ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ/ಗ್ರಾಮ ಆರೋಗ್ಯ ಯೋಜನಾ ಮತ್ತು ಮಾನಿಟರಿಂಗ್ ಸಮಿತಿಯ ಸಂರಚನೆಗೆ ಸಂಬಂಧಿಸಿದ ನಿಯಮಾವಳಿಗಳು:
ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳ ರಚನೆ ಮತ್ತು ಸ್ವರೂಪದ ಕುರಿತು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಲ್ಲಿ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಮಾತ್ರ ನೀಡಲಾಗಿದೆ. ಆಯಾ ರಾಜ್ಯಗಳ ಅವಶ್ಯಕತೆಗಳಿಗೆ ತಕ್ಕಂತೆ ಬದಲಾವಣೆ ಮಾಡುವ ಅವಕಾಶವಿದೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯದ ಪರಿಸ್ಥಿತಿಗನುಗುಣವಾಗಿ ಕೆಳಕಂಡ ನಿಯಮಾವಳಿಗಳನ್ನು ರೂಪಿಸಲಾಗಿದೆ.
ಅ.1 ಗ್ರಾಮ ಮಟ್ಟದಲ್ಲಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯು ಗ್ರಾಮ ಆರೋಗ್ಯ ಯೋಜನಾ ಮತ್ತು ಮಾನಿಟರಿಂಗ್ ಸಮಿತಿಯೂ ಆಗಿ ಕೆಲಸ ನಿರ್ವಹಿಸತಕ್ಕದ್ದು.
ಅ.2. ರಚನೆ:
ಅ.2.1. ಸಾಮಾನ್ಯ ಸದಸ್ಯರ ಆಯ್ಕೆ:
ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ/ಗ್ರಾಮ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಯು, ಗ್ರಾಮಸಭೆಯಿಂದ ಆಯ್ಕೆಯಾದ 15 ಜನ ಸದಸ್ಯರನ್ನು ಹೊಂದಿರಬೇಕು. ಇವರಲ್ಲಿ ಕನಿಷ್ಠ 8 ಸದಸ್ಯರು ಮಹಿಳೆಯರಾಗಿದ್ದು. ಅವರಲ್ಲಿ ಕನಿಷ್ಠ ಮೂವರು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರು ಮತ್ತು ಇಬ್ಬರು ಸ್ವಸಹಾಯ ಗುಂಪಿನ ಸದಸ್ಯರಾಗಿರಬೇಕು. 15ರಲ್ಲಿ 8ನ್ನು ಕಳೆದು ಉಳಿದ 7 ಸದಸ್ಯರಲ್ಲಿ ಕನಿಷ್ಠ ಇಬ್ಬರು ಪರಿಸಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರತಕ್ಕದ್ದು.
ಅ.2.2. ಪದನಿಮಿತ್ತ ಸದಸ್ಯರು:
ಆಯಾ ಗ್ರಾಮಕ್ಕೆ ಸಂಬಂಧಿಸಿದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಕಿರಿಯ ಪುರುಷ ಆರೋಗ್ಯ ಸಹಾಯಕ, ಪ್ರಾಥಮಿಕ ಶಾಲಾ ಶಿಕ್ಷಕರು (ಮಹಿಳೆಯರಿಗೆ ಆದ್ಯತೆ), ಗ್ರಾಮದಲ್ಲಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಸಮಿತಿಯ ಪದನಿಮಿತ್ತ ಸದಸ್ಯರುಗಳಾಗಿರುತ್ತಾರೆ.
ಅ.2.3. “ಸಮಿತಿಯ ಅಧ್ಯಕ್ಷರು”
ಅ.2.3.1. ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ಮಾತ್ರ ಗ್ರಾಮ ಆರೋಗ್ಯ ನೈರ್ಮಲ್ಯ/ಗ್ರಾಮ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರತಕ್ಕದ್ದು.
ಅ.2.3.2. ಅಂತಹ ಸದಸ್ಯರು ಈಗಾಗಲೇ ಸ್ಥಳೀಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಪಕ್ಷದಲ್ಲಿ, ಅವರೇ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ/ಗ್ರಾಮ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಯ ಅಧ್ಯಕ್ಷರಾಗಿರತಕ್ಕದ್ದು.
ಅ.2.3.3. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸ್ಥಳೀಯ ಗ್ರಾಮದ ನಿವಾಸಿಯಾಗದಿದ್ದ ಪಕ್ಷದಲ್ಲಿ ಗ್ರಾಮದವರೇ ಆದ ಮತ್ತೋರ್ವ ಪಂಚಾಯಿತಿ ಸದಸ್ಯರು ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ/ಗ್ರಾಮ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರತಕ್ಕದ್ದು.
ಅ.2.3.4. ಸದರಿ ಗ್ರಾಮದಲ್ಲಿ ಒಬ್ಬರಿಗಿಂತ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರಿದ್ದ ಸಂದರ್ಭದಲ್ಲಿ ಒಬ್ಬರನ್ನು ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ/ ಗ್ರಾಮ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಯ ಅಧ್ಯಕ್ಷರನ್ನಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯು ನಾಮ ನಿರ್ದೇಶನ ಮಾಡತಕ್ಕದ್ದು.
ಅ.2.3.5. ಗ್ರಾಮ ಪಂಚಾಯಿತಿಯು ಯಾವುದೇ ಕಾರಣದಿಂದ ನಾಮ ನಿರ್ದೇಶನ ಮಾಡಲು ವಿಫಲವಾದ ಪಕ್ಷದಲ್ಲಿ ಸ್ಥಳೀಯ ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿಯು ಅಂತಹ ಗ್ರಾಮದ, ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಅರ್ಹ ಒಬ್ಬರನ್ನು ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ/ ಗ್ರಾಮ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಯ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡತಕ್ಕದ್ದು.
ಅ.2.3.6. ಇಂತಹ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಯ ತೀರ್ಮಾನವೇ ಅಂತಿಮವಾಗಿರತಕ್ಕದ್ದು.
ಅ. 2.4. ಸಮಿತಿಯ ಕಾರ್ಯದರ್ಶಿ:
ಸ್ಥಳೀಯ ಗ್ರಾಮದ ಆಶಾ ಕಾರ್ಯಕರ್ತೆಯು ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ/ ಗ್ರಾಮ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಆಶಾ ಇಲ್ಲದ ಸ್ಥಳಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಒಬ್ಬರಿಗಿಂತ ಹೆಚ್ಚು ಆಶಾ ಅಥವಾ ಅಂಗನವಾಡಿ ಕಾರ್ಯಕರ್ತೆಯರಿದ್ದರೆ, ಹಿರಿತನ ಮತ್ತು ಅರ್ಹತೆಯ ಮೇಲೆ ಒಬ್ಬರನ್ನು ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡುವ ಅಧಿಕಾರವನ್ನು ಸ್ಥಳೀಯ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ/ ಗ್ರಾಮ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಗೆ ನೀಡಲಾಗಿದೆ.
ಕೊನೆಯ ಮಾರ್ಪಾಟು : 1/28/2020