ಜಾನ್ , ಚಾಲ್ರ್ಸ್ ಪೊಲಯಾನಿ (1929--) ೧೯೮೬
ಜರ್ಮನಿ-ರಸಾಯನಶಾಸ್ತ್ರ- ರಾಸಾಯನಿಕ ಕ್ರಿಯೆಗಳ ಗತಿಶೀಲ ಅಧ್ಯಯನದ ಮುಂದಾಳು
ಜಾನ್ ಪೊಲಯಾನಿ ಪೂರ್ವಿಕರು ಜರ್ಮನಿ, ಹಂಗರಿ ಮೂಲದವರಾಗಿದ್ದು ಬರ್ಲಿನ್‍ನಲ್ಲಿ ನೆಲೆಸಿದ್ದರು. ಜಾನ್‍ನ ಕುಟುಂಬ 1933ರಲ್ಲಿ ಇಂಗ್ಲೆಂಡ್‍ಗೆ ಹೋಗಿ ನೆಲೆಸಿತು. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ 1949ರಲ್ಲಿ ಪದವಿ ಹಾಗೂ 1952ರಲ್ಲಿ ಡಾಕ್ಟರೇಟ್ ಗಳಿಸಿದನು. 1952ರಿಂದ 1954 ರವರೆಗೆ ಕೆನಡಾದ ಒಟ್ಟೋವಾದ ನ್ಯಾಷನಲ್ ರಿಸರ್ಚ್ ಕೌನ್ಸಿಲ್ ಲ್ಯಾಬೋರೇಟರಿಯಲ್ಲಿ ಫೆಲೋ ಆಗಿದ್ದನು. 1956ರಲ್ಲಿ ಟೊರೆಂಟೋ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾದನು. ನಂತರ ಇಲ್ಲಿಯೇ ಸಹಾಯಕ ಪ್ರಾಧ್ಯಾಪಕ, ಪ್ರಾಧ್ಯಾಪಕನಾದನು. ಪೊಲಯಾನಿಯದು ವೈವಿಧ್ಯಮಯ ವ್ಯಕ್ತಿತ್ವ. ಹಲವಾರು ಸಂಘ, ಸಂಸ್ಥೆ, ವಿಶ್ವವಿದ್ಯಾಲಯಗಳ ಗೌರವ ಸದಸ್ಯತ್ವ ಹೊಂದಿರುವ ಜಾನ್ ಪೊಲಯಾನಿ ಮುಕ್ತ ಪಾಂಡಿತ್ಯವನ್ನು ಪ್ರಸರಿಸುವ ದಿ ರಾಯಲ್ ಸೊಸೈಟಿ ಆಫ್ಕೆನಡಾ ಕಮಿಟಿ ಆನ್ ಸ್ಕಾಲರಿ ಫ್ರೀಡಂ ಸಂಸ್ಥಾಪನ ಸದಸ್ಯನಾಗಿದ್ದಾನೆ. ಶಸ್ತ್ರ ನಿಯಂತ್ರಣ ಹಾಗೂ ನಿಶ್ಯಸ್ತ್ರೀಕರಣ ಆಂತರಿಕ ಭದ್ರತೆ ಸೇರಿದಂತೆ ಹಲವಾರು ರಾಷ್ಟ್ರೀಯ ವಿಚಾರಗಳಲ್ಲಿ ಕೆನಡಾ ಸರ್ಕಾರದ ಸಮಿತಿಗಳ ಸಕ್ರಿಯ ಸದಸ್ಯನಾಗಿದ್ದಾನೆ. ಪೊಲಯಾನಿ ವಿಜ್ಞಾನರಂಗದಲ್ಲಿ ನೂರಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, ಅದಕ್ಕೆ ಸರಿಸಮ ಸಂಖ್ಯೆಯಲ್ಲಿ ವಿಜ್ಞಾನ,ಆಡಳಿತ ನೀತಿ, ವಿಜ್ಞಾನದಿಂದ ಸಮಾಜದ ಮೇಲಾಗುವ ಪರಿಣಾಮ, ನಿಶ್ಯಸ್ತ್ರೀಕರಣಗಳ ಬಗೆಗೂ ನೂರಾರು ಲೇಖನ ಬರೆದಿದ್ದಾನೆ. ರಾಸಾಯನಿಕ ಕ್ರಿಯೆಗಳ ಗತಿಶೀಲ ಅಧ್ಯಯನ ಕುರಿತಾದಂತಹ ಸಂಶೋಧನೆಗಳಿಗಾಗಿ 1986ರಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019