ಡೀಲ್ಸ್, ಒಟ್ಟೋ (ಪೌಲ್, ಹರ್ಮಾನ್)(1876-1954 ) ೧೯೫೦
ಜರ್ಮನಿ -ಸಾವಯವ ರಸಾಯನಶಾಸ್ತ್ರ-ಡೀಲ್ಸ್ ಆಲ್ಡರ್ ಪ್ರತಿಕ್ರಿಯೆಯ ಸಹ ಅನಾವರಣಕಾರ.
ಪ್ರತಿಭಾವಂತ ಕುಟುಂಬಕ್ಕೆ ಸೇರಿದ್ದ ಡೀಲ್ಸ್ ,ಇ.ಫಿಷರ್ ಜೊತೆ ಬರ್ಲಿನ್‍ನಲ್ಲಿ ರಸಾಯನಶಾಸ್ತ್ರದ ಪದವಿ ಪಡೆದನು. ಡೈಯಾಕ್ಸೈಡ್ ಹೊರತಾದ ಹೊಸ ಆಕ್ಸೈಡ್‍ನ್ನು ಕಂಡು ಹಿಡಿದು ಇದನ್ನು ಟ್ರೈ ಕಾರ್ಬನ್ ಡಯಾಕ್ಸೈಡ್ ಎಂದು ಕರೆದನು. ಮಯೋನಿಕ್‍ಆಮ್ಲವನ್ನು (P205 ) ನಿರ್ಜಲಗೊಳಿಸಿ (Detrydrate) ಡೀಲ್ಸ್ ಇದನ್ನು ಪಡೆದಿದ್ದನು. ಚಿತ್ರಕಲೆಯಲ್ಲಿ ಆಸಕ್ತನೂ , ಹಾಸ್ಯಮತಿಯೂ ಆದಿದ್ದ ಡೀಲ್ಸ್ ಮಿತಭಾಷಿಯೆಂದು ಖ್ಯಾತನಾಗಿದ್ದನು. 1927ರಲ್ಲಿ ಡೀಲ್ ಪಿತ್ತಾಶ್ಮರಿಯಿಂದ (ಗಾಲ್ ಸ್ಟೋನ್) ಕೊಲೆಸ್ಟರಾಲ್‍ನ್ನು ಶುದ್ದ ರೂಪದಲ್ಲಿ ಪಡೆದನು. ಕೊಲೆಸ್ಟರಾಲ್‍ನ್ನು ಸೆಲೇನಿಯಂ ಜೊತೆ ಕಾಯಿಸಿದಾಗ, ಅದು ನಿರ್ಜಲಗೊಂಡು ಹೈಡ್ರೋಕಾರ್ಬನ್ ಉತ್ಪನ್ನ ದಕ್ಕುವುದೆಂದು ತೋರಿಸಿದನು. ಈಗ ಇವನ್ನು ಡೀಲ್ಸ್ ಸ್ಟೆ ಹೈಡ್ರೋಕಾರ್ಬನ್‍ಗಳೆಂದು ಗುರುತಿಸಲಾಗುತ್ತದೆ. ಇದರಿಂದಾಗಿ ಜೈವಿಕವಾಗಿ ಬಹು ಪ್ರಮುಖವಾಗಿರುವ ಈ ಸ್ಟೆರಾಯಿಡ್ ಗುಂಪುಗಳ ಮೂಲ ಅಣು ಹಂದರ ಒಂದೇ ಎನ್ನುವುದು ಖಚಿತವಾಯಿತು. 1934ರಲ್ಲಿ ಡೀಲ್ಸ್‍ನ ಹೈಡ್ರೋಕಾರ್ಬನ್‍ನ್ನು ಸಂಶ್ಲೇಷಿಸಿದ (Synthesis) ಇತರರು, ಅದರ ರಾಚನಿಕ ಸ್ವರೂಪ ಅಭ್ಯಸಿಸಿ, ಉಳಿದೆಲ್ಲ ಸ್ಟೆರಾಯಿಡ್‍ಗಳೂ, ಮೂಲತ:ವಾಗಿ ಡೈಯಿಲ್ ಹೈಡ್ರೋಕಾರ್ಬನ್‍ಗಳ ನಾಲ್ಕು ಉಂಗುರಗಳಿಂದಾಗುವುದೆಂದು ತೋರಿಸಿ, ಸ್ಟೆರಾಯಿಡ್‍ಗಳ ಅಂತರಂಗ ಅರಿಯುವಲ್ಲಿ ಸಮರ್ಥರಾದರು. 1928ರಲ್ಲಿ ಸಹಾಯಕ ಆಲ್ಡರ್ ಜೊತೆ ಸೇರಿ ಡೀಲ್ಸ್ ಸಾರ್ವತ್ರಿಕವಾದ ಈಗ ಡೀಲ್ಸ್ ಆಲ್ಡರ್ ಪ್ರತಿಕ್ರಿಯ್ದೆಯೆಂದು ಖ್ಯಾತವಾಗಿರುವ ಸಂಶ್ಲೇಷಣೆಯನ್ನು ಕಂಡು ಹಿಡಿದನು. ಈ ಸಂಶ್ಲೇಷಣೆಯಿಂದ ಬಹು ಸಂಕೀರ್ಣವಾದ ಲೈಂಗಿಕ ಚೋದನಿಕೆ, ಸರ್ಪವಿಷ ಡಿ ಜೀವಸತ್ವ, ವರ್ಣಕದಂತಹ (Pigment) ಸಾವಯವ ಸಂಯುಕ್ತಗಳನ್ನು ಪಡೆಯಲು ಸಾಧ್ಯ. 1950ರಲ್ಲಿ ಡೀಲ್ಸ್ ಹಾಗೂ ಆಲ್ಡರ್ ನೊಬೆಲ್ ಪ್ರಶಸ್ತಿ ಪುರಸ್ಕೃತರಾದರು. ಎರಡನೇ ಜಾಗತಿಕ ಯುದ್ದದಲ್ಲಿ ಡೀಲ್ಸ್‍ನ ಇಬ್ಬರು ಗಂಡು ಮಕ್ಕಳು ನಿಧನರಾದರು. ಈತನ ಪ್ರಯೋಗಾಲಯ , ಪುಸ್ತಕ ಭಂಡಾರ ವೈಮಾನಿಕ ದಾಳಿಗೊಳಗಾದವು. ಇದರಿಂದ ಜೀವನಾಸಕ್ತಿ ಕಳೆದುಕೊಂಡ ಡೀಲ್ಸ್ 1944ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದನು. ಆದರೆ ವಿಶ್ವವಿದ್ಯಾಲಯ ಇದನ್ನು ಪುರಸ್ಕರಿಸಲಿಲ್ಲ. ಮುಂದೆ 1946ರಲ್ಲಿ ಡೀಲ್ಸ್ ಇಲ್ಲೇ ರಸಾಯನಶಾಸ್ತ್ರದ ನಿರ್ದೇಶಕನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/2/2020