ಕಾರ್ಲ್, ಇ .ವೀಮನ್ (1951--) 2001
ಅಸಂಸಂ-ಭೌತಶಾಸ್ತ್ರ- ಪರಮಾಣುಗಳ ಸಂಶೋಧನೆಯಲ್ಲಿ ಪರಿಶ್ರಮಿಸಿದಾತ.
ವೀಮನ್ 26 ಮಾರ್ಚ್ 1951ರಂದು ಒರೆಗಾನ್ ರಾಜ್ಯದ ಕೊರಾವಿಲ್ಲಿಸ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದನು. ಈತನ ತಂದೆ ಸಾಮಿಲ್‍ನಲ್ಲಿ ಕೆಲಸಗಾರನಾಗಿದ್ದನು. ದಟ್ಟ ಅರಣ್ಯದ ಅಂಚಿನಲ್ಲಿ ಬೆಳೆದ ವೀಮನ್ ಸ್ವತಂತ್ರ ಮನೋಭಾವ ಬೆಳೆಸಿಕೊಂಡನು. ಕಾಡಿನಲ್ಲಿ ಅಲೆಯುತ್ತಾ, ಮರಗಳನ್ನೇರುತ್ತಾ,ಹಣ್ಣು ಹಂಪಲುಗಳನ್ನು ಸಂಗ್ರಹಿಸುತ್ತಾ ಬಾಲ್ಯವನ್ನು ಕಳೆದನು. ಪ್ರತಿ ಶನಿವಾರ ತಂದೆಯೊಂದಿಗೆ ಪಕ್ಕದ ಹಳ್ಳಿಯಲ್ಲಿ ನಡೆಯುತ್ತಿದ್ದ ಸಂತೆಗೆ ಹೋಗುವುದು ವೀಮನ್‍ಗೆ ಭಾರಿ ಇಷ್ಟವಾದ ಸಂಗತಿಯಾಗಿದ್ದಿತು. ವೀಮನ್ ತಂದೆ ಹೆಚ್ಚು ವಿದ್ಯಾವಂತನಲ್ಲದಿದ್ದರೂ, ತನ್ನೆಲ್ಲ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂದು ಬಯಸಿದ್ದನು. ಸಾರ್ವಜನಿಕ ಗ್ರಂಥಾಲಯದಿಂದ ತಂದೆ ತರುತ್ತಿದ್ದ ಪುಸ್ತಕಗಳನ್ನು ಓದಿ ವೀಮನ್ ಜ್ಞಾನ ದಿಗಂತವನ್ನು ವಿಸ್ತರಿಸಿಕೊಂಡನು. ವೀಮನ್‍ಗೆ ಬಾಲ್ಯದಿಂದಲೂ, ದೂರದರ್ಶನಕ್ಕಿಂತಲೂ ಪುಸ್ತಕದ ಸೆಳೆತವೇ ಅಧಿಕವಾಗಿದ್ದಿತು. ಪಕ್ಕದ ಹಳ್ಳಿಯಲ್ಲಿ ಮೂರು ಕೋಣೆಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ,ಸಾಕಷ್ಟು ದೂರವಿದ್ದ ಫಿಲೋಮತ್ ಪಟ್ಟಣದ ಪ್ರೌಢಶಾಲೆಗೆ ವೀಮನ್ ಸೇರಿದನು. ಇಲ್ಲಿ ಸಾಮಾನ್ಯ ಕಾರ್ಮಿಕರ ಮಕ್ಕಳೇ ಅತ್ಯಧಿಕ ಸಂಖ್ಯೆಯಲ್ಲಿದ್ದು ವಿದ್ಯಾಭ್ಯಾಸಕ್ಕೆ ಅಂತಹ ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಇದರಿಂದ ಉಪಾಧ್ಯಾಯರುಗಳು ಆಗಾಗ್ಗೆ ಹತಾಶರಾಗುತ್ತಿದ್ದರು. ಇಲ್ಲಿದ್ದ ವಿಜ್ಞಾನದ ಶಿಕ್ಷಕ ತನ್ನೆಲ್ಲಾ ಇತಿಮಿತಿಗಳ ನಡುವೆಯೂ ವೀಮನ್‍ನಂತಹವರು ವಿಜ್ಞಾನದ ವಿಷಯಗಳಲ್ಲಿ ಆಸಕ್ತಿ ತಳೆಯುವಂತೆ ಮಾಡಿದನು. ದಿನ ನಿತ್ಯ ಶಾಲೆಗಾಗಿ ದೂರ ಬಸ್ ಪ್ರಯಾಣ ಮಾಡುವುದನ್ನು ತಪ್ಪಿಸಲು, ವೀಮನ್ ತಂದೆ, ಸ್ವಲ್ಪ ದೊಡ್ಡ ಪಟ್ಟಣವಾದ ಕೋರಾದಲ್ಲಿ ಮನೆ ಮಾಡಿ ತನ್ನ ಐದು ಮಕ್ಕಳಿಗೂ ಉತ್ತಮ ಶಿಕ್ಷಣ ದಕ್ಕುವಂತೆ ಮಾಡಲು ಯತ್ನಿಸಿದನು. ಮುಂದೆ ವೀಮನ್ ಕಾಲೇಜು ಶಿಕ್ಷಣಕ್ಕಾಗಿ ಎಂಐಟಿಗೆ ಸೇರಿದನು. ತೀರ ಗ್ರಾಮೀಣ ಪ್ರದೇಶದ ಹುಡುಗನೊಬ್ಬ ತಮ್ಮ ಕಾಲೇಜಿಗೆ ಪ್ರವೇಶ ಬಯಸಿ ಬರುತ್ತಿವುದು ಎಂಐಟಿ ಆಡಳಿತ ಮಂಡಳಿಗೆ ಸೋಜಿಗವೆನಿಸಿತು. ಕಾಲೇಜಿನಲ್ಲಿ ತನಗೆ ಇಷ್ಟವಾದ ವಿಷಯದಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿ, ಉಳಿದವುಗಳ ಕಡೆ ಕನಿಷ್ಟ ಗಮನವನ್ನು ಹರಿಸದಿರುವುದು ವೀಮನ್‍ನ ದೌರ್ಬಲ್ಯವೆನಿಸಿಕೊಂಡಿತು. ಎಂಐಟಿಯಲ್ಲಿ ಪ್ರಾದ್ಯಾಪಕ ಅಲ್ ಹೀಲ್‍ನಿಂದ ಉಪನ್ಯಾಸ ಕೇಳಿದ ನಂತರ ಭೌತಶಾಸ್ತ್ರ ವೀಮನ್‍ನ ಆಸಕ್ತಿಯ ಕೇಂದ್ರವಾಯಿತು. ಇಲ್ಲಿ ಡ್ಯಾನ್ ಕೆಪ್ಲರ್‍ನ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಪ್ರಯೋಗ ತಂಡಕ್ಕೆ ಸೇರಿಕೊಂಡನು. ಇಲ್ಲಿಯೇ ವೀಮನ್‍ಗೆ ಭೌತಶಾಸ್ತ್ರದಲ್ಲಿ ಸುಪ್ತವಾಗಿದ್ದ ಪ್ರತಿಭೆ ಬೆಳಕಿಗೆ ಬರತೊಡಗಿತು. ಎಂಐಟಿಯಿಂದ ಸ್ಕ್ಯಾನ್ಫೋರ್ಡ್ ಕಾಲೇಜಿಗೆ ವರ್ಗಾಯಿಸಿಕೊಂಡು ಅಲ್ಲಿ ಹಾನ್ಫ್ಕ್‍ನ ಕೆಳಗೆ ಲೇಸರ್ ರೋಹಿತಶಾಸ್ತ್ರ ವಿಭಾಗ ಸೇರಿದನು. ಇಲ್ಲಿ ಜಲಜನಕ 15-25 ಸ್ಥಿತ್ಯಂತರದ ಅಧ್ಯಯನ ಹಾಗೂ ಪ್ರಯೋಗಗಳು ನಡೆಯುತ್ತಿದ್ದವು. ವೀಮನ್ ಇದರಲ್ಲಿ ಸಂಪೂರ್ಣವಾಗಿ ತಲ್ಲೀನನಾದನು. ಧೃವೀಕರಣ ರೋಹಿತಶಾಸ್ತ್ರದಲ್ಲಿ (Polarised Spectroscopy) ಸಂಪ್ರಬಂಧ ಮಂಡಿಸಿ, ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕ ವಿಜ್ಞಾನಿಯಾಗಿ ಸೇರಿಕೊಂಡನು. ಇಲ್ಲಿ ಜಲಜನಕ ಪರಮಾಣುವಿನಲ್ಲಿ ಸಾಮ್ಯತೆ (Parity) ಭಂಗವಾಗುವುದನ್ನು ಅರಿಯುವ ಪ್ರಯೋಗಗಳು ನಡೆಯುತ್ತಿದ್ದವು. ಹಲವು ತಿಂಗಳುಗಳ ಕಠಿಣ ಕೆಲಸದ ನಂತರ ವೀಮನ್ ಇದರಲ್ಲಿ ಭ್ರಮೆ ನಿರಸನಗೊಂಡನು. ಆಡಳಿತ ವರ್ಗದ ಅನುಮತಿ ಪಡೆದು, ವೀಮನ್ ಸೇಸಿಯಂನಲ್ಲಿನ ಸಾಮ್ಯತೆ ಭಂಗ ಕುರಿತಾದ ಸಂಶೋಧನೆ ಪ್ರಾರಂಭಿಸಿದನು. ಇದನ್ನು ಗುರುತಿಸಿದ ಬೌಲ್ಡರ್‍ನಲ್ಲಿರುವ ಕೊಲರಡೋ ವಿಶ್ವವಿದ್ಯಾಲಯ ಹೆಚ್ಚಿನ ಸಂಶೋಧನೆಗಾಗಿ ಮೀವರ್‍ನನ್ನು ಆಹ್ವಾನಿಸಿತು. ಈ ಪ್ರಯೋಗಗಳು ಯಶಸ್ವಿಯಾದ ನಂತರ ಇಲ್ಲಿಯೇ ಪೂರ್ಣಾವಧಿ ಪ್ರಾಧ್ಯಾಪಕನಾದನು. ಲೇಸರ್ ತಂಪಿಸಿಕೆಯಿಂದ ಸೆರೆ ಹಿಡಿಯಲ್ಪಟ್ಟ ಪರಮಾಣುಗಳನ್ನು ಕಾಂತಕ್ಷೇತ್ರದಲ್ಲಿ ಅಧ್ಯಯನ ನಡೆಸಿದನು. ಇದರಲ್ಲಿ ಎರಿಕ್ ಕಾರ್ನೆಲ್ ವೀಮನ್‍ಗೆ ಸಹಾಯ ಒದಗಿಸಿದನು. ಇದಕ್ಕಾಗಿ ವೀಮನ್ ಹಾಗೂ ಎರಿಕ್ ಕಾರ್ನೆಲ್ 2001ರ ನೊಬೆಲ್ ಪ್ರಶಸ್ತಿ ಗಳಿಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/18/2020