ವ್ಲಾಡಿಮಿರ್, ಪ್ರೆಲೊಗ್ (1906-1988) ೧೯೭೫
ಬೊಸ್ನಿಯಾ-ರಸಾಯನಶಾಸ್ತ್ರ-ನೈಸರ್ಗಿಕ ರಾಸಾಯನಿಕಗಳ ತ್ರಿದಿಶಾ ಅಧ್ಯಯನ ಪ್ರಾರಂಭಿಸಿದಾತ.
ವ್ಲಾಡಿಮಿರ್ 23 ಜೂನ್ 1906ರಂದು ಸರಜೆವೊದಲ್ಲಿ ಜನಿಸಿದನು. ಆಗ ಸರಜೆವೊ ಆಸ್ಟ್ರಿಯಾ-ಹಂಗರಿ ಚಕ್ರಾಧಿಪತ್ಯದಲ್ಲಿದ್ದಿತು. 1918ರಲ್ಲಿ ಇದು ಯುಗೋಸ್ಲೋವಿಯಾ ಸೇರಿತು. ಸರಜೆವೊ ಮೊದಲ ಜಾಗತಿಕ ಯುದ್ದದ ಪ್ರಾರಂಭದ ತಾಣವೆಂದು ಕುಖ್ಯಾತಿ ಪಡೆದಿದೆ. ಇಲ್ಲಿಯೇ ಆಸ್ಟ್ರಿಯಾದ ರಾಜಕುಮಾರಫ್ರಾಝ್ ಫರ್ಡಿನ್ಯಾಂಡ್ ಹಾಗೂ ಆತನ ಪತ್ನಿ ಹತ್ಯೆಯಾಗಿ ಯುದ್ದದ ಬೀಜ ಬಿತ್ತನೆಯಾಯಿತು. ಯುದ್ದ ಪ್ರಾರಂಭವಾದಾಗ 1915ರಲ್ಲಿ ವ್ಲಾಡಿಮಿರ್ ಕುಟುಂಬ ಕ್ರೊವೇಷಿಯಾದ ರಾಜಧಾನಿಯಾದ ಜಗ್ರೆಬ್ ಹೋಗಿ ನೆಲೆಸಿತು. ಇಲ್ಲಿ ಶಾಲಾ ಶಿಕ್ಷಣ ಪಡೆದ ವ್ಲಾಡಿಮಿರ್ 1924ರಿಂದ 1929ರವರೆಗೆ ಪ್ರಾಗ್‍ನಲ್ಲಿರುವ ಜೆಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರಸಾಯನಶಾಸ್ತ್ರವನ್ನು ಅಭ್ಯಸಿಸಿದನು. ಇಲ್ಲಿರುವಾಗ ಅಜೀವ ಸ್ನೇಹಿತನೂ ಮಾರ್ಗದರ್ಶಕನೂ ಆಗಿದ್ದ ರುಡಾಲ್ಫ್ ಲೂಕ್ಸ್‍ನ ಪರಿಚಯವಾಯಿತು. 1929ರಲ್ಲಿ ವ್ಲಾಡಿಮಿರ್ ಡಾಕ್ಟರೇಟ್ ಗಳಿಸಿ ಹೊರಬಂದಾಗ ಆರ್ಥಿಕ ಖಿನ್ನತೆ ಇಡೀ ಯುರೋಪನ್ನು ಆಕ್ರಮಿಸಿದ್ದಿತು. ಆರಂಭದಲ್ಲಿ ಕೆಲಸ ಪಡೆಯಲು ವ್ಲಾಡಿಮಿರ್’ಗೆ ಬಹು ಕಠಿಣವಾಯಿತು. 1935ರಲ್ಲಿ ಜಗ್ರೆಬ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ ಹುದ್ದೆ ಪಡೆಯುವಲ್ಲಿ ವ್ಲಾಡಿಮಿರ್ ಯಶಸ್ವಿಯಾದನು. ಇಲ್ಲಿ ಅತ್ಯಲ್ಪ ಸಂಬಳದಲ್ಲಿ ಹಲವಾರು ಕೆಲಸಗಳನ್ನು ನಿರ್ವಹಿಸುವ ಹೊಣೆ ವ್ಲಾಡಿಮಿರ್ ಹೆಗಲೇರಿತು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿ ಜಗ್ರೆಬ್ ಜರ್ಮನಿಯ ವಶವಾಯಿತು. ಇದೇ ಕಾಲಕ್ಕೆ ಜರ್ಮನಿಯಲ್ಲಿ ಕೆಲ ಉಪನ್ಯಾಸಗಳನ್ನು ನೀಡುವಂತೆ ರಿಚರ್ಡ್ ಕುಹ್ನ್’ನಿಂದ ಆಹ್ವಾನ ಬಂದಿತು. ನಾಝಿಗಳಿಂದ ತಪ್ಪಿಸಿಕೊಂಡು ಬಹು ಪ್ರಯಾಸದಿಂದ ಜಗ್ರೆಬ್‍ನಿಂದ ಪರಾರಿಯಾದ ವ್ಲಾಡಿಮಿರ್, ಸ್ವಿಟ್ಸಲ್ರ್ಯಾಂಡ್ ಹಾಗೂ ಆ ಮೂಲಕ ಜರ್ಮನಿ ತಲುಪಿದನು. ಕುಹ್ನ್ ಹಾಗೂ ರುಜಿಕಾರ ನೆರವಿನೊಂದಿಗೆ ಸಿಬಾ ಕಂಪನಿ ಸೇರಿ ಝೂರಿಕ್‍ನಲ್ಲಿರುವ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಯೋಗಾಲಯ ಸೇರಿದನು. ಇಲ್ಲಿ ಹಂತ ಹಂತವಾಗಿ ಮೇಲೇರಿದ ವ್ಲಾಡಿಮಿರ್1957ರಲ್ಲಿ ರುಜಿಕಾನಿಂದ ತೆರನಾದ ಪ್ರಯೋಗಾಲಯದ ಮುಖ್ಯಸ್ಥನ ಸ್ಥಾನಕ್ಕೇರಿದನು. ಈ ಸ್ಥಾನಕ್ಕೆ ತಾನು ಅರ್ಹನಲ್ಲವೆಂದು ವ್ಲಾಡಿಮಿರ್’ಗೆ ಭಾಸವಾಗಿ ಹಲವಾರು ಬಾರಿ ಕೆಳಗಿಳಿಯಲು ಯತ್ನಿಸಿದನು. ಅಂತಿಮವಾಗಿ ಸರದಿಯ ಮೆಲೆ ನಿರ್ದೇಶಕ ಹುದ್ದೆ ಬೇರೆಯವರಿಗೆ ದಕ್ಕುವಂತೆ ಮಾಡುವಲ್ಲಿ ಯಶಸ್ಸನ್ನು ಕಂಡನು. ವ್ಲಾಡಿಮಿರ್ ನೈಸರ್ಗಿಕ ರಾಸಾಯನಿಕ ಸಂಯುಕ್ತಗಳ ಬಗೆಗೆ ಅಪಾರ ಆಸಕ್ತಿ ಹೊಂದಿದ್ದನು. ಅಡಮಂಟೇನ್, ಅಯಲಾಯಿಡ್ಸ್ , ರಿಫಾಮೈಸಿನ್ಸ್, ಬೊರೋಮೈಸಿನ್‍ಗಳು ವ್ಲಾಡಿಮಿರ್ಸಂಶೋಧನಾ ಎಲ್ಲೆಯೊಳಗೆ ಕಾಣಿಸಿಕೊಂಡವು. ನೈಸರ್ಗಿಕ ರಾಸಾಯನಿಕಗಳ ರಾಚನಿಕ ಸ್ವರೂಪ ಅರಿಯುವಲ್ಲಿ ತ್ರಿದಿಶಾ ರಸಾಯನಶಾಸ್ತ್ರದಲ್ಲಿ(StereoChemistry) ಹಲವಾರು ಅಡಚಣೆಗಳಿದ್ದವು. ಈ ಸಮಸ್ಯೆಯನ್ನು ವ್ಲಾಡಿಮಿರ್ ಕೈಗೆತ್ತಿಕೊಂಡಾಗ ಸ್ಟೀರಿಯೋ ರಸಾಯನಶಾಸ್ತ್ರವನ್ನು ರಸಾಯನಶಾಸ್ತ್ರದ ಒಂದು ಕವಲೆಂದು ಭಾವಿಸದೆ ಅದೊಂದು ವಿಶಿಷ್ಟ ಬಗೆಯ ದೃಷ್ಟಿಕೋನವೆಂದು ಪರಿಗಣಿಸಲಾಗುತ್ತಿತ್ತು. ವ್ಲಾಡಿಮಿರ್ ನೈಸರ್ಗಿಕ ಸಂಯುಕ್ತಗಳನ್ನು ಸ್ಟೀರಿಯೋ ರಸಾಯನಶಾಸ್ತ್ರದ ದೃಷ್ಟಿಯಿಂದ ಅಭ್ಯಸಿಸಿದನು. ಇದಕ್ಕಾಗಿ 1975ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. 1959ರಲ್ಲಿ ಸ್ವಿಟ್ಸಲ್ರ್ಯಾಂಡಿನ ಪ್ರಜೆಯಾದ ವ್ಲಾಡಿಮಿರ್1998ರಲ್ಲಿ ಮೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019