ಜಾನ್ ,ವಾರ್’ಕಪ್ ಕಾರ್ನ್ಫೋರ್ಥ್ (1917--) ೧೯೭೫
ಆಸ್ಟ್ರೇಲಿಯಾ-ಜೀವರಸಾಯನಶಾಸ್ತ್ರ- ಕಿಣ್ವ ಕ್ರಿಯಾಪ್ರೇರಿತ ಕ್ರಿಯೆಗಳ (enzyme Activated Reactions) ತ್ರಿದಿಶಾ ರಸಾಯನಶಾಸ್ತ್ರ (Stereo Chemistry) ಅಧ್ಯಯನಗಳನ್ನು ನಡೆಸಿದಾತ.
ಜಾನ್‍ನ ತಂದೆ ಇಂಗ್ಲೆಂಡ್ ಹಾಗೂ ತಾಯಿ ಜರ್ಮನ್ ಮೂಲದವರಾಗಿದ್ದು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್’ನಲ್ಲಿ ನೆಲೆಸಿದ್ದರು. ಜಾನ್ 7 ಸೆಪ್ಟೆಂಬರ್ 1917ರಂದು ಸಿಡ್ನಿಯಲ್ಲಿ ಜನಿಸಿದನು. ಜಾನ್ ಹತ್ತು ವರ್ಷದ ಬಾಲಕನಾಗಿರುವಾಗ ಓಟೋ ಸ್ಲ್ಕೆಲಾರಿಸಿಸ್‍ನಿಂದಾಗಿ ಕಿವುಡನಾಗತೊಡಗಿದನು. ಮುಂದೆ ಹತ್ತು ವರ್ಷಗಳಲ್ಲಿ ಜಾನ್ ಸಂಪೂರ್ಣ ಕಿವುಡನಾದನು. ಆದರೆ ವಿದ್ಯಾರ್ಥಿ ಜೀವನದುದ್ದಕ್ಕೂ ಆತನ ಕಿವುಡುತನವನ್ನು ಮೀರಿ ಶಿಕ್ಷಣದ ಬೆಂಬಲ ದೊರೆಯಿತು. ಹದಿನಾರನೇ ವಯಸ್ಸಿನಲ್ಲಿ ಸಿಡ್ನಿ ವಿಶ್ವವಿದ್ಯಾಲಯ ಸೇರಿದಾಗ, ಕಿವುಡುತನದಿಂದಾಗಿ, ಯಾವುದೇ ಉಪನ್ಯಾಸಗಳು ಜಾನ್‍ಗೆ ಕೇಳಿಸುತ್ತಿರಲಿಲ್ಲ. ಇಷ್ಟಾದರೂ 1937ರಲ್ಲಿ ಸ್ವರ್ಣ ಪದಕದೊಂದಿಗೆ ಪದವಿ ಗಳಿಸಿದನು. ಡಾಕ್ಟರೇಟ್ ಗಳಿಸಲು ಆಕ್ಸ್'ಫರ್ಡ್'ಗೆ ಹೋಗಿ ಎರಡನೇ ಜಾಗತಿಕ ಯುದ್ದದ ಕಾಲದಲ್ಲಿ ರಾಬಿನ್ಸನ್ ಪ್ರಯೋಗಾಲಯ ಸೇರಿದನು. ಆಗ ಪೆನ್ಸಿಲಿನ್ ಮಹತ್ವ ಮನದಟ್ಟಾಗಿದ್ದಿತು. ಪೆನ್ಸಿಲಿನ್‍ನ ರಾಸಾಯನಿಕ ಸ್ವರೂಪದ ಸಂಶೋಧನೆ ನಡೆಸಿ ಜಾನ್ ಡಾಕ್ಟರೇಟ್ ಗಳಿಸಿದನು. ಸ್ಟೆರಾಲ್‍ಗಳ ಸಂಶ್ಲೇಷಣೆಯಲ್ಲಿ ಬಹು ಮುಖ್ಯ ಹಂತದ ಪ್ರತಿಕ್ರಿಯೆಯನ್ನು ಜಾನ್ ಗುರುತಿಸಿದ್ದನು. 1951ರಲ್ಲಿ ವುಡ್‍ವರ್ಡ್‍ನೊಂದಿಗೆ ಮೊಟ್ಟಮೊದಲ ಬಾರಿಗೆ ಸುಗಂಧೇತರ (Nonaromatic) ಸ್ಟೆರಾಯಿಡ್‍ಗಳ ಸಂಪೂರ್ಣ ಸಂಶ್ಲೇಷಣೆ ಸಾಧಿಸಿದನು. ರಾಷ್ಟ್ರೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಜಾರ್ಜ್ ಪಾಪ್‍ರಾಕ್ ಸಹಯೋಗದಲ್ಲಿ ವಿಕಿರಣಶೀಲ ಕುರುಹುಕಗಳಿಂದ (Tracer) ಇಂಗಾಲದ ಹತ್ತೊಂಬತ್ತು ಉಂಗುರಗಳ ರಚನೆಯಿಂದಾಗಿರುವ ಕೊಲೆಸ್ಟರಾಲ್‍ನ್ನು ರಾಸಾಯನಿಕವಾಗಿ ಹಂತಹಂತವಾಗಿ ಕಳಚಿ,ಪ್ರತಿಯೊಂದರ ಅಧ್ಯಯನ ನಡೆಸಿದನು. ಕಿಣ್ವ (Enzyme) ಕ್ರಿಯಾಪ್ರೇರಿತ ಕ್ರಿಯೆಗಳ ತ್ರಿದಿಶಾ (Stereo) ರಸಾಯನಶಾಸ್ತ್ರ ಅದ್ಯಯನಗಳಿಗಾಗಿ ಜಾನ್1975ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 5/26/2020