ಹಕ್ಕು, ಆರೋಗ್ಯ, ಆರೋಗ್ಯದ ಹಕ್ಕು
– ಆರೋಗ್ಯ ಹಣದಿಂದ ಕೊಂಡುಕೊಳ್ಳುವ ವಸ್ತುವೇ?
– ಆರೋಗ್ಯ ಎಂಬುದು ದಾನ ಧರ್ಮವೇ?
– ಆರೋಗ್ಯ ಎಂಬುದು ಭಿಕ್ಷೆಯೇ?
– ಆರೋಗ್ಯಕ್ಕೆ ಖರ್ಚು ಮಾಡುವ ಹಣ ಎಲ್ಲಿಂದ ಬರುತ್ತದೆ?
ಆರೋಗ್ಯ ಕೊಂಡುಕೊಳ್ಳುವ ವಸ್ತುವೂ ಅಲ್ಲ: ಪಡೆಯುವ ದಾನ ಧರ್ಮವೂ ಅಲ್ಲ: ಬೇಡುವ ಭಿಕ್ಷೆಯೂ ಅಲ್ಲ. ಆರೋಗ್ಯಕ್ಕೆ ಖರ್ಚು ಮಾಡುವ ಹಣ ನಮ್ಮದೇ ತೆರಿಗೆಯ ಹಣ. ಪೂರ್ಣ ಪಾವತಿಸಿದ ತೆರಿಗೆಯ ಹಣ.
ಆರೋಗ್ಯ ಸಂವಿಧಾನ ಕೊಟಿರುವ ಹಕ್ಕು!!!
ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಿಂದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಆರಂಭಗೊಂಡಿರುವುದು ಸರಿಯಷ್ಟೆ. ಇದು ಕೆಲವು ನಿರ್ದಿಷ್ಟ ಉದ್ದೇಶಗಳನ್ನು ಇಟ್ಟುಕೊಂಡಿದೆ. ಈ ಉದ್ದೇಶಗಳನ್ನು ಈಡೇರಿಸಲು ಗುರಿಗಳನ್ನು ನಿಗದಿಪಡಿಸಿಕೊಂಡಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಉದ್ದೇಶಗಳ ಸಾರಾಂಶ ಕೆಳಗಿನಂತಿದೆ.
• ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದು.
• ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರೂ ಸೇರಿದಂತೆ ಎಲ್ಲರ ಆರೋಗ್ಯ ಪರಿಸ್ಥಿರಿಯಲ್ಲಿ ಗಮನಾರ್ಹ ಸುಧಾರಣೆ ತರುವುದು.
• ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯು ಎಲ್ಲರಿಗೂ ಸಿಗುವಂತೆ ಮಾಡುವುದು. ಎಲ್ಲರೂ ಅದನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸುವುದು.
• ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸರ್ಕಾರಗಳ ನಡುವೆ ಪಾಲುದಾರಿಕೆಯನ್ನು ರೂಪಿಸುವುದು.
• ಪ್ರಾಥಮಿಕ ಆರೋಗ್ಯ ಕಾರ್ಯಕ್ರಮ ಮತ್ತು ಮೂಲ ಸೌಕರ್ಯಗಳ ನಿರ್ವಹಣೆಯಲ್ಲಿ ಪಂಚಾಯಿತಿ ರಾಜ್ ಸಂಸ್ಥೆಗಳು ಭಾಗವಹಿಸುವುದು. ಅಲ್ಲದೇ ಸಮುದಾಯವನ್ನು ಇದರಲ್ಲಿ ಸೇರಿಸಿಕೊಳ್ಳುವುದು.
• ಸಮತೆ ಮತ್ತು ಸಾಮಾಜಿಕ ನ್ಯಾಯ ಪಡೆದುಕೊಳ್ಳಲು ಅವಕಾಶ ಒದಗಿಸಿಕೊಡುವುದು.
• ಸ್ಥಳೀಯ ಆರೋಗ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆಗೆ ಅವಕಾಶ ಕೊಡುವುದು
• ವಿವಿಧ ಆರೋಗ್ಯ ಸೇವೆಗಳನ್ನು ಒಟ್ಟುಗೂಡಿಸುವುದು.
• ‘ಸ್ಥಳೀಯ ಆರೋಗ್ಯ ಪದ್ಧತಿಗಳನ್ನು ವೈಜ್ಞಾನಿಕವಾಗಿ ತಿಳಿದು ಅವುಗಳನ್ನು ಉತ್ತೇಜಿಸುವುದು ಹಾಗೂ ಬಳಸಿಕೊಳ್ಳುವುದು(ಆಯುರ್ವೇದ/ಯೋಗ/ಯುನಾನಿ/ಸಿದ್ಧ/ಹೋಮಿಯೋಪತಿ) ಆದರೆ ನಕಲಿ ವೈದ್ಯರಿಂದ ಎಚ್ಚರದಿಂದಿರುವುದು.
• ಉಪ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವುದು.
• ಸಾರ್ವಜನಿಕರಿಗೆ ಆರೋಗ್ಯ ಸೇವೆಗಳು (ಸರ್ಕಾರಿ) 100ಕ್ಕೆ 34 ಭಾಗ ಮಾತ್ರ ದೊರಕುತ್ತಿವೆ.100ಕ್ಕೆ 100 ಮಂದಿಗೂ ಆರೋಗ್ಯ ಸೇವೆಗಳು ಸಿಗುವಂತೆ ಮಾಡುವುದು.
• ಜಿಲ್ಲಾ ಆರೋಗ್ಯ ಯೋಜನೆ ರೂಪಿಸುವುದು. ಈ ಯೋಜನೆಯಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಸೇರಿಸುವುದು.
• ರೋಗ ನಿಯಂತ್ರಣ ಯೋಜನೆಗಳನ್ನು ಬಲಪಡಿಸುವುದು.
• ಖಾಸಗಿ ಮತ್ತು ಸರಕಾರಿ ವಲಯಗಳು ಒಟ್ಟಿಗೆ ಪಾಲ್ಗೊಳ್ಳುವಂತೆ ಮಾಡಿ ಸಾರ್ವಜನಿಕ ಆರೋಗ್ಯದ ಗುರಿ ಸಾಧಿಸುವುದು.
ಕೊನೆಯ ಮಾರ್ಪಾಟು : 1/28/2020