ಜಾರ್ಜ್ , ಎಫ್ ಸ್ಮೂಟ್- ೨೦೦೭
ಭೌತಶಾಸ್ತ್ರ-ವಿಶ್ವದ ಉಗಮ ಕುರಿತಾದ ಸಾಕ್ಷ್ಯಾಧಾರಗಳ ಸಂಗ್ರಹಣೆಯ ಯೋಜನೆ ರೂಪಿಸಿದಾತ.
ಸ್ಮೂಟ್, ಫ್ಲೋರಿಡಾದ ಯುಕಾನ್ ಪಟ್ಟಣದಲ್ಲಿ ಜನಿಸಿದನು. ಈತನ ತಂದೆ ಅಸಂಸಂ ಜಿಯಾಲಜಿಕಲ್ ಸರ್ವೆ ವಿಭಾಗದಲ್ಲಿ ಜಲಶಾಸ್ತ್ರಜ್ಞನಾಗಿದ್ದರೆ, ತಾಯಿ ಶಾಲಾ ಉಪಾಧ್ಯಾಯಿನಿಯಾಗಿದ್ದಳು. 1970ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ಮೂಟ್ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. ವಿಶ್ವಶಾಸ್ತ್ರ (Cosmology) ಜಗತ್ತಿನ ಎಲ್ಲಾ ರಹಸ್ಯಗಳನ್ನು ಬಿಚ್ಚಿಡುವ ಏಕೈಕ ಮಾರ್ಗವೆಂದು ಭಾವಿಸಿದ್ದ ಸ್ಮೂಟ್ ವಿಶ್ವದ ಉಗಮ ಕುರಿತಾದಂತಹ ಸಂಶೋಧನೆಗಳಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟನು. ಮಾಹಾಬಾಜಣೆ (Big Bang) ಸಿದ್ದಾಂತದ ಪರಿಶೀಲನೆಗಾಗಿ ಅಸಂಸಂಗಳ ಬಾಹ್ಯಾಕಾಶ ಸಂಸ್ಥೆ ನಾಸಾ (NASA) , ವಿಶ್ವದ ಹಿನ್ನೆಲೆಯ ವಿಕಿರಣ ಶೋಧಕ ಉಪಗ್ರಹವನ್ನು ಅಂತರಿಕ್ಷದಲ್ಲಿರಿಸಿತು. ಇದು COBE (Cosmic Back Ground Explorer) ಎಂದು ಖ್ಯಾತವಾಯಿತು. ಈ ಯೋಜನೆಯ ರೂವಾರಿಗಳಾಗಿ ಸ್ಮೂಟ್ ಹಾಗೂ ಜಾನ್ ಮ್ಯಾಥರ್ ಖ್ಯಾತರಾದರು. ಈ ವಿಶ್ವ ಪರಮಾದಿ ಪರಮಾಣು ಸಿಡಿದು ಹಿಗ್ಗಿ ಉಗಮವಾದುದೆಂದು ಮಹಾಬಾಜಣೆ ಸಿದ್ಧಾಂತ ವಿವರಿಸುತ್ತದೆ. ಇದು ನಿಜವೇ ಆಗಿದ್ದರೆ ಆ ಮಹಾಸ್ಪೋಟದ ಕುರುಹು ವಿಶ್ವಾದ್ಯಂತ ನಿರ್ದಿಷ್ಟ ತಾಪಮಾನ ಹಾಗೂ ತರಂಗಾಂತರದಲ್ಲಿರಬೇಕು (Wave Length) . ಇದರ ಶೋಧನೆಯೇ COBE ಯೋಜನೆಯ ಪ್ರಮುಖ ಗುರಿ. ಈ ಯೋಜನೆಯಿಂದಾಗಿ ವಿಶ್ವದ ಹಿನ್ನೆಲೆಯಲ್ಲಿರುವ ಮಹಾಬಾಜಣೆಗೆ ಸಾಕ್ಷಿಯೊದಗಿಸುವ ದತ್ತಾಂಶಗಳು ದಕ್ಕಿದವು. ಇದರಿಂದ ಆದಿಮ ವಿಶ್ವವನ್ನು (Proto Universe) ಕುರಿತಾಗಿ ವಿಜ್ಞಾನಿಗಳಿಗೆ ಹಲವಾರು ಮಹತ್ತರ ಅಂಶಗಳು ಮನದಟ್ಟಾಗತೊಡಗಿದವು. ಸ್ಮೂಟ್ ಹಾಗೂ ಸಂಗಡಿಗರಿಂದ ಸಿದ್ಧಾಂತಗಳಿಗೆ ಸೀಮಿತವಾಗಿದ್ದ ವಿಶ್ವದ ಉಗಮ ಕುರಿತಾದಂತಹ ಸಂಶೊಧನೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವತ್ತ ದಾಪುಗಾಲಿಟ್ಟಿತು. COBE ಯೋಜನೆಯಲ್ಲಿ ದಕ್ಕಿದ ಅಪಾರ ಮಾಹಿತಿಯನ್ನು ವಿಶ್ಲೇಷಿಸಿ, ಸಾವಿರಕ್ಕೂ ಅಧಿಕ ಜನರನ್ನು ಹೊಂದಿರುವ ಸ್ಮೂತ್‍ನ ನೇತೃತ್ವದ ತಂಡ ಆದಿಮ ವಿಶ್ವದಲ್ಲಿ ಭಾರಿ ಬಿಸಿಯ ಹಾಗೂ ತಂಪಿನ ಸ್ಥಾನಗಳನ್ನು ಗುರುತಿಸಿದೆ. 1994ರಲ್ಲಿ ಅಮೆರಿಕನ್ ಫಿಸಿಕ್ಸ್ ಸೊಸೈಟಿಗೆ ನೀಡಿದ ಭಾಷಣದಲ್ಲಿ ಸ್ಮೂಟ್ ಇದು 1400 ಕೋಟಿ ವರ್ಷಗಳ ಹಿಂದಿದ್ದ ಶೈಶವ ವಿಶ್ವ ಸ್ವರೂಪವನ್ನು ಖಚಿತಗೊಳಿಸಿದೆಯೆಂದು ತಿಳಿಸಿದನು. ವಿಶ್ವ ಕಿರಣ ಹಿನ್ನೆಲೆಯ ಅಧ್ಯಯನಕ್ಕಾಗಿ ಅದರಲ್ಲಿನ ವ್ಯತಸ್ತಗಳ ಶೋಧನೆಗಾಗಿ ವಿಲ್ಕಿನ್‍ಸನ್ ಸೂಕ್ಷ್ಮತರಂಗ ಅಸಮದೈಶಿಕ ಶೋಧಕ (Wilkinson Microwave Anisotropic Probe) ಯೋಜನೆ ರೂಪುಗೊಂಡಿತು. ವಿಶ್ವ ಉಗಮಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳ ಸಂಗ್ರಹದಲ್ಲಿನ ಸಾಧನೆಗಾಗಿ ಸ್ಮೂಟ್ 2007ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾಗಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/24/2020