ಜೊಹಾನ್ನ್, ಡೈಸೆನ್‍ಹೊಫರ್ (1943--) ೧೯೮೮
ಜರ್ಮನಿ-ಜೀವರಸಾಯನಶಾಸ್ತ್ರ- ದ್ಯುತಿ ಸಂಶ್ಲೇಷಣೆ ಕೇಂದ್ರದ (Photosynthesis Centre) ಮೂರು ಆಯಾಮದ ಸಂರಚನೆಯನ್ನು (Three Dimensional Structure) ನಿರ್ಧರಿಸಿದಾತ.
ಜೊಹಾನ್ 30 ಸೆಪ್ಟೆಂಬರ್ 1943ರಂದು ಜರ್ಮನಿಯ ಬವೇರಿಯಾ ಪ್ರಾಂತದ ಜುಸ್ಮಲ್ಥೀಮ್ ಪಟ್ಟಣದಲ್ಲಿ ಜನಿಸಿದನು. ಜೊಹಾನ್ ವಿದ್ಯಾಭ್ಯಾಸ 15 ವರ್ಷದ ವರೆಗೆ ಸಾಗಿತು. ಆಗಿನ ಬವೇರಿಯನ್ ಪ್ರಾಂತದಲ್ಲಿ ಮನೆಯ ಹಿರಿಮಗ ಕುಲ ಕಸುಬನ್ನು ಮುಂದುವರೆಸಬೇಕೆಂಬ ಸಂಪ್ರದಾಯ ಚಾಲ್ತಿಯಲ್ಲಿದ್ದಿತು. ಆದರೆ ಜೊಹಾನ್‍ಗೆ ಕೃಷಿ ಕಾರ್ಯದಲ್ಲಿ ಕಿಂಚಿತ್ತೂ ಆಸಕ್ತಿ ಇರದಿರುವುದನ್ನು ಗಮನಿಸಿದ ಅವನ ತಂದೆ ತಾಯಿ, ಸಂಪ್ರದಾಯ ಮುರಿದು ಮಗನನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಳಿಸಿದರು. 1965ರಲ್ಲಿ ಜರ್ಮನಿಯ ಮಿಲಿಟರಿ ಸೇರಿದ ಜೊಹಾನ್ ಹದಿನೆಂಟು ತಿಂಗಳುಗಳ ನಂತರ ಭೌತಶಾಸ್ತ್ರದ ಅಧ್ಯಯನಕ್ಕೆ ಮ್ಯೂನಿಕ್ ವಿಶ್ವವಿದ್ಯಾಲಯ ಸೇರಿದನು. ಫ್ರೆಡ್ಹಾಯ್ಲ್‍ನಿಂದ ಬರೆಯಲ್ಪಟ್ಟ ಕೃತಿ ಓದಿ ಪ್ರಭಾವಿತನಾದ ಜೊಹಾನ್‍ಗೆ ಭೌತ ಹಾಗೂ ಖಗೋಳಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಮೂಡಿದ್ದಿತು. ಆದರೆ ಕೆಲಕಾಲದಲ್ಲೇ ಭೌತಶಾಸ್ತ್ರ ತಾನು ಭಾವಿಸಿದುದಕ್ಕಿಂತ ಭಿನ್ನವಾಗಿರುವುದೆಂದು ಜೊಹಾನ್‍ಗೆ ಮನದಟ್ಟಾಯಿತು. ಹೀಗಾಗಿ ಘನಸ್ಥಿತಿ ಭೌತಶಾಸ್ತ್ರದಲ್ಲಿ ಕ್ಲೌಸ್ ಡ್ರಾನ್’ಫೆಲ್ಡ್ಪ್ರಯೋಗಾಲಯದಲ್ಲಿ ಸಂಶೋಧನೆ ಪ್ರಾರಂಭಿಸಿದನು. 1972ರಲ್ಲಿ ಮಾಕ್ಸ್ ಪ್ಲಾಂಕ್ ಸಂಸ್ಥೆ ಸೇರಿ, ಅಲ್ಲಿ ವೂಲ್ಫ್‍ಗ್ಯಾಂಗ್ ಸ್ವೀಜ್‍ಮನ್ ಜೊತೆಗೂಡಿ ಸ್ಪಟಿಕಾಲೇಖ(Crystallography) ವಿಧಾನದಲ್ಲಿ ಬೈಜಿಕ ರಾಸಾಯನಿಕಗಳ ರಾಚನಿಕ ಸ್ವರೂಪ ನಿರ್ಧರಿಸಿ, 1974ರಲ್ಲಿ ಡಾಕ್ಟರೇಟ್ ಗಳಿಸಿದನು. 1974ರಲ್ಲಿ ಹ್ಯೂಬರ್ ಪ್ರಯೋಗಾಲಯದಲ್ಲಿ ಸಂಶೋಧಕನಾಗಿ ಸೇರಿದ ಜೊಹಾನ್, ವಾಲ್ಟರ್ ಪಾಮ್‍ನೊಂದಿಗೆ ಮಾನವನ ಮೈಲೋಮಾ ಪ್ರೊಟೀನ್ ಬಗ್ಗೆ ಅಧ್ಯಯನ ನಡೆಸಿದರು. ಮುಂದೆ ಜೊಹಾನ್ ಸಿಟ್ರೇಸ್ ಸಿಂಥೇಸ್ ಆಲ್ಫಾ- 1 ಪ್ರೋಟೀನೆಸ್ ನಿರ್ಬಂಧಕಗಳ (Inhibitor) ಮೇಲೂ ಸಂಶೋಧನೆಗಳು ಜರುಗಿದವು. 1982ರಲ್ಲಿ ಜೊಹಾನ್ ಹಾರ್ಟ್‍ಮಟ್ ಮೈಖೇಲ್ ಹಾಗೂ ಡೈಯೆಟರ್ ಓಯಿಸ್ಟರ್ ಹೆಲ್ಟ್‍ರನ್ನು ತಾನು ಕೆಲಸ ಮಾಡುತ್ತಿದ್ದ ಮಾಕ್ಸ್ ಪ್ಲಾಂಕ್ ಸಂಸ್ಥೆಯಲ್ಲಿ ಭೇಟಿಯಾಗಿ ಚರ್ಚಿಸುವ ಅವಕಾಶ ಪಡೆದನು. ಇವರು ರೋಡೋಸೂಡೋಮೊನಾಸ್ ವಿರಿಡಿಸ್ ಬ್ಯಾಕ್ಟೀರಿಯಾದ (Rhodopsudomonos Viridis) ದ್ಯುತಿ ಸಂಶ್ಲೇಷಣೆಯ ಕೇಂದ್ರವನ್ನು ಹರಳು ರೂಪದಲ್ಲಿ ಪಡೆದಿರುವುದನ್ನು ತಿಳಿಸಿದರು. ಇವರೊಂದಿಗೆ ಸೇರಿದ ಜೊಹಾನ್ ಈ ರಾಸಾಯನಿಕದ ಮೂರು ಆಯಾಮದ ರಚನೆಯ ಸ್ವರೂಪ ಅರಿಯಲು ನಾನಾ ಪ್ರಯೋಗಗಳನ್ನು ಕೈಗೊಂಡನು. 1983ರಲ್ಲಿ ಜೊಹಾನ್ ತಂಡ ಈ ಯತ್ನದಲ್ಲಿ ಯಶಸ್ಸನ್ನು ಕಂಡಿತು. ಇದಕ್ಕಾಗಿ ಸುಕ್ಲಿಷ್ಟವಾದ ಗಣಕ ಕ್ರಮವಿಧಿಗಳನ್ನು ಬರೆಯಲಾಯಿತು. ಈ ಸಾಧನೆ ಅಲ್ಪ ಕಾಲದಲ್ಲೇ ಜಗತ್ತಿನಾದ್ಯಂತ ವಿಜ್ಞಾನಿಗಳ ಗಮನ ಸೆಳೆಯಿತು. ಇದನ್ನು ಗಮನಿಸಿದ ಅಸಂಸಂದ ಡಲ್ಲಾಸ್‍ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದ ಸೌಥಾವೆಸ್ಟರ್ನ್ ಮೆಡಿಕಲ್ ಸೆಂಟರ್ ಈ ದಿಶೆಯಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಹೊಸ ತಂಡವನ್ನು ಕಟ್ಟುವಂತೆ ಜೊಹಾನ್‍ನನ್ನು ಆಹ್ವಾನಿಸಿತು. ಇದರ ಫಲವಾಗಿ 1988ರಲ್ಲಿ ಜೊಹಾನ್ ಜೀವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. ದ್ಯುತಿ ಸಂಶ್ಲೇಷಣೆ ಕೇಂದ್ರದ ಮೂರು ಆಯಾಮದ ಸಂರಚನೆಯನ್ನು ನಿರ್ಧರಿಸಿದುದರ ಸಾಧನೆಗಾಗಿ ಜೊಹಾನ್ 1988ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019