ಥಿಯೋಡೋರ್ ಡಬ್ಲ್ಯೂ ಹಾನ್ಷ್ (1941--) ೨೦೦೫
ಜರ್ಮನಿ -ಭೌತಶಾಸ್ತ್ರ -ನಿಷ್ಕೃಷ್ಟ ಮಾಪನೆಯ ತಂತ್ರಜ್ಞಾನದಲ್ಲಿ ಮಹಾನ್ ಕ್ರಾಂತಿ ತಂದಾತ.
30 ಅಕ್ಟೋಬರ್ 1941ರಂದು ಹೈಡೆಲ್‍ಬರ್ಗ್‍ನಲ್ಲಿ ಥಿಯೋಡೋರ್ ಜನಿಸಿದನು. ಈತನ ತಂದೆ ಕೃಷಿ ಉಪಕರಣಗಳನ್ನು ತಯಾರಿಸಿ ಮಾರುತ್ತಿದ್ದನು. ಇವರ ಕುಟುಂಬ ಬೆಸ್ಲೌಗೆ ಬಂದು ನೆಲೆಸಿತು. ಎರಡನೇ ಜಾಗತಿಕ ಯುದ್ದದ ನಂತರ ತಮ್ಮ ನೆಲೆ ಕಳೆದುಕೊಂಡ ಥಿಯೋಡೋರ್ ಕುಟುಂಬ ಹೈಡೆಲ್‍ಬರ್ಗ್‍ಗೆ ಬಂದು ನೆಲೆಸಿತು. ಈ ಹಿಂದೆ ಖ್ಯಾತ ವಿಜ್ಞಾನಿ ರಾಬರ್ಟ್ ಬುನ್ಸೆನ್ ಇದ್ದ ಅಪಾರ್ಟಮೆಂಟ್‍ನಲ್ಲಿ ಇವರು ನೆಲೆಸಿದರು. ಇದೇ ಮನೆಯಲ್ಲಿ ಥಿಯೋಡೋರ್ ಬುನ್ಸೆನ್ ದೀಪ ಬಳಸಿ ಅಡಿಗೆ ಉಪ್ಪು ಉರಿಸಿ ಅದರಿಂದ ಹೊಮ್ಮುವ ಹಳದಿ ಜ್ವಾಲೆಯನ್ನು ಕಂಡು ಪುಳಕಿತನಾದನು. ಥಿಯೋಡೋರ್ ತಂದೆ ಪ್ರತಿ ಧಾತುವೂ ತನ್ನದೇ ಆದ ಬಣ್ಣದೊಂದಿಗೆ ಉರಿಯುವುದೆಂದು ವಿವರಿಸಿದನು. ಇದೇ ಕಾಲದಲ್ಲಿ ಥಿಯೋಡೋರ್ ಮನ್‍ಹೀಮ್‍ನಲ್ಲಿರುವ ಹೀನ್ರಿಖ್ ಲಾಂಝ್ ಎ ಜಿ ಕಂಪನಿಯ ಲೌಹಿಕ ಪ್ರಯೋಗಾಲಯಕ್ಕೆ ಭೇಟಿ ಇದ್ದನು. ಇಲ್ಲಿರುವ ಸಂಶೋಧಕರನ್ನು ಕಂಡು ತಾನು ಅವರಂತಾಗಬೇಕೆಂದು ಆಶಿಸಿದನು. ಹದಿನಾರು ವರ್ಷದವನಿರುವಾಗ ಥಿಯೋಡೋರ್ ಹಳೆ ಸರಕನ್ನು ಖರೀದಿಸಿ ತನ್ನದೇ ಆದ ಕ್ಯಾಥೋಡ್ ಕೊಳವೆ, ಗೀಗರ್ ಗಣಕ ತಯಾರಿಸಿಕೊಂಡಿದ್ದನು. 1961ರಲ್ಲಿ ಭೌತಶಾಸ್ತ್ರದ ಪದವಿ ಅಧ್ಯಯನಕ್ಕೆ ಹೈಡೆಲ್‍ಬರ್ಗ್ ವಿಶ್ವ ವಿದ್ಯಾಲಯ ಸೇರಿದನು. ಇಲ್ಲಿ ಬಾಹ್ಯ ಜಗತ್ತಿನ ವಿವರಣೆಯಲ್ಲಿ ಗಣಿತ ವಹಿಸುವ ಪಾತ್ರ, ಸಾಮಥ್ರ್ಯ ಕುರಿತು ವಿಸ್ಮಯಗೊಂಡನು. ಅಲ್ಪ ಕಾಲದಲ್ಲೇ ಗಣಿತ ಹೇಗೆ ತನ್ನದೇ ಪ್ರಭಾವ ಬೀರಿ ವಾಸ್ತವಿಕ ಜಗತ್ತಿನಿಂದ ದೂರ ಸಹ ಒಯ್ಯಬಲ್ಲದೆಂದು ಅರಿತನು. ಇದರ ಫಲವಾಗಿ ಗಣಿತ ಹೇಳಿದ್ದೆಲ್ಲವನ್ನು ಕಾಣಲೇಬೇಕೆಂಬ ಹಂಬಲ ಥಿಯೋಡೋರ್‍ನಲ್ಲಿ ಮೂಡಿತು. ಆಲ್ಬರ್ಟ್ ಉಬೆರಲ್‍ಸ್ಟ್ರಾಸ್‍ನಲ್ಲಿ ಕ್ರಿಸ್ಟೋಫರ್ ಷೆಮೆಲ್ಜರ್ ನೇತೃತ್ವದ ಅಣ್ವಯಿಕ ಭೌತಶಾಸ್ತ್ರ ವಿಭಾಗಕ್ಕೆ ಥಿಯೋಡೋರ್‍ನಲ್ಲಿ ಭೇಟಿ ಇತ್ತನು. ಇಲ್ಲಿ ಲೇಸರ್ ಕುರಿತಾದ ಪ್ರಯೋಗಗಳನ್ನು ಕಂಡು ತನ್ನ ಭವಿಷ್ಯ ಇಲ್ಲೇ ಇರುವುದೆಂದು ನಿರ್ಧರಿಸಿದನು. ಇಲ್ಲಿ ಲೇಸರ್‍ನ ಕ್ವಾಂಟಂ ಮಟ್ಟದ ಅಂತಕ್ರಿಯೆಯ ಬಗೆಗೆ ಪ್ರಯೋಗಗಳನ್ನು ನಡೆಸಿ 1969ರಲ್ಲಿ ಡಾಕ್ಟರೇಟ್ ಗಳಿಸಿದನು. 1970ರಲ್ಲಿ ಆಸಂಸಂಕ್ಕೆ ತೆರಳಿ ಸ್ಟ್ಯಾನ್’ಫೋರ್ಡ್’ ವಿಶ್ವವಿದ್ಯಾಲಯದಲ್ಲಿ, ಲೇಸರ್ ಸಹ ಉಪಜ್ಞೆಕಾರನಾಗಿದ್ದ ಆರ್ಥರ್ ಎಲ್ ಷಾಲೋ ಮಾರ್ಗದರ್ಶನದಲ್ಲಿ ಸಂಶೋಧನೆ ಮುಂದುವರಿಸಿದನು. ಫೆಲಿಕ್ಸ್ ಬ್ಲಾಖ್, ರಾಬರ್ಟ್ ಹಾಫ್ಸ್ಟ್ಯಾಡಾಟರ್‍ನಂತಹ ವಿಖ್ಯಾತದ ನಡುವೆ ಕೆಲಸ ಮಾಡುವ ರೋಮಾಂಚನವನ್ನು ಥಿಯೋಡೋರ್ ಅನುಭವಿಸಿದನು. ಈ ಅವಧಿಯಲ್ಲಿ ಥಿಯೋಡೋರ್ ದೃಗ್ ರೋಹಿತದರ್ಶಕಶಾಸ್ತ್ರದಲ್ಲಿ ಅತಿಸೂಕ್ಷ್ಮ ಮಟ್ಟದವರೆಗೆ ಅಳತೆಗಳನ್ನು ಮಾಡುವ ಹಲವಾರು ತಂತ್ರಗಳನ್ನು ಪರಿಚಯಿಸಿ, ಅದಕ್ಕಾಗಿ ಉಪಕರಣಗಳನ್ನು ನಿರ್ಮಿಸಿದನು. ಇವು ಮುಂದೆ ನಿಷ್ಕೃಷ್ಟ ಮಾಪನೆಯ ತಂತ್ರಜ್ಞಾನದಲ್ಲಿ ಮಹಾನ್ ಕ್ರಾಂತಿಯನ್ನೇ ತಂದವು. ಇದಕ್ಕಾಗಿ ಥಿಯೋಡೋರ್ 2005 ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಹನ್ನೊಂದು ವರ್ಷಗಳ ಕಾಲ ಸ್ಟ್ಯಾನ್’ಫೋರ್ಡ್‍ನಲ್ಲಿದ್ದ ಥಿಯೋಡೋರ್ 1986ರಲ್ಲಿ ತಾಯ್ನಾಡಿಗೆ ಹಿಂದಿರುಗಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 9/22/2019