ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ವ್ಯಾಪ್ತಿ ಇನ್ನೂ ವಿಶಾಲವಾಗಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವುದು ಹಲವಾರು ಕೆಲಸಗಳಲ್ಲಿ ಒಂದು ಕೆಲಸ. ಇದಲ್ಲದೆ ಖಾಯಿಲೆ ಬರದ ಹಾಗೆ ತಡೆಗಟ್ಟಲು ಆರೋಗ್ಯ ಶಿಕ್ಷಣ, ಗರ್ಭಿಣಿಯರಿಗೆ ಮಾಹಿತಿ, ಅಂಗನವಾಡಿ ಕೇಂದ್ರದ ಮೇಲ್ವಿಚಾರಣೆ ಮಾಡುವ ಕೆಲಸ ಮಾಡುತ್ತಿದೆ. ಪುನರ್ವಸತಿಗಾಗಿ ಪೂರಕ ಸೇವೆಗಳಾದ ಅಂಗವಿಕಲರಿಗೆ ಗುಣಾತ್ಮಕ ಜೀವನ ನಡೆಸಲು ಹಾಗೂ ಪುನರ್ವಸತಿ ಕಲ್ಪಿಸಲು ಪೂರಕ ಕೆಲಸಗಳನ್ನೂ ಕೂಡ ನಿರ್ವಹಿಸುತ್ತಿದೆ.
6) ಈ ಆರೋಗ್ಯ ಸೇವೆಗಳನ್ನು ತಲುಪಿಸುವ ಸಲುವಾಗಿ ಸರ್ಕಾರವು ಯಾವ ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ?
ಮೇಲೆ ತಿಳಿಸಿದ ಆರೋಗ್ಯ ಸೇವೆ ವ್ಯವಸ್ಥಿತವಾಗಿ ಪ್ರತಿಯೊಬ್ಬರಿಗೂ ತಲುಪಿಸಲು ಸರಕಾರವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸ್ಥಾಪಿಸಿದೆ. ಇದರ ಅಡಿಯಲ್ಲಿ ಸರಕಾರವು ಹಲವು ಮಟ್ಟದಲ್ಲಿ ಆರೋಗ್ಯ ಸೇವೆಗಳ ವ್ಯವಸ್ಥೆ ಮಾಡಿದೆ. ಉದಾ: ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಇತ್ಯಾದಿ.
ಕೊನೆಯ ಮಾರ್ಪಾಟು : 1/28/2020