ಸಿಡ್ನಿ, ಹಾಲ್ಟ್’ಮನ್ (1939--) ೧೯೮೯
ಕೆನಡಾ-ಜೀವರಸಾಯನಶಾಸ್ತ್ರ-ಆರ್‍ಎನ್‍ಎ ಯ ಪೂರ್ವಗಾಮಿ ಅಣುವನ್ನು (Precurssor Molecule ) ಅನಾವರಣಗೊಳಿಸಿದಾತ.
ಸಿಡ್ನಿಯ ತಂದೆ ತಾಯಿ ಬಹು ಬಡವರಾಗಿದ್ದರು. ಆತನ ತಂದೆ ದಿನಸಿ ಅಂಗಡಿಯಲ್ಲಿ ,ತಾಯಿ ಬಟ್ಟೆ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಇವರು ಉತ್ತಮ ಜೀವನ ಅರಸಿ ಕೆನಡಾದ ಮಾಂಟ್ರಿಲ್‍ಗೆ ವಲಸೆ ಬಂದಿದ್ದರು. ಆರು ವರ್ಷದ ಬಾಲಕನಿರುವಾಗ ಸಿಡ್ನಿ ಹಿರೋಷಿಮಾ ನಾಗಸಾಕಿಗಳ ಮೇಲೆ ಪ್ರಯೊಗಿಸಿದ ಬೈಜಿಕಾಸ್ತ್ರದ ಬಗೆಗಿನ ಸುದ್ದಿಗಳನ್ನು ಕೇಳಿ ಅಸ್ಪಷ್ಟವಾದ ಬೆರಗು ಪೂರಿತ ಸೋಜಿಗ ಹೊಂದಿದ್ದನು. ಮೂರನೇ ತರಗತಿಯಲ್ಲಿರುವಾಗ ಧಾತುಗಳ ಬಗೆಗೆ ಪುಸ್ತಕ ಓದಿ ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದನು. ಎಂಐಟಿಗೆ ಪದವಿಗೆ ಸೇರಿದ ಸಿಡ್ನಿಗೆ ನ್ಯೂಕ್ಲಿಯಿಕ್ ಆಮ್ಲ ಹಾಗೂ ಅಣ್ವಯಿಕ ತಳಿಶಾಸ್ತ್ರದಲ್ಲಿ ಒಲವು ಮೂಡಿತು. ಹದಿನೆಂಟು ತಿಂಗಳುಗಳ ಕಾಲ ಕೊಲಂಬೋ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪದವಿ ವಿದ್ಯಾರ್ಥಿಯಾಗಿದ್ದನು. ಆದರೆ ಇದನ್ನು ಅರ್ಧದಲ್ಲೇ ಮೊಟಕುಗೊಳಿಸಿ, ಕೊಲರಡೋದಲ್ಲಿ ಜೀವ ಭೌತಶಾಸ್ತ್ರದ ವಿದ್ಯಾರ್ಥಿಯಾಗಿ ಸೇರಿಕೊಂಡನು. ಇಲ್ಲಿ ಖ್ಯಾತ ಭೌತಶಾಸ್ತ್ರಜ್ಞ ಜಾರ್ಜ್ ಗ್ಯಾಮೊ, ಸಿಡ್ನಿಯನ್ನು ಯೂನಿವರ್ಸಿಟಿ ಆಫ್ ಕೊಲರಡೋ ಮೆಡಿಕಲ್ ಸೆಂಟರ್’ನಲ್ಲಿ ಡಿಎನ್‍ಎ ಅಧ್ಯಯನಕ್ಕಾಗಿ ಕಳಿಸಿದನು. ಇಲ್ಲಿ ಥಿಯೋಡೋರ್ ಟಿ ಪುಕ್, ಲೆರ್ಮಾನ್ ರಂತಹ ಸಮರ್ಥರ ಮಾರ್ಗದರ್ಶನ ದಕ್ಕಿತು. ಇಲ್ಲಿ ಟಿ4-ಡಿಎನ್‍ಎ ಬ್ಯಾಕ್ಟಿರಿಯೋ ಫೇಜ್ ನಕಲಿನ ಮೇಲೆ ಅಕ್ಸ್’ಡೈನ್ಸ್ ಬೀರುವ ಪ್ರಭಾವ ಕುರಿತು ಅಧ್ಯಯನ ನಡೆಸಿದನು. ನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿನ ಮ್ಯಾಥ್ಯೂ ಮೆಸೆಲ್‍ಸನ್ ಸಂಶೋಧಕ ತಂಡ ಸೇರಿ ಮೊದಲಿನ ಸಂಶೋಧನೆ ಮುಂದುವರಿಸಿದನು. ಎರಡು ವರ್ಷಗಳ ನಂತರ ಕೇಂಬ್ರಿಜ್‍ನಲ್ಲಿರುವ ಮೆಡಿಕಲ್ ರಿಸರ್ಚ್ ಕೌನ್ಸಿಲ್ ಲ್ಯಾಬೋರೇಟರಿ ಆಫ್ ಮಾಲೆಕ್ಯುಲಾರ್ ಬಯಾಲಜಿ ಸೇರಿ ಸಿಡ್ನಿ ಬ್ರೆನ್ನರ್ ಮತ್ತು ಕ್ರಿಕ್ಸ್ ಮುಂದಾಳತ್ವದಲ್ಲಿನ ಜೀವ ಭೌತಶಾಸ್ತ್ರದ ಅಧ್ಯಯನ ಸಾಗಿಸಿದನು. ಇಲ್ಲಿ ಮೊದಲ ವಿಕಿರಣ ರಾಸಾಯನಿಕ ಶುದ್ಧ ಆರ್‍ಎನ್‍ಎಯ ಪೂರ್ವಗಾಮಿ (Radiochemically pure precursor to RNA) ಅಣುವನ್ನು ಅನಾವರಣಗೊಳಿಸಿದನು. ಇದಕ್ಕಾಗಿ ಈತನಿಗೆ 1989ರ ನೊಬೆಲ್ ಪ್ರಶಸ್ತಿ ದಕ್ಕಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/16/2020