ಪೌಲ್, ಜಾನ್ ಫ್ಲೋರಿ (1910-1985) ೧೯೭೪
ಅಸಂಸಂ-ರಸಾಯನಶಾಸ್ತ್ರ-ಬಹ್ವಂಗಿಗಳ ನಡವಳಿಕೆಯನ್ನು ಸೈದ್ಧಾಂತಿಕವಾಗಿ ವಿವರಿಸಿದಾತ.
ಪೌಲ್‍ನ ಪೂರ್ವಿಕರು ಹಂಗರಿ ಮೂಲದವರಾಗಿದ್ದು, ಜರ್ಮನಿಯಲ್ಲಿ ನೆಲೆಸಿದ್ದರು. ಜರ್ಮನಿಯಿಂದ ಅಸಂಸಂಗಳಿಗೆ ಬಂದ ನೆಲೆಸಿದ ಆರನೇ ತಲೆಮಾರಿನಲ್ಲಿ ಪೌಲ್ 19ಜೂನ್ 1910ರಂದು, ಇಲಿನಾಯ್ ಪ್ರಾಂತದ ಸ್ಟರ್ಲಿಂಗ್‍ನಲ್ಲಿ ಜನಿಸಿದನು. ಇಂಡಿಯಾನದ ಮ್ಯಾಂಚೆಸ್ಟರ್ ಕಾಲೇಜ್‍ನಲ್ಲಿದ್ದ ಕಾರ್ಲ್ ಡಬ್ಲ್ಯೂ ಹಾಲ್‍ನಿಂದ ಜಾನ್‍ಗೆ ರಸಾಯನಶಾಸ್ತ್ರದಲ್ಲಿ ಆಸಕ್ತಿ ಮೂಡಿತು. 1934ರಲ್ಲಿ ಓಹಿಯೋ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದ ಜಾನ್ ಡ್ಯೂಪಾಂಟ್ ಕಂಪನಿಯ ಸಂಶೋಧನಾ ವಿಭಾಗ ಸೇರಿ ವೃತ್ತಿ ಜೀವನ ಪ್ರಾರಂಭಿಸಿದನು. ಇಲ್ಲಿ ನೈಲಾನ್ ಹಾಗೂ ನಿಯೋಪ್ರಿನ್‍ಗಳನ್ನು ಉಪಜ್ಞಿಸಿದ್ದ ವ್ಯಾಲೆಸ್ ಎಚ್. ಕ್ಯಾರೋಥರ್ಸ್‍ನ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಸದವಕಾಶ ಜಾನ್‍ಗೆ ದಕ್ಕಿತು. ಈತನಿಂದ ಬಹ್ವಂಗೀಕರಣದ ಬಗೆಗೆ ಆಸಕ್ತಿ ಮೂಡಿತು. 1937ರಲಿ ಜಾನ್ ಸಿನ್‍ಸಿನಟ್ಟಿ ವಿಶ್ವವಿದ್ಯಾಲಯದ ಮೂಲ ಸಂಶೋಧನಾ ಪ್ರಯೋಗಾಲಯ ಸೇರಿ, ಎರಡು ವರ್ಷಗಳ ಕಾಲ ಸೇವೆಯಲ್ಲಿದ್ದನು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿ ರಬ್ಬರ್ ಹಾಗೂ ರಬ್ಬರ್‍ನಂತಹ ಕೃತಕ ವಸ್ತುಗಳನ್ನು ಶೋಧಿಸುವ ಒತ್ತಡ ವಿಜ್ಞಾನಿಗಳ ಮೇಲೆ ಬಿದ್ದಿತು. ಇದರ ಫಲಿತಾಂಶವಾಗಿ ಜಾನ್ ಸ್ಟ್ಯಾಂಡರ್ಡ್ ಆಯಿಲ್ ಡೆವಲಪ್‍ಮೆಂಟ್ ಕಂಪನಿಯ ಪ್ರಯೋಗಾಲಯ ಸೇರಿದನು. ನಂತರ ಹೆಚ್ಚಿನ ಸಂಶೋಧನೆಗಾಗಿ ಗುಡ್ ಇಯರ್ ಟೈರ್ ಅಂಡ್ ರಬ್ಬರ್ ಕಂಪನಿ ಸೇರಿದನು. 1948ರಲ್ಲಿ ಜಾರ್ಜ್ಫಿಷರ್ ಬೇಕರ್ ಅನಿವಾಸಿ ಉಪನ್ಯಾಸಕ ಹುದ್ದೆಯ ಮೇಲೆ ಕಾರ್ನೆಲ್ ವಿಶ್ವವಿದ್ಯಾಲಯ ಸೆರಿದನು. ಇಲ್ಲಿರುವಾಗ 1953ರಲ್ಲಿ ಪ್ರಿನ್ಸಿಪಲ್ಸ್ ಆಫ್ ಪಾಲಿಮರ್ ಕೆಮಿಸ್ಟ್ರಿ ಕೃತಿಯನ್ನು ಜಾನ್ ಪ್ರಕಟಿಸಿದನು. ದ್ರವ ಸ್ಥಿತಿಯಲ್ಲಿರುವ ಬೃಹತ್ ಅಣುಗಳ ಸರಪಳಿಗಳಾದ ಬಹ್ವಂಗಿಗಳ (Polymer)ನಡವಳಿಕೆಯನ್ನು ಪೌಲ್ ಸೈದ್ಧಾಂತಿಕವಾಗಿ ರೂಪಿಸಿದನು. ಇವು ಪ್ರಯೋಗಗಳಿಂದ ದೃಢಗೊಂಡವು. ಇದಕ್ಕಾಗಿ ಪೌಲ್ 1974ರ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019