ಸ್ಟ್ಯಾನ್ಲಿ, ವೆಂಡೆಲ್ ಮೆರೆಡಿತ್ (1909-1997) ೧೯೪೬
ಅಸಂಸಂ-ಜೀವ ರಸಾಯನಶಾಸ್ತ್ರ-ವೈರಸ್‍ಶಾಸ್ತ್ರ- ಸ್ಫಟಿಕ ರೂಪಿ ವೈರಸ್ ಪ್ರತ್ಯೇಕಿಸಿದ ಮೊದಲಿಗ
ಶಾಲಾ ಬಾಲಕನಾಗಿದ್ದಾಗ ಕಾಲ್ಚೆಂಡಾಟದ ಗೀಳು ಹೊಂದಿದ್ದ ಸ್ಟ್ಯಾನ್ಲಿ ಈ ಆಟದ ತರಬೇರುದಾರನಾಗಬೇಕೆಂದು ಬಯಸಿದ್ದನು. ಇಲಿನಾಯ್ ವಿಶ್ವವಿದ್ಯಾಲಯದಲ್ಲಿ ಪದವಿಗೆ ಸೇರಿದ ನಂತರ,ರಸಾಯನಶಾಸ್ತ್ರದಲ್ಲಿ ತನಗಿರುವ ಮೂಲ ಆಸಕ್ತಿಯನ್ನು ಗುರುತಿಸಿಕೊಂಡನು. 1929ರಲ್ಲಿ ಪದವಿಗಳಿಸಿ ಜರ್ಮನಿಯಲ್ಲಿ ವೀಲ್ಯಾಂಡ್ ಕೈ ಕೆಳಗೆ ಕೆಲಸ ಮಾಡಿದನು. 1931ರಲ್ಲಿ ಪ್ರಿನ್ಸ್‍ಟನ್‍ನ ರಾಕ್ಫೆಲರ್ ಸಂಸ್ಥೆ ಸೇರಿದನು. ಇದೇ ಸಮಯದಲ್ಲಿ ನಾರ್ಥ್ರೋಪ್ ಹಲವಾರು ಕಿಣ್ವಗಳು (Enzymes) ಹರಳುಗಟ್ಟಿಸಬಹುದಾದ ಪ್ರೋಟಿನ್‍ಗಳೆಂದು ಸ್ಪಷ್ಟಪಡಿಸಿದ್ದನು. ವೈರಸ್‍ಗಳನ್ನು ಈ ಬಗೆಯಲ್ಲಿ ಸ್ಪಟಿಕ ರೂಪದಲ್ಲಿ (Crystalline Form) ಪಡೆಯಲು ಸ್ಟ್ಯಾನ್ಲಿ ಯತ್ನಿಸಿದನು. ವೈರಸ್‍ಗಳು, ಬಹು ಸೂಕ್ಷ್ಮಜೀವಿಗಳಾಗಿದ್ದು ಇವುಗಳನ್ನು ಬ್ಯಾಕ್ಟೀರಿಯಾಗಳಂತೆ ಶೋಧಿಸಿ ಪಡೆಯಲಾಗುವುದಿಲ್ಲ. ಅಲ್ಲದೆ ಇವು ದೇಹದ ಹೊರಗೆ ತಟಸ್ಥವಾಗಿದ್ದು ಒಳ ಸೇರಿದ ತಕ್ಷಣ ವೃದ್ದಿಗೊಳ್ಳುತ್ತವೆ. ಸ್ಟ್ಯಾನ್ಲಿ ಮೊದಲಿಗೆ ತಂಬಾಕಿಗೆ ಪಟ್ಟೆ ರೋಗ ತರುವ ವೈರಸ್‍ಗಳನ್ನು ಆಯ್ದುಕೊಂಡನು. 1935 ರಲ್ಲಿ ಸೂಕ್ಷ್ಮ ಸೂಜಿ ರೂಪದ ಹರಳುಗಳಾಗಿ ಇವನ್ನು ಪಡೆಯುವುದು ಸಾಧ್ಯವಾಯಿತು. 1938ರಲ್ಲಿ ಬೇರೆಯವರು ಈ ಸ್ಪಟಿಕಗಳನ್ನು ನ್ಯೂಕ್ಲಿಯೋಪ್ರೋಟೀನ್‍ಗಳೆಂದು ಗುರುತಿಸಿದರು. ಸ್ಟ್ಯಾನ್ಲಿಯ ಸಂಶೋಧನೆಗಳು ಹರಳು ರೂಪದ ರಾಸಾಯನಿಕಗಳೂ ಜೀವಿಗಳಾಗಿರಲು ಸಾಧ್ಯವೆಂದು ಸಾರಿತು. ಸೋಂಕು ತಾಗಿಸುವ ಸಾಮರ್ಥ್ಯ ಹೊಂದಿರುವ ವೈರಸ್‍ನ ಅಂಗ ನ್ಯೂಕ್ಲಿಯಿಕ್ ಆಮ್ಲದ ಭಾಗವಾಗಿರುವುದರಿಂದ ಜೀವಿಗಳನ್ನು ರಾಸಾಯನಿಕ ತಳಹದಿಯಿಂದ ನೋಡಲು ಇದು ಸಾಧ್ಯವಾಗಿಸಿತು. ಎರಡನೇ ಜಾಗತಿಕ ಯುದ್ದದಲ್ಲಿ ಸ್ಟ್ಯಾನ್ಲಿ ಇನ್’ಫ್ಲೂಯೆಂಜಾ ವೈರಸ್‍ನ್ನು ಪ್ರತ್ಯೇಕಿಸಿ, ಅದಕ್ಕೆ ಲಸಿಕೆಯನ್ನು ಸಹ ಪಡೆದನು. 1946ರಲ್ಲಿ ಸ್ಟ್ಯಾನ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 11/23/2019