ಕ್ಯಾಲ್ವಿನ್ ,ಮೆಲ್ವಿನ್ (1911--) - ೧೯೬೧
ಅಸಂಸಂ–ಜೀವ ರಸಾಯನಶಾಸ್ತ್ರ - ದ್ಯುತಿ ಸಂಶ್ಲೇಷಣಾ ಕ್ರಿಯೆಗಳಲ್ಲಿನ ಜೈವಿಕ ಸಂಶ್ಲೇಷಣೆಗಳನ್ನು ಸ್ಪುಟಗೊಳಿಸಿದಾತ.
ಮಿಷಿಗನ್,ಮಿನ್ನೆಸೊಟಾ ಹಾಗೂ ಮ್ಯಾಂಚೆಸ್ಟರ್ಗಳಲ್ಲಿ ವಿದ್ಯಾಭ್ಯಾಸ ಮಾಡಿದ ಕ್ಯಾಲ್ವಿನ್ 1937ರಲ್ಲಿ ಬರ್ಕ್ಲೆಯ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದಲ್ಲಿ ಬೋಧಕನಾಗಿ ವೃತ್ತಿ ಜೀವನ ಪ್ರಾರಂಭಿಸಿದನು.1946ರ ವೇಳೆಗೆ ರೇಡಿಯೋ ಸಮಸ್ಥಾನಿ (Isotope) ಪಟ್ಟೀಕರಣ ಹಾಗೂ ವರ್ಣಾಲೇಖದಂತಹ (Chromatography) ಸೂಕ್ಷ್ಮಮಾಪನದ ವಿಧಾನಗಳು ಬಳಕೆಗೆ ಬಂದಿದ್ದವು. ಲಭ್ಯವಿದ್ದ ಈ ಹೊಸ ವಿಧಾನಗಳಿಂದ ದ್ಯುತಿಸಂಶ್ಲೇಷಣೆಯಂತಹ (Photosynthesis) ಸಂಕೀರ್ಣ ಕ್ರಿಯೆಯನ್ನು ಅರಿಯಲು ಕ್ಯಾಲ್ವಿನ್ ಪ್ರಯತ್ನಿಸಿದನು. ದ್ಯುತಿ ಸಂಶ್ಲೇಷಣಾ ಪ್ರಕ್ರಿಯೆಯಲ್ಲಿ ಸಸ್ಯಗಳು ಗಾಳಿಯಿಂದ ಇಂಗಾಲದ ಡೈ ಆಕ್ಸೈಡನ್ನು ಪಡೆದು, ಹಲವಾರು ಜಟಿಲ ಹಂತಗಳಲ್ಲಿ ಅದನ್ನು ಪಿಷ್ಟ ಹಾಗೂ ಆಮ್ಲಜನಕಗಳಿಗೆ ಮಾರ್ಪಡಿಸುತ್ತವೆ. ಹೀಗಾಗಿ ಸಸ್ಯಗಳಿಂದ ಪ್ರತಿ ವರ್ಷ ನೂರು ಕೋಟಿ ಟನಗಳಿಗೂ ಅಧಿಕ ಪ್ರಮಾಣದ ಆಮ್ಲಜನಕ ವಾತಾವರಣಕ್ಕೆ ಬಳುವಳುಯಾಗಿ ದೊರೆಯುತ್ತದೆ. ದ್ಯುತಿ ಸಂಶ್ಲೇಷಣಾ ಕ್ರಿಯೆ ಈ ಭೂಮಿಯಲ್ಲೇ ಪ್ರಥಮ ಹಾಗೂ ಜೀವನಾಧಾರದ ಮೂಲಕ್ರಿಯೆ.ಏಕೆಂದರೆ ಇಡೀ ಪ್ರಾಣಿವರ್ಗ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಸ್ಯಗಳ ಮೇಲೂ, ಹಾಗೂ ನೇರವಾಗಿ ಆಮ್ಲಜನಕ ಸಂಪನ್ನವಾದ ವಾತಾವರಣದ ಮೇಲೂ ತಮ್ಮ ಅಸ್ತಿತ್ವವನ್ನು ರೂಪಿಸಿಕೊಂಡಿವೆ. ಭೂಮಿಯ ಬಹು ದೀರ್ಘಾವಧಿಯ ಚರಿತ್ರೆಯಲ್ಲಿ ಅಮ್ಲಜನಕ ಲಭ್ಯತೆಯೇಅದಕ್ಕೊಂದು ವಿಶಿಷ್ಟ ಸ್ಥಾನವನ್ನು ತಂದಿತ್ತಿದೆ. ಕ್ಯಾಲ್ವಿನ್ ಕ್ಲೊರೆಲ್ಲಾ ಎನ್ನುವ ಏಕಕೋಶದ ಹಸಿರು ಪಾಚಿ ವಿಕಿರಣಯುಕ್ತ ಇಂಗಾಲದ ಡೈ ಆಕ್ಸೈಡನ್ನು ಕೆಲಕಾಲ ಹೀರುವಂತೆ ಮಾಡಿ, ಅದು ಹೀರಿದ ತಕ್ಷಣದ ಕೆಲ ಸೆಕೆಂಡುಗಳಲ್ಲಿ ಅದು ಒಳಗಾಗುವ ರಾಸಾಯನಿಕ ಕ್ರಿಯೆಗಳನ್ನು ಹಾಗೂ ಅದರ ಉತ್ಪನ್ನಗಳನ್ನು ಗುರುತಿಸಿದನು. ಇವು ಕ್ಯಾಲ್ಬಿನ್ ಚಕ್ರೀಯ ಕ್ರಿಯೆಗಳೆಂದೇ ಖ್ಯಾತ. ಕ್ಯಾಲ್ಬಿನ್ ತನ್ನ ಈ ಸಂಶೋಧನೆಗಳಿಂದ 1961ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಕ್ಯಾಲ್ಬಿನ್‍ನ ಇತ್ತೀಚಿನ ಸಂಶೋಧನೆಗಳು , ಸಸ್ಯಗಳಲ್ಲಿ ಜರುಗುವ ದ್ಯುತಿ ಸಂಶ್ಲೇಷಣಾ ಕ್ರಿಯೆಯನ್ನು ಕೃತಕವಾಗಿ ಸಾಧಿಸುವತ್ತ ಸಾಗುತ್ತಿವೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019