ಎಲಿಯಾಸ್, ಜೆ. ಕೊರಿ –(1928--) ೧೯೯೦
ಅಸಂಸಂ-ಜೀವರಸಾಯನಶಾಸ್ತ್ರ-ಜೀವರಾಸಾಯನಿಕಗಳ ಮೇಲೆ ವವಿಧ್ಯಮಯ, ವಿಸ್ತೃತ ಅಧ್ಯಯನ ನಡೆಸಿದಾತ.
ಎಲಿಯಾಸ್ ಮೆಸಾಚುಸೆಟ್ಸ್‍ನ ಮೆಥುಯಿನ್ ಹಳ್ಳಿಯಲ್ಲಿ ಜನಿಸಿದನು. ಈತ ಹುಟ್ಟಿದ ಹದಿನೆಂಟು ತಿಂಗಳುಗಳಲ್ಲಿ ಆತನ ತಂದೆ ತೀರಿಕೊಂಡನು. ಕ್ರಿಶ್ಚಿಯನ್ ಆಗಿ ಮತಾಂತರ ಹೊಂದಿದ್ದ ತಾಯಿ ಮೂಲತ: ಲೆಬನಾನ್‍ನಿಂದ ಬಂದಿದ್ದ ಕುಟುಂಬದವಳು. ಸಾಂಪ್ರದಾಯಿಕ ಹಿನ್ನೆಲೆಯನ್ನು ಹೊಂದಿದ್ದ ತಾಯಿ ನಾಮಬಲದಲ್ಲಿ ಭಾರಿ ನಂಬಿಕೆ ಹೊಂದಿದ್ದಳು. ಮಗ ಹುಟ್ಟಿದ ಅಲ್ಪ ಕಾಲದಲ್ಲೇ ತಂದೆ ತೀರಿಹೊದುದರಿಂದ ವಿಲಿಯಂ ಎನ್ನುವ ಹೆಸರನ್ನು ಎಲಿಯಾಸ್ ಎಂದು ಬದಲಾಯಿಸಿದಳು. ಜಾಗತಿಕ ಯುದ್ದದ ಸಮಯದಲ್ಲಿ ಅಸಂಸಂಗಳನ್ನು ಆವರಿಸಿದ್ದ ಮಹಾ ಆರ್ಥಿಕ ಖಿನ್ನತೆಯಲ್ಲೂ ಈಕೆ ತನ್ನ ಇಬ್ಬರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳನ್ನು ಸಲಹಿದಳು. ತಾಯಿಯ ತಂಗಿ ಹಾಗೂ ಅಕೆಯ ಗಂಡನ ನೆರವು ಎಲಿಯಾಸ್ ಕುಟುಂಬಕ್ಕೆ ವರ ರೂಪದಲ್ಲಿ ಬಂದೊದಗಿತು. ಪ್ರೌಢಾಶಾಲಾ ಶಿಕ್ಷಣ ಮುಗಿಸಿ 1945ರಲ್ಲಿ ಎಂಐಟಿ ಸೇರಿದ ಎಲಿಯಾಸ್ ಎಲೆಕ್ಟ್ರಾನಿಕ್ಸ ಇಂಜಿನಿಯರ್ ಆಗಬೇಕೆಂದಿದ್ದನು. ಆದರೆ ಇಂಜಿನಿಯರಿಂಗ್‍ನ ಮೊದಲ ವರ್ಷದಲ್ಲಿದ್ದ ಭೌತಶಾಸ್ತ್ರ ರಸಾಯನಶಾಸ್ತ್ರದ ಶಿಕ್ಷಣದಿಂದ, ಪ್ರಭಾವಿತನಾಗಿ ಇಂಜಿನಿಯರಿಂಗ್ ಬದಲು ರಸಾಯನಶಾಸ್ತ್ರದ ಪದವಿ ವಿದ್ಯಾರ್ಥಿಯಾಗಿ ಬದಲಾಯಿಸಿಕೊಂಡನು. 1950ರಲ್ಲಿ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್‍ನೊಂದಿಗೆ ಹೊರಬಂದ ಎಲಿಯಾಸ್ ಅರ್ಬಾನಾ ಕ್ಯಾಂಪೇನ್‍ನಲ್ಲಿರುವ ಇಲಿನಾಯ್ ವಿಶ್ವವಿದ್ಯಾಲಯದಲ್ಲಿಸಹಾಯಕ ಉಪನ್ಯಾಸಕನಾದನು. ಎಲಿಯಾಸ್ ಆರಂಭಿಕ ಅಧ್ಯಯನಗಳು ಭೌತ ಸಾವಯವ ರಸಾಯನಶಾಸ್ತ್ರದಲ್ಲಿ ಕೇಂದ್ರಿಕೃತವಾಗಿದ್ದವು. ಅಣ್ವಯಿಕ ಕಕ್ಷಾ ಸಿದ್ಧಾಂತ ಬಳಸಿ, ರಾಸಾಯನಿಕ ಕ್ರಿಯೆಗಳನ್ನು ಮೂರು ಆಯಾಮಗಳ ದೃಷ್ಟಿಯಲ್ಲಿ ಅಣುಗಳ ಸಂರಚನೆಯ ಮಟ್ಟದಲ್ಲಿ ಅರಿಯಲು ಯತ್ನಿಸಿದನು. ಇವು ಮುಂದೆ ಇತರಎಂದ ಯಾಂತ್ರಿಕ ಕಿಣ್ವ ಶಾಸ್ತ್ರದ ಉಗಮಕ್ಕೆ ಕಾರಣವಾಯಿತು. 1957ರಲ್ಲಿ ಗುಗೆನ್ ಹೀಮ್ ಫೆಲೋಷಿಪ್ ಗಳಿಸಿ ಯುರೋಪ್‍ನ ಹಲವಾರು ದೇಶಗಳಿಗೆ ಇಲಿಯಾಸ್ ಭೇಟಿ ನೀಡಿದನು. 1960ರಲ್ಲಿ ಎಲಿಯಾಸ್ ಹಾಗೂ ಸಂಗಡಿಗರು ಪ್ರೊಸ್ಟೋಗ್ಲಾಂಡಿನ್‍ಗಳನ್ನು ರಾಸಾಯನಿಕವಾಗಿ ಸಂಶ್ಲೇಷಿಸಿದರು. 1959ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಜೈವ ರಾಸಾಯನಿಕಗಳ ಸಂಶ್ಲೇಷಣೆಗೆ ಹೊಸ ವಿಧಾನಗಳನ್ನು ಅರಸತೊಡಗಿದನು. ಬಹು ಸಂಕೀರ್ಣವಾದ ಜೀವ ಕ್ರಿಯಾಶೀಲ ಅಣುಗಳು, ಸಾವಯವ ಲೌಹಿಕ ರಸಾಯನಶಾಸ್ತ್ರ, ಜೈವಿಕ ಸಾವಯವ ಹಾಗೂ ಕಿಣ್ವ ರಸಾಯನಶಾಸ್ತ್ರ, ಸಾವಯವ ರಸಾಯನಶಾಸ್ತ್ರದ ಸಮಸ್ಯೆಗಳ ಪರಿಹಾರಕ್ಕೆ ಗಣಕಗಳ ಬಳಕೆ ಕುರಿತಾದಂತೆ ಎಲಿಯಾಸ್ ಸಂಶೋಧನೆಗಳು ವೈವಿಧ್ಯಮಯವಾಗಿದ್ದವು. ಇದಕ್ಕಾಗಿ ಎಲಿಯಾಸ್ 1990ರಲ್ಲಿನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2020