ಒಟ್ಟೋ ,ವಲ್ಲಾಖ್ –(1847--) ೧೯೧೦
ಜರ್ಮನಿ-ರಸಾಯನಶಾಸ್ತ್ರ- ಅಲಿಸೈಕ್ಲಿಕ್ ಸಂಯುಕ್ತಗಳ ಕುರಿತಾಗಿ ಆಳ ಸಂಶೋಧನೆ ನಡೆಸಿದಾತ.
ವಲ್ಲಾಖ್ 27 ಮಾರ್ಚ್ 1847ರಂದು ಜರ್ಮನಿಯ ಕೊನಿಗ್ಸ್‍ಬರ್ಗ್‍ನಲ್ಲಿ ಜನಿಸಿದನು. ಈತನ ತಂದೆ ಸರ್ಕಾರದಲ್ಲಿ ಉನ್ನತಾಧಿಕಾರಿಯಾಗಿದ್ದನು. ಪ್ಯಾಟ್ಸ್’ಡ್ಯಾಂಜಿಮ್ನಾಷಿಯಂನಲ್ಲಿ ಓದಿದ ವಲ್ಲಾಖ್‍ಗೆ ಕಲೆ ಹಾಗೂ ಚರಿತ್ರೆಯಲ್ಲಿ ಅಪಾರ ಆಸಕ್ತಿಯಿದ್ದಿತು. ಈ ಕಾಲದಲ್ಲಿ ರಸಾಯನಶಾಸ್ತ್ರಗಳ ಶಿಕ್ಷಣವಿರಲಿಲ್ಲ. 1867ರಲ್ಲಿ ವೊಹೊರ್ ಕೈಕೆಳಗೆ ರಸಾಯನಶಾಸ್ತ್ರ ಕಲಿಯಲು ಹೋದ ವಲ್ಲಾಖ್ ಫಿûಟಿಂಗ್ ಮತ್ತು ಹಬ್‍ನರ್‍ರವರ ಮಾರ್ಗದರ್ಶನ ಪಡೆದನು. ಇದಾದ ಸ್ವಲ್ಪ ಕಾಲದ ನಂತರ ಎ.ಡಬ್ಲ್ಯೂ ಹಾಫ್ಮನ್, ಜಿ.ಮ್ಯಾಗ್ನರ್ ಕೈಕೆಳಗೆ ರಸಾಯನಶಾಸ್ತ್ರದಲ್ಲಿ ಕೆಲಸ ಮಾಡಲು ಬರ್ಲಿನ್‍ಗೆ ಹೋದನು. ಇಲ್ಲಿಂದ ಗಟ್ಟಿಂಜೆನ್‍ಗೆ ಮರಳಿ ಹಬ್‍ನರ್‍ನೊಂದಿಗೆ ಕೆಲಸ ಮಾಡಿ 1869ರಲ್ಲಿ ಎರಡೂವರೆ ವರ್ಷದ ಪರಿಶ್ರಮದ ನಂತರ ಡಾಕ್ಟರೇಟ್ ಗಳಿಸಿದನು. ಈ ಕಾಲದಲ್ಲಿ ವೋಹ್ಲರ್ ಪ್ರಯೋಗಾಲಯ ಬೆಳಿಗ್ಗೆ ಏಳರಿಂದ, ಸಾಯಂಕಾಲ5 ರವರೆಗೆ ತೆರೆದಿದ್ದು ನಂತರ ದೀಪವನ್ನು ಹಚ್ಚುವ ಅನಿಲದ ಸಂಪರ್ಕ ಕದಿಯಲಾಗುತ್ತಿತ್ತು. ರಾತ್ರಿ ಅವಧಿಯಲ್ಲಿ ಮೇಣದ ಬತ್ತಿಯ ದೀಪದ ಬೆಳಕಿನಲ್ಲಿ ವಲ್ಲಾಖ್‍ನ ವಿದ್ಯಾಭ್ಯಾಸ ಜರುಗಿತು. 1869 ರಿಂದ 1870ರ ಅವಧಿಯಲ್ಲಿ ಬರ್ಲಿನ್‍ನ ಎಚ್.ವಿಖೆಲ್‍ಹೌಸ್‍ನೊಂದಿಗೆ ಸಾರಜನಕ ಕಿರಣ ಹಾಗೂ ಬಿ ನ್ಯಾಫ್ರಿನಾಲ್‍ಗಳ ಮೇಲೆ ಕೆಲಸ ಮಾಡಿದನು. 1870ರಲ್ಲಿ ವೆಲ್ಲಾಖ್‍ಗೆ ಕೆಕಲೆಯ ಪರಿಚಯವಾಯಿತು. ಕೆಕಲೆ ಕಲಾ ಪ್ರೇಮಿಯೂ , ಕಲಾ ಸಾಧಕನಾಗಿದ್ದು ಬಾನ್‍ಗೆ ಬಂದು ಕಲೋಪಾಸನೆ ಮಾಡುವಂತೆ ಕರೆಯಿತ್ತನು. ಆದರೆ ಈ ಸಮಯದಲ್ಲಿ ಫ್ರಾಂಕೋ ಪ್ರಷ್ಯನ್ ಯುದ್ದ ಪ್ರಾರಂಭವಾಗಿ, ವಲ್ಲಾಖ್ ಸೇನೆಗೆ ನಿಯೋಜಿತನಾದನು. ಯುದ್ದದ ನಂತರ ಬರ್ಲಿನ್‍ನಲ್ಲಿ ನೆಲೆಸಿದ ವಲ್ಲಾಖ್ ಅಗ್ಫಾ ಕಾರ್ಖಾನೆಗೆ ಸೇರಿದನು. ಇಲ್ಲಿನ ರಾಸಾಯನಿಕ ಹೊಗೆಗೆ ವಲ್ಲಾಖ್‍ನ ಆರೋಗ್ಯ ಕೆಟ್ಟು, 1872ರಲ್ಲಿ ಬಾನ್‍ಗೆ ಮರಳಿ 1876ರಲ್ಲಿ ಪ್ರಾಧ್ಯಾಪಕನಾದನು. 1879ರಲ್ಲಿ ಔಷಧಿಶಾಸ್ತ್ರ, ವಿಭಾಗದ ಕಾರ್ಯದರ್ಶಿಯಾದನು. ಇದು ವಲ್ಲಾಖ್ ವೈದ್ಯಕೀಯ ರಸಾಯನಶಾಸ್ತ್ರದಲ್ಲಿ ಪರಿಣಿತಿ ಗಳಿಸುವಂತಾಯಿತು. ಫಾಸ್ಪರಸ್ ಪೆಂಟಾಕ್ಲೋರೈಡ್‍ಗಳು, ಆಮ್ಲ ಅಮೈಡ್‍ಗಳ ಮೇಲೆ ಪ್ರತಿಕ್ರಿಯಿಸಿ ಇಮೈನೋ ಕ್ಲೋರೈಡ್‍ಗಳಾಗುವುವೆಂದು ವಲ್ಲಾಖ್ ಕಂಡು ಹಿಡಿದನು. ಇದೇ ಕಾಲದಲ್ಲಿ ಕೆಕಲೆ ಹಳೆಯ ರಾಸಾಯನಿಕಗಳಿಂದ ತುಂಬಿದ್ದ ಕಪಾಟಿನಲ್ಲಿರುವ ರಾಸಾಯನಿಕಗಳ ಬಗೆಗೆ ತಿಳಿಸಬೇಕೆಂದು ಕೋರಿದನು. ಇವುಗಳನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿದ ವಲ್ಲಾಖ್ ಈ ರಾಸಾಯನಿಕಗಳನ್ನು ವರ್ಗೀಕರಿಣಗೊಳಿಸುವ ಸಾಮಾನ್ಯ ವಿಧಾನಗಳನ್ನು ರೂಪಿಸಿ ಆವರೆಗೆ ಸಾವಯವ ರಸಾಯನಶಾಸ್ತ್ರದಲ್ಲಿದ್ದ ಗೋಜಲನ್ನು ನಿವಾರಿಸಿದನು. ಕ್ಲೋರೈಡ್‍ನ್ನು ಡೈ ಕ್ಲೋರೈಡ್ ಅಸಿಟಿಕ್ ಆಮ್ಲವಾಗಿ ಪರಿವರ್ತಿಸುವ ವಿಧಾನವನ್ನು ವಲ್ಲಾಖ್ ರೂಪಿಸಿದನು. ಅಮಿಡೈಟ್ಸ್, ಕ್ಲೋರೈಡ್, ಗ್ಲೆಯೋಕ್ಸವೈನ್ಸ್, ಡಯಾಝೊ ಸಂಯುಕ್ತಗಳು ವಲ್ಲಾಖ್‍ನಿಂದ ತಪಾಸಣೆಗೊಳಪಟ್ಟವು. 1889ರಲ್ಲಿ ಗಟ್ಟಿಂಜೆನ್ ರಾಸಾಯನಿಕ ಸಂಸ್ಥೆಯ ನಿರ್ದೇಶಕನಾದನು. ವಲ್ಲಾಖ್ ಅಲಿಸೈಕ್ಲಿಕ್ ಸಂಯುಕ್ತಗಳ ಮೇಲೆ ಮಾಡಿದ ಗಮನಾರ್ಹ ಸಂಶೋಧನೆಗಳಿಗಾಗಿ 1910ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/9/2019