ಷ್ಟೋವ್‍ಡಿಂಜರ್, ಹೆರ್ಮಾನ್ (1881-1965) ೧೯೫೩
ಜರ್ಮನಿ-ಸಾವಯವ ರಸಾಯನಶಾಸ್ತ್ರ- ಪಾಲಿಮರ್ ರಸಾಯನಶಾಸ್ತ್ರದ ಸ್ಥಾಪಕ.
ಸ್ಟೋವ್‍ಡಿಂಜರ್, ಕೀಟೇನ್ಸ್, ಹಾಗೂ ಕಾಫಿಯಲ್ಲಿನ ಸುಗಂಧಕಾರಿಗಳ ಅನಾವರಣದಿಂದ ವೃತ್ತಿ ಜೀವನ ಪ್ರಾರಂಭಿಸಿದನು. 1920ರಿಂದ ರಬ್ಬರ್ ಬಗೆಗೆ ಆಸಕ್ತಿ ವಹಿಸಿದನು. ಆಗ ರಬ್ಬರ್’ಗಳನ್ನು ಕ್ರಮವಿಹೀನವಾದ ದೊಡ್ಡ ಅಣುಗಳ ಸಮಷ್ಟಿಯೆಂದು ಭಾವಿಸಲಾಗಿದ್ದಿತು. ಇವುಗಳ ರಾಸಾಯನಿಕ ಅಧ್ಯಯನ ಅಂತಹ ಗೌರವಾರ್ಹ ಕಾರ್ಯವಲ್ಲವೆಂದು ಪರಿಗಣಿತವಾಗಿದ್ದಿತು. 1920ರಲ್ಲಿ ಝೂರಿಕ್, ಫ್ರೀಬರ್ಗ್‍ನಲ್ಲಿ ರಬ್ಬರ್ ಅಧ್ಯಯನ ನಡೆಸಿದ ಸ್ಟೋವ್‍ಡಿಂಜರ್ ಇವು ಸಾಧಾರಣ ರಾಸಾಯನಿಕ ಬಂಧ ಹೊಂದಿ ಉದ್ದನೆಯ ಸರಣಿ ರೂಪದ ದೈತ್ಯ ಅಣುಗಳೆಂದು ಹೇಳಿದನು. ಮೊದಮೊದಲು ಇದಕ್ಕೆ ವಿರೋಧ ವ್ಯಕ್ತವಾಯಿತು. ಆದರೆ ಸ್ಟೋವ್‍ಡಿಂಜರ್ ಇದಕ್ಕೆ ಪುರಾವೆ ಒದಗಿಸುವ ಪ್ರಯೋಗಗಳನ್ನು ರೂಪಿಸಿದನಲ್ಲದೆ, ಇವುಗಳನ್ನು ರಾಸಾಯನಿಕವಾಗಿ ಮಾರ್ಪಡಿಸುವ ಮಾರ್ಗಗಳನ್ನು ಕಂಡು ಹಿಡಿದನು. ಕ್ಷ-ಕಿರಣದ ಅಧ್ಯಯನಗಳೂ ಸಹ ಷ್ಟೋವ್‍ಡಿಂಜರ್ ದೃಷ್ಟಿ ಸರಿಯೆಂದು ಸಾರಿದವು. ಇಲ್ಲಿಂದ ಬೃಹತ್ ಅಣುಗಳ ಬಗೆಗೆ ವೈಜ್ಞಾನಿಕ ವಲಯದಲ್ಲಿ ಆಸಕ್ತಿಗಳು ಕುದುರಿದವು. ರಬ್ಬರ್, ಪ್ಲಾಸ್ಟಿಕ್, ಅಂಟು ಪದಾರ್ಥಗಳ ಕೈಗಾರಿಕೆಗೆ ಷ್ಟೋವ್‍ಡಿಂಜರ್ ಸಂಶೋಧನೆಗಳು ವರದಾನವಾದವು. ಷ್ಟೋವ್ ಡಿಂಜರ್ ನೈಸರ್ಗಿಕ ಬಹ್ವಂಗಿಗಳ (Polymer) ಪ್ರಾಮುಖ್ಯತೆ ಅರಿತಿದ್ದನು. 1913ರಲಿ ಪ್ರತಿಯೊಂದು ವಂಶವಾಹಕದ ಬೃಹತ್ ಅಣುವೂ ಜೀವನದಲ್ಲಿ ನಿರ್ದಿಷ್ಟ ಕ್ರಿಯೆಯನ್ನು ನಿಯಂತ್ರಿಸುವುದೆಂದು ಸೂಚಿಸಿದ್ದನು. 1953ರಲ್ಲಿ ಸ್ಟೋವ್‍ಡಿಂಜರ್’ಗೆ ನೊಬೆಲ್ ಪ್ರಶಸ್ತಿ ದಕ್ಕಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019