অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ತಾಯಂದಿರಿಗೆ ಪೌಷ್ಟಿಕ ಆಹಾರ

ತಾಯಂದಿರಿಗೆ ಪೌಷ್ಟಿಕ ಆಹಾರ

ಪೌಷ್ಟಿಕ ಆಹಾರ ಎಲ್ಲರ ಅಗತ್ಯತೆಯಾಗಿದೆ. ಪ್ರತಿಯೊಬ್ಬರು ಆರೋಗ್ಯದಿಂದಿರಲು, ರೋಗಗಳನ್ನು ತಡೆಗಟ್ಟಲು ಜೀವನದಲ್ಲಿ ಪ್ರಗತಿ ಸಾಧಿಸಲು ಪೌಷ್ಟಿಕ ಆಹಾರದ ಅಗತ್ಯತೆ ಬಹಳವಾಗಿದೆ. ಗರ್ಭಿಣಿ ಮಹಿಳೆಯು ತನ್ನ ಆರೋಗ್ಯ ಕಾಪಡಿಕೊಳ್ಳುವುದಲ್ಲದೆ ಗರ್ಭ ಶಿಶು (ಫೆತುಸ್) ಬೆಳವಣಿಗೆಗೂ ಗಮನಕೊಡಬೇಕಾಗುತ್ತದೆ. 50 kg ತೂಕದ ಗರ್ಭಿಣಿ ಮಹಿಳೆಯ ಆಹಾರದ ಅಗತ್ಯತೆಗಳೇನೆನ್ದು ನೋಡೋಣ. ಗರ್ಭಧಾರಣೆಯ ಪ್ರಾರಂಭದ ದಿನಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ವಿಶೇಷ ಗಮನಹರಿಸಬೇಕಾಗುತ್ತದೆ.

ಅದಲ್ಲದೇ ನಂತರದ ದಿನಗಳಲ್ಲಿ ಗುಣಮಟ್ಟದೊಂದಿಗೆ ಆಹಾರದ ಪ್ರಮಾಣವೂ ಹೆಚ್ಹಾಗಬೇಕಾಗುತ್ತದೆ. ಗರ್ಭಿಣಿ ದೇಹದಲ್ಲಿ ಗರ್ಭಕೋಶ, ಅಂಡಧಾರಕ (placenta) ಗರ್ಭಶಿಶು ಹಾಗೂ ಗರ್ಭಜಲ ಉತ್ಪತ್ತಿಯಾಗುತ್ತದೆ.ಇವುಗಳ ಬೆಳವಣಿಗೆಗೆ ಗುಣಮಟ್ಟದ, ಹೆಚ್ಚು ಪ್ರಮಾಣದ ಆಹಾರ ಅಗತ್ಯ. ಆದ್ದರಿಂದ ಪ್ರಾರಂಭದಲ್ಲಿಯೇ ದಿನಕ್ಕೆ ೧೫೦ ಕ್ಯಾಲರಿ ನೀಡುವ ಹೆಚ್ಚು ಆಹಾರವನ್ನು ಸೇವಿಸಬೇಕಾಗುತ್ತದೆ.ನಂತರದ ದಿನಗಳಲ್ಲಿ ಸುಮಾರು ೨೫೦ ಕ್ಯಾಲರಿಯಷ್ಟು ಆಹಾರದ ಅಗತ್ಯತೆ ಇರುತ್ತದೆ. ಇದನ್ನು ದೊರಕಿಸಿಕೊಳ್ಳಲು ದಿನನಿತ್ಯ ಒಂದು ಕಪ್ ಹಾಲು (೨೦೦ ml ) ಅಥವಾ ಇನ್ನಾವುದಾದರೂ ೧೫೦ ಕ್ಯಾಲರಿ ನೀಡುವ ಆಹಾರ ಹಾಗೂ ನಂತರದ ದಿನಗಳಲ್ಲಿ (೬ ತಿಂಗಳಿಂದ) ಒಂದು ಕಪ್ ಹಾಲಿನೊಂದಿಗೆ ಒಂದು ಹಣ್ಣು, ಕ್ಯಾಲರಿ ಹೆಚ್ಚಳವನ್ನು ಒದಗಿಸುತ್ತದೆ. ಭ್ರೂಣ ಶಿಶು ಬೆಳವಣಿಗೆ ಹಾಗೂ ಗರ್ಭಕೋಶದ ಬೆಳವಣಿಗೆಗೆ ಪ್ರೋಟಿನ್ ಅತ್ಯಗತ್ಯ. ದಿನನಿತ್ಯದ ೭೦ ಗ್ರಾಂ ಪ್ರೋಟಿನ್ ಸೇವನೆಯೊಂದಿಗೆ ೧೦ ಗ್ರಾಂ ಹೆಚ್ಚಳವನ್ನು ಮಾಡಿಕೊಂಡಲ್ಲಿ (೮೦ ಗ್ರಾಂ) ದೇಹದಲ್ಲಿ ಪ್ರೋಟೀನ್ ಕೊರತೆಯನ್ನು ತಪ್ಪಿಸಬಹುದು.

ಬೀನ್ಸ್, ಕಾಲುಗಳು, ಮಾಂಸ, ಮೊಟ್ಟೆಯಲ್ಲಿ ಪ್ರೋಟೀನ್ ಹೇರಳವಾಗಿದೆ. ಫೋಲಿಕ್ ಆಮ್ಲ ಗರ್ಭ ಶಿಶುವಿನ ಮೆದುಳಿನ ಬೆಳವಣಿಗೆಗೆ ಅತ್ಯಗತ್ಯ.ಅದು ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ, ಮೆದುಳು ಬಳ್ಳಿ (neural Tube Defects ) ರೋಗವನ್ನು ತಡೆಗಟ್ಟುತ್ತದೆ. ಫೋಲಿಕ್ ಆಮ್ಲ ದೊರಕುವ ಆಹಾರಗಳಾದ ತರಕಾರಿ, ಗೋಧಿ ಮುಂತಾದವುಗಳನ್ನು ಸೇವಿಸಬಹುದಾಗಿದೆ. ಫೋಲಿಕ್ ಆಮ್ಲದ ಅಗತ್ಯತೆ ಮೊದಲ ಮೂರು ತಿಂಗಳಿನಲ್ಲಿ ಹೆಚ್ಚಿರುತ್ತದೆ. ಗರ್ಭಿಣಿಗೆ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವ ಪದಾರ್ಥಗಳೆಂದರೆ ಕ್ಯಾಲ್ಷಿಯಂ ಮತ್ತು ಕಬ್ಬಿಣ. ಕ್ಯಾಲ್ಷಿಯಂ ಗರ್ಭಿಣಿಯ ಮೂಳೆಯ ಬೆಳವಣಿಗೆಗೆ ಅಗತ್ಯ. ಮೊದಲ ಆರು ತಿಂಗಳು ಗರ್ಭಿಣಿ ಸ್ತ್ರೀಯ ಮೂಳೆಗಳಲ್ಲಿ ಕ್ಯಾಲ್ಷಿಯಂ ಶೇಖರಣೆಯಾಗಿ, ನಂತರ ಗರ್ಭ ಶಿಶುವು ತಾಯಿಯ ಮೂಳೆಯಿಂದಲೇ ಕ್ಯಾಲ್ಷಿಯಂ ಹೀರಿಕೊಳ್ಳುತ್ತದೆ. ತಾಯಿಯ ದೇಹದಲ್ಲಿ ಶಿಶುವಿಗೆ ಅಗತ್ಯವಿದ್ದಷ್ಟು ಕ್ಯಾಲ್ಷಿಯಂ ಇಲ್ಲದಿದ್ದರೆ, ಶಿಶುವು ತಾಯಿಯ ಮೂಳೆ ಹಾಗೂ ಹಲ್ಲುಗಳಲ್ಲಿನ ಕ್ಯಾಲ್ಷಿಯಂ ಹೀರಿಕೊಳ್ಳುವುದರಿಂದ ತಾಯಿಯ ಹಲ್ಲು ಹಾಗೂ ಮೂಳೆಗಳ ಆರೋಗ್ಯಕ್ಕೆ ಧಕ್ಕೆಯಾಗುತ್ತದೆ. ಕಬ್ಬಿಣದ ಅಂಶ ಶಿಶುವಿನ ರಕ್ತ ಕೋಶಗಳ ವೃದ್ದಿಗೆ ಅವಶ್ಯಕ. ಇದನ್ನು ಮಹಿಳೆ ಸೊಪ್ಪು, ತರಕಾರಿ, ಮಾಂಸ, ಮೀನು ಹಾಗೂ ಮೊಟ್ಟೆಯಿಂದ ಪಡೆಯಬಹುದಾಗಿದೆ.

ಗರ್ಭಿಣಿಯ ತೂಕ ಗರ್ಭಧಾರಣೆಯ ಸಮಯದಲ್ಲಿ ಸುಮಾರು ೯ ರಿಂದ ೧೦ kg ತೂಕ ಹೆಚ್ಚುತ್ತದೆ.

ಗರ್ಭಿಣಿ ಸ್ತ್ರಿ ಎರಡರಷ್ಟು ಆಹಾರ ಸೇವಿಸಬೇಕು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ.ಆದರೆ ಗರ್ಭಿಣಿ ಗರ್ಭಧಾರಣೆ ಸಮಯದಲ್ಲಿ ಕ್ಯಾಲರಿ, ಪ್ರೋಟೀನ್, ಕ್ಯಾಲ್ಷಿಯಂ ಹಾಗೂ ಕಬ್ಬಿಣದ ಅಂಶಗಳನ್ನು ಹೆಚ್ಚಿಸಿಕೊಳ್ಳುತ್ತ ಇತರೆ ಆಹಾರ ಘಟಕಗಳನ್ನು ಅಗತ್ಯವಿದ್ದ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯಕರ.

ಪೌಷ್ಟಿಕಾಂಶದ ಕೊರತೆಯನ್ನು ತಡೆಯಲು ಆಹಾರ ಪದಾರ್ಥಗಳು ಪ್ರಯೋಜಕ. ಕೊರತೆ ಕಂಡುಬಂದಲ್ಲಿ ಔಷಧಿ ರೂಪದಲ್ಲಿ ಪೌಷ್ಟಿಕಾಂಶಗಳನ್ನು ಸೇವಿಸಬಹುದಾಗಿದೆ. ಹಾಲುಣಿಸುವ ತಾಯಂದಿರು ದಿನಕ್ಕೆ ೮೫೦ ಮಿಲಿ ಲೀಟರ್ ಹಾಲನ್ನು ೬ ತಿಂಗಳವರೆಗೆ ಶಿಶುವಿಗೆ ನೀಡುತ್ತಾರೆ.ಮೊದಲ ಆರು ತಿಂಗಳು ಶಿಶು ತಾಯಿಯ ಹಾಲಿನ ಮೇಲೆ ಅವಲಂಬೀಸಿರುವುದರಿಂದ ತಾಯಿಯ ಹಾಲು ಅತ್ಯವಶ್ಯಕ. ಆ ಸಮಯದಲ್ಲಿ ಮಹಿಳೆ ೫೫೦ ಕ್ಯಾಲರಿ ನೀಡುವ ಹೆಚ್ಚಳ ಆಹಾರ ಸೇವಿಸಬೇಕಾಗುತ್ತದೆ. ೬ ತಿಂಗಳ ನಂತರದ ದಿನಗಳಲ್ಲಿ ಶಿಶು ತಾಯಿಯ ಹಾಲಿನೊಂದಿಗೆ ಹೊರಗಿನ ಆಹಾರವನ್ನು ಸೇವಿಸುವುದರಿಂದ ತಾಯಿಯ ಹಾಲಿನ ಅಗತ್ಯತೆ ಕಡಿಮೆಯಾಗುತ್ತದೆ. ಆ ಸಮಯದಲ್ಲಿ ತಾಯಿಗೆ ೪೦೦ ಕ್ಯಾಲರಿಯಷ್ಟು ನೀಡುವ ಆಹಾರವನ್ನು ಸೇವಿಸಬೇಕಾಗುತ್ತದೆ.

ಆಹಾರಕ್ಕೆ ಸಂಬಂದಿಸಿದಂತೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ವಿವರಿಸುವುದು. ಉದಾ: ಪರಂಗಿ ಹಣ್ಣು ತಿನ್ನಬೇಡಿ ಅನ್ನುವುದು. ಕ್ಯಾಲರಿಯೊಂದಿಗೆ ೨೫ ಗ್ರಾಂ ಪ್ರೋಟೀನ್ಗಳು, ೧೦೦೦ಮಿ.ಗ್ರಾಂ. ಕ್ಯಾಲ್ಷಿಯಂ, ೧೫೦ಮಿ.ಗ್ರಾಂ ಫಾಲಿಕ್ ಆಮ್ಲ ಮೊದಲಿನ ೬ ತಿಂಗಳು ಅತ್ಯವಶ್ಯಕವಾಗಿ ಬೇಕಾಗುತ್ತದೆ. ಮಹಿಳೆ ಹಾಗೂ ಮಗುವಿನ ಆರೋಗ್ಯ ಸಾಧಿಸಲು ಪೌಷ್ಟಿಕ ಆಹಾರ ಅತಿಮುಖ್ಯ. ಭಾರತದಲ್ಲೇಕೆ ಜಗತ್ತಿನಾದ್ಯಂತ ಆಹಾರದ ಕೊರತೆಯಿಂದಾಗಿ ಹಸಿವಿನಿಂದಾದ ಸಾವು ಹಾಗೂ ಕಾಯಿಲೆಗಳ ಸಂಖ್ಯೆ ೨೦೦೮ ರಿಂದೀಚೆಗೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯ ಪೌಷ್ಟಿಕತೆ ಬಗ್ಗೆ ತಿಳುವಳಿಕೆ ಪ್ರಸ್ತುತವಾಗುತ್ತದೆ.

ಮೂಲ: ಗ್ರಾಮ ಆರೋಗ್ಯ ಮತ್ತು ನಿರ್ಮಲ್ಯ ಸಮಿತಿ ಹಾಗು ಇತರೆ ಸಮಿತಿಗಳ ಕೈಪಿಡಿ

ಕೊನೆಯ ಮಾರ್ಪಾಟು : 6/18/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate