ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ರಚನೆ ಹೇಗಿದೆ?
ಈ ಅಭಿಯಾನದ ಸಾಂಸ್ಥಿಕ ರಚನೆಗಳಲ್ಲಿ ಮುಖ್ಯ ಘಟಕ ಎಂದರೆ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ. ಇದು ಸಮುದಾಯವೇ ಆರಿಸಿದ ಸಮಿತಿಯಾಗಿರುತ್ತದೆ.
• “ಆಶಾ” ಯೋಜನೆಯ ಅನುಷ್ಠಾನವನ್ನು ಗ್ರಾಮ ಪಂಚಾಯಿತಿಯ ಸೌಕರ್ಯ ಸ್ಥಾಯಿ ಸಮಿತಿ ನೋಡಿಕೊಳ್ಳುತ್ತದೆ.
• ಸಾರ್ವಜನಿಕ ಆಸ್ಪತ್ರೆಗಳನ್ನು ಸಮುದಾಯವೇ ನಿರ್ವಹಿಸಲು ಸಾಧ್ಯವಾಗುವಂತೆ ಆರೋಗ್ಯ ರಕ್ಷಾ ಸಮಿತಿಗಳು ಇರುತ್ತವೆ.
• ಜಿಲ್ಲಾ ಪಂಚಾಯ್ತಿಯ ಮಟ್ಟದಲ್ಲಿ ಜಿಲ್ಲಾ ಆರೋಗ್ಯ ಅಭಿಯಾನ ಸಮಿತಿ ಇರುತ್ತದೆ. ಇದರಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸಂಯೋಜಕರಾಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಖಾಸಗಿ ವೃತ್ತಿಪರ ಪ್ರತಿನಿಧಿಗಳು, ಇದರಲ್ಲಿ ಸದಸ್ಯರಾಗಿರುತ್ತಾರೆ.
• ಆರೋಗ್ಯ ಮತ್ತು ಕುಟುಂಭ ಕಲ್ಯಾಣ ಇಲಾಖೆಯ ಕಾರ್ಯದಶಿಯವರ ಅಧ್ಯಕ್ಷತೆಯಲ್ಲಿ ಒಂದು ಕಾರ್ಯ ಯೋಜನಾ ಸಮಿತಿ ಇರುವುದು. ಇದು ಈ ಅಭಿಯಾನದ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರುತ್ತದೆ.
• ರಾಜ್ಯ ಮಟ್ಟದಲ್ಲಿ ಆರೋಗ್ಯ ಕಾರ್ಯಪಡೆ ಇರುತ್ತದೆ. ಇದಕ್ಕೆ ಮುಖ್ಯಮಂತ್ರಿಯವರು ಅಧ್ಯಕ್ಷರಾಗಿರುತ್ತಾರೆ. ಆರೋಗ್ಯ ಸಚಿವರು ಸಹ ಅಧ್ಯಕ್ಷರಾಗಿರುತ್ತಾರೆ. ಆರೋಗ್ಯ ಇಲಾಖೆಯ ಕಾರ್ಯದರ್ಶಿಯವರು ಸಮನ್ವಯಕಾರರಾಗಿ ಕೆಲಸ ಮಾಡುತ್ತಾರೆ. ಈ ಕಾರ್ಯಪಡೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಇಲಾಖೆಗಳ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆ ಹಾಗೂ ಖಾಸಗಿ ವೃತ್ತಿಪರ ಪ್ರತಿನಿಧಿಗಳು ಇರುತ್ತಾರೆ.
• ರಾಷ್ಟ್ರ ಮಟ್ಟದಲ್ಲಿ ಸಂಚಲನಾ ತಂಡ ಇರುವುದು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಇದರ ಮುಖ್ಯಸ್ಥರು. ಈ ತಂಡದಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರು, ಪಂಚಾಯಿತಿ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಮಾನವ ಸಂಪನ್ಮೂಲಾಭೀವೃದ್ಧಿ ಇಲಾಖೆಗಳ ಸಚಿವರು, ಸಾರ್ವಜನಿಕ ಆರೋಗ್ಯ ತಜ್ಞರು ಸದಸ್ಯರಾಗಿರುತ್ತಾರೆ. ಈ ತಂಡವು ರಾಷ್ಟ್ರೀಯ ಆರೋಗ್ಯ ಅಭಿಯಾನದ ನೀತಿಗಳನ್ನು ರೂಪಿಸುವುದು ಹಾಗೂ ಸಲಹೆ ಮಾರ್ಗದರ್ಶನ ನೀಡುತ್ತದೆ.
ಕೊನೆಯ ಮಾರ್ಪಾಟು : 4/16/2020