ಝೀಗ್ಲರ್, ಕಾರ್ಲ್ (1898-1974) ೧೯೬೩
ಜರ್ಮನಿ-ರಸಾಯನಶಾಸ್ತ-ಪಾಲಿಥಿನ್ ಹೆಸರಿನ ಪ್ಲಾಸ್ಟಿಕ್ ಉಪಜ್ಞೆಕಾರ.
ಚರ್ಚ್‍ನ ಪಾದ್ರಿಯ ಮಗನಾಗಿ ಝೀಗ್ಲರ್ 1898 ನವೆಂಬರ್ 26 ರಂದು ಹೆಲ್ಸ್ ನಗರದಲ್ಲಿ ಜನಿಸಿದನು. ಮಾರ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಪದವಿ ಗಳಿಸಿ, 1920ರಲ್ಲಿ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. ಮಾರ್ಬರ್ಗ್‍ನಲ್ಲಿ ಅಧ್ಯಾಪಕನಾಗಿ ವೃತ್ತಿಜೀವನ ಆರಂಭಿಸಿದ ಝೀಗ್ಲರ್, ಫ್ರಾಂಕ್’ಫರ್ಟ್ , ಹೈಡೆಲ್‍ಬರ್ಗ್‍ಗಳಲ್ಲಿ ಅಧ್ಯಾಪಕ ಹುದ್ದೆಯಲ್ಲಿದ್ದನು. 1943ರಲ್ಲಿ ಹಾಲ್ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಸಂಸ್ಥೆಯ ನಿರ್ದೇಶಕನಾದನು. ನಂತರ ಈಗ ಮಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಎಂದು ಹೆಸರಾಗಿರುವ ಆಗಿನ ರೂರ್ ಪ್ರಾಂತದ ಮುಲ್‍ಹೀಮ್‍ನ ಕೈಸರ್ ವಿಲ್‍ಹೆಲ್ಮ್ ಸಂಸ್ಥೆಯ ನಿರ್ದೇಶಕನಾದನು. 1947ರಿಂದ ಅಬೆನ್ ನಗರದ ಟೆಕ್ನಿಕಲ್ ಹೈಸ್ಕೂಲ್‍ನಲ್ಲಿ ಗೌರವ ಪ್ರ್ರಾಧ್ಯಾಪಕನಾಗಿದ್ದನು. ಫ್ರಾನ್ಸ್’ನಲ್ಲಿದ್ದ ರಸಾಯನಶಾಸ್ತ್ರಜ್ಞ ವಿಕ್ಟರ್ ಗ್ರೀನ್‍ಯಾರ್ಡ್ ಮೆಗ್ನೇಷಿಯಂ ಆಲ್ಕೈನ್ ಸಂಯುಕ್ತಗಳನ್ನು ಪರಿಶೀಲಿಸಿದ್ದನು. ಇದು ಝೀಗ್ಲರ್ ಗಮನ ಸೆಳೆಯಿತು. ಈ ನಿಟ್ಟಿನಲ್ಲಿ ಮುಂದುವರೆಸಿದ ಸಂಶೋಧನೆಗಳಿಂದ, ಅಲ್ಯೂಮಿನಿಯಂ ಬೈ ಆಲ್ಕೈಲ್‍ಗಳಿಗೆ, ಎಥಿಲೀನ್ ಸೇರಿಸಿ, ಅಧಿಕ ಅಣುತೂಕದ ಅಲ್ಯೂಮಿನಿಯಂ ಆಲ್ಕೈಟ್ ಪಡೆಯುವಲ್ಲಿ ಝೀಗ್ಲರ್ ಯಶಸ್ವಿಯಾದನು. ಇದೇ ನಿಟ್ಟಿನಲ್ಲಿ ತನ್ನ ವಿದ್ಯಾರ್ಥಿಯಾಗಿದ್ದ ಹಾಲ್ಸ್ ಕ್ಯಾಂಪ್ ಬೆಲ್‍ನೊಂದಿಗೆ ಹಲವಾರು ಪ್ರಯೋಗ ನಡೆಸಿದನು. ಇಂತಹ ಎರಡು ಪ್ರಯೋಗಗಳ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಲ್ಯೂಮಿನಿಯಂ ಟ್ರೈ ಆಲ್ಕೈನ್‍ಗೆ ಎಥಿಲೀನ್ ಸೇರುವ ಬದಲು, ಎರಡು ಎಥಿಲೀನ್ ಅಣುಗಳು ಸೇರಿ ಬ್ಯೂಟೀನ್ ಉತ್ಪನ್ನವಾಯಿತು. ಇದಕ್ಕೆ ಪ್ರಯೋಗ ಪಾತ್ರೆಯಲ್ಲಿದ್ದ ಕಲಿಲ ರೂಪಿ ನಿಕೆಲ್ ಕಾರಣವೆಂದು ತಿಳಿದು ಬಂದಿತು. ಕಲಿಲರೂಪಿ (Colloidal) ನಿಕೆಲ್, ಎಥಿಲೀನ್ ಅಣುಗಳು ಸೇರುವುದಕ್ಕೆ ಕ್ರಿಯಾ ವರ್ಧಕದಂತೆ ವರ್ತಿಸಿರುವುದನ್ನು ಝೀಗ್ಲರ್ ಗುರುತಿಸಿದನು. ಇದೇ ನಿಟ್ಟಿನಲ್ಲಿ ತೀವ್ರ ಸಂಶೋಧನೆಗಳು ಮುಂದುವರೆದವು. ಅಲ್ಯೂಮಿನಿಯಂ ಟ್ರೈ ಈಥೈಲ್ ಹಾಗೂ ಟೈಟೇನಿಯಂ ಕ್ಲೋರೈಡ್ ಮಿಶ್ರಣ, ಅತ್ಯುತ್ತಮ ವೇಗ ವರ್ಧಕದಂತೆ ವರ್ತಿಸಿ, ನೂರಾರು ಎಥಿಲೀನ್ ಅಣುಗಳನ್ನು ಬೆಸೆಯುವಲ್ಲಿ ಕೊನೆಗೊಂಡಿತು. ಇಂತಹ ಹೊಸ ರಾಸಾಯನಿಕ ಪಾಲಿ ಎಥಿಲೀನ್ ಎಂದು ಹೆಸರಾಯಿತು. ಈ ಕ್ರಿಯೆಗಾಗಿ ಹೆಚ್ಚಿನ ಒತ್ತಡ, ತಾಪಮಾನಗಳ ಅಗತ್ಯವಿಲ್ಲ ಹಾಗೂ ನಿಯಂತ್ರಣಕ್ಕೊಳಗಾಗುವಂತಹ ರಾಸಾಯನಿಕ ಕ್ರಿಯೆಗಳು ಜರುಗುತ್ತವೆ. ಹೀಗೆ ದೊರೆತ ಪಾಲಿಥೀನ್‍ಗೆ ಅತ್ಯುತ್ತಮ ಭೌತಿಕ ಹಾಗೂ ರಾಸಾಯನಿಕ ಗುಣಗಳಿರುತ್ತವೆ. ಇವು ಝೀಗ್ಲರ್ ಕ್ರಿಯಾವರ್ಧಕಗಳೆಂದು (Catalyst) ಖ್ಯಾತಿ ಹೊಂದಿದವು. ಝೀಗ್ಲರ್ ಲಿಥಿಯಂ ಅಲ್ಕೈನ್‍ಗಳನ್ನು ಸಹ ಪರಿಶೀಲಿಸಿದನು. ಅಧಿಕ ಸಂಖ್ಯೆಯ ಅಣುಗಳನ್ನು ಚಕ್ರೀಯ ಬಂಧದಲ್ಲಿ ಹೊಂದಿರುವ ಪರಿಮಳ ಬೀರುವ ರಾಸಾಯನಿಕಗಳನ್ನು ಸಹ ಝೀಗ್ಲರ್ ತಯಾರಿಸಿದನು. 1963ರಲ್ಲಿ ಇಟಲಿಯ ಗಿಯುಲಿಯೋ ಜೊತೆಗೆ ಝೀಗ್ಲರ್ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 1/28/2020