ಜಾರ್ಜ್, ಎ. ಓಲಾ (1927--) ೧೯೯೪
ಹಂಗರಿ-ಅಸಂಸಂ-ರಸಾಯನಶಾಸ್ತ್ರ-ಮಹಾಆಮ್ಲಗಳ (Superacids) ಅಧ್ಯಯನ ಖ್ಯಾತ.
ಜಾರ್ಜ್, 22 ಮೇ 1927ರಂದು ಬುಡಾಪೆಸ್ಟ್’ನಲ್ಲಿ ಜನಿಸಿದನು. ಈತನ ತಂದೆ ವಕೀಲನಾಗಿದ್ದು, ಅವರ ವಂಶದಲ್ಲಿ ಯಾರೂ ಯಾವುದೇ ವಿಜ್ಞಾನದಲ್ಲಿ ಆಸಕ್ತಿ ಹೊಂದಿರಲಿಲ್ಲ. ಬುಡಾಪೆಸ್ಟ್‍ನಲ್ಲಿರುವ ಜಿಮ್ನಾಷಿಯಂನಲ್ಲಿ ಎಂಟು ವರ್ಷಗಳ ಕಾಲ ಲ್ಯಾಟೀನ್, ಜರ್ಮನ್, ಫ್ರೆಂಚ್, ಹಾಗೂ ಇನ್ನಿತರ ಭಾಷೆಗಳನ್ನು ಕಲಿತನು. ಸಾಹಿತ್ಯ, ಚರಿತ್ರೆ ಜಾರ್ಜ್‍ಗೆ ಅತಿ ಪ್ರಿಯವಾಗಿದ್ದವು. ವಿಜ್ಞಾನ ಎಂದಿಗೂ ಆತನನ್ನು ಆಕರ್ಷಿಸಿರಲಿಲ್ಲ. ಎರಡು ಜಾಗತಿಕ ಯುದ್ದಗಳಿಂದ ಜರ್ಜರಿತವಾಗಿದ್ದ ಹಂಗರಿಯಲ್ಲಿ ಜೀವನ ಸಾಗಿಸುವುದು ಕಠಿಣವಾಗಿದ್ದಿತು. ಜಾರ್ಜ್ ಬುಡಾಪೆಸ್ಟ್’ನ ತಾಂತ್ರಿಕ ವಿಶ್ವವಿದ್ಯಾಲಯ ಸೇರಿ ರಸಾಯನಶಾಸ್ತ್ರ ವಿಭಾಗ ಸೇರಿದನು. ಇಲ್ಲಿ ಮೂಲ ಸೌಕರ್ಯಗಳ ಕೊರತೆ ಅಗಾಧವಾಗಿದ್ದಿತು. ಮೌಖಿಕ ಪರೀಕ್ಷೆ ಬಹು ಕಠಿಣವಾಗಿದ್ದು ಅದರಲ್ಲಿ ಅನುತ್ತೀರ್ಣರಾದರೆ ಪದವಿಯನ್ನು ತೊರೆದು ಹೋಗುವಂತಹ ನಿಯಮಗಳು ಜಾರಿಯಲ್ಲಿದ್ದವು. ಇಲ್ಲಿ ಜಾರ್ಜ್‍ಗೆ ಪ್ರಾಧ್ಯಾಪಕನಾಗಿದ್ದ ಜೆಝ.ಝೆಂಪ್ಲೆನ್‍ನ ಮಾರ್ಗದರ್ಶನ ದಕ್ಕಿತು. ಜೆಝ್ , ಬರ್ಲಿನ್‍ನಲ್ಲಿ ಖ್ಯಾತ ರಸಾಯನಶಾಸ್ತ್ರಜ್ಞ ಎಮಿಲ್ ಫಿûಷರ್ ಕೈಕೆಳಗೆ ಸಾವಯವ ರಸಾಯನಶಾಸ್ತ್ರ ಅಭ್ಯಸಿಸಿದ್ದನು. ಈತನ ಮಾರ್ಗದರ್ಶನದಲ್ಲಿ ಜಾರ್ಜ್, ಫ್ಲೋರಿನ್ ಹೊಂದಿದ ಕಾರ್ಬೋಹೈಡ್ರೇಟ್‍ಗಳ ಅಧ್ಯಯನ ಪ್ರಾರಂಭಿಸಿದನು. ಆ ಕಾಲದಲ್ಲಿ ಹಂಗರಿಯಲ್ಲಿ ಪ್ರಯೋಗಗಳಿಗೆ ಮೂಲ ರಾಸಾಯನಿಕಗಳು ಲಭ್ಯವಿರಲಿಲ್ಲ. ಇತರ ಸಂಗಡಿಗರ ನೆರವಿನಿಂದ ಜಾರ್ಜ್ ಪ್ರಯೋಗಗಳಿಗೆ ಬೇಕಾದ ಸೌಕರ್ಯಗಳನ್ನು ತಾನೇ ನಿರ್ಮಿಸಿಕೊಂಡನು. 1950ರ ಸುಮಾರಿಗೆ ಹಂಗರಿಯ ಕೆಮಿಕಾ ಅ್ಯಸ್ಟ ಪತ್ರಿಕೆಯ ವಿದೇಶಿ ಆವೃತ್ತಿಗಳಲ್ಲಿನ ಜಾರ್ಜ್ ಬರೆದ ಲೇಖನಗಳನ್ನು ಓದಿದ ಜರ್ಮನಿಯ ರಸಾಯನಶಾಸ್ತ್ರಜ್ಞ ಹ್ಯಾನ್ಸ್‍ನ ಬೆಂಬಲ ದಕ್ಕಿ ಪ್ರಯೋಗಗಳಿಗೆ ಬೋರಾನ್ ಟ್ರೈ ಫ್ಲೋರೈಡ್ ಲಭ್ಯವಾಯಿತು. ಹಂಗರಿಗೆ ಕಮ್ಯುನಿಸ್ಟ್ ಆಡಳಿತ ಬಂದು ರಷ್ಯಾದ ಮಾದರಿಯಲ್ಲೇ ಸಂಶೋಧನೆಗಾಗಿ ಸಂಸ್ಥೆಗಳು ಸ್ಥಾಪನೆಗೊಳ್ಳತೊಡಗಿದವು. 1954ರಲ್ಲಿ ಹಂಗರಿ ಆಕಾಡೆಮಿ ಆಫ್ಸೈನ್ಸ್‍ನ ಸೆಂಟ್ರಲ್ ಕೆಮಿಕಲ್ ರಿಸರ್ಚ್ ಸೆಂಟರ್‍ಗೆ ಸೇರುವ ಆಹ್ವಾನ ಜಾರ್ಜ್‍ಗೆ ಬಂದಿತು. 1956ರಲ್ಲಿ ಹಂಗರಿಯಲ್ಲಿ ರಷ್ಯಾದ ಕಮ್ಯುನಿಸ್ಟ್ ಆಡಳಿತದ ವಿರುದ್ದ ದಂಗೆಯೆದ್ದಿತು. ವಜ್ರಮುಷ್ಟಿಯಿಂದ, ಅಪಾರ ಪ್ರಾಣಹಾನಿ ಸಹಿತವಾಗಿ ಇದನ್ನು ರಷ್ಯ ಹತ್ತಿಕ್ಕಿತು. ಇದರಿಂದ ಹಂಗರಿಯ ಭವಿಷ್ಯದಲ್ಲಿ ಕಾರ್ಮೋಡ ಮುಸುಕಿತು. ಎರಡು ಲಕ್ಷಕ್ಕೂ ಅಧಿಕ ಜನ ದೇಶದಿಂದ ಪಲಾಯನಗೈದರು. ಇವರೊಂದಿಗೆ ಜಾರ್ಜ್ ಕುಟುಂಬ ಸಹ ಸೇರಿತು. ಕೆಲಕಾಲ ಲಂಡನ್‍ನಲ್ಲಿದ್ದ ಜಾರ್ಜ್ 1957ರಲ್ಲಿ ಕೆನಡಾದ ಮಾಂಟ್ರಿಯೇಲ್‍ಗೆ ಹೋಗಿ ನೆಲೆಸಿದನು. ಡೆ ಕೆಮಿಕಲ್ ಕಂಪನಿಯ ಸರ್ನಿಯಾದಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ ಪ್ರಯೋಗಾಲಯವನ್ನು ಜಾರ್ಜ್ ಸೇರಿದನು. ಡೆ ಕೆಮಿಕಲ್ ಕಂಪನಿ ಸ್ಟೈರೀನ್ ಉತ್ಪಾದನೆಗಾಗಿ ಈಥೈಲ್ ಬೆಂಜೀನ್ ತಯಾರಿಸುತ್ತಿದ್ದಿತು. 1965ರಲ್ಲಿ ಕ್ಲೀವ್ ಲ್ಯಾಂಡ್‍ನಲ್ಲಿನ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯ ಸೇರಿ, ರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಇಲ್ಲಿ ಮಹಾ ಆಮ್ಲಗಳನ್ನು ಬಳಸಿ ಧನಾತ್ಮಕ ಆವಿಷ್ಟಿತ ಇಂಗಾಲದ ಸಂಯುಕ್ತ ಕಾರ್ಬೋಕೆಟಯಾನ್‍ಗಳನ್ನು ಕುರಿತು ಅಧ್ಯಯನ ನಡೆಸಿದನು. ಜಾರ್ಜ್ ಪಡೆದ ಮಹಾಆಮ್ಲಗಳು ಪ್ರಬಲ ಆಮ್ಲಗಳೆಂದು ಕರೆಯಲಾಗುತ್ತಿರುವ ಗಂಧಕದ ಆಮ್ಲಗಳಿಗಿಂತ ಹಲವು ಸಹಸ್ರ ಕೋಟಿ ಪಟ್ಟು ಪ್ರಬಲವಾಗಿದ್ದವು. ಜಾರ್ಜ್‍ನಿಂದ ಮಹಾಆಮ್ಲ ರಸಾಯನಶಾಸ್ತ್ರದ ಶಾಖೆ ಚಿಗುರೊಡೆಯತೊಡಗಿತು. ಜಗತ್ತಿನಲ್ಲಿ ಕುಗ್ಗುತ್ತಿರುವ ಪಳೆಯುಳಿಕೆ ಮೂಲದ ಇಂಧನ,ಹೆಚ್ಚುತ್ತಿರುವ ಜನಸಂಖ್ಯೆ , ಹದಗೆಡುತ್ತಿರುವ ಪರಿಸರದ ಸಮಸ್ಯೆಗಳಿಗೆ ಪರಿಹಾರವಾಗಿ ಜಾರ್ಜ್ ತಂಡ, ಕ್ಯಾಲ್‍ಟೆಕ್‍ನ ಜೆಟ್ ಪ್ರೊಪೆಲ್ಫನ್ ಪ್ರಯೋಗಾಲಯದಲ್ಲಿ ಮೆಥಾನಾಲ್‍ನ್ನು ಬಳಸಿ ಕೃತಕವಾಗಿ ಎಲ್ಲಾ ಬಗೆಯ ಹೈಡ್ರೋಕಾರ್ಬನ್ ಇಂಧನಗಳನ್ನು, ಸಂಶ್ಲೇಷಿತ ಸಾಮಗ್ರಿ, ರಬ್ಬರ್, ಪ್ಲಾಸ್ಟಿಕ್‍ಗಳನ್ನು ಉತ್ಪಾದಿಸಲು ಯತ್ನಿಸಿತು. ಜಗತ್ತಿನಾದ್ಯಂತವಿರುವ ಸಹಾಸ್ರಾರು ಕಾರ್ಖಾನೆಗಳಿಂದ ಹೊರ ಹೊಮ್ಮುತ್ತಿರುವ ಇಂಗಾಲದ ಡೈ ಆಕ್ಸೈಡ್‍ನ್ನು ಮೆಥನಾಲ್ ತಯಾರಿಕೆಗೆ ಬಳಸಬಹುದಾದ ಮಾರ್ಗಗಳನ್ನು ಸಹ ಜಾರ್ಜ್ ವಿವರಿಸಿದ್ದಾನೆ. ಮಹಾ ಆಮ್ಲಗಳು, ಮೆಥನಾಲ್ ಇಂಧನ ಕುರಿತಾದಂತೆ ಜಾರ್ಜ್‍ನೊಂದಿಗೆ ಕನ್ನಡಿಗ ರಸಾಯನಶಾಸ್ತ್ರಜ್ಞ ಸೂರ್ಯಪ್ರಕಾಶ್ ಗಮನಾರ್ಹ ಕೆಲಸ ಮಾಡಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/16/2019