অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪೌಲಿಂಗ್, ಲಿನಸ್

ಪೌಲಿಂಗ್, ಲಿನಸ್

ಪೌಲಿಂಗ್, ಲಿನಸ್ (ಕಾರ್ಲ್) (1901-1994)  ೧೯೫೪

ಅಸಂಸಂ-ರಸಾಯನಶಾಸ್ತ್ರ-ರಾಸಾಯನಿಕ ಬಂಧ ವಿವರಿಸಿದಾತ-ಎರಡು ಬಾರಿ ನೊಬೆಲ್ ಪ್ರಶಸ್ತಿ ವಿಜೇತ.

ಪೌಲಿಂಗ್ ಓರೆಗಾನ್‍ನ ಹಳ್ಳಿಯಲ್ಲಿದ್ದ ಔಷಧಿಗಳ ವ್ಯಾಪಾರಿಯ ಮಗ.  ಪೌಲಿಂಗ್ ಒಂಬತ್ತು ವರ್ಷದವನಿರುವಾಗ ಆತನ ತಂದೆ ತೀರಿಕೊಂಡನು.  ಹನ್ನೊಂದು ವರ್ಷದ ಬಾಲಕನಾಗಿದ್ದಾಗ,ನಾನಾ ಬಗೆಯ ರಾಸಾಯನಿಕಗಳನ್ನು ಬಳಸುವಲ್ಲಿ ಆಸಕ್ತನಾಗಿದ್ದ ಪೌಲಿಂಗ್ ಹದಿನೈದನೇ ವಯಸ್ಸಿನ ವೇಳೆಗೆ ರಾಸಾಯನಿಕ ಇಂಜಿನಿಯರ್ ಆಗಬೇಕೆಂದು ನಿರ್ಧರಿಸಿದನು.  ಓರೆಗಾನ್‍ನ ಕೃಷಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಪೌಲಿಂಗ್ ಡಾಕ್ಟರೇಟ್ ಗಳಿಸಲು ಕ್ಯಾಲಿಫೋರ್ನಿಯಾ ಇನ್ವ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದನು.  ಇಲ್ಲಿ ನಿರಯವ ಸ್ಪಟಿಕಗಳ ಮೇಲೆ ಸಂಶೋಧನೆ ಮಾಡಿದನು.  ಅಸಾಧಾರಣ ಜ್ಞಾಪಕ ಶಕ್ತಿ ಹೊಂದಿದ್ದ ಪೌಲಿಂಗ್, ಸ್ಪಟಿಕದಲ್ಲಿನ ಅಣುಗಳ ನಿರ್ಧಾರಕ್ಕೆ ಯತ್ನಿಸಿದನು.  ಸಿಲಿಕಾನ್ ಹಾಗೂ ಕೆಲವು ಖನಿಜಗಳ ರಾಚನಿಕ ಸ್ವರೂಪ ನಿಗೂಢವೆನಿಸಿದ್ದಿತು.  ಈ ಬಗ್ಗೆಯೂ ಪೌಲಿಂಗ್ ಸಾಕಷ್ಟು ಚಿಂತನೆ ನಡೆಸಿದ್ದನು. 1925ರಲ್ಲಿ ಯುರೋಪಿಗೆ ತೆರಳಿದ ಪೌಲಿಂಗ್., ಜರ್ಮನಿಯಲ್ಲಿ ಝೋಮರ್ಫೆಲ್ಟ್’ನ ಮಾರ್ಗದರ್ಶನದಲ್ಲಿ ಎರಡು ವರ್ಷಗಳ ಕಾಲ ದುಡಿದನು.  ಇದರಿಂದ ಕ್ವಾಂಟಂ ಬಲವಿಜ್ಞಾನ ದೃಷ್ಟಿಯಲ್ಲಿ ರಾಸಾಯನಿಕ ಬಂಧಗಳನ್ನು ಅರ್ಥೈಸಿಕೊಳ್ಳಲು ನೆರವಾಯಿತು.

1930ರಲ್ಲಿ ಅಣುಗಳ ಬಂಧಗಳಿಗೆ ವಿವರಣೆ ನೀಡಲು ಸಮರ್ಥನಾದ ಪೌಲಿಂಗ್ ಆವರೆಗೆ ಅಜ್ಞಾತವಾಗಿದ್ದ ಹಲವಾರು ಹೊಸ ಸಾಧ್ಯತೆಗಳತ್ತ ಗಮನ ಸೆಳೆದನು. ಬರ್ಜಿಲಿಯಸ್ 1819ರಲ್ಲಿ ಸ್ಥಾಯಿ ವಿದ್ಯುದಾಕರ್ಷಣೆಯಿಂದ ಅಣು ಬಂಧಗಳಾಗುವುವೆಂದು ಹೇಳಿದ್ದನು. ಇದು ಆಯಾನಿಕ ಬಂಧಗಳಿಗೆ ಸರಿ . ಆದರೆ ಇದು ಎರಡು ಜಲಜನಕ ಪರಮಾಣುಗಳ ಮಧ್ಯದ ಬಂಧವನ್ನು ವಿವರಿಸಲಾರರು. ಆದ್ದರಿಂದ ಎಲೆಕ್ಟ್ರಾನ್ ಜೋಡಿಗಳ ಬಂಧ ಅನಿವಾರ್ಯವಾಗುತ್ತದೆ. ಇದು ಸಹ ಸಾಮರ್ಥ್ಯ ಬಂಧ (Covalent Bond). ಈ ಬಂಧಗಳ ಮಧ್ಯದ ವ್ಯತ್ಯಾಸಗಳ ಸ್ಫಷ್ಟೀಕರಣದಲ್ಲಿ ಪೌಲಿಂಗ್ ಪಾತ್ರ ಅನನ್ಯ.  ರಾಸಾಯನಿಕಗಳ ಬಂಧ ಸಾಮಥ್ರ್ಯ ಅಳೆಯುವ ವೈದ್ಯುತ್ ಋಣಾತ್ಮಕ ಮಾಪನೆಯನ್ನು ಪೌಲಿಂಗ್ ಪರಿಚಯಿಸಿದನು. 1927ರಲ್ಲಿ ಕ್ಯಾಲಿಫೋರ್ನಿಯಾಕ್ಕೆ ಮರಳಿದ ಪೌಲಿಂಗ್, 35 ವರ್ಷಗಳಿಗೂ ದೀರ್ಘ ಕಾಲ ಅಲ್ಲಿಯೇ ಸೇವೆ ಸಲ್ಲಿಸಿದನು. 1930ರಲ್ಲಿ ಬೈಜಿಕ ರಾಸಾಯನಿಕಗಳ ಅಧ್ಯಯನಕ್ಕಿಳಿದ ಪೌಲಿಂಗ್, ಅಮೈನೋ ಆಮ್ಲ, ಪೆಸ್ಟೈಡ್ಸ್‍ಗಳ ರಾಚನಿಕ ಸ್ವರೂಪ ನಿರ್ಧರಿಸಲು ಪ್ರಾರಂಭಿಸಿದನು.  ಬೈಜಿಕ ರಚನೆಗಳಲ್ಲಿ ಪ್ರಮುಖವಾದ ವಿಭಿನ್ನ ರಾಚನಿಕ ಸ್ವರೂಪ ಹೊಂದಿದ ಪ್ರೋಟಿನ್‍ಗಳ ಎರಡು ಬಗೆಗಳನ್ನು ಗುರುತಿಸಿದನು.  ಅರಿವಳಿಕೆ, ಜ್ಞಾಪಕ ಶಕ್ತಿಗೆ ಸಂಬಂಧಿಸಿದ ಬೈಜಿಕ ರಾಸಾಯನಿಕ ಕ್ರಿಯೆಗಳ ಅಧ್ಯಯನದಲ್ಲಿ ಪೌಲಿಂಗ್ ಕ್ರಿಯಾಶೀಲನಾಗಿದ್ದನು.  ಡೆಲ್‍ಬ್ರಕ್ ಜೊತೆಗೆ, ಪ್ರತಿಕಾಯಗಳ (Anti Body). ಕಾರ್ಯವಿಧಾನ ಹಾಗೂ ರಚನೆಯ ಅಭ್ಯಾಸ ಮಾಡಿದನು. 1940ರಲ್ಲಿ ಸಿಕೆಲ್ ಕೋಶದ ರೋಗದ ಬಗೆಗೆ ಪೌಲಿಂಗ್ ಹೊಸ ಬೆಳಕು ಚೆಲ್ಲಿದನು.  ಹಿಮೊಗ್ಲೋಬಿನ್‍ನಲ್ಲಿನ ಅಮೈನೋ ಆಮ್ಲದ ಪ್ರಮಾಣದಲ್ಲಿನ ಏರುಪೇರುಗಳಿಂದ ಅನುವಂಶಿಕವಾಗಿ ಬರುವ ರಕ್ತ ಹೀನತೆಯ ರೋಗವಿದು.  ಇದರಿಂದ, ಅಣುಮಟ್ಟದಲ್ಲಿನ ನ್ಯೂನತೆಗಳು ಹೇಗೆ ರೋಗ ಕಾರಣವಾಗಬಲ್ಲವೆಂದು ಸಾಕ್ಷ್ಯಾಧಾರ ಒದಗಿಸಿದ ಮೊದಲಿಗನೆಂದು ಖ್ಯಾತಿ ಪೌಲಿಂಗ್‍ಗೆ ದಕ್ಕಿತು.  ಹಲವಾರು ರೋಗ, ಹಾಗೂ ವೃದ್ಧಾಪ್ಯದ ತೊಂದರೆಗಳಿಗೆ ವಿಟಮಿನ್ ಸಿ ರಾಮಬಾಣವೆಂಬ ಪೌಲಿಂಗ್ ದೃಷ್ಟಿಗೆ ಮನ್ನಣೆ ದಕ್ಕಲಿಲ್ಲ.  ವಿಶ್ವ ಶಾಂತಿಗಾಗಿ ತನ್ನದೇ ಆದ ರೀತಿಯಲ್ಲಿ ಪೌಲಿಂಗ್ ಶ್ರಮಿಸಿದನು.  ಪೌಲಿಂಗ್ 1954ರಲ್ಲಿ ರಸಾಯನಶಾಸ್ತ್ರಕ್ಕೆ 1962ಲ್ಲಿ ವಿಶ್ವ ಶಾಂತಿಗೆ ಪೌಲಿಂಗ್ ಎರಡು ಬಾರಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.  ಪೌಲಿಂಗ್ ಜಗತ್ತು ಕಂಡ ವೈಜ್ಞಾನಿಕ ಅದ್ಭುತಗಳಲ್ಲೊಬ್ಬನೆಂದು ದಾಖಲಾಗಿದ್ದಾನೆ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 3/4/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate