ಸ್ವೆಬರ್ಗ್, ಥಿಯೋಡೊರ್ (1884-1971) ೧೯೨೬
ಸ್ವೀಡನ್-ಭೌತರಸಾಯನಶಾಸ್ತ್ರ- ತೀವ್ರ ಕೇಂದ್ರಾಪಗಾಮಿ ಯಂತ್ರಗಳ (Ultra Centrifugal) ನಿರ್ಮಾಣಕ್ಕೆ ಯತ್ನಿಸಿದಾತ.
ಸ್ವೆಬರ್ಗ್, 1904ರಲ್ಲಿ ಉಪ್ಸಾಲ ವಿಶ್ವವಿದ್ಯಾಲಯಕ್ಕೆ ಸೇರಿದನು. ಜೈವಿಕ ಸಮಸ್ಯೆಗಳಿಗೆ ರಾಸಾಯನಿಕ ವಿಧಾನಗಳಿಂದ ಪರಿಹಾರ ಹುಡುಕುವುದು ಸ್ವೆಬರ್ಗ್‍ನ ಗುರಿಯಾಗಿದ್ದಿತು. ಸ್ಟೋಡಿಂಜರ್ ಪ್ರೊಟೀನ್ ಅಣುಗಳು ಹಿಮೋಗ್ಲೋಬಿನ್‍ಗೆ ಹೋಲಿಸಿದಂತೆ 68000 ಪಟ್ಟು ಭಾರವಿರುವುವೆಂದು ತಿಳಿಸಿದ್ದನು. ಜೈವ ರಸಕಗಳನ್ನು (Bio Serums) ಗುರುತ್ವದ ಬಲ ಮೀರುವಂತಹ ತೀವ್ರ ಕೇಂದ್ರಾಪಗಾಮಿ ಬಲಗಳಿಗೆ ಒಳಪಡಿಸಿದರೆ, ಪ್ರೋಟೀನ್‍ನಂತಹ ಭಾರದ ಅಣುಗಳು ಕೆಳೆಗೆಳೆಯಲ್ಪಡುತ್ತವೆ. ಪ್ಲಾಸ್ಮಾದಿಂದ ರಕ್ತ ಕಣಗಳನ್ನು, ಕೆನೆಯಿಂದ ಹಾಲನ್ನು ಬೇರ್ಪಡಿಸಲು ಈ ತಂತ್ರ ಬಳಕೆಯಲ್ಲಿದ್ದಿತು. ಆದರೆ ಪ್ರೋಟಿನ್‍ನಂತಹ ಭಾರದ ಅಣುಗಳನ್ನು ನೆಲೆಗೊಳಿಸುವುದು ಅಷ್ಟು ಸುಲಭವಲ್ಲ. ಇದಕ್ಕಾಗಿ ನಿಮಿಷಕ್ಕೆ 14000ರಿಂದ 900000ಆವರ್ತನೆಯನ್ನು ಸಾಧಿಸುವ ಯಂತ್ರಗಳು ಬೇಕು. ಇದನ್ನು ಬಳಸಿ ಪ್ರೊಟೀನ್ ಹಾಗೂ ಇತರ ಕಲಿಲಗಳನ್ನು (Colloids) ಶುದ್ಧ ರೂಪದಲ್ಲಿ ಪಡೆಯಬಹುದು. ಕಲಿಲಗಳು ಧನ ಅಥವಾ ಋಣ ವಿದ್ಯುದಾವಿಷ್ಟಗೊಂಡಿರುತ್ತವೆ (Electrically Charged) . ವಿದ್ಯುತ್ ಕ್ಷೇತ್ರದಲ್ಲಿ ಇವು ತಮ್ಮ ವಿರುದ್ಧ ಧೃವದೆಡೆಗೆ (Pole) ಹರಿಯುತ್ತವೆ. ಈ ವಿದ್ಯಾಮಾನವನ್ನು ಸ್ವೆಬರ್ಗ್, ತನ್ನ ವಿದ್ಯಾರ್ಥಿ ಟಿಸೆಲೇಯಸ್‍ನೊಂದಿಗೆ ವಿವರಿಸಿದನು. ಇದು ವಿದ್ಯುತ್ಕಣ ಸಂಚಲನ (Electrophoresis) ಎಂದು ಹೆಸರಾಗಿ ಜೀವ ರಸಾಯನಶಾಸ್ತ್ರದಲ್ಲಿ ಸಾರ್ವತ್ರಿಕ ಬಳಕೆ ಕಂಡಿತು. ಈಗ ಬೃಹತ್ ಜೈವಿಕ ಅಣುಗಳ ಬೇರ್ಪಡಿಸುವಿಕೆ ಸ್ಟೆಬರ್ಗ್ ವಿಧಾನ ಹಾಗೂ ಯಂತ್ರಗಳು ವಿಶ್ವಾದ್ಯಾಂತ ಬಳಕೆಯಲ್ಲಿವೆ. 1926ರಲ್ಲಿ ಸ್ವೆಬರ್ಗ್ ತನ್ನ ಸಾಧನೆಗಳಿಗಾಗಿ ನೊಬೆಲ್ ಪ್ರಶಸ್ತಿ ಗಳಿಸಿದನು. ಪ್ರವಾಹಿಯಲ್ಲಿ (Fluid) ಕಣಗಳು ನೆಲೆಗೊಳ್ಳುವ ವೇಗಕ್ಕೆ ಸ್ವೆಬರ್ಗ್ ಎಂದು ಹೆಸರಿಸಿ ಅವನನ್ನು ಗೌರವಿಸಲಾಗಿದೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/5/2020