ರಿಚರ್ಡ್, ಲಾರೆನ್ಸ್ ಮಿಲ್ಲಿಂಗ್‍ಟನ್ ಸಿಂಜ್ (1914-1994) ೧೯೫೨
ಬ್ರಿಟನ್-ರಸಾಯನಶಾಸ್ತ್ರ-ವರ್ಣಾಲೇಖ (Chromatography)ವಿಧಾನದ ಮುಂದಾಳು.
ರಿಚರ್ಡ್, 28 ಅಕ್ಟೋಬರ್ 1914 ರಂದು ಲಿವರ್‍ಪೂಲ್‍ನಲ್ಲಿ ಜನಿಸಿದನು. 1928ರಲ್ಲಿ ವಿಂಚೆಸ್ಟರ್ ಕಾಲೇಜಿಗೆ ಸೇರಿದ ರಿಚರ್ಡ್ 1931ರವರೆಗೆ ನೈಸರ್ಗಿಕ ಹಾಗೂ ಅಭಿಜಾತಶಾಸ್ತ್ರಗಳ ಅಧ್ಯಯನ ನಡೆಸಿದನು. 1933ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜನ್ನು ಸೇರಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಹಾಗೂ ಜೀವ ರಸಾಯನಶಾಸ್ತ್ರಗಳ ಅಧ್ಯಯನ ನಡೆಸಿದನು. 1936ರಿಂದ 1939ರವರೆಗೆ ಎನ್.ಡಬ್ಲ್ಯೂ.ಪೀರಿ ಕೆಳಗೆ ಸಂಶೋಧನಾ ವಿದ್ಯಾರ್ಥಿಯಾಗಿದ್ದನು 1939 ರಿಂದ 1941ರವರೆಗೆ ಲೀಡ್ಸ್‍ನಲ್ಲಿರುವ ಉಣ್ಣೆ ಪ್ರಯೋಗಾಲಯದಲ್ಲಿ ಕೆಲಸ ಮಾಡಿದನು. 1941ರಲ್ಲಿ ಕೇಂಬ್ರಿಜ್‍ನಿಂದ ಡಾಕ್ಟರೇಟ್ ಗಳಿಸಿದನು. 1943ರಲ್ಲಿ ಲಂಡನ್‍ನಲ್ಲಿರುವ ಲಿಸ್ಟರ್ ಇನ್ಸ್ಟಿಟಿಟ್ಯೂಟ್ ಆಫ್ಪ್ರಿವೆಂಟಿವ್ ಮೆಡಿಸಿನ್ ಸಂಸ್ಥೆಯ ಜೀವ ರಸಾಯನಶಾಸ್ತ್ರ ವಿಭಾಗ ಸೇರಿದನು. 1948ರಿಂದ ಅಬೆರ್ಡೀನ್‍ನ ಬುಕ್ಸ್‍ಬರ್ನ್‍ನಲ್ಲಿರುವ ರೊವೆಟ್ ಸಂಶೋಧನಾ ಸಂಸ್ಥೆಯ ಪ್ರೊಟೀನ್ ರಸಾಯನಶಾಸ್ತ್ರದ ವಿಭಾಗದ ಮುಖ್ಯಸ್ಥನಾದನು. ರಿಚರ್ಡ್1945ರಲ್ಲಿ ಮಾರ್ಟಿನ್ ಜೊತೆಗೆ ವರ್ಣಾಲೇಖ (Chromatography) ವಿಧಾನದ ಅಭಿವೃದ್ಧಿಗಾಗಿ ಶ್ರಮಿಸಿದನು. ಇದಾದ ನಂತರ ರಿಚರ್ಡ್ ಪೆಪ್ಪೈಡ್‍ಗಳ ಬೃಹತ್ ಅಣುಗಳು ಪ್ರತಿಕಾಯಗಳಾಗಿ (Antibody) ಪ್ರೋಟಿನ್‍ನ ಚಯಾಪಚಯಗಳಲ್ಲಿ (Metabolism) ಮಧ್ಯವರ್ತಿಗಳಾಗಿ ವಹಿಸುವ ಪಾತ್ರದ ಅಧ್ಯಯನ ನಡೆಸಿದನು. 1942ರಿಂದ ಮುಂದೆ ಆರು ವರ್ಷಗಳ ಕಾಲ ಗ್ರ್ಯಾಮಿಸಿಡಿನ್ ಗುಂಪಿನ ಪ್ರತಿಜೈವಿಕ (Antibiotic) ಪೆಪ್ಪೈಡ್‍ಗಳ ಮೇಲೆ ವಿಸ್ತೃತ ಸಂಶೋಧನೆ ನಡೆಸಿದನು. ರಿಚರ್ಡ್, ರೊವೆಟ್ ಸಂಶೋಧನಾ ಸಂಸ್ಥೆಯಲ್ಲಿ ಡಿ.ಪಿ ಕುಥ್‍ಬರ್ಟ್‍ಸನ್ ನೇತೃತ್ವದಲ್ಲಿ ಮೆಲುಕು ಹಾಕುವ ಪ್ರಾಣಿಗಳ ಜೀರ್ಣಕ್ರಿಯೆಯನ್ನು ಅರ್ಥೈಸಿಕೊಳ್ಳಲು ಯತ್ನಿಸಿದನು. ಮೆಲುಕುವ ಪ್ರಾಣಿಗಳ ಜೀರ್ಣಕ್ರಿಯೆಯಲ್ಲಿ ನೆರವಾಗುವ ಸೂಕ್ಷಜೀವಿಗಳು,ಪೆಪ್ಪೈಡ್, ಪ್ರೋಟಿನ್, ಸಸ್ಯಜನ್ಯ ಆಹಾರದ ವಿಭಜನೆ ಹಾಗೂ ಇತರ ಕ್ರಿಯೆಗಳು ರಿಚರ್ಡ್‍ನಿಂದ ಸಂಶೋಧನೆಗೊಳಗಾದವು. 1950ರಿಂದ ಡಿ,ಎಲ್.ಮೌಲ್ಡ್, ಎ.ಟಿಸೆಲಿಯಸ್‍ರೊಂದಿಗೆ ರಿಚರ್ಡ್ ಪಾಲಿಸ್ಯಾಖರೈಡ್‍ಗಳನ್ನು ವಿದ್ಯುತ್ಕಣ ಸಂಚಲನೆ (Electrophoresis) ವಿಧಾನದಿಂದ ಅತ್ಯಂತಿಕವಾಗಿ ಶೋಧಿಸಲು ಯತ್ನಿಸಿದನು. 1958ರಲ್ಲಿ ರಿಚರ್ಡ್ ನ್ಯೂಝಿಲ್ಯಾಂಡ್‍ನ ಹ್ಯಾಮಿಲ್ಟನ್‍ನಲ್ಲಿರುವ ರಾಕುರ ಪ್ರಾಣಿ ಸಂಶೋಧನಾಲಯದಲ್ಲಿ ಇ.ಜಿ. ವೈಟ್‍ನೊಂದಿಗೆ ಬೂಷ್ಟುಗಳ ವಿಷಯುಕ್ತ ಘಟಕಗಳನ್ನು ಬೇರ್ಪಡಿಸಿದನು. 1950ರಲ್ಲಿ ರಾಯಲ್ ಸೊಸೈಟಿ ಹಾಗೂ1952ರಲ್ಲಿ ರಾಯಲ್ ಸೊಸೈಟಿ ಆಫ್ಕೆಮಿಸ್ಟ್ರಿಯಫೆಲೋ ಗೌರವ ರಿಚರ್ಡ್ ದಕ್ಕಿದವು. 1952ರಲ್ಲಿ ಮಾರ್ಟಿನ್‍ನೊಂದಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯಿಂದ ರಿಚರ್ಡ್ ಗೌರವಿಸಲ್ಪಟ್ಟನು. ರಿಚರ್ಡ್ 18 ಆಗಸ್ಟ್ 1994ರಂದು ನಿಧನನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019