ಜಾನ್, ಎ.ಪೆಪ್ಲ್ (1925--) ೧೯೯೮
ಇಂಗ್ಲೆಂಡ್-ಭೌತರಸಾಯನಶಾಸ್ತ್ರ- ಕ್ವಾಂಟಂ ರಸಾಯನಶಾಸ್ತ್ರದಲ್ಲಿ ಗಣಕಿಸುವ ವಿಧಾನಗಳನ್ನು ಅಭಿವೃದ್ಧಿಗೊಳಿಸಿದಾತ.
ಜಾನ್‍ನ ತಂದೆ ಸೊಮರ್ಸೆಟ್ ಪ್ರಾಂತದ ಪಶ್ಚಿಮ ಕರಾವಳಿಯ ಲರ್ನ್‍ಹ್ಯಾಂ ಎಂಬ ಸಣ್ಣ ಹಳ್ಳಿಯೊಂದರಲ್ಲಿ ನೆಲೆಸಿದ್ದನು. 31 ಡಿಸೆಂಬರ್ 1925ರಂದು ಜಾನ್ ಜನಿಸಿದನು. ಜಾನ್‍ನ ಪೂರ್ವಿಕರಲ್ಲಿ ಯಾರೊಬ್ಬರೂ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿರಲಿಲ್ಲ. ಜಾನ್‍ನ ತಂದೆ ಉಡುಪುಗಳನ್ನು ಸಿದ್ದ ಪಡಿಸಿ ವಾಹನದಲ್ಲಿ ಊರಿಂದ ಊರಿಗೆ ಒಯ್ದು ಮಾರುತ್ತಿದ್ದನು. ತನ್ನಂತೆ ಮಕ್ಕಳು ಬಟ್ಟೆ ವ್ಯಾಪಾರಿಗಳಾಗದೆ, ಅಥವಾ ಹೆಂಡತಿಯ ಕಡೆಯವರಂತೆ ಕೃಷಿಯಲ್ಲಿ ನಿರತರಾಗದೆ ಇನ್ನೂ ಹೆಚ್ಚಿನ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಜಾನ್‍ನ ತಂದೆಯ ಆಶೆಯಾಗಿದ್ದಿತು. ಇದಕ್ಕಾಗಿ ಅವರು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂದು ಹೇಳುತ್ತಿದ್ದನು. ಹತ್ತನೇ ವರ್ಷದವನಿರುವಾಗ ಬ್ರಿಸ್ಟಲ್ ಗ್ರಾಮರ್ ಸ್ಕೂಲ್‍ಗೆ ಜಾನ್ ಸೇರಿದನು. ಇದು ಈತನ ಹಳ್ಳಿಯಿಂದ 48 ಕಿ.ಮೀ ದೂರವಿದ್ದು, ಪ್ರತಿದಿನ ಶಾಲೆಗೆ ಹೋಗಿ ಬರುವುದು ಬಾಲಕ ಜಾನ್‍ಗೆ ಬಹು ಕಷ್ಟವಾಯಿತು. ಗಣಿತದಲ್ಲಿ ಅತ್ಯಾಸಕ್ತಿ ಹೊಂದಿದ್ದ ಜಾನ್, ತಿರಸ್ಕೃತ ಗಣಿತದ ಪುಸ್ತಕವೊಂದನ್ನು ಪಡೆದು ಅದನ್ನು ಅಮೂಲಾಗ್ರವಾಗಿ ಅರಿತುಕೊಂಡನು. ಜಾನ್‍ನ ಗಣಿತ ಪ್ರತಿಭೆ ಆತನ ಮನೆಯವರಿಗಾಗಲಿ , ಸಹಪಾಠಿಗಳಿಗಾಗಲಿ ಅಥವಾ ಶಿಕ್ಷಕರಿಗಾಗಲಿ ತಿಳಿಯಲಿಲ್ಲ. ಪ್ರೌಢಶಾಲೆಯಲ್ಲಿರುವಾಗ ಗಣಿತ ಶಿಕ್ಷಕನಾಗಿದ್ದ ಲೈನೆಸ್ ಗಣಿತದ ಸಮಸ್ಯೆಯೊಂದನ್ನು ವಿದ್ಯಾರ್ಥಿಗಳಿಗೆ ನೀಡಿ ಅದನ್ನು ಬಿಡಿಸಲು ಹೇಳಿದನು. ಇದಕ್ಕೆ ಜಾನ್ ಹಲವಾರು ಪರಿಹಾರ ಸೂಚಿಸಿ ಉತ್ತಮವಾದ ಲೇಖನ ನೀಡಿದನು. ಇದು ಲೈನೆಸ್‍ನ ಗಮನಕ್ಕೆ ಬಂದಿತು. ಜಾನ್‍ನ ತಂದೆ ತಾಯಿಗಳನ್ನು ಕರೆದು ಕೇಂಬ್ರಿಜ್ “ವಿಶ್ವವಿದ್ಯಾಲಯಕ್ಕೆ ಗಣಿತದಲ್ಲಿ ಹೆಚ್ಚಿನ ಶಿಕ್ಷಣ ಗಳಿಸಲು ಕಳಿಸಬೇಕೆಂದು ಸೂಚಿಸಿದನು. 1942ರಲ್ಲಿ ಜಾನ್, ಪ್ರವೇಶ ಪರೀಕ್ಷೆ ಎದುರಿಸಿ, ಕೇಂಬ್ರಿಜ್ ಸೇರಿದನು. ಎರಡನೇ ಜಾಗತಿಕ ಯುದ್ಧದ ಸಮಯದಲ್ಲಿ ಜಾನ್ ಸೇನಾ ತರಬೇತಿಗೆ ದಾಖಲಾದನು. ಯುದ್ದ ಮುಗಿದ ನಂತರ ಬ್ರಿಸ್ಟಲ್ ಏರೋಪ್ಲೆನ್ ಕಂಪನಿಯಲ್ಲಿ ಔದ್ಯೋಗಿಕ ತರಬೇತಿಗೆ ಸೇರಿದನು. ಇಲ್ಲಿ ಹೆಚ್ಚಿನ ಕೆಲಸವಿರಲಿಲ್ಲ. ಅದರೆ ಆರ್ಥಿಕ ಸುಧಾರಣೆಗಾಗಿ ಬ್ರಿಟನ್ ಹಮ್ಮಿಕೊಂಡಿದ್ದ ನೀತಿಗನುಗುಣವಾಗಿ ನೌಕರರು ತಮ್ಮ ಕಂಪನಿಗಳನ್ನು ಬದಲಿಸಿ ಬೇರೆ ಕಡೆಗೆ ಹೋಗುವಂತಿರ¯ಲ್ಲ. ಕಾಲಾನುಕ್ರಮೇಣ ಜಾನ್‍ಗೆ ಗಣಿತದಲ್ಲಿನ ಆಸಕ್ತಿ ಕುಂದತೊಡಗಿತು. ಸರ್ಕಾರಕ್ಕೆ ಮನವಿ ಸಲ್ಲಿಸಿ 1947ರಲ್ಲಿ ಕೇಂಬ್ರಿಜ್‍ನಲ್ಲಿ ಪದವಿಗೆ ಸೇರಿದನು. 1948ರಲ್ಲಿ ಸರ್ ಜಾನ್ ಲೆನಾರ್ಡ್ ಜೋನ್ಸ್ ಕೆಳಗೆ ಸೈದ್ಧಾಂತಿಕ ರಸಾಯನಶಾಸ್ತ್ರದಲ್ಲಿ ಮುಂದುವರೆದನು. ಇಲ್ಲಿರುವಾಗ ಮುಂದೆ ನೊಬೆಲ್ ಪ್ರಶಸ್ತಿ ಗಳಿಸಿದ ಹಲವಾರು ಜನರೊಂದಿಗಿನ ಒಡನಾಟ ಜಾನ್‍ಗೆ ದಕ್ಕಿತು. ನೀರಿನ ಅಣುವಿನ ಬಂಧ ಹಾಗೂ ರಚನೆಯ ಬಗೆಗೆ ಸಂಶೋಧನೆ ನಡೆಸಿ ಜಾನ್ ಡಾಕ್ಟರೇಟ್ ಗಳಿಸಿದನು. ಭೌತ ರಸಾಯನಶಾಸ್ತ್ರದಲ್ಲಿ ಗಣಕಿಸುವ (Computing) ವಿಧಾನಗಳನ್ನು ಕುರಿತಾಗಿ ಜಾನ್ ಚಿಂತಿಸತೊಡಗಿದನು. 1961ರಲ್ಲಿ ಪಿಟ್ಸ್‍ಬರ್ಗ್‍ನ ಕಾರ್ನೆಗಿ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯಲ್ಲಿ ಅಣುಗಳ ಕ್ರಿಯೆ ಅರಿಯಲು ಹಾಗೂ ವಿವರಿಸಲು ಗಣಕಿಸುವ ವಿಧಾನಗಳನ್ನು ಸ್ಪಷ್ಟ ಗೊಳಿಸತೊಡಗಿದನು. ಈ ಕಾಲದಲ್ಲೇ ಕ್ಷಿಪ್ರ ಕಾರ್ಯಗತಿಯ ಗಣಕಗಳು ವಿಜ್ಞಾನಿಗಳ ಮನಗೆಲ್ಲತೊಡಗಿದ್ದವು. 1967ರಲ್ಲಿ ಕಾರ್ನೆಗಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾರ್ನೆಗಿ ಮೆಲ್ಲನ್ ವಿಶ್ವವಿದ್ಯಾಲಯವಾಗಿ ಪರಿವರ್ತನೆಗೊಂಡಾಗ ಅಲ್ಲಿ ಬೋಧಕ ಸಿಬ್ಬಂದಿಯಾದನು.ಇಲ್ಲಿರುವಾಗಲೇ ಕ್ವಾಂಟಂ ರಸಾಯನಶಾಸ್ತ್ರದಲ್ಲಿ ಗಣಕಿಸುವ ವಿಧಾನಗಳನ್ನು ಅಭಿವೃದ್ಧಿಗೊಳಿಸಿದನು. ಇದಕ್ಕಾಗಿ 1998ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/27/2019