ಡೇವಿಡ್ , ಪೊಲಿಟ್ಝರ್ (1949--) ೨೦೦೪
ಅಸಂಸಂ-ಭೌತಶಾಸ್ತ್ರ -ಕ್ವಾಂಟಂ ವರ್ಣಗತಿಶಾಸ್ತ್ರ (Chromodynamics) ಪ್ರಾರಂಭಿಸಿದಾತ.
ಡೇವಿಡ್ 31 ಆಗಸ್ಟ್ 1949ರಂದು ಅಸಂಸಂದ ನ್ಯೂಯಾರ್ಕ್‍ನಲ್ಲಿ ಜನಿಸಿದನು. 1966ರಲ್ಲಿ ಮಿಷಿಗನ್ ವಿಶ್ವ ವಿದ್ಯಾಲಯದಿಂದ ಭೌತಶಾಸ್ತ್ರದ ಪದವಿ ಗಳಿಸಿ 1974ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದನು. ಇಲ್ಲಿ ಡೇವಿಡ್ ಸಿಡ್ನಿ ಕೊಲ್‍ಮನ್‍ನ ಮಾರ್ಗದರ್ಶನ ಸಿಕ್ಕಿತು. 1973ರಲ್ಲಿ ಡೇವಿಡ್ ಪ್ರಕಟಿಸಿದ ಮೊದಲ ಲೇಖನದಲ್ಲಿ ಮುಕ್ತತೆಯ ವಿದ್ಯಾಮಾನ ವಿವರಿಸಲ್ಪಟ್ಟಿತು. ಈ ವಿದ್ಯಾಮಾನದಲ್ಲಿ ಕ್ವಾರ್ಕ್‍ಗಳು ಸನಿಹವಿದ್ದಷ್ಟು ಅವುಗಳ ಮಧ್ಯದ ಪ್ರಬಲ ಅಂತ:ಕ್ರಿಯೆ ಕುಗ್ಗುತ್ತದೆ. ಕ್ವಾರ್ಕ್‍ಗಳು ಒಂದರಿಂದ ಇನ್ನೊಂದು ಅತ್ಯಂತ ಸನಿಹವಿರುವಾಗ ಅವುಗಳ ಮಧ್ಯದ ಬೈಜಿಕ ಬಲಗಳು (Nuclear Forces) ಇಲ್ಲವೆನ್ನುವಷ್ಟು ದುರ್ಬಲವಾಗಿ ಈ ಕಣಗಳು ಮುಕ್ತವೇನೋ ಎನ್ನುವಂತೆ ವರ್ತಿಸುತ್ತವೆ. ಇದೇ ವಿದ್ಯಾಮಾನವನ್ನು ಇದೇ ಕಾಲದಲ್ಲಿ ಪ್ರಿನ್ಸ್‍ಟನ್ ವಿಶ್ವ ವಿದ್ಯಾಲಯದಲ್ಲಿದ್ದು ಡೇವಿಡ್ ಗ್ರಾಸ್ ಮತ್ತು ಫ್ರಾಂಕ್ ವಿಲ್ಕ್‍ಜೆಕ್ ಗುರುತಿಸಿದ್ದರು. ಇದು ಕ್ವಾಂಟಂ ವರ್ಣಗತಿಶಾಸ್ತ್ರ ತನ್ಮೂಲಕ ಪ್ರಬಲ ಬೈಜಿಕ ಬಲಗಳ ಸಿದ್ಧಾಂತ ರೂಪಿಸುವಲ್ಲಿ ಅಪಾರ ನೆರವಿತ್ತಿತ್ತು. ಡೇವಿಡ್, ಥಾಮಸ್ ಅಪೆಲ್‍ಕ್ವಿಸ್ಟ್‍ನೊಂದಿಗೆ ಚಾರ್ಮ್ ಕ್ವಾರ್ಕ್ ಹಾಗೂ ಅದರ ಪ್ರತಿಕಣದಿಂದಾದ ಜೆ/ಸೈ-ಕಣದ ಅಸ್ತಿತ್ವವನ್ನು ಮುನ್ನುಡಿದಿದ್ದಾನೆ. ಈಗ ಕ್ಯಾಲಿಫೋರ್ನೀಯ ಇನ್ಸ್ಟಿಟ್ಯೂಟ್ ಆದ್ ಟೆಕ್ನಾಲಜಿಯಲ್ಲಿ ಡೇವಿಡ್ ಪ್ರಾಧ್ಯಾಪಕನಾಗಿದ್ದಾನೆ. 1989ರಲ್ಲಿ ಪೌಲ್ ನ್ಯೂಮನ್ ನಾಯಕತ್ವ ಹೊಂದಿರುವ ಫ್ಯಾಟ್ ಮ್ಯಾನ್ ಅಂಡ್ ಲಿಟಲ್ ಬಾಯ್ ಚಲನ ಚಿತ್ರದಲ್ಲಿ ಭೌತಶಾಸ್ತ್ರಜ್ಞನ ಸಣ್ಣ ಪಾತ್ರವೊಂದನ್ನು ಸಹ ಡೇವಿಡ್ ನಿರ್ವಹಿಸಿದ್ದಾನೆ. ಕ್ವಾಂಟಂ ವರ್ಣಗತಿ ಶಾಸ್ತ್ರದಲ್ಲಿನ ಕೊಡುಗೆಗಳಿಗಾಗಿ ಡೇವಿಡ್ 2004ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019