ರಾಮ್ಸೆ, ಸರ್ ವಿಲಿಯಂ (1852-1916) ೧೯೦೪
ಬ್ರಿಟನ್-ರಸಾಯನಶಾಸ್ತ್ರ-ಆದರ್ಶ (Nobel )ಅನಿಲಗಳನ್ನು ಅನಾವರಣಗೊಳಿಸಿದಾತ.
ರಾಮ್ಸೆ ಗ್ಲಾಸ್ಗೋದಲ್ಲಿ ರಸಾಯನಶಾಸ್ತ್ರ ಓದಿ ,ಹೈಡೆಲ್‍ಬರ್ಗ್‍ನಲ್ಲಿ ಬುನ್ಸೆನ್ ಕೆಳಗೆ ಕೆಲಸ ಮಾಡಿದನು. 1880ರಲ್ಲಿ ಬ್ರಿಸ್ಟಲ್‍ನಲ್ಲಿ ಅನಿಲಗಳ ಸಾಂದ್ರತೆ ನಿರ್ಧರಿಸಲು ಪ್ರಾರಂಭಿಸಿದನು. 1884ರಲ್ಲಿ ಲಂಡನ್‍ಗೆ ಹೋಗಿ ನೆಲೆಸಿದ ರಾಮ್ಸೆ ತನ್ನ ಸಂಶೋಧನೆಗಳನ್ನು ಮುಂದುವರಿಸಿದನು. ರಾಮ್ಸೆ ಗಾಳಿಯಲ್ಲಿರುವ ಸಾರಜನಕ,ಪ್ರಯೋಗಾಲಯದಲ್ಲಿ ಸಿದ್ಧಗೊಳಿಸಿದುದಕ್ಕಿಂತಲೂ ಶೇಕಡಾ 0.5ಕ್ಕೂ ಹೆಚ್ಚುತೂಕ ಹೊಂದಿರುವುದೆಂದು ತೋರಿಸಿ ,ಗಾಳಿಯಲ್ಲಿ ನಮಗೆ ಅಜ್ಞಾತವಾಗಿರುವ ಬೇರೆ ಯಾವುದೇ ಅನಿಲ ಇರುವುದರಿಂದ ಹೀಗಾಗುತ್ತಿರಬಹುದೆಂದು ತರ್ಕಿಸಿದನು. ಈ ಅನಿಲವನ್ನು ಹುಡುಕಲೇಬೇಕೆಂದು ದೃಢ ನಿರ್ಧಾರ ತಳೆದನು. ಒಣ ಗಾಳಿಯಲ್ಲಿ ಆಮ್ಲಜನಕ ತೆಗೆದ ರಾಮ್ಸೆ , ಬಿಸಿಗೊಳಿಸಿದ ಮೆಗ್ನೇಷಿಯಂ, ಮೇಲೆ ಹಾಯಿಸಿದಾಗ ಅದು ಸಾರಜನಕವನ್ನು ಹೀರಿ ಮೆಗ್ನೀಷಿಯಂ ನೈಟ್ರೇಟ್‍ಗೆ ಬದಲಾಯಿತು. ಆಗ ಸಾಂದ್ರವಾದ, ಜಡ ಅನಿಲ ಉಳಿಯಿತು. ಇದನ್ನು ರ್ಯಾಮ್ಸೆ ಆರ್ಗಾನ್ ಎಂದು ಹೆಸರಿಸಿದನು. ಇದು ವಾತಾವರಣದಲ್ಲಿ ಶೇಕಡಾ 1 ಕ್ಕಿಂತಲೂ ಅಲ್ಪ ಪ್ರಮಾಣದಲ್ಲಿದೆ. ಇದು ಬೇರೆಲ್ಲಿ ಇರಬಹುದೆಂದು ಹುಡುಕಲು ಯತ್ನಿಸಿದ ರಾಮ್ಸೆ, ಕ್ಲೆವೈಟ್ ಖನಿಜದಲ್ಲಿ ಹೊಸದೊಂದು ಧಾತುವನ್ನು ಗುರುತಿಸಿದನು. ಕ್ರೂಕ್ಸ್ ಇದರ್ ರೋಹಿತದ ಅಧ್ಯಯನದಿಂದಅದು ಹೀಲಿಯಂ ಎಂದು ತೋರಿಸಿದನು. ಇದನ್ನು ಮೊದಲಿಗೆ ಸೂರ್ಯನಲ್ಲಿ ಮಾತ್ರ ಇದೆಯೆಂದು ನಂಬಲಾಗಿದ್ದಿತು. ರ್ಯಾಮ್ಸೆಯ ಮುಂದುವರಿದ ಹುಡುಕಾಟದಲ್ಲಿ ಕ್ರಿಪ್ಟಾನ್, ಕ್ಸೆನಾನ್ ಹಾಗೂ ನಿಯಾನ್ ಲಭ್ಯವಾದವು. ಈ ಐದು ಹೊಸ ಅನಿಲಗಳನ್ನು ರ್ಯಾಮ್ಸೆ ಶೂನ್ಯ ಸಂಯೋಗ ಸಾಮಥ್ರ್ಯದ ಜಡ ಅನಿಲಗಳೆಂದು ಕರೆದನು. 1910ರಲ್ಲಿ ಆರನೇ ಜಡ ಅನಿಲ ರಾಡಾನ್ ಪತ್ತೆ ಹಚ್ಚಿದನು. ಇದು ವಿಕಿರಣ ಶೈಥಿಲ್ಯ ಹೊಂದಿದ ರೇಡಿಯಂನೊಂದಿಗೆ ಹೀಲಿಯಂ ಪ್ರತಿಕ್ರಿಯೆ ಹೊಂದಿದಾಗ ರೂಪುಗೊಳ್ಳುತ್ತದೆ. ಆರ್ಗಾನ್ ಹೊರತು ಉಳಿದವುಗಳೆಲ್ಲ ಬಹು ಅಪರೂಪದವು. 1962ರಲ್ಲಿ ಬಾರ್ಟ್‍ಲೆಟ್ ಕ್ಸೆನಾನ್, ಕ್ರಿಪ್ಟಾನ್‍ಗಳಲ್ಲಿ ಅತ್ಯಲ್ಪ ಕ್ರಿಯಾಶೀಲತೆ ಇದೆಯೆಂದು ತೋರಿಸಿದನು. ಈ ಅನಿಲಗಳು ರಾಸಾಯನಿಕ ಬಂಧಗಳನ್ನು ಅರ್ಥ ಮಾಡಿಕೊಳ್ಳಲು ನೆರವಾದವು. ಇವೆಲ್ಲವುಗಳಿಗೂ ವಿಶಿಷ್ಟವಾದ ರೋಹಿತವಿದೆ. ಇದಕ್ಕೆ ರ್ಯಾಡಾನ್ ಮಾತ್ರ ಅಪವಾದ. ಜಡ ವಾತಾವರಣ ಬೇಕಾದ ಸಂದರ್ಭಗಳಲ್ಲಿ ಇವು ನೆರವಾಗುತ್ತವೆ. ಹೀಲಿಯಂ ಅತ್ಯಲ್ಪ ಕುದಿ ಬಿಂದು -230ಡಿಗ್ರಿ ಸೆಲ್ಸಿಯಸ್ ಹೊಂದಿದ್ದು ಅತಿಶೀತಲ ಸ್ಥಿತಿ ನಿರ್ಮಿಸಲು ಬಳಕೆಯಾಗುತ್ತದೆ. ಭೂಮಿಯಲ್ಲಿ ಅಪರೂಪವೆನಿಸಿದರೂ, ಈ ವಿಶ್ವದಲ್ಲಿ ಜಲಜನಕದ ನಂತರ,ಅತಿ ವಿಪುಲವಾಗಿರುವ ಧಾತುವೆಂದರೆ ಹೀಲಿಯಂ. ಇದು ಜಗತ್ತಿನ ದ್ರವ್ಯರಾಶಿಯಲ್ಲಿ ಶೇಕಡ 23ರಷ್ಟಿದೆ. ಆವರ್ತ ಕೋಷ್ಟಕದಲ್ಲಿನ ಒಂದು ಸಮೂಹವನ್ನೇ ಸಂಪೂರ್ಣವಾಗಿ ಪತ್ತೆ ಹಚ್ಚಿದ ಏಕೈಕ ವ್ಯಕ್ತಿ ರಾಮ್ಸೆ ಇಂತಹ ಸಾಧನೆ ಇತಿಹಾಸದಲ್ಲಿ ಎಂದೂ ಘಟಿಸಿಲ್ಲ. 1904ರಲ್ಲಿ ರಾಮ್ಸೆ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/30/2020