ರಾಬರ್ಟ್, ಹ್ಯುಬೆರ್ (1937--) 1988
ಜರ್ಮನಿ-ಜೀವರಸಾಯನಶಾಸ್ತ್ರ-ಪ್ರೊಟೀನ್ ಹಾಗೂ ನಿರ್ಬಂಧಕಗಳನ್ನು ಕುರಿತಾಗಿ ಸಂಶೋಧಿಸಿದಾತ.
ರಾಬರ್ಟ್ 20ಫೆಬ್ರವರಿ 1937 ರಂದು ಮುಂಕೆನ್ ಪಟ್ಟಣದಲ್ಲಿ ಜನಿಸಿದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಇವರ ಕುಟುಂಬ ಕಡು ಕಷ್ಟದಲ್ಲಿ ಜೀವಿಸಿತು. ಲ್ಯಾಟಿನ್, ಗ್ರೀಕ್ ಹಾಗೂ ರಸಾಯನಶಾಸ್ತ್ರದಲ್ಲಿ ಶಿಕ್ಷಣ ಪಡೆದ ರಾಬರ್ಟ್, 1956ರಲ್ಲಿ ಮುಂಕೆನ್‍ನಲ್ಲಿರುವ ತಾಂತ್ರಿಕ ವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಭಾಗ ಸೇರಿದನು. ಶಿಕ್ಷಣದ ಅವಧಿಯಲ್ಲಿ ಖ್ಯಾತ ರಸಾಯನಶಾಸ್ತ್ರಜ್ಞರ ಉಪನ್ಯಾಸಗಳಿಂದ ಪ್ರಭಾವಿತನಾದನು. ಡಬ್ಲ್ಯು.ಹೊಪ್ ಪ್ರಯೋಗಾಲಯ ಸೇರಿ ನಂತರ ಕೀಟಗಳಲ್ಲಿ ರೂಪಾಂತರಕ್ಕೆ ಕಾರಣವಾಗಿರುವ ಎಕ್‍ಡೈಸೋನ್ ಚೋದನಿಕೆಯ (Hormone) ಮೇಲೆ ಸ್ಪಟಿಕಾಲೇಖದ (Crystallography) ಅಧ್ಯಯನ ನಡೆಸಲು ಡಬ್ಲ್ಯು.ಹೊಪ್ ಪ್ರಯೋಗಾಲಯವನ್ನು ಸೇರಿದನು. ಹೊಪ್ ಜೊತೆಗೆ ಹಲವಾರು ಸಾವಯವ, ಜೈವಿಕ ರಾಸಾಯನಿಕ ಸ್ಪಟಿಕಗಳ ರಾಚನಿಕ ಸ್ವರೂಪವನ್ನು ರಾಬರ್ಟ್ ನಿರ್ಧರಿಸಿದನು. 1967ರಲ್ಲಿ ಹೊಪ್ಪ್, ಬ್ರೌನಿಟ್ಟಾರ್ ಬೆಂಬಲದೊಂದಿಗೆ, ಕೀಟಗಳ ಎಂಥ್ರೋಕ್ಯುರೋನಿನ್ ಪ್ರೊಟೀನ್ ಕುರಿತಾಗಿ ಅಧ್ಯಯನ ಪ್ರಾರಂಭಿಸಿದನು. ಇದರ ಫಲಿತಾಂಶವಾಗಿ, ಈ ಪ್ರೊಟೀನ್ ಸಸ್ತನಿಗಳಲಿರುವ ಗ್ಲೋಬಿನ್‍ಗಳನ್ನು ಹೋಲುವುದೆಂದು ತಿಳಿದು ಬಂದಿತು. ಪೆರುಟ್ಜ್, ಹಾಗೂ ಕೆಂಡ್ರ್ಯೂ ಈ ಮೊದಲೇ ಪ್ರಾಣಿ ಪ್ರಪಂಚದಲ್ಲಿ ಸಾರೂಪ್ಯದ ಪ್ರೋಟಿನ್‍ಗಳ ಸಾಧ್ಯತೆಯನ್ನು ವಿವರಿಸಿದ್ದರು. ರಾಬರ್ಟ್‍ನ ಈ ಹೊಸ ಸಂಶೋಧನೆಗಳು ಇದಕ್ಕೆ ಬೆಂಬಲ ನೀಡಿದವು. 1970ರಲ್ಲಿ ರಾಬರ್ಟ್ ಪ್ಯಾಂಕ್ರಿಯಾಟಿಕ್ ಟ್ರಿಪ್ಪಿನ್ ನಿರ್ಬಂಧಕ (Inhibitor) ಕುರಿತಾದ ಮೂಲ ಸಂಶೋಧನೆ ಕೈಗೊಂಡನು. ಇದು ಮುಂದೆ ಇವರದು ನೂರಾರು ಇತರ ನಿರ್ಬಂಧಕಗಳನ್ನು ಗುರುತಿಸಿ ಹೊಸ ಕ್ಷೇತ್ರದ ಉಗಮಕ್ಕೆ ಕಾರಣವಾಗುವಂತೆ ಮಾಡಿತು. ಇಂದು ಈ ಅಧ್ಯಯನ ಔಷಧಿ, ಮದ್ದು ತಯಾರಿಕೆ ಹಾಗೂ ಪ್ರೊಟೀನ್ ವಿನ್ಯಾಸಗಳಲ್ಲಿ ವಿಸೃತವಾಗಿ ಬಳಕೆಯಾಗುತ್ತದೆ. ಇದಕ್ಕಾಗಿ1988ರಲ್ಲಿ ರಾಬರ್ಟ್ ಹ್ಯೂಬೆರ್ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 11/10/2019