ಸಾಡಿ ,ಫ್ರೆಡರಿಕ್ (1877-1956) ೧೯೨೧
ಬ್ರಿಟನ್-ರೇಡಿಯೋ ರಸಾಯನಶಾಸ್ತ್ರ-ವಿಕಿರಣ ಪಟು ಶೈಥಿಲ್ಯವನ್ನು (Radioactive Decay) ಪ್ರತಿಪಾದಿಸಿದಾತ.
ಏಳು ಮಕ್ಕಳ ಕುಟುಂಬದಲ್ಲಿ ಸಾಡಿ ಕೊನೆಯವನು. ಜಾಣನು, ಬಿಗಿ ನಿಲುವಿನವೂ ಆಗಿದ್ದ ಆತ ತನ್ನದೇ ಆದ ವ್ಯಕ್ತಿತ್ವ ರೂಪಿಸಿಕೊಂಡಿದ್ದನು. ಆಕ್ಸ್ಫರ್ಡ್’ನಿಂದರಸಾಯನಶಾಸ್ತ್ರದ ಪದವಿ ಗಳಿಸಿ ಮಾಂಟ್ರಿಯೆಲ್‍ನ ಮೆಕ್‍ಗಿಲ್ ವಿಶ್ವವಿದ್ಯಾಲಯದಲ್ಲಿ ಸಹಾಯಕನಾದನು. ಇಲ್ಲಿ ರುದರ್ಫೋರ್ಡ್ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿದ್ದನು. ಆತನಿಗೆ ರಸಾಯನಶಾಸ್ತ್ರಜ್ಞನೊಬ್ಬನ ಅಗತ್ಯವಿದ್ದಿತು. 1900ರಿಂದ 1903 ರವರೆಗೆ ಇವರಿಬ್ಬರೂ ಸಹಯೋಗದಲ್ಲಿ ಸಂಶೋಧನೆ ನಡೆಸಿ ವಿಕಿರಣಪಟುತ್ವ ಎಂದರೇನೆಂದು ವಿವರಿಸಿದರು. ಇದರ ಪ್ರಕಾರ, ಭಾರವಾದ ಧಾತುಗಳು ಅಸ್ಥಿರವಾಗಿದ್ದುಶೈಥಿಲ್ಯ ಹೊಂದಬಲ್ಲವು. ಇದರಿಂದ ಅಣುತೂಕ ಕಡಿಮೆಯಾಗಿ ಹೆಚ್ಚು ಸ್ಥಿರವಾಗಿರುವ ಧಾತುಗಳಾಗಿ ಪರಿವರ್ತನೆ ಹೊಂದುತ್ತವೆ. ಇಂತಹ ಕ್ರಿಯೆ ಹಲವಾರು ಬಾರಿ ಜರುಗಬಹುದು. ರೇಡಿಯಂನ ಶೈಥಿಲ್ಯದಿಂದಾಗಿ ಹೀಲಿಯಂ ಉದಿಸಿರುವ ಸಾಧ್ಯತೆಗಳತ್ತ ಇವರು ಗಮನ ಸೆಳೆದರು. 1903ರಲಿ ಸಾಡಿ ಲಂಡನ್‍ನಲ್ಲಿ ರಾಮ್ಸೆಯೊಂದಿಗೆ ಕೆಲಸ ಮಾಡುತ್ತ 52 ಮಿಲಿಗ್ರಾಂ ರೇಡಿಯಂ ಬ್ರೋಮೈಡ್ ಪಡೆದು ಅದರಲ್ಲಿ ಹೀಲಿಯಂ ಇರುವುದನ್ನು ತೋರಿಸಿದನು. 1913ರಲ್ಲಿ ಸಾಡಿ ವಿಕಿರಣಪಟುತ್ವ ಪಲ್ಲಟದ (Radioactive Shift) ನಿಯಮ ರೂಪಿಸಿದನು. ಆಲ್ಫಾ ಕಣ ಹೊರ ಹೊಮ್ಮಿದಾಗ ಪರಮಾಣುವಿನ ಪರಮಾಣು ಸಂಖ್ಯೆ ಎರಡು ಕಡಿಮೆಯಾದರೆ, ಬೀಟಾ ಕಣದ ಹೊಮ್ಮಿಕೆಯಿಂದ ಪರಮಾಣು ಸಂಖ್ಯೆ ಒಂದು ಹೆಚ್ಚುವುದೆಂದು ವಿವರಿಸಿದನು. ಒಂದೇ ಪರಮಾಣು ಸಂಖ್ಯೆಯ , ಒಂದೇ ರಾಸಾಯನಿಕ ಗುಣಗಳ ಆದರೆ ವಿಭಿನ್ನ ದ್ರವ್ಯರಾಶಿಯ ಧಾತುವೊಂದರ ಎರಡು ಸ್ಥಿತಿಗಳನ್ನು ಸಾಡಿ ಸಮಸ್ಥಾನಿ (Isotope) ಎಂದು ಕರೆದನು. 1920ರಲ್ಲಿ ವಿಕಿರಣಪಟುತ್ವದ ಹಿನ್ನೆಲೆಯಲ್ಲಿ ಶಿಲೆಗಳ ವಯಸ್ಸನ್ನು ನಿರ್ಧರಿಸಬಹುದೆಂದು ಹೇಳಿದನು.1906ರಲ್ಲಿ ಸಾಡಿ, ಪರಮಾಣು ಚೈತನ್ಯ ಪಡೆಯಬಹುದೆಂದು ಸೂಚಿಸಿದನು. ಇದು ಆತನ ಜೀವಿತಾವಧಿಯಲ್ಲೇ ನಿಜವಾಯಿತು. 1919ರಲ್ಲಿ ಆಕ್ಸ್ಫರ್ಡ್’ನ ಪ್ರಾಧ್ಯಾಪಕನಾಗಿದ್ದ ಸಾಡಿ ಅಲ್ಲಿ ರಸಾಯನಶಾಸ್ತ್ರದ ಬೋಧನೆಯ ಕ್ರಮ ಹಾಗೂ ವ್ಯವಸ್ಥೆಗಳನ್ನು ಸುಧಾರಿಸಲು ಯತ್ನಿಸಿದನು. 1921ರಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿದ ನಂತರ, ಸಾಡಿ ರಸಾಯನಶಾಸ್ತ್ರದಲ್ಲಿ ಆಸಕ್ತಿ ಕಳೆದುಕೊಂಡನು. ವಿಜ್ಞಾನ ಹಾಗೂ ತಂತ್ರಜ್ಞಾನ ಫಲಗಳು ಜನ ಸಾಮಾನ್ಯರಿಗೆ ಎಟುಕುವಂತೆ ಮಾಡಬೇಕೆಂದು ಯತ್ನಿಸಿದನು. ಆದರೆ ಸಾಡಿ ಇದರಲ್ಲಿ ಯಶಸ್ಸನ್ನು ಕಾಣಲಿಲ್ಲ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/25/2019