ಷೆರ್’ವುಡ್, ರೌಲ್ಯಾಂಡ್ (1927--) ೧೯೯೫
ಅಸಂಸಂ-ಭೌತರಸಾಯನಶಾಸ್ತ್ರ- ಓಝೋನ್ ಕ್ಷೀಣಿಸಿಕೆಯನ್ನು ಗುರುತಿಸಿದಾತ.
ಷೆರ್’ವುಡ್ ತಂದೆ ಓಹಿಯೋ ರಾಜ್ಯದ, ಓಹಿಯೋ ವೆಸ್ಲೆಯೆನ್ ವಿಶ್ವವಿದ್ಯಾಲಯದಲ್ಲಿ ಗಣಿತ ವಿಭಾಗದ ಪ್ರಾಧ್ಯಾಪಕನಾಗಿದ್ದನು. 28 ಜೂನ್ 1927ರಂದು ಷೆರ್’ವುಡ್ ಜನನವಾಯಿತು. ಡೆಲಾವೆರ್ ಪಟ್ಟಣದ ಸಾರ್ವಜನಿಕ ಶಾಲೆಗಳಲ್ಲಿ ಈತನ ವಿದ್ಯಾಭ್ಯಾಸ ಸಾಗಿತು. ಹದಿನಾರನೇ ವರ್ಷದವನಿರುವಾಗ ಶಿಕ್ಷಕನ ಉತ್ತೇಜನದಿಂದ ರಜಾಕಾಲದಲ್ಲಿ ಪವನಶಾಸ್ತ್ರ ಇಲಾಖೆಯಲ್ಲಿ ತಾಪಮಾನ, ಮಳೆಗಳ ದಾಖಲೆಯಿಡುವ ಕೆಲಸ ಒಪ್ಪಿಕೊಂಡನು. 1943ರಲ್ಲಿ ಪ್ರೌಢಾಶಾಲಾ ಶಿಕ್ಷಣ ಮುಗಿಸಿದನು. ಈತನ ಸ್ನೇಹಿತರೆಲ್ಲರೂ ಕಡ್ಡಾಯ ಮಿಲಿಟರಿ ತರಬೇತಿಗೆ ಹೋದರು. ಆದರೆ ಷೆರ್’ವುಡ್‍ಗೆ ಹದಿನೆಂಟು ವರ್ಷ ತುಂಬಿರದ ಕಾರಣ ಓಹಿಯೋ ವೆಸ್ಲೆಯೆನ್ ವಿಶ್ವವಿದ್ಯಾಲಯ ಸೇರಿದನು. 1945ರಲ್ಲಿ ಮಿಲಿಟರಿಯಲ್ಲಿ ರಡಾರ್ ಬಳಕೆ ತರಬೇತಿಗಾಗಿ ಸೇರಿದನು. ಇಲ್ಲಿ ಉತ್ತಮ ಕ್ರೀಡಾಪಟುವೆಂದು ಹೆಸರಾದನು. 1948ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರದ ಅಧ್ಯಯನಕ್ಕೆ ಸೇರಿದನು. ಇಲ್ಲಿ 1940ರಲ್ಲಿ ಇಂಗಾಲದ ತೇದಿಕರಣಕ್ಕಾಗಿ(Dating) ನೊಬೆಲ್ ಪ್ರಶಸ್ತಿ ಗಳಿಸಿದ್ದ ಖ್ಯಾತ ವಿಜ್ಞಾನಿ ವಿಲ್ಲರ್ಡ್ ಎ¥sóï ಲಿಬ್ಬಿಯ ಕೆಳಗೆ ಷೆರ್‍ವುಡ್ ವ್ಯಾಸಂಗ ಸಾಗಿಸಿದನು. ಮ್ಯಾನ್‍ಹಟನ್ ಬೈಜಿಕಾಸ್ತ್ರ (Nuclear Weapon)ತಯಾರಿಕೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಖ್ಯಾತ ವಿಜ್ಞಾನಿಗಳು ಯುದ್ದದ ನಂತರ ಚಿಕಾಗೋ ವಿಶ್ವವಿದ್ಯಾಲಯ ಸೇರಿದ್ದರು. ಇದರಿಂದ ಭೌತರಸಾಯನಶಾಸ್ತ್ರ ವಿಭಾಗದಲ್ಲಿ ಹಬ್ಬದ ವಾತಾವರಣ ನೆಲೆಸಿದ್ದಿತು. ಯುರೆ , ಫರ್ಮಿ , ಮಾರಿಯಾ ಗೊಯೆಪರ್ಟ್, ಎಡ್ವರ್ಡ್ ಟೆಲ್ಲರ್’ರಂತಹ ಹಲವಾರು ವಿಶ್ವವಿಖ್ಯಾತರ ಉಪನ್ಯಾಸಗಳಿಂದ ಷೆರ್’ವುಡ್‍ನ ಸಂಶೋಧಕ ವ್ಯಕ್ತಿತ್ವ ರೂಪುಗೊಂಡಿತು. ಸೈಕ್ಲೋಟ್ರಾನ್‍ನಲ್ಲಿ ಉತ್ಪನ್ನವಾದ ವಿಕಿರಣಶೀಲ ಬ್ರೋವೈಟ್ ಪರಮಾಣುಗಳನ್ನು ಕುರಿತಾಗಿ ಸಂಪ್ರಬಂಧ ಮಂಡಿಸಿದನು. ಇದರಲ್ಲಿ ವಿಕಿರಣಶೀಲ ಪರಮಾಣುವಿನ ಸೃಷ್ಟಿಯೊಂದಿಗೆ, ಅದ`ಕ್ಕಿರುವ ಎಲ್ಲಾ ರಾಸಾಯನಿಕ ಬಂಧಗಳೂ ಕಳಚುವುದೆಂದು ವಿವರಿಸಿದನು. 1952ರಲ್ಲಿ ಡಾಕ್ಟರೇಟ್ ಗಳಿಸಿದ ಷೆರ್’ವುಡ್ ಪ್ರಿನ್ಸ್‍ಟನ್ ವಿಶ್ವವಿದ್ಯಾಲಯ ಸೇರಿದನು. ಗ್ಲುಕೋಸ್ ಹಾಗೂ ಲಿಥಿಯಂ ಕಾರ್ಬೋನೇಟ್‍ನ ಹರಳುರೂಪದ ಮಿಶ್ರಣವನ್ನು ನ್ಯೂಟ್ರಾನ್ ಅಭಿವಾಹದಲ್ಲಿರಿಸಿ (Flux), ಒಂದೇ ಹೆಜ್ಜೆಯಲ್ಲಿ ಟ್ರೈಷಿಯಂ ಗುರುತಿಕೆಯಿಂದ (Labeling)ಗ್ಲುಕೋಸ್ ಸಂಶ್ಲೇಷಣೆಯ ವಿಧಾನ ರೂಪಿಸಿದನು. ಇದು ಹೊಸ ಅಧ್ಯಯನಗಳಿಗೆ ಮುಂದೆ ಕಾರಣವಾಯಿತು. 1956ರಲ್ಲಿ ಕ್ಯಾನ್ಸಾಸ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಅಲ್ಲಿ ವಿಕಿರಣಶೀಲ ರಸಾಯನಶಾಸ್ತ್ರದ ವಿಭಾಗವನ್ನು ಅಭಿವೃದ್ಧಿಗೊಳಿಸಿದನು. 1964ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಆರಂಭವಾದ ರಸಾಯನಶಾಸ್ತ್ರ ವಿಭಾಗದ ಕಾರ್ಯದರ್ಶಿಯಾದನು. 1970ರಲ್ಲಿ ಹುದ್ದೆಗೆ ರಾಜಿನಾಮೆ ನೀಡಿ, ಸಂಶೋಧನೆಗೆ ಇಳಿದನು. ವಾಯುಗೋಳದ ರಸಾಯನಶಾಸ್ತ್ರದಲ್ಲಿ ಷೆರ್’ವುಡ್‍ಗೆ ಅತ್ಯಾಸಕ್ತಿಯಿದ್ದಿತು. 1972ರಲ್ಲಿಫ್ಲೊರಿಡಾದ ಫೋಟ್ ಲೌಡೆರ್’ಡೇಲ್’ನಲ್ಲಿ ಸಮ್ಮೇಳನವೊಂದು ಜರುಗಿತು. ಇದರಲ್ಲಿ ಇಂಗ್ಲಿಷ್ ವಿಜ್ಞಾನಿ ಜಿಮ್ ಲವ್‍ಲಾಕ್ ಮಾನವ ಕಾರಣವಾದ ಕ್ಲೋರೋ ಫ್ಲೂರೋಕಾರ್ಬನ್ ಅಂಶ ವಿಶ್ವದಾದ್ಯಂತ ಹರಡಿರುವುದನ್ನು ವಿವರಿಸಿದನು. ಕ್ಲೋರೋಫ್ಲೂರ್ಫ್ ಕಾರ್ಬನ್ ಜಡ ರಾಸಾಯನಿಕವಾಗಿದ್ದು ಇದರ ಕುರುಹಿನಿಂದ ವಾಯುವಿನ ಭೂರಿ ಸಂಚಲನೆಯನ್ನು (Mass Movement) ನಿರ್ಧರಿಸುವುದು ಸಾಧ್ಯವೆಂದು ಹೇಳಿದನು. ರಾಸಾಯನಿಕ ಚಲನಶಾಸ್ತ್ರ ಮತ್ತು ದ್ಯುತಿರಸಾಯನಶಾಸ್ತ್ರದ (Photochemistry) ಆಳ ಅರಿವಿದ್ದ ಷೆರ್’ವುಡ್ ಯಾವುದೇ ರಾಸಾಯನಿಕ ವಾತಾವರಣದಲ್ಲಿ ಬಹು ದೀರ್ಘ ಕಾಲ ಕ್ರಿಯಾರಹಿತವಾಗಿರಲು ಸಾಧ್ಯವಿಲ್ಲವೆಂದು ಅರಿತನು. ಭೂಮಿಯ ಅಧಿಕ ಔನ್ನತ್ಯಗಳಲ್ಲಿ ಸೂರ್ಯರಶ್ಮಿಯಿಂದ ಕ್ಲೋರೋಫ್ಲೂರೋ ಕಾರ್ಬನ್ ಒಡೆದು ಘಟಕಗಳಾಗುವುದು ಷೆರ್’ವುಡ್‍ಗೆ ಮನದಟ್ಟಾಯಿತು. ನಂತರ ಮಾರಿಯೊ ಮೊಲಿನಾನೊಂದಿಗೆ ಮುಂದುವರಿದ ಸಂಶೋಧನೆಗಳಿಂದ ಕ್ಲೊರೋಫ್ಲೂರೋ ಕಾರ್ಬನ್‍ನಿಂದ ವಾತಾವರಣದಲ್ಲಿನ ಓಝೋನ್ ಪದರಕ್ಕೆ ಧಕ್ಕೆಯಾಗುತ್ತಿರುವುದು ತಿಳಿದು ಬಂದಿತು. ಇದರ ಪರಿಣಾಮವಾಗಿ ಭೂಮಿ ಬಿಸಿಯಾಗುತ್ತಿದ್ದು, ವಿಶ್ವ ಕಿರಣಗಳ ತೀವ್ರತೆಯನ್ನು ಕಡಿಮೆ ಮಾಡುತ್ತಿದ್ದ ಓಝೋನ್ ಪದರವಿಲ್ಲದೆ ಜೀವ ಜಗತ್ತಿಗೆ ಮುಂದೆ ಅಪಾಯ ಎದುರಾಗುವ ವಿಷಯ ತಿಳಿದು ಬಂದಿತು. ಇದು ಜಗತ್ತಿನಾದ್ಯಂತ ಹೊಸ ಸಂಚಲನವನ್ನುಂಟು ಮಾಡಿತು. ಕ್ಲೋರೋಫ್ಲೂರೋ ಕಾರ್ಬನ್ ಹಾಗೂ ಓಝೋನ್ ಕ್ಷೀಣಿಸಿಕೆಯ ಸಂಶೋಧನೆಗಾಗಿ ಷೆರ್‍ವುಡ್ 1995ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/26/2019