ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ಉದ್ದೇಶಗಳು
• ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳು ಸ್ಥಳೀಯ ಗ್ರಾಮಪಂಚಾಯಿತಿ ಜೊತೆ ಸಹಕಾರ ಮತ್ತು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದು.
• ಸಮುದಾಯದಲ್ಲಿ ಆರೋಗ್ಯದ ಬಗ್ಗೆ ತಿಳಿವಳಿಕೆ ಮೂಡಿಸಿದಲ್ಲಿ ಅವರ ಆರೋಗ್ಯ ಸುಧಾರಣೆ ಸುಲಭವಾಗುತ್ತದೆ.
• ಆರೋಗ್ಯ ಸೇವೆಯಲ್ಲಿ ಜನರು ಭಾಗವಹಿಸಿದರೆ ಅದರ ಉಪಯೋಗವನ್ನು ಪರಿಣಾಮಕಾರಿಯಾಗಿ ಪಡೆಯಲು ಸಾಧ್ಯವಾಗುತ್ತದೆ.
• ಹೆಚ್.ಐ.ವಿ/ಏಡ್ಸ್ ಮತ್ತಿತರ ಸೋಂಕು ತಡೆಗಟ್ಟುವ ಕೆಲಸದಲ್ಲಿ ಜನರ ವಿಶ್ವಾಸ ಮತ್ತು ಪಾಲುದಾರಿಕೆ ಇರುವುದು ಮತ್ತು ಜನರಲ್ಲಿ ಇರುವ ತಪ್ಪು ತಿಳಿವಳಿಕೆಗಳನ್ನು ದೂರ ಮಾಡುವುದು ತುಂಬಾ ಅಗತ್ಯ. ಇದಕ್ಕೆ ಮಹಿಳೆಯರು, ಜನಸಾಮಾನ್ಯರು, ಆಸಕ್ತಿ ಇರುವವರು, ಊರಿನ ಪ್ರಮುಖ ವ್ಯಕ್ತಿಗಳು, ತಿಳಿವಳಿಕೆ ಇರುವವರ ಸಹಕಾರ ಬೇಕಾಗುತ್ತದೆ.
• ಆರೋಗ್ಯ ವ್ಯವಸ್ಥೆಯಲ್ಲಿ ಜನರ ಒಡೆತನವಿದ್ದರೆ ಅವರಲ್ಲಿ ಮತ್ತು ಇಲಾಖೆಗಳ ಅಧಿಕಾರಿಗಳು ಮತ್ತು ಕಾರ್ಯಕರ್ತರಲ್ಲಿ ಜವಾಬ್ದಾರಿ ಹುಟ್ಟುತ್ತದೆ. ಅವರು ಚೆನ್ನಾಗಿ ಕೆಲಸ ಮಾಡುತ್ತಾರೆ ಮತ್ತು ಅದರ ಪರಿಣಾಮ ಉತ್ತಮವಾಗಿರುತ್ತದೆ.
• ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ತಾವೇ ಜವಾಬ್ದಾರಿ ಎಂಬ ಭಾವನೆ ಜನರಲ್ಲಿ ಬೆಳೆಯುತ್ತದೆ. ಇದರಿಂದ ಕುಂದುಕೊರತೆಗಳನ್ನು ಪ್ರಶ್ನೆ ಮಾಡುವ ಅಭ್ಯಾಸ ಬೆಳೆಯುತ್ತದೆ. ಅಲ್ಲದೇ ಸ್ವಂತ ಜವಾಬ್ಧಾರಿಯೂ ಬೆಳೆಯುತ್ತದೆ.
• ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳ ಮೂಲಕ ಜನರಿಗೆ ಸಹಕಾರದಿಂದ ಸಿಗಬೇಕಾದ ಸೇವೆಗಳ ಕುರಿತು ತಿಳಿವಳಿಕೆ ಮೂಡಿಸಬೇಕು. ಅವರು ಗ್ರಾಮ ಪಂಚಾಯಿತಿಯ ಮೂಲಕ ಸಂಬಂಧಪಟ್ಟ ಇಲಾಖೆಗಳ ಮೇಲೆ ಒತ್ತಡ ಹೇರುತ್ತಾರೆ. ಇದರಿಂದ ಅವರಿಗೆ ಹಕ್ಕಾಗಿ ಸಿಗಬೇಕಾದ ಸೇವೆಗಳು ಸಿಗುತ್ತವೆ. ಜನರೇ ತಮ್ಮ ಸ್ವಂತ ಪ್ರಯತ್ನದಿಂದ ಆರೋಗ್ಯ ಪರಿಸ್ಥಿತಿಯ ಸುಧಾರಣೆ ಮಾಡಬಹುದು.
• ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯು ಕೇವಲ ಸರಕಾರವನ್ನೇ ಆಶ್ರಯಿಸಬೇಕಾಗಿಲ್ಲ. ಪಂಚಾಯಿತಿ ರಾಜ್ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಖಾಸಗಿಯವರ ಸಹಕಾರದಿಂದ ತನ್ನ ಗ್ರಾಮದಲ್ಲಿ ಒಳ್ಳೆಯ ಆರೋಗ್ಯ ಸೇವೆ ಸಿಗುವಂತೆ ಮಾಡಲು ಸಾಧ್ಯವಿದೆ.
• ಒಂದು ಗ್ರಾಮದ ಒಟ್ಟು ಆರೋಗ್ಯ ಸುಧಾರಿಸಲು ಹಲವಾರು ಸಂಸ್ಥೆಗಳು, ಇಲಾಖೆಗಳು ಜೊತೆಗೂಡಿ ಕೆಲಸ ಮಾಡಬೇಕು. ಇವುಗಳ ನಡುವೆ ಹೊಂದಾಣಿಕೆ ರೂಪಿಸುವುದು ಮತ್ತು ಅವರನ್ನು ಕೆಲಸ ಮಾಡುವಂತೆ ಪ್ರೇರೇಪಿಸುವುದು ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗೆ ಸಾಧ್ಯವಿದೆ.
• ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಇರುವ ತಿಳಿವಳಿಕೆಯ ಹಾಗೂ ಮುಂಜಾಗ್ರತೆಯನ್ನು ಹೆಚ್ಚಿಸುವುದು ಸುಲಭವಾಗುತ್ತದೆ.
• ಅಭಿವೃದ್ಧಿಗೂ ಆರೋಗ್ಯಕ್ಕೂ ಇರುವ ಸಂಬಂಧವನ್ನು ಜನರ ಮನಸ್ಸಿಗೆ ಮುಟ್ಟುವಂತೆ ಮಾಡಲು ಸಾಧ್ಯವಾಗುತ್ತದೆ.
• ಗ್ರಾಮದಲ್ಲಿ ಆರೋಗ್ಯಕ್ಕಾಗಿ ಸಿಗುವ ಬೇರೆ ಬೇರೆ ಮೂಲಕಗಳ ಹಣ ಮತ್ತು ಸೌಲಭ್ಯಗಳನ್ನು ಆರೋಗ್ಯ ಸೇವೆಗೆ ಒದಗಿಸುವ ಪ್ರಯತ್ನ ಮಾಡಲು ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗೆ ಅವಕಾಶ ಇರುತ್ತದೆ. ಈ ಉದ್ದೇಶಗಳಿಂದಾಗಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ಪಾತ್ರ ಬಹಳ ಮುಖ್ಯವಾಗಿದೆ. ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳು ಏನೆಲ್ಲಾ ಮಾಡಬೇಕು ಮತ್ತು ಮಾಡÀಬಹುದು, ಅದಕ್ಕಾಗಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನವು ಆರೋಗ್ಯ ಸಮಿತಿಯ ಏನೇನು ಮಾಡಬೇಕು ಎಂದು ಹೇಳಿದೆ. ಅವುಗಳೆಂದರೆ,
• ಈ ಸಮಿತಿಯು ಗ್ರಾಮದಲ್ಲಿ ಆರೋಗ್ಯ ಸುಧಾರಣೆಗಳಿಗೆ ಬೇಕಾದ ಕ್ರಿಯಾಯೋಜನೆ ತಯಾರಿಸಬೇಕು.
• ಶುದ್ಧವಾದ ಕುರಿಯುವ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದುವಂತೆ ಮಾಡಬೇಕು.
• ಗ್ರಾಮದ ಪ್ರತಿ ಕುಟುಂಬಗಳು ಶೌಚಾಲಯ ಹೊಂದುವಂತೆ ಮಾಡಬೇಕು.
• ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಸಾರ್ವತ್ರಿಕ ಚುಚ್ಚುಮದ್ದು ಕಾರ್ಯಕ್ರಮ ಏರ್ಪಡಿಸಬೇಕು (ಏಳು ಮಾರಕ ರೋಗಗಳ ವಿರುದ್ದ).
• ಆರೋಗ್ಯ ಸಹಾಯಕರು (ಕಿರಿಯ ಮಹಿಳಾ ಆರೋಗ್ಯ ಸಹಾಯಕಿ/ನರ್ಸ್) ಕ್ರಮವಾಗಿ ಗ್ರಾಮಕ್ಕೆ ಭೇಟಿ ನೀಡುವಂತೆ ಮಾಡುವುದು, ಆ ಮೂಲಕ ಆರೋಗ್ಯ ಸೇವೆ ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿ ಸಿಗುವಂತೆ ಮಾಡಬೇಕು.
• ಗರ್ಭಿಣಿ ಮಹಿಳೆಯರಿಗೆ ತುರ್ತಾಗಿ ಆಸ್ಪತ್ರೆಗೆ ಹೋಗುವಾಗ ವಾಹನ ಸೌಲಭ್ಯ ಒದಗಿಸುವುದು.
• ಆರೋಗ್ಯ ಉಪಕೇಂದ್ರ/ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಔಷಧಿ, ವೈದ್ಯರು, ದಾದಿಯರು ಹಾಗೂ ಸಹಾಯಕಿಯರು ಹಾಗೂ ಇತರ ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು.
• ಅಂಗನವಾಡಿಗಳಿಗೆ ಬೇಕಾದ ಸಹಾಯ, ನೆರವು ನೀಡುವುದು ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರ ಸರಿಯಾಗಿ ಸಿಗುವಂತೆ ಮಾಡಲು ಸಂಬಂಧಪಟ್ಟ ಇಲಾಖೆಯೊಡನೆ ಸಮನ್ಚಯ ಮಾಡುವುದು.
• ಗರ್ಭಿಣಿ ಹಾಗೂ ಬಾಣಂತಿಯರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಿಗುವಂತೆ ನೋಡಿಕೋಳ್ಳುವುದು.
• “ಆಶಾ” ಕಾರ್ಯಕರ್ತೆಯರಿಗೆ ನೆರವು ನೀಡುವುದು, ಹಾಗೂ ಅವರು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು.
• ಸಾರ್ವಜನಿಕ ಚರಂಡಿ, ಬಾವಿಗಳು, ಕುಡಿಯುವ ನೀರಿನ ಮೂಲಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು.
• ಗ್ರಾಮದ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯಿಂದ ನಡೆಯುವ ಆರೋಗ್ಯ ಕಾರ್ಯಕ್ರಮಗಳು ಪಂಚಾಯತ್ ರಾಜ್ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುವಂತೆ ನೋಡಿಕೊಳ್ಳಬೇಕು.
• ಮೂಢನಂಬಿಕೆ, ಭ್ರೂಣ ಹತ್ಯೆ, ಬಾಲ್ಯ ವಿವಾಹ ಅನಕ್ಷರತೆ ಹೋಗಲಾಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
• ವಿವಿಧ ಸರಕಾರಿ ಇಲಾಖೆಗಳು, ಸಂಘ ಸಂಸ್ಥೆಗಳಿಂದ ಸಿಗುವ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವುದು.
• ಹೆಚ್.ಐ.ವಿ/ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವುದು, ಹೆಚ್.ಐ.ವಿ ಸೋಂಕಿತರನ್ನು ಎಲ್ಲರಂತೆ ನೋಡಿಕೊಳ್ಳುವುದು. ಅದು ಸಾಂಕ್ರಾಮಿಕ ರೋಗವಲ್ಲ ಎಂದು ಅರಿವು ಮಾಡಿಸಬೇಕು, ಹಾಗೂ ಅವರು ಎಲ್ಲರಂತೆ ಬದುಕಲು ನೆರವು ನೀಡಬೇಕು
ಕೊನೆಯ ಮಾರ್ಪಾಟು : 1/28/2020