অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವೂಲ್ಫ್’ಗ್ಯಾಂಗ್ ,ಕೆಟ್ಟರ್ಲೆ

ವೂಲ್ಫ್’ಗ್ಯಾಂಗ್ ,ಕೆಟ್ಟರ್ಲೆ

ವೂಲ್ಫ್’ಗ್ಯಾಂಗ್ ,ಕೆಟ್ಟರ್ಲೆ (1957--)  ೨೦೦೧

ಜರ್ಮನಿ-ಭೌತಶಾಸ್ತ್ರ-ದಹನ ಕ್ರಿಯೆಯನ್ನು ಅಣುಮಟ್ಟದಲ್ಲಿ ಅರಿಯಲು ಪರಿಶ್ರಮಿಸಿದಾತ.

ವೂಲ್ಫ್’ಗ್ಯಾಂಗ್ 21 ಅಕ್ಟೋಬರ್ 1957ರಲ್ಲಿ ಹೈಡೆಲ್‍ಬರ್ಗ್‍ನಲ್ಲಿ ಜನಿಸಿದನು. ವೂಲ್ಫ್’ಗ್ಯಾಂಗ್ ಮೂರು ವರ್ಷದವನಿರುವಾಗ ಹೈಡೆಲ್‍ಬರ್ಗ್‍ನಿಂದ 5 ಕಿ.ಮೀ. ದೂರದ ಎಫೆಲ್‍ಹೀಮ್‍ಗೆ ಇವರು ಕುಟುಂಬ ಸ್ಥಳಾಂತರಗೊಂಡಿತು.  ವೂಲ್ಫ್’ಗ್ಯಾಂಗ್‍ನ ತಂದೆ ತಾಯಿ ಜಾಗತಿಕ ಯುದ್ದ, ಕಠಿಣ ಪರಿಸ್ಥಿತಿಗಳಿಂದ ತಮ್ಮ ಜೀವನದಲ್ಲಿ ಬೇಕೆನಿಸಿದುದನ್ನು, ತಮ್ಮ ಅಭಿರುಚಿಗೆ ಅನುಗುಣವಾದುದನ್ನು ಪಡೆದಿರಲಿಲ್ಲ.  ಆದ್ದರಿಂದ ತಮ್ಮಂತೆ ತಮ್ಮ ಮಕ್ಕಳು ಸಹ ಅವಕಾಶ ವಂಚಿತರಾಗಬಾರದೆಂದು ಶ್ರಮಿಸಿದರು.  ಎಫೆಲ್‍ಹೀಮ್, ಹೈಡೆಲ್ ಬರ್ಗ್‍ಗಳಲ್ಲಿ ಶಿಕ್ಷಣ ಪಡೆದ ವೂಲ್ಫ್‍ಗ್ಯಾಂಗ್‍ಗೆ ಗಣಿತ, ವಿಜ್ಞಾನ ನೆಚ್ಚಿನ ವಿಷಯಗಳಾಗಿದ್ದವು.  ಭೌತಶಾಸ್ತ್ರ, ಗಣಿತ , ಗಣಕ ವಿಜ್ಞಾನಗಳಲ್ಲಿ ಯಾವುದಾದರೂ ಒಂದರಲ್ಲಿ ಪರಿಣಿತನಾಗಬೇಕೆಂದು ವೂಲ್ಫ್’ಗ್ಯಾಂಗ್ ಬಯಸಿದ್ದನು. ಭೌತಶಾಸ್ತ್ರ ನೈಜ ಜಗತ್ತಿನೊಂದಿಗೆ ಗಣಿತವನ್ನು ಬೆಸೆದು ನಿಜವಾದ ಸತ್ಯವನ್ನು ತೋರಿಸುವುದೆಂದು ನಿರ್ಧರಿಸಿ ಅದರ ಅಧ್ಯಯನಕ್ಕೆ 1976ರಲ್ಲಿ ಹೈಡೆಲ್‍ಬರ್ಗ್ “ವಿಶ್ವವಿದ್ಯಾಲಯಕ್ಕೆ ಸೇರಿದನು.  ಈ ವಿಶ್ವವಿದ್ಯಾಲಯ 1386ರಲ್ಲಿ ಪ್ರಾರಂಭವಾಗಿದ್ದಿತು.  ಮುಂದೆ ಮ್ಯೂನಿಕ್ “ವಿಶ್ವವಿದ್ಯಾಲಯ ಸೇರಿದನು. ಇಲ್ಲಿ ವೂಲ್ಫ್’ಗ್ಯಾಂಗ್ ಗೊಟ್ಜಿಯ ಮಾರ್ಗದರ್ಶನದಲ್ಲಿ ಕ್ರಮಹೀನ ಸಾಮಾಗ್ರಿಗಳಲ್ಲಿನ  (Disordered Materials)    ಗಿರಕಿ ವಿಶ್ರಾಂತ ಸ್ಥಿತಿಯ (Spin Relaxation State)    ಅಧ್ಯಯನ ನಡೆಸಿದನು.  ಹರ್ಬರ್ಟ್ ವಾಲ್ಟರ್ ಹಾಗೂ ಹರ್ಟ್‍ಮಟ್ ಫಿûಗ್ಗೆರ್ ಕೈಕೆಳಗೆ ಮಾಕ್ಸ್‍ಪ್ಲಾಂಕ್ ಸಂಸ್ಥೆಯಲ್ಲಿ ಕ್ವಾಂಟಂ ದೃಗ್ ಶಾಸ್ತ್ರದಲ್ಲಿ ಸಂಶೋಧನೆ ನಡೆಸಿದನು.  ತ್ರಿ ಪರಮಾಣ್ವಕ (Triatomic)      ಹೀಲಿಯಂನ ಪರಿಶುದ್ದ ಪ್ರದೀಪ್ತಿ ಪಡೆಯುವಲ್ಲಿ ಯಶಸ್ವಿಯಾದನು. ಇದನ್ನು ಹೀಲಿಯ್‍ಂ ಹೈಡ್ರೈಡ್‍ಗೆ ವಿಸ್ತರಿಸಿ, ಈ ಅಣುವಿನ ವಿವಿಕ್ತ ರೋಹಿತವನ್ನು  (Discrete Spectrum)   ಪಡೆಯುವಲ್ಲಿ ಯಶಸ್ಸನ್ನು ಕಂಡನು.  ಇದನ್ನು ಬಳಸಿಕೊಂಡು, ಈ ಅಣುವಿನ ಮೂಲ ಗುಣ ಲಕ್ಷಣಗಳನ್ನು ನಿರ್ಧರಿಸಿದನು.  ಡಾಕ್ಟರೇಟ್ ಪೂರ್ಣಗೊಳಿಸಿದ ನಂತರ ಈ ನಿಟ್ಟಿನಲ್ಲಿ ಕಾರ್ಯ ಮುಂದುವರೆಸಿ ಹೀಲಿಯಂ ಹೈಡ್ರೇಡ್‍ನ ಉತ್ಸರ್ಜಿತ ರೋಹಿತವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದನು.  ಈ ಅಣುವಿನ ರೋಹಿತ ಅಧ್ಯಯನ ಬಹು ಕ್ಲಿಷ್ಟವಾದುದೆಂದು ಪರಿಗಣಿತವಾಗಿದೆ.  ಹೈಡೆಲ್‍ಬರ್ಗ್ ವಿಶ್ವವಿದ್ಯಾಲಯದ ಜುರ್‍ಜೆನ್ ವೂಲ್ಫ್ ನೇತೃತ್ವದ ತಂಡ ಸೇರಿದ ವೂಲ್ಫ್’ಗ್ಯಾಂಗ್ ಲೇಸರ್ ಬಳಸಿ, ದಹನದ ವಿಶ್ಲೇಷಣೆ ನಡೆಸಿದನು.  ಉರಿಯ ತಾಪ ಹಾಗೂ ಅಣು ಸಾಂದ್ರತೆಯ ನಿರ್ಧಾರದಲ್ಲಿ ವೂಲ್ಫ್’ಗ್ಯಾಂಗ್ ಸಿದ್ಧಹಸ್ತನೆನಿಸಿದನು.  ವೋಲ್ಕ್ಸ್‍ವ್ಯಾಗನ್ ವಾಹನ ತಯಾರಿಕಾ ಕಂಪನಿಯವರಿಗೆ, ಅತ್ಯಂತ ಕಡಿಮೆ  ಇಂಧನ ವ್ಯಯಿಸುವ ಇಂಜಿನ್ ತಯಾರಿಕೆಗೆ ನೆರವು ನೀಡುವ ಸಂಶೋಧನೆಯಲ್ಲಿ ಭಾಗಿಯಾದನು.  ಅಲ್ಪ ಕಾಲದಲ್ಲೇ ಇಂಜಿನಿಯರಿಂಗ್ ಮೀರಿದ ಮೂಲ ಸಂಶೋಧನೆಯ ಕರೆ ವೂಲ್ಫ್‍ಗ್ಯಾಂಗ್‍ನನ್ನು ಕೂಗಿ ಕರೆಯಿತು.  1990ರಲ್ಲಿ ಅಸಂಸಂದ ಎಂಐಟಿಯಲ್ಲಿದ್ದ ಡೇವ್ ಪ್ರಿಟ್‍ಕಾರ್ಡ್‍ನ ಗುಂಪಿನಲ್ಲಿ ಲೇಸರ್ ತಂಪಿಸಿಕೆಯ ಯೋಜನೆ ಹಾಗೂ ಸಂಶೋಧನೆಗೆ ಸೇರಿಕೊಂಡನು.  ಇಲ್ಲಿ ಡೇವ್ ಪ್ರಿಟ್‍ಕಾರ್ಡ್ ಹಾಗೂ ವೂಲ್ಫ್’ಗ್ಯಾಂಗ್ ಸಾಂಗತ್ಯ ಅತ್ಯುತ್ತಮ ವೈಜ್ಞಾನಿಕ ಸಂಶೋಧನೆಗಳಲ್ಲಿ ಫಲಪ್ರದವಾಯಿತು. ವೂಲ್ಫ್’ಗ್ಯಾಂಗ್ 2001ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 5/27/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate