ಹ್ಯಾನ್ಸ್, ಕಾರ್ಲ್ ಆಗಸ್ಟ್ ಸೈಮನ್ ವಾನ್ ಅಯ್ಲರ್ (1873-1964)
ಜರ್ಮನಿ-ರಸಾಯನಶಾಸ್ತ್ರ-
ಹ್ಯಾನ್ಸ್ 15 ಫೆಬ್ರವರಿ 1873 ರಂದು ಜರ್ಮನಿಯ ಆಗ್ಸ್,ಬರ್ಗ್‘ನಲ್ಲಿ ಜನಿಸಿದನು. ಈತನ ತಂದೆ ರಾಯಲ್ ಬವೇರಿಯನ್ ರೆಜಿಮೆಂಟ್‍ನಲ್ಲಿ ಕ್ಯಾಪ್ಟನ್ ಹುದ್ದೆಯಲ್ಲಿದ್ದನು. ಹ್ಯಾನ್ಸ್ ಮ್ಯೂನಿಕ್ ಅಕಾಡೆಮಿ ಆಫ್ಪೇಟಿಂಗ್‍ನಲ್ಲಿ ವ್ಯಾಸಂಗ ಮಾಡಿ ಕಲಾ ಪದವಿ ಗಳಿಸಿದನು. ಈ ಸಂದರ್ಭದಲ್ಲಿ ಬಣ್ಣಗಳ ಬಗೆಗೆ, ರೋಹಿತದ ಕುರಿತಾದಂತೆ ಮೂಡಿದ ಕುತೂಹಲ ಹ್ಯಾನ್ಸ್‍ನನ್ನು ವಿಜ್ಞಾನದತ್ತ ಸೆಳೆಯಿತು. ಹೀಗಾಗಿ ಬರ್ಲಿನ್ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗ ಸೇರಿ ಎಮಿಲ್ ಫಿಷರ್;ನಿಂದ ರಸಾಯನಶಾಸ್ತ್ರ, ಮ್ಯಾಕ್ಸ್ ಪ್ಲಾಂಕ್‍ನಿಂದ ಭೌತಶಾಸ್ತ್ರದ ಮೂಲ ತತ್ತ್ವಗಳನ್ನು ಅರಿತನು. 1895 ರಲ್ಲಿ ಡಾಕ್ಟರೇಟ್ ಗಳಿಸಿದನು. ಇದಾದ ನಂತರ ಕೆಲಕಾಲ ಭೌತರಸಾಯನಶಾಸ್ತ್ರದಲ್ಲಿ ಪರಿಶ್ರಮಿಸಿದನು. 1896 ರಿಂದ ಮುಂದೆ ಒಂದು ವರ್ಷ ಗಟ್ಟಿಂಜೆನ್‍ನಲ್ಲಿ ಡಬ್ಲ್ಯೂ.ನೆರ್ನ್ಸ್’ಸ್ಟ್ ನ ಮಾರ್ಗದರ್ಶನದಲ್ಲಿ ತರಬೇತು ಪಡೆದನು. ನಂತರ ಸ್ವೀಡನ್‍ನ ಸ್ಟಾಕ್‍ಹೋಂ ವಿಶ್ವ ವಿದ್ಯಾಲಯದಲ್ಲಿ ಸ್ವಾಂತೆ ಅರೇನಿಯಸ್, ಸಹಾಯಕನಾಗಿ ದುಡಿದನು. ವಾನ್ ಟಿ ಹೊಫ್’ನ ಪ್ರಯೋಗಾಲಯದಲ್ಲಿ ಕೆಲಕಾಲ ಶ್ರಮಿಸಿದನು. ಇವೆರೆಲ್ಲರ ಪ್ರಭಾವವೂ ಈತನ ಮೇಲೆ ದಟ್ಟವಾಗಿದ್ದಿತು. ಮುಂದಿನ ದಿನಗಳಲ್ಲಿ ಹ್ಯಾಂಟ್ಸ್‍ಝ್ ಮತ್ತು ಥೀಲ್‍ರ ಪ್ರಯೋಗಾಲಯಗಳಿಗೆ ಭೇಟಿ ನೀಡಿದ ನಂತರ ಹ್ಯಾನ್ಸ್ ಆಸಕ್ತಿ ಸಾವಯವ ರಸಾಯನಶಾಸ್ತ್ರದಲ್ಲಿ ಕೇಂದ್ರಿಕೃತವಾಯಿತು. 1906ರಲ್ಲಿ ಸ್ಟಾಕ್ ಹೋಂನ ರಾಯಲ್ ಯೂನಿವರ್ಸಿಟಿಯ ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕನಾದನು. 1904ರಲ್ಲಿ ಹ್ಯಾನ್ಸ್ ಕಿಣ್ವಗಳು ಹಾಗೂ ಅವುಗಳ ಅಪಚಯ ಕುರಿತಾದಂತೆ ಅಧ್ಯಯನ ನಡೆಸಿ, ಈ ಕ್ರಿಯೆಯಲ್ಲಿ ಉತ್ಪನ್ನವಾಗುವ ಲವಣಗಳು ಹಾಗೂ ಅವುಗಳ ಜಲಸಂಶ್ಲೇಷಣೆಯನ್ನು (Hydrolysis) ವಿವರಿಸಿದನು. ರುಡ್‍ಬರ್ಗ್, ಓಲ್ಯಾಂಡರ್‍ರ ಸಹಯೋಗದಲ್ಲಿ ಸಸ್ಯಗಳ ಭೌತರಾಸಾಯನಿಕ ಕ್ರಿಯಾಶೀಲತೆ,ಬೂಷ್ಟುಗಳ ರಾಸಾಯನಿಕ ಸ್ವರೂಪ ವಿವರಿಸಿದನು. ಜೊಸೆ¥sóïಸನ್‍ನೊಂದಿಗೆ ಕಿಣ್ವ (Enzyme) ಸ್ಯಾಖರೇಸ್ ಹಾಗೂ ಕೆಟಾಲೇಸ್‍ಗಳ ಮೇಲೆ ಪ್ರಯೋಗಗಳನ್ನು ಹಮ್ಮಿಕೊಂಡು ಹುದುಗುವಿಕೆಯನ್ನು (Fermentation) ಅರ್ಥೈಸಿದನು. ಪೌಲ್ ಕರೀರ್, ಮಾರ್ಗರೇಟ್ ರೈಡ್‍ಬೂಮ್‍ರೊಂದಿಗೆ ವಿಟಮಿನ್‍ಗಳನ್ನು ಕುರಿತಾಗಿ ವಿಸ್ತೃತ ಅಧ್ಯಯನ ನಡೆಸಿದನು. ಆಲ್ಕೋಹಾಲಿಕ್ ಹುದುಗುವಿಕೆಯ ಮೇಲೆ ನಡೆಸಿದ ಸಂಶೋಧನೆಗಳಿಗಾಗಿ ಹ್ಯಾನ್ಸ್ 1929ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ತನ್ನ ಸಂಶೋಧನೆಗಳೆಲ್ಲವನ್ನು ಕ್ರೋಢೀಕರಿಸಿ,1935ರಲ್ಲಿ ಕೆಮಿಡೆರ್ ಎಂಝೈಮ್ ಕೃತಿ ಪ್ರಕಟಿಸಿದನು. ಇದು ಆಧುನಿಕ ಕಿಣ್ವಶಾಸ್ತ್ರದ ಪ್ರಥಮ ಸಮಗ್ರ ಕೃತಿಯೆಂದು ಖ್ಯಾತವಾಯಿತು. 1935ರ ನಂತರ ಹೆವಿಸೆಯೊಂದಿಗೆ ಕ್ಯಾನ್ಸರ್ ಗಡ್ಡೆಗಳ ಜೀವರಾಸಾಯನಿಕ ಸ್ವರೂಪದ ತನಿಖೆ ನಡೆಸಿದನಲ್ಲದೆ, ಇವುಗಳಲ್ಲಿನ ನ್ಯೂಕ್ಲಿಯರ್ ಆಮ್ಲಗಳ ಅಧ್ಯಯನಕ್ಕೆ ಪಟ್ಟೀಕೃತ ರಾಸಾಯನಿಕ ಸಂಯುಕ್ತಗಳನ್ನು ಬಳಸುವ ವಿಧಾನವನ್ನು ಪರಿಚಯಿಸಿದನು. ಜೀವ ರಸಾಯನಶಾಸ್ತ್ರದಲ್ಲಿ ನೂರಾರು ಜನರಿಗೆ ಸ್ಪೂರ್ತಿಯ ಸಲೆಯಾಗಿದ್ದ ಹ್ಯಾನ್ಸ್ 6 ನವೆಂಬರ್ 1964ರಂದು ತನ್ನ 91ನೇ ವಯಸ್ಸಿನಲ್ಲಿ ಮೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 1/28/2020