ಸಿಗ್ಮಾಂಡಿ, ರಿಚರ್ಡ್ ಅಡಾಲ್ಫ್ (1865-1929) ೧೯೨೫
ಜರ್ಮನಿ-ಕಲಿಲ (Colloid) ರಸಾಯನಶಾಸ್ತ್ರ- ಸೂಕ್ಷ್ಮಾತಿಸೂಕ್ಷ್ಮದರ್ಶಕಶಾಸ್ತ್ರದ ಉಪಜ್ಞೆಕಾರ.
ಸಿಗ್ಮಾಂಡಿ, ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರಗಳ ಪದವಿ ಗಳಿಸಿ, ಜೆನಾದಲ್ಲಿದ್ದ ಗಾಜಿನ ಕಂಪನಿಯಲ್ಲಿ ಕೆಲಸಕ್ಕೆ ಸೇರಿದನು. ಗಟ್ಟಿಂಜೆನ್‍ನಲ್ಲಿ ಪ್ರಾಧ್ಯಾಪಕನಾಗಿದ್ದನು. ಕೊನೆಯವರೆಗೂ ಈ ಕಂಪನಿಯ ಸಾಹಚರ್ಯವನ್ನು ಸಿಗ್‍ಮಾಂಡಿ ತೊರೆಯಲಿಲ್ಲ. ಬಣ್ಣದ ಗಾಜುಗಳ ತಯಾರಿಕೆಯಲ್ಲಿರುವಾಗ ಕಲಿಲಗಳ ಬಗ್ಗೆ ಸಿಗ್‍ಮಾಂಡಿ ಆಸಕ್ತಿ ತಳೆದನು. 1903ರಲ್ಲಿ,ಸೂಕ್ಷ್ಮಾತಿಸೂಕ್ಷ್ಮದರ್ಶಕದ ತಂತ್ರ ಸಿಗ್‍ಮಾಂಡಿಯಿಂದ ಪ್ರಾರಂಭವಾಯಿತು. ಈ ತಂತ್ರದಲ್ಲಿ ಪ್ರತಿಚಯವನ್ನು (Specimen) ಕಪ್ಪು ಹಿನ್ನೆಲೆಯಲ್ಲಿರಿಸಿ, ತೀವ್ರ ಬೆಳಕಿಗೊಡ್ಡಿ ಪರಿಶೀಲಿಸಲಾಗುವುದು. ಆಗ ಸೂಕ್ಷ್ಮ ದರ್ಶಕದ ಸಾಮರ್ಥ್ಯ ಕಡಿಮೆಯಿದ್ದರೂ ಕಣಗಳನ್ನು ಬೆಳಕಿನ ಕಣಗಳಂತೆ ಸ್ಪಷ್ಟವಾಗಿ ನೋಡುವುದು ಸಾಧ್ಯ. ಮಹಾ ಕೇಂದ್ರಾಪಗಾಮಿ(Centrefugal) ತಂತ್ರ ಎಲೆಕ್ಟ್ರಾನ್ ಸೂಕ್ಷ್ಮ ದರ್ಶಕಗಳು ಬರುವವರೆಗೆ ಸಿಗ್‍ಮಾಂಡಿಯ ವಿಧಾನ ಭಾರಿ ಅನುಕೂಲವಾದ ಪರಿಶೋಧನಾ ಮಾರ್ಗವಾಗಿದ್ದಿತು. ಸಿಗ್‍ಮಾಂಡಿ ಈ ತಂತ್ರದಿಂದ ಹಲವಾರು ಕಲಿಲ ದ್ರಾವಣಗಳನ್ನು ವೀಕ್ಷಿಸಿ, ಕಣಗಳ ಗಾತ್ರ ನಿರ್ಧರಿಸಿದನು. ವೈದ್ಯುತ್ ಸ್ಥಾಯಿ ಬಲಗಳಿಂದ ಕಣಗಳು ಪರಸ್ಪರ ದೂರವಿರುವುದೆಂದು ಹೇಳಿದನು. ಜೀವ ರಸಾಯನಶಾಸ್ತ್ರದಲ್ಲಿ ಕಲಿಲಗಳ ಅಧ್ಯಯನಕ್ಕೆ ಭಾರಿ ಪ್ರಾಮುಖ್ಯತೆಯಿದೆ. ಸಿಗ್‍ಮಾಂಡಿಯಿಂದ ದ್ರಾವಣ, ಲೇಹ್ಯ, ಹೊಗೆ ಧೂಳು, ಬುರುಗುಗಳ ಅಧ್ಯಯನ ಸಾಧ್ಯವಾಯಿತು. 1925ರಲ್ಲಿ ಸಿಗ್‍ಮಾಂಡಿ ನೊಬೆಲ್ ಪ್ರಶಸ್ತಿ ಗಳಿಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019