ರೋನಾಲ್ಡ್ ,ಹಾಫ್ಮನ್ (1937--) ೧೯೮೧
ಪೋಲೆಂಡ್-ರಸಾಯನಶಾಸ್ತ್ರ- ರಾಸಾಯನಿಕ ಕ್ರಿಯೆಯ ಅಂತರಂಗವನ್ನು ಅರಿಯಲು ಯತ್ನಿಸಿದಾತ.
ಪೋಲೆಂಡ್‍ನ ಜ್ಲಾಕ್‍ಝೋ ಪಟ್ಟಣದಲ್ಲಿ 18 ಜುಲೈ 1937ರಂದು ಹಾಫ್ಮನ್‍ನ ಜನನವಾಯಿತು. ಈ ಪ್ರಾಂತ ಮುಂದೆ ರಷ್ಯಾಕ್ಕೆ ಸೇರ್ಪಡೆಗೊಂಡಿತು. ರೋನಾಲ್ಡ್ ತಂದೆ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದನು. 1939ರಲ್ಲಿ ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿ, ಪೋಲೆಂಡ್ 1939ರಿಂದ 1941ರವರೆಗೆ ರಷ್ಯಾದ ಅಧೀನದಲ್ಲಿದ್ದಿತು. ರಷ್ಯಾ ಸೇನೆ ಪೋಲೆಂಡ್‍ನಿಂದ ಹೊರ ಹೊರಟ ನಂತರ ಜನಾಂಗೀಯ ವೈಷಮ ಎದ್ದು ಯಹೂದಿಗಳು ದೇಶಾಂತರ ಹೋಗತೊಡಗಿದರು. ಈ ಸಂದರ್ಭದಲ್ಲಿ ಹಾಫ್ಮನ್ ಕುಟುಂಬ ಕೈದಿಗಳ ಶಿಬಿರ ಸೇರುವಂತಾಯಿತು. 1943ರಲ್ಲಿ ಹಾಫ್ಮನ್ ಹಾಗೂ ತಾಯಿಯನ್ನು ಕಳ್ಳತನದಿಂದ ಕೈದಿ ಶಿಬಿರದಿಂದ ಬಿಡುಗಡೆಗೊಳಿಸುವಲ್ಲಿ ಆತನ ತಂದೆ ಯಶಸ್ವಿಯಾದರೂ, ತಾನು ಹೊರ ಬರುವುದು ಸಾಧ್ಯವಾಗದೇ ಸೆರೆಯಲ್ಲಿದ್ದನು. ಎರಡನೇ ಜಾಗತಿಕ ಯುದ್ದ ಮುಗಿಯುವವರೆಗೆ ಈ ಕುಟುಂಬ ಉಕ್ರೇನ್‍ನ ಹಳ್ಳಿಯೊಂದರ ಶಾಲೆಯಲ್ಲಿ ಅಜ್ಞಾತ ವಾಸದಲ್ಲಿದ್ದಿತು. ಹೇಗಾದರೂ ಕೈದಿ ಶಿಬಿರದಿಂದ ಪಾರಾಗಬೇಕೆಂಬ ಯತ್ನದಲ್ಲಿದ್ದ ಗುಂಪಿನೊಂದಿಗೆ ಸೇರಿದ್ದ ಹಾಫ್ಮನ್ ತಂದೆ ಪರಾರಿಯಾಗುವ ಯತ್ನದಲ್ಲಿ ನಾಝಿಗಳ ಗುಂಡಿಗೆ ಬಲಿಯಾದನು. ಹಾಫ್ಮನ್ ಹಾಗೂ ಸಂಬಂಧಿಕರು ನಾಝಿಗಳ ಆಡಳಿತದಲ್ಲಿ ಜೀವನ್ಮರಣದ ಮಧ್ಯೆ ತೂಗುಯ್ಯಾಲೆಯಾಡಿದರು. 1944ರ ಜೂನ್‍ನಲ್ಲಿ ರಷ್ಯಾದ ಕೆಂಪು ಸೇನೆಯ ನೆರವಿನಿಂದ ಇವರ ಅಜ್ಞಾತವಾಸ ಅಂತ್ಯಗೊಂಡಿತು. ಇದಾದ ನಂತರಫೆ ಝೆಮೈಸಿಲ್ ಮತ್ತು ಕ್ರಕೌ ಹಳ್ಳಿಗಳಲ್ಲಿ ಹಾಫ್ಮನ್‍ನ ಶಿಕ್ಷಣ ಪ್ರಾರಂಭವಾಯಿತು. 1946ರಲ್ಲಿ ಝೆಕೆಸ್ಲೋವಿಯಾಕ್ಕೆ ಹೋದ ಹಾಫ್ಮನ್ ಕುಟುಂಬ ಅಲ್ಲಿಂದ ಆಸ್ಟ್ರಿಯಾದ ಲಿಂಜ್ ಬಳಿಯ ಬಿಂಡೆರ್‍ಮಿಖ್ಲ್ ಎಂಬ ನಿಯಂತ್ರಣದ ಶಿಬಿರ ಸೇರಿತು. ಮುಂದಿನ ವರ್ಷ ಜರ್ಮನಿಯ ಮ್ಯೂನಿಕ್‍ನಲ್ಲಿ ಮತ್ತೊಂದು ನಿರಾಶ್ರಿತರ ಶಿಬಿರಕ್ಕೆ ಇವರು ಹೋಗಿ ನೆಲೆಸಿದರು. 1949ರಲ್ಲಿ ಅಂತಿಮವಾಗಿ ಅಸಂಸಂಗಳಿಗೆ ವಲಸೆ ಹೋಗುವಲ್ಲಿ ಹಾಫ್ಮನ್ ಕುಟುಂಬ ಯಶಸ್ವಿಯಾಯಿತು. ಅಸಂಸಂದಲ್ಲಿ ಇಂಗ್ಲೀಷ್ ಕಲಿತ ರೋನಾಲ್ಡ್, 1962ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದನು. ರೋನಾಲ್ಡ್ ಸ್ಥಿರ ಹಾಗೂ ಅಸ್ಥಿರ ಅಣುಗಳ ವೈದ್ಯುತೀಯ ಸಂರಚನೆ,ರಾಸಾಯನಿಕ ಕ್ರಿಯೆಗಳಲ್ಲಿನ ಸ್ಥಿತ್ಯಂತರಗಳ ಬಗೆಗೆ ಗಮನಾರ್ಹ ಕೆಲಸ ಮಾಡಿದ್ದಾನೆ. ಹಕೆಲ್ ವಿಧಾನವನ್ನು ವಿಸ್ತರಿಸಿ, ಅಭಿವೃದ್ಧಿಗೊಳಿಸಿ ಮಾರ್ಪಡಿಸಿ ಅಣುಗಳ ಪೈ ಮತ್ತು ಸಿಗ್ಮ ಎಲೆಕ್ಟ್ರಾನ್‍ಗಳ ರಾಚನಿಕ ಸ್ವರೂಪವನ್ನು ನಿರ್ಧರಿಸಲು ನೆರವಾಗುವಂತೆ ಮಾಡಿದನು. ಸಾವಯವ ಕ್ರಿಯೆಗಳಲ್ಲಿ ಸ್ಥಿತ್ಯಂತರ ಹಾಗೂ ಮಧ್ಯಂತರ ಹಂತದ ಎಲೆಕ್ಟ್ರಾನಿಕ್ ಸಂರಚನೆಯನ್ನು ವಿವರಿಸಿದನು. ಪ್ರಯೋಗಗಳಿಂದ ಬೆಂಬಲಿತವಾದ ವಿಶಿಷ್ಟ ಬಗೆಯ ಲೆಕ್ಕಾಚಾರಗಳನ್ನು ಬಳಸಿ ರಾಸಾಯನಿಕ ಕ್ರಿಯೆಯ ಅಂತರಂಗವನ್ನು ಅರಿಯಲು ರೋನಾಲ್ಡ್ ನೀಡಿದ ಕೊಡುಗೆಗಾಗಿ 1981ರಲ್ಲಿ ನೊಬೆಲ್ ಪ್ರಶಸ್ತಿ ದಕ್ಕಿತು. ರಷ್ಯನ್ ಹಾಗೂ ಜರ್ಮನ್ ಸಾಹಿತ್ಯದಲ್ಲಿ ಅಪಾರ ಆಸಕ್ತಿಯಿರುವ ರೋನಾಲ್ಡ್ 1987ರಲ್ಲಿ ತನ್ನ ಮೊದಲ್ ಕವನ ಸಂಕಲನ ಪ್ರಕಟಿಸಿದನು. ಇದು ಯುರೋಪಿನ ಹಲವಾರು ಭಾಷೆಗಳಿಗೆ ಅನುವಾದಗೊಂಡಿದೆ. ಈಗಲೂ ರೋನಾಲ್ಡ್ ವಿಜ್ಞಾನದಂತೆ, ಸಾಹಿತ್ಯ ಕ್ಷೇತ್ರದಲ್ಲೂ ಕ್ರಿಯಾಶೀಲನಾಗಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/13/2019