ಕುರ್ಟ್, ಆಲ್ಡರ್ –(1902-1958) ೧೯೫೦
ಜರ್ಮನಿ-ರಸಾಯನಶಾಸ್ತ್ರ-ತ್ರಿದಿಶಾ (Stereo) ಹಾಗೂ ಸಾವಯವ ರಸಾಯನಶಾಸ್ತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದಾತ.
ಆಲ್ಡರ್ 10 ಜುಲೈ 1902ರಂದು ಕೊನಿಂಗ್‍ಷುಟ್‍ನಲ್ಲಿ ಜನಿಸಿದನು. ಇದು ಕೈಗಾರಿಕಾ ಪ್ರದೇಶವಾಗಿದ್ದಿತು. ಆಲ್ಡರ್ರ್‍ನ ವಿದ್ಯಾಭ್ಯಾಸ ಇಲ್ಲೇ ಜರುಗಿತು. ಮೊದಲನೇ ಜಾಗತಿಕ ಯುದ್ದದ ನಂತರ ರಾಜಕೀಯ ಕಾರಣಗಳಿಗಾಗಿ ಈ ಊರನ್ನು ತೊರೆಯುವ ಅನಿವಾರ್ಯತೆ ಆಲ್ಡರ್ ಕುಟುಂಬಕ್ಕೆ ಬಂದೊದಗಿತು. ಆಲ್ಡರ್ 1922ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದ ಅಧ್ಯಯನ ಮುಗಿಸಿ, ಮುಂದೆ 1926ರಲ್ಲಿ ಕೀಲ್‍ನಿಂದ ಒಟ್ಟೋ ಡೀಲ್ಸ್ ಕೆಳಗೆ ಡಾಕ್ಟರೇಟ್ ಗಳಿಸಿದನು. 1930ರಲ್ಲಿ ಕೀಲ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದ ಪ್ರವಾಚಕನಾಗಿ ನೇಮಕಗೊಂಡನು. 1936ರಲ್ಲಿ ಲೆವೆರ್ ಕುಸೆನ್‍ನಲ್ಲಿರುವ ಎ ಜಿ ಫಾರ್ಜಿನ್ ಕಾರ್ಖಾನೆಯ ಪ್ರಯೋಗಾಲಯದ ಮುಖ್ಯಸ್ಥನಾಗಿ ಸೇರಿಕೊಂಡು ಸಂಶ್ಲೇಷಿತ (Synthesised) ರಬ್ಬರ್‍ನಲ್ಲಿ ಕೆಲ ಸಂಶೋಧನೆಗಳನ್ನು ಕೈಗೊಂಡನು. 1940ರಲ್ಲಿ ಕೊಲೋನ್ ವಿಶ್ವವಿದ್ಯಾಲಯದ ಪ್ರಾಯೋಗಿಕ ರಸಾಯನಶಾಸ್ತ್ರ ಹಾಗೂ ರಾಸಾಯನಿಕ ತಂತ್ರಜ್ಞಾನದ ಮುಖ್ಯಸ್ಥನಾದನು. 1944ರಲ್ಲಿ ಬರ್ಲಿನ್, 1950ರಲ್ಲಿ ಮಾರ್ಬರ್ಗ್ ವಿಶ್ವವಿದ್ಯಾಲಯಗಳಿಂದ ಬಂದ ಆಹ್ವಾನಗಳನ್ನು ತಿರಸ್ಕರಿಸಿದನು. 1927ರಲ್ಲಿ ಆಲ್ಡರ್, ಒಟ್ಟೋ ಡೀಲ್ಸ್‍ನೊಂದಿಗೆ ಸಾವಯವ ರಸಾಯನಶಾಸ್ತ್ರದಲ್ಲಿನ ಸಮಸ್ಯೆಗಳ ಕ್ರಮಬದ್ಧ ಅಧ್ಯಯನ ನಡೆಸಿದನು. ಇದು ಥೀನ್ ಸಂಶ್ಲೇಷಣಾ ತತ್ತ್ವದಲ್ಲಿ ಫಲಪ್ರದಗೊಂಡಿತು. ಒತ್ತಾಯಿತ ಇಂಗಾಲದ ಉಂಗುರಗಳಲ್ಲಿನ ದ್ವಿ- ಬಂಧ ಅಣು ಮಟ್ಟದಲ್ಲಿನ ಮರು ಜೋಡಣೆಯ ವಿದ್ಯಾಮಾನಗಳನ್ನು ಆಲ್ಡರ್ ಅಭ್ಯಸಿಸಿದನು. ಆಲ್ಡರ್ 150 ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದನು. ಇದಕ್ಕಾಗಿ ಜರ್ಮನಿಯ ರಾಸಾಯನಿಕ ಶಾಸ್ತ್ರಜ್ಞರ ಸಂಘದ ಎಮಿಲ್ ಫಿûಷ್ಕರ್ ಸ್ಮಾರಕ ಪದಕ ಗಳಿಸಿದನು. 1950ರಲ್ಲಿ ಕೊಲೊನ್ “ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗ ಆಲ್ಡರ್‍ಗೆ ಗೌರವ ಡಾಕ್ಟರೇಟ್ ನೀಡಿತು. ತ್ರಿದಿಶಾ ಹಾಗೂ ಸಾವಯವ ರಸಾಯನಶಾಸ್ತ್ರದಲ್ಲಿನ ಸಂಶೋಧನೆಗಳಿಗಾಗಿ ಆಲ್ಡರ್ 1950ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019