অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಾನಸಿಕ ಸಮಸ್ಯೆಗಳಿಗೆ ಆಪ್ತ ಸಲಹೆ

ಮಾನಸಿಕ ಸಮಸ್ಯೆಗಳಿಗೆ ಆಪ್ತ ಸಲಹೆ

ಒಂದು ಕಾಲವಿತ್ತು. ಭಾರತದಲ್ಲಿ ಕುಟುಂಬ ಆಧಾರಿತ ಜೀವನವಿದ್ದ ಕಾಲ. ತಾತನದ್ದೋ, ಮುತ್ತಾತನದ್ದೋ ಕಾಲದಿಂದ ಆ ಕುಟುಂಬದ ಎಲ್ಲರೂ ಒಂದೇ ಸೂರಿನಡಿ ಜೀವಿಸುತ್ತಿದ್ದ ಕಾಲ. ವೈಯಕ್ತಿಕ ಚಿಂತನೆ, ಬದುಕಿಗೆ ಹೆಚ್ಚು ಅವಕಾಶವಿಲ್ಲದ ಕಾಲ. ವ್ಯಕ್ತಿಯ ಬದುಕಿನ ಎಲ್ಲವೂ ಎಲ್ಲರಿಗೂ ತಿಳಿಯುವ, ಹಂಚಿಕೊಳ್ಳುವ ಕಾಲ. ಆದರೆ ಅದು ಇಕ್ಕಟ್ಟೆನ್ನಿಸತೊಡಗಿತು. ವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲವೆನಿಸತೊಡಗಿತು. ಪ್ರಾಯಶಃ ಆಂಗ್ಲ ವಿದ್ಯಾಭ್ಯಾಸದ ಪ್ರಭಾವವೋ ಏನೋ, ‘ನಾನು’, ‘ನಾವು’ ಬೆಳೆಯಲು ಕೂಡು ಕುಟುಂಬ ಬಿಡದು ಎನ್ನಿಸತೊಡಗಿತು. ಒಟ್ಟು ಕುಟುಂಬಗಳು ಒಡೆಯತೊಡಗಿದವು. ಲಕ್ಷಾಂತರ ಸಣ್ಣ ಸಣ್ಣ ಕುಟುಂಬಗಳು ಹುಟ್ಟಿದವು. ಅಪ್ಪ, ಅಮ್ಮ, ಮಕ್ಕಳು… ಇಷ್ಟೇ . ಮೊದಮೊದಲು ‘ನಾವಿಬ್ಬರು, ನಮಗಿಬ್ಬರು’ ಇದ್ದರು. ಬರುಬರುತ್ತಾ ಅಪ್ಪ, ಅಮ್ಮ, ಒಂದು ಮಗು ಇಷ್ಟೇ ಕುಟುಂಬ. ದೊಡ್ಡ ಮನೆ, ಒಬ್ಬೊಬ್ಬರಿಗೊಂದು ಟಿ.ವಿ., ಒಬ್ಬೊಬ್ಬರಿಗೊಂದು ಕೊಠಡಿ, ಓಡಾಡಲು 3-4 ಮಂದಿಗಷ್ಟೇ ತಯಾರಾದ ಪುಟ್ಟ ಪುಟ್ಟ ಕಾರುಗಳು… ಆಹಾ! ಎಂಥಾ ರಾಜ ವೈಭೋಗ!
ಆದರೆ ಜೀವನದ ಸಂಕೀರ್ಣತೆ ಈ ರಾಜ ವೈಭೋಗವನ್ನೂ ಅನುಭವಿಸಲು ಬಿಡದು. ನಿತ್ಯ ಜೀವನದಲ್ಲಿ ಅನೇಕ ವಿಷಮ ಪರಿಸ್ಥಿತಿಗಳು ಉದ್ಭವಿಸುತ್ತಲೇ ಇರುತ್ತವೆ. ಹಣಕಾಸಿನ ಸಮಸ್ಯೆ, ಆರೋಗ್ಯದ ಸಮಸ್ಯೆ, ಸಂಬಂಧಗಳಲ್ಲಿ ಬಿರುಕು, ಅಪಾರ್ಥ ಆಗುವ ಸಂದರ್ಭಗಳು, ಕ್ಲಿಷ್ಟ ಸವಾಲುಗಳು. ಹೀಗೇ ಹಲವಾರು ಪ್ರಶ್ನೆಗಳನ್ನು ಬದುಕು ಮುಂದೊಡ್ಡುತ್ತದೆ. ಮನಸ್ಸು ತಲ್ಲಣಗೊಳ್ಳುತ್ತದೆ. ತಲ್ಲಣಗೊಂಡ ಮನಸ್ಸು ಶಾಂತವಾಗಿ ಚಿಂತಿಸಿ ಸಮಸ್ಯೆಗೆ ಪರಿಹಾರ ಹುಡುಕಲು ಸೋಲುತ್ತದೆ. ಅನೇಕ ಸಂದರ್ಭಗಳಲ್ಲಿ ಬೇಕಾದ ಜೀವನಾನುಭವವೇ ವ್ಯಕ್ತಿಗಳಿಗೆ  ಇರುವುದಿಲ್ಲ. ಕೂಡು ಕುಟುಂಬದಲ್ಲಿದ್ದಾಗ ಹಂಚಿಕೊಳ್ಳಬಹುದಾಗಿದ್ದ ಹೊರೆಗಳನ್ನು, ಅನುಭವಿಗಳೊಂದಿಗೆ ಚರ್ಚಿಸಿ ತೆಗೆದುಕೊಳ್ಳಬಹುದಾಗಿದ್ದ ನಿರ್ಧಾರಗಳನ್ನು ಒಬ್ಬರೇ ತೆಗೆದುಕೊಳ್ಳಬೇಕಾ ಗುತ್ತದೆ. ವ್ಯಕ್ತಿಗೆ ಒಂಟಿತನ ಕಾಡುತ್ತದೆ. ಜೀವನ ‘ಬಾಣಲೆಯಿಂದ ಹಾರಿ ಬೆಂಕಿಗೆ ಬಿದ್ದಂತೆ’ ಆಗುತ್ತದೆ.
ಗಡಿಯಾರದಲ್ಲೇನೋ ಮುಳ್ಳುಗಳನ್ನು ಹಿಂದೆ ತಿರುಗಿಸಿ ಹೊಸದಾಗಿ ಪ್ರಾರಂಭಿಸಬಹುದು. ಜೀವನ ಹಾಗಲ್ಲ. ಇಟ್ಟ ಹೆಜ್ಜೆ ಹಿಂದೆಗೆಯುವುದು ಸಾಧ್ಯವೂ ಆಗುವುದಿಲ್ಲ. ಹೊಸ ವಸ್ತುಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕು. ಭಾರತೀಯ ಕುಟುಂಬಗಳಿಗೆ ಈ ಸಹಾಯ ದೊರಕಿಸಬಲ್ಲದ್ದು ಆಪ್ತ ಸಲಹಾ ಕೇಂದ್ರಗಳು.
‘ಆಪ್ರ ಸಲಹೆ’ ಎಂದರೆ, ಯಾವುದೋ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆ ಪರಿಸ್ಥಿತಿ ಎದುರಿಸಲು ಬೇಕಾದ ಧೈರ್ಯ, ಬೆಂಬಲ, ಮಾರ್ಗದರ್ಶನ, ಸಹಾಯವನ್ನು ಆಪ್ತನೆಲೆಯಲ್ಲಿ ಸಮಸ್ಯೆಯ ಬಗ್ಗೆ ಚರ್ಚಿಸುವುದರ ಮೂಲಕ ಒದಗಿಸುವ ವ್ಯವಸ್ಥೆ. ಆಪ್ತ ಸಲಹಾಕಾರರು ತಾವೇ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಸಮಸ್ಯೆ ಎದುರಿಸಲು, ಪರಿಹರಿಸಲು ವ್ಯಕ್ತಿಯನ್ನು ಸಶಕ್ತಗೊಳಿಸುತ್ತಾರೆ. ಒಂದರ್ಥದಲ್ಲಿ ಮುಂಚೆ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗೆ ಮಾವನೋ, ಚಿಕ್ಕಪ್ಪನೋ ಮಾಡುತ್ತಿದ್ದ ಕೆಲಸವನ್ನು ಪರಿಚಯವೇ ಇಲ್ಲದ, ನೆಂಟನಲ್ಲದ ಆಪ್ತ ಸಲಹೆಗಾರ ಮಾಡುತ್ತಾನೆ. ಉದಾ: ಅಪ್ಪ, ಅಮ್ಮ, ಒಬ್ಬನೇ ಮಗನಿರುವ ಕುಟುಂಬ ಎಂದುಕೊಳ್ಳಿ. ಮಗ ಮಾದಕ ವಸ್ತು ವ್ಯಸನಕ್ಕೆ ಸಿಲುಕಿದ್ದಾನೆ ಎಂದುಕೊಳ್ಳಿ. ಅವಿಭಕ್ತ ಕುಟುಂಬದಲ್ಲಿ ಸಮಸ್ಯೆ ಉದ್ಭವಿಸುವುದಕ್ಕೆ ಮೊದಲೇ ನಿವಾರಿಸುವ, ಶುರುವಿನಲ್ಲೇ ಗುರುತಿಸುವ, ಮುಳುಗುತ್ತಿರುವ ವ್ಯಕ್ತಿಯನ್ನು ಎಲ್ಲರೂ ಕೈ ಹಾಕಿ ಹೊರಗೆಳೆವ ವ್ಯವಸ್ಥೆ ಇರುತ್ತಿತ್ತು. ಇಂದು ಇಲ್ಲ. ಏನು ಮಾಡುವುದು? ಆಪ್ತ ಸಲಹಾ ಕೇಂದ್ರಕ್ಕೆ ಬಂದರೆ, ಮಗನಿಗೆ ಮಾದಕ ವಸ್ತು ಬಿಡಿಸುವ ಪ್ರಯತ್ನಕ್ಕಿಂತ ಹೆಚ್ಚಾಗಿ, ತಂದೆ ತಾಯಿಗಳು ಈ ಸಮಸ್ಯೆಯನ್ನು ಹೇಗೆ ಎದುರಿಸಬೇಕು, ಮಗನನ್ನು ದುರ್ವ್ಯಸನ ಬಿಡಿಸಲು ಎಲ್ಲಿಂದ ಸಹಾಯ ಪಡೆಯಬೇಕು, ಹೇಗೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬ ಮಾರ್ಗದರ್ಶನ ಸಿಗುತ್ತದೆ. ತಂದೆ ತಾಯಿಗಳು, ತಮ್ಮ ದುಃಖವನ್ನು ಪಕ್ಕಕ್ಕಿಟ್ಟು ಸಮಸ್ಯೆ ಎದುರಿಸಲು ಅಣಿಗೊಳಿಸುವ ಪ್ರಯತ್ನ ನಡೆಯುತ್ತದೆ. ಮಗನಿಗೂ ಮಾದಕ ವಸ್ತು ವ್ಯಸನದಿಂದ ಹೊರಬರಲು ಸಲಹೆ, ಸೂಚನೆಗಳು ದೊರೆಯಬಹುದು.
ಯಾವ ವಯಸ್ಸಿನ ವ್ಯಕ್ತಿಯಾದರೂ, ಸಮಸ್ಯೆಯೊಂದು ಎದುರಾದಾಗ ‘ನಾನು ಒಂಟಿ’ ಎಂಬ ಭಾವನೆ ಇದ್ದರೆ, ಸಮಸ್ಯೆ ಎದುರಿಸಲು ಬೇಕಾದ ಅನುಭವ ಇಲ್ಲವಾದರೆ, ಅತೀ ಭಾವುಕರಾಗಿಬಿಟ್ಟರೆ, ಗೊಂದಲಗೊಂಡುಬಿಟ್ಟರೆ ಮತ್ತು ಸಮಸ್ಯೆ ಪರಿಹಾರಕ್ಕೆ ಹತ್ತಾರು ಕೈಗಳು ಬೇಕಾದರೆ – ಸಮಸ್ಯೆ ಎದುರಿಸಲು ಸೋಲುತ್ತಾನೆ. ಆತನ ‘ನಾನು ಒಂಟಿ’ ಎಂಬ ಅನಾಥ ಭಾವುಕತೆಯನ್ನು ಹರಿಯಗೊಟ್ಟು ಶಾಂತಗೊಳಿಸಲು, ಮಾನಸಿಕ ಗೊಂದಲಗಳನ್ನು ತಿಳಿಗೊಳಿಸಲು, ಅವಶ್ಯಕತೆ ಬಿದ್ದರೆ ಕೈ ಜೋಡಿಸಲು ‘ಆಪ್ತ ಸಲಹೆ’ಯಿಂದ ಸಾಧ್ಯ. ಇದರಿಂದ ವ್ಯಕ್ತಿ ಇವತ್ತಿಗಷ್ಟೇ ಅಲ್ಲ, ಭವಿಷ್ಯದಲ್ಲೂ ಸಶಕ್ತನಾಗಬಲ್ಲ.
‘ಆಪ್ತ ಸಲಹಾ ಕೇಂದ್ರ’ ಭಾರತೀಯ ಚಿಂತನೆ ಅಲ್ಲ. ಭಾರತೀಯ ಚಿಂತನೆ ಕುಟುಂಬ ಆಧಾರಿತ ಜೀವನವೇ. ಕುಟುಂಬ ಆಧಾರಿತ ಜೀವನ ನಷ್ಟವಾದಾಗ ಉದ್ಭವಿಸುವ ಮಾನಸಿಕ ಸಮಸ್ಯೆಗಳಿಗೆ ಒಂದು ಔಷಧ ‘ಆಪ್ತ ಸಲಹೆ’. ಮುಂಚೆ ಕುಟುಂಬದಲ್ಲೇ ಸಿಗುತ್ತಿದ್ದ ‘ಮನೆ ಮದ್ದು’ ಈಗ ಹೊರಗೆ ‘ಆಪ್ತ ಸಲಹಾ ಕೇಂದ್ರ’ಗಳಲ್ಲಿ ಪಡೆಯಬೇಕಾಗಿದೆ. ಇದೂ ವಿದೇಶೀ ಕೊಡುಗೆಯೇ. ವಿದೇಶಗಳಲ್ಲಿ ಒಂಟಿಯಾಗಿ ಬಾಳುತ್ತಿರುವ ವ್ಯಕ್ತಿಗಳು ಬಹುಪಾಲು. ಅವರ ಭಾವನಾತ್ಮಕ ಸಂಕಷ್ಟಗಳಿಗೆ ಅಲ್ಲಿನ ಸಮಾಜವೇ ಕಂಡುಕೊಂಡಿರುವ ಮದ್ದು ‘ಆಪ್ತ ಸಲಹಾ ಕೇಂದ್ರ’ಗಳು. ಅವನ್ನು ನಮ್ಮಲ್ಲಿಯೂ ಆಮದು ಮಾಡಿಕೊಳ್ಳಲಾಗಿದೆ.
‘ಆಪ್ತ ಸಲಹೆ’ – ಚಾಣಾಕ್ಷ ಮಾತುಗಾರಿಕೆ, ಯುಕ್ತಿಯುತ ಮಾತುಗಾರಿಕೆ ಅಲ್ಲ. ಸಮಸ್ಯೆಗೆ ಸಿಲುಕಿದ ವ್ಯಕ್ತಿಯ ಭಾವನೆಗಳನ್ನು ಗುರುತಿಸುವ ಸಂವೇದನಾಶೀಲ ಹೃದಯ, ಆತನು ತನ್ನೆಲ್ಲ ಅಭಿಪ್ರಾಯಗಳನ್ನು ತೋಡಿಕೊಳ್ಳಲು ಅನುವು ಮಾಡಿಕೊಡುವ ತಾಳ್ಮೆ, ಆತನ ಗೊಂದಲಗಳನ್ನು ಗುರುತಿಸುವ ತೀಕ್ಷ್ಣ ಬುದ್ಧಿ, ನೊಂದ ಹೃದಯಕ್ಕೆ ಸಾಂತ್ವನ ಹೇಳಬಲ್ಲ ತಾಯಿ ಕರುಳು, ಸೋತಿರುವ ವ್ಯಕ್ತಿಯನ್ನು ಮತ್ತೆ ಹುರಿದುಂಬಿಸಬಲ್ಲ ಚೈತನ್ಯ ಇರಬೇಕು. ಅಪರೂಪಕ್ಕೆ ‘ಜನ್ಮತಃ ಆಪ್ತ ಸಲಹೆಗಾರ’ನಾಗಿ ಹುಟ್ಟಬಹುದಾದರೂ… ಬಹುಪಾಲು ಆಪ್ತ ಸಲಹಾ ಕೌಶಲ್ಯಗಳನ್ನು ಕಲಿಯಬೇಕು. ಅಭ್ಯಸಿಸಬೇಕು. ಆಪ್ತ ಸಲಹಾಗಾರರು  ಈ ತಪಸ್ಸಿನಲ್ಲಿ ತೊಡಗಿರುತ್ತಾರೆ.
ಭಾರತೀಯ ಸಮಾಜ ‘ಆಪ್ತ ಸಲಹಾ ಕೇಂದ್ರ’ಗಳನ್ನು ಕುಟುಂಬ ವ್ಯವಸ್ಥೆಗೆ ಪರ್ಯಾಯವಾಗಿ ಬಳಸಿಕೊಂಡು ಎಲ್ಲರ ಮನವೆಂಬ ನಾವೆಗಳು ಮುಳುಗದಂತೆ ಕಾಳಜಿ ವಹಿಸಬೇಕಾಗಿದೆ.

ಡಾ. ಪ್ರಶಾಂತ್ ಎನ್.ಆರ್.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate