ವಿಲಿಯಂ , ಹೊವಾರ್ಡ್ ಸ್ಟೀನ್ (1911-1980) ೧೯೭೨
ಅಸಂಸಂ-ರಸಾಯನಶಾಸ್ತ್ರ - ಪ್ರೋಟಿನ್‍ಗಳಲ್ಲಿ ಅಮೈನೋ ಆಮ್ಲ ಸರಣಿ ನಿರ್ಧರಿಸುವ ತಂತ್ರ ರೂಪಿಸಿದಾತ.
25 ಜೂನ್ 1911 ರಂದು ನ್ಯೂಯಾರ್ಕನಲ್ಲಿ ವಿಲಿಯಂ ಜನನವಾಯಿತು. ವ್ಯಾಪಾರಿಯಾಗಿದ್ದ ಈತನ ತಂದೆಗೆ ಸಮಾಜ ಸೇವೆಯಲ್ಲಿ ಒಲವಿದ್ದಿತು. ಅವಧಿಗೆ ಮುಂಚೆಯೇ ನಿವೃತ್ತಿ ಪಡೆದ ಈತನ ತಂದೆ ಕ್ಷಯ ಹಾಗೂ ಆರೋಗ್ಯ ಸಂಬಂಧಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ಭಾಗಿಯಾದನು. ಶುದ್ಧ ವಿಜ್ಞಾನ ಅಥವಾ ವೈದ್ಯಕೀಯದಲ್ಲಿ ಪರಿಣಿತಿಗಳಿಸಬೇಕೆಂದು ವಿಲಿಯಂ ತಂದೆ ತಾಯಿಗಳು ಆಶಿಸಿದ್ದರು. ಹಾರ್ವರ್ಡ್ ವಿಶ್ವ ವಿದ್ಯಾಲಯದಿಂದ 1933ರಲ್ಲಿ ವಿಲಿಯಂ ರಸಾಯನಶಾಸ್ತ್ರದ ಪದವಿ ಗಳಿಸಿದನು. ನಂತರ ನ್ಯೂಯಾರ್ಕ್‍ನ ಕೊಲಂಬಿಯಾ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಫಿಸಿಷಿಯನ್ಸ್ ಅಂಡ್ ಸರ್ಜನ್ಸ್ ಸಂಸ್ಥೆಯ ಜೀವ ರಸಾಯನಶಾಸ್ತ್ರ ವಿಭಾಗ ಸೇರಿದನು. ಇಲ್ಲಿ ಎಲ್ಯಾಸ್ಟಿನ್ ಪ್ರೊಟಿನ್‍ನ ಅಮೈನೋ ಆಮ್ಲ ವಿಶ್ಲೇಷಣೆ ಕುರಿತಾಗಿ ಸಂಪ್ರಬಂಧ ಮಂಡಿಸಿ, ಇದು ಹೃದಯ ರಕ್ತನಾಳ ವ್ಯವಸ್ಥೆಯ ರೋಗದಲ್ಲಿ ವಹಿಸುವ ಪಾತ್ರವನ್ನು ಬಹಿರಂಗಗೊಳಿಸಿದನು. 1937ರಲ್ಲಿ ವಿಲಿಯಂ ರಾಕ್ಫೆಲರ್ ಸಂಸ್ಥೆ ಸೇರಿದನು. ಈ ಎಲ್ಲಾ ಕಾಲದಲ್ಲೂ ಪ್ರೊಟೀನ್ ರಸಾಯನಶಾಸ್ತ್ರದ ಅಧಿಕೃತ ವಾಣಿಯೆಂದೇ ಖ್ಯಾತನಾಗಿದ್ದ ಬರ್ಗ್‍ಮನ್‍ನ ಒತ್ತಾಸೆ ವಿಲಿಯಂಗೆ ದಕ್ಕಿತು. ವಿಲಿಯಂ ಹಾಗೂ ಸ್ಟ್ಯಾನ್ಫೋರ್ಡ್ ಮೂರ್ ಪ್ರೋಟಿನ್‍ಗಳಲ್ಲಿನ ಅಮೈನೋ ಆಮ್ಲ ಸಂಯೋಜನೆ ಕುರಿತಾದಂತೆ ವಿಸ್ತೃತ ಅಧ್ಯಯನ ನಡೆಸಿದರು. ಎರಡನೇ ಜಾಗತಿಕ ಯುದ್ಧ ಮುಗಿದ ಎರಡೇ ವರ್ಷಗಳಲ್ಲಿ ಬ್ರಿಟನ್‍ನ ಮಾರ್ಟಿನ್ ಹಾಗೂ ಸಿಂಜ್ ಹಾಳೆ ವರ್ಣಾಲೇಖದ (Paper Chromatography) ತಂತ್ರದಿಂದ ಅಮೈನೋ ಆಮ್ಲಗಳನ್ನು ಬೇರ್ಪಡಿಸಿದ್ದರು. ಸ್ಯಾಂಜೆರ್ ಇನ್ಸುಲಿನ್ ರಾಚನಿಕ ಸ್ವರೂಪದ ಅನಾವರಣದ ಹಾದಿಯಲ್ಲಿ ಬಹು ದೂರ ಶ್ರಮಿಸಿದ್ದನು. ಸ್ಯಾಂಜೆರ್ ಸಲಹೆಯ ಮೇರೆಗೆ ಆಲುಗಡ್ಡೆ ಗಂಜಿಯ ಮೇಲೆ ಆರಂಭಿಕ ಸಂಶೋಧನೆ ಪ್ರಾರಂಭಿಸಿದ ವಿಲಿಯಂ ಹಾಗೂ ಮೂರ್ ಅಲ್ಪ ಕಾಲದಲ್ಲೇ ಸ್ವಯಂ ಅಮೈನೋಆಮ್ಲ ವೈಶ್ಲೇಷಕವನ್ನು (Analyser) ನಿರ್ಮಿಸಿದರು. ವಿಲಿಯಂ ಹಾಗೂ ಮೂರ್‍ರ ಸಹ ಭಾಗಿತ್ವದಲ್ಲಿ ಜರುಗಿದ ಸಂಶೋಧನೆಗಳಿಂದ ಪ್ರೋಟಿನ್‍ಗಳಲ್ಲಿ ಅಮೈನೋ ಆಮ್ಲ ಸರಣಿ ನಿರ್ಧರಿಸುವುದು ಸಾಧ್ಯವಾಗಿ ಜೀವರಸಾಯನಶಾಸ್ತ್ರದ ಅಧ್ಯಯನಕ್ಕೆ ಹೊಸ ಮಾರ್ಗವೇ ದಕ್ಕಿದಂತಾಯಿತು. ಈ ಸಾಧನೆಗಾಗಿ ವಿಲಿಯಂ 1972ರ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/6/2020