ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ/ ಗ್ರಾಮ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಯ ಜವಾಬ್ದಾರಿಗಳು
ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ/ ಗ್ರಾಮ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಗಳು ಪ್ರತೀ ವರ್ಷ ಆಯಾ ಗ್ರಾಮದ ಆರೋಗ್ಯ ಯೋಜನೆ ಮತ್ತು ಮಾನಸಿಕ ಗ್ರಾಮ ವರದಿ ಕಾರ್ಡನ್ನು ತಯಾರಿಸಿ, ಕ್ಷೇತ್ರದ ಪ್ರಾಥಮಿಕ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಗೆ ಸಲ್ಲಿಸತಕ್ಕದ್ದು. ಇದಲ್ಲದೆ ಸಮಿತಿಯು ಈ ಕೆಳಗಿನ ಜವಾಬ್ದಾರಿಯನ್ನು ಹೊಂದಿರುತ್ತದೆ.
ಭಾರತ ಸರ್ಕಾದ ಮಾರ್ಗಸೂಚಿಯನ್ವಯ ಸಮುದಾಯ ಮಾನಿಟರಿಂಗ್ ಕಾರ್ಯಗಳನ್ನು ಅರ್ಥಪೂರ್ಣವಾಗಿ ಅನಿಷ್ಠಾನಗೊಳಿಸುವುದು.
3ತಿಂಗಳಿಗೊಂದು ಬಾರಿ ಅಂದರೆ ವರ್ಷದಲ್ಲಿ 4 ಸಾರಿ ಗ್ರಾಮದಲ್ಲಿ ಆರೋಗ್ಯ ಜನಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತಕ್ಕದ್ದು. ಮತ್ತು ಇದರಲ್ಲಿ ಆರೋಗ್ಯ ಇಲಾಖೆ ಸೇವೆ ಮತ್ತು ಕೊರತೆಗಳ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಪಡೆದು, ಸೇವೆಗಳನ್ನು ಉತ್ತಮಪಡಿಸುವಲ್ಲಿ ಸ್ಥಳೀಯವಾಗಿ ಕಾರ್ಯೋನ್ಮುಖರಾಗುವುದು.
ಜನರಿಗೆ ಆರೋಗ್ಯ ಕಾರ್ಯಕ್ರಮ, ಆರೋಗ್ಯ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು.
ಗ್ರಾಮದ ಪರಿಸ್ಥಿತಿಗೆ, ಅವಶ್ಯಕತೆಗೆ ಅನುಗುಣವಾಗಿ ಗ್ರಾಮ ಆರೋಗ್ಯ ಯೋಜನೆ ತಯಾರಿಸುವುದು.
ಗ್ರಾಮ ಆರೋಗ್ಯ ಮತ್ತು ಪೋಷಾಕಾಂಶಗಳ ಬಗ್ಗೆ ಚಾಲ್ತಿಯಲ್ಲಿರುವ ಚಟುವಟಿಕೆಗಳ ವಿಶ್ಲೇಷಣೆ ಮಾಡುವುದು ಮತ್ತದರ ಪ್ರಗತಿಯ ಬಗ್ಗೆ ಸಂಬಂಧಪಟ್ಟ ಕಾರ್ಯಕರ್ತರುಗಳಿಗೆ/ಅಧಿಕಾರಿಗಳಿಗೆ ಮಾಹಿತಿ ಪೂರೈಸುವುದು.
ಗ್ರಾಮದ ವಾರ್ಷಿಕ ಆರೋಗ್ಯ ವರದಿಯನ್ನು ಗ್ರಾಮ ಸಭೆಯಲ್ಲಿ ಮಂಡಿಸುವುದು.
ಗ್ರಾಮದ ಆರೋಗ್ಯದ ಸ್ಥಿತಿಗತಿ ಬಗ್ಗೆ ಗುಣಾತ್ಮಕ ಮತ್ತು ಪ್ರಮಾಣಾತ್ಮಕ ಮಾಹಿತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಗೆ ಸಲ್ಲಿಸುವುದು.
ಗ್ರಾಮದ ಆರೋಗ್ಯ ದಾಖಲೆಯ ಸೂಚ್ಯಂಕಗಳ ಮತ್ತು ಆರೋಗ್ಯ ಮಾಹಿತಿ ಫಲಕದ ನಿರ್ವಹಣೆ ಮಾಡಬೇಕು. ದಾಖಲೆ ಮತ್ತು ಫಲಕಗಳಲ್ಲಿ, ಸಾರ್ವಜನಿಕರಿಗೆ ದೊರಕುವ ಸೇವೆಗಳಾದ ಗರ್ಭಿಣಿ ಆರೈಕೆ ಮತ್ತು ಪ್ರಸೂತಿ ಸೌಲಭ್ಯ. ನವಜಾತ ಶಿಶುಗಳ ಆರೈಕೆ, ಲಸಿಕೆ, ಪೌಷ್ಠಿಕಾಂಶ, ಮುಂತಾದವುಗಳ ಬಗ್ಗೆ ಮಾಹಿತಿಯೂ ಅಲ್ಲದೆ, ಸಾಂಕ್ರಾಮಿಕ ಮತ್ತು ಜೀವನ ಶೈಲಿ ಆಧಾರಿತ ಕಾಯಿಲೆಗಳಿಂದ ನರಳುತ್ತಿರುವ ಜನರಿಗೆ ದೊರಕುವ ಚಿಕಿತ್ಸಾ ಸೇವೆಗಳ ಬಗ್ಗೆ ಹಾಗೂ ಮಡಿಲು, ಜನನಿ ಸುರಕ್ಷಾ ಯೋಜನೆ, ಪ್ರಸೂತಿ ಆರೈಕೆ, ತಾಯಿ ಭಾಗ್ಯ, ಇತ್ಯಾದಿ ಜನಪರ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವುದು ಮತ್ತು ಕಾಲ ಕಾಲಕ್ಕೆ ನವೀಕರಿಸತಕ್ಕದ್ದು. ಆರೋಗ್ಯ ಕಾರ್ಯಕರ್ತರು ಹಳ್ಳಿಗೆ ಭೇಟಿ ನೀಡುವ ದಿನ, ದೊರಕುವ ಸ್ಥಳ ಮುಂತಾದವುಗಳ ಬಗ್ಗೆ ಮಾಹಿತಿ ಒದಗಿಸುವುದು.
ನಿಗದಿತ ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ಹಳ್ಳಿಗಳಿಗೆ ಭೇಟಿ ನೀಡಿ ಪೂರ್ಣ ಆರೋಗ್ಯ ಸೇವೆಗಳನ್ನು ಒದಗಿಸುವಂತೆ ನೋಡಿಕೊಳ್ಳುವುದು.
ಹೆಣ್ಣು ಭ್ರೂಣಹತ್ಯೆಗೆ ಕಾರಣವಾಗುವ ಸಾಮಾಜಿಕ ಆಯಾಮಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
ಮುಕ್ತನಿಧಿ ಬಳಕೆ: ಕಾಲಕಾಲಕ್ಕೆ ರಾಜ್ಯ ಸರ್ಕಾರ ಕೊಟ್ಟಿರುವ ಮಾರ್ಗಸೂಚಿ ಪ್ರಕಾರ ಮುಕ್ತ ನಿಧಿಯನ್ನು ಬಳಕೆ ಮಾಡುವುದು ಹಾಗೂ ಅವುಗಳ ಲೆಕ್ಕಪತ್ರವನ್ನು ಪ್ರತಿ ತಿಂಗಳೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿಗಳಿಗೆ ಸಲ್ಲಿಸತಕ್ಕದ್ದು. ಹಾಗೂ ಗ್ರಾಮ ಪಂಚಾಯಿತಿಗೆ ಸಲ್ಲಿಸತಕ್ಕದ್ದು.
ಪ್ರತಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ/ ಗ್ರಾಮ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಯು ಊರೊಟ್ಟಿನ ಕೆಲಸಕ್ಕಾಗಿ, ಸಂಸ್ಥೆಗಳಿಂದ, ಪಂಚಾಯಿತಿಯಿಂದ, ದಾನಿಗಳಿಂದ ನಗದು ಅಥವಾ ವಸ್ತುಗಳ ರೂಪದಲ್ಲಿ ವಂತಿಗೆ/ ದೇಣಿಗೆಯನ್ನು ಸಂಗ್ರಹಿಸಬಹುದು.
ಕೊನೆಯ ಮಾರ್ಪಾಟು : 7/23/2020