ಅಂಥೋನಿ ಜೆ. ಲೆಗ್ಗೆಟ್ (1931--) -೨೦೦೩
ಇಂಗ್ಲೆಂಡ್-ಭೌತಶಾಸ್ತ್ರ-ನಿಮ್ನ ತಾಪಮಾನದಲ್ಲಿ ಪರಿಶ್ರಮಿಸಿದಾತ ಹಾಗು ಕ್ವಾಂಟಂ ಸಿದ್ಧಾಂತದ ಮಿತಿಗಳನ್ನು ಸೂಚಿಸಿದಾತ.
ಅಂಥೊನಿ 26 ಮಾರ್ಚ್ 1938ರಂದು ದಕ್ಷಿಣ ಲಂಡನ್‍ನ ಕ್ಯಾಂಪ್‍ಬೆಲ್‍ನಲ್ಲಿ ಜನಿಸಿದನು. ಈತನ ಪೂರ್ವಜರು ಹ್ಯಾಂಪ್‍ಷೈರ್‍ನ ಸಣ್ಣ ಹಳ್ಳಿಯೊಂದರಲ್ಲಿ ಮೋಚಿಗಳಾಗಿದ್ದರು. ಅಂಥೊನಿಯ ತಂದೆ ತಾಯಿಗಳೇ ಅವರ ವಂಶದಲ್ಲಿ ಕಾಲೇಜು ಮೆಟ್ಟಿಲು ಹತ್ತಿದ ಮೊದಲಿಗರು. ಯುದ್ದದ ಸಮಯದಲ್ಲಿ ಲಂಡನ್‍ನ ಹೊರವಲಯಕ್ಕೆ ಸಾಗಿ ಅಂಥೊನಿ ಕುಟುಂಬ ಜೀವಿಸಿತು. ಕ್ಯಾಥೊಲಿಕ್ ಗ್ರೇಡ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮುಗಿಸಿ ವಿಂಬಲ್ಡನ್‍ನ ಸೇಕ್ರೇಡ್ ಹಾರ್ಟ್ ಕಾಲೇಜಿಗೆ ಅಂಥೊನಿ ಸೇರಿದನು. 1955ರಲ್ಲಿ ಆಕ್ಸ್ಫರ್ಡ್ ಕಾಲೆಜ್ ಸೇರಿದನು. 1957ರಲ್ಲಿ ಸೋವಿಯತ್ ರಷ್ಯಾ ಜಗತ್ತಿನ ಮೊದಲ ಕೃತಕ ಉಪಗ್ರಹ ಸ್ಪುತ್ನಿಕ್ ಹಾರಿಸಿತು. ಇದು ಬ್ರಿಟನ್‍ನ ತಾಂತ್ರಿಕ ಶ್ರೇಷ್ಟತೆಗೆ ಎಸೆದ ಸವಾಲೆಂದೇ ಪರಿಗಣಿಸಲಾಯಿತು. ವಿದ್ಯಾರ್ಥಿಗಳಿಗೆ ವಿಜ್ಞಾನ , ತಂತ್ರಜ್ಞಾನದ ಬದಲು, ಗ್ರೀಕ್-ಲ್ಯಾಟಿನ್ ಸಾಹಿತ್ಯ ಕಲಿಸಲು ನೀಡುತ್ತಿರುವ ಪ್ರಾಧಾನ್ಯತೆಯೇ , ತಾಂತ್ರಿಕವಾಗಿ ರಷ್ಯಾಕ್ಕಿಂತಲೂ ಹಿಂದುಳಿಯಲು ಕಾರಣವೆಂಬ ಕೂಗೆದ್ದಿತು. ಇದರ ಫಲವಾಗಿ ವಿಜ್ಞಾನದ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡತೊಡಗಿದ ಸರ್ಕಾರ, ವಿದ್ಯಾರ್ಥಿ ವೇತನಗಳನ್ನು ಕಲ್ಪಿಸತೊಡಗಿತು. ಅಂಥೊನಿ ಇದರ ಸದುಪಯೋಗ ಪಡಿಸಿಕೊಂಡು, 1959ರಲ್ಲಿ ಭೌತಶಾಸ್ತ್ರದ ಪದವಿಯೊಂದಿಗೆ ಹೊರಬಂದನು. 1964ರಲ್ಲಿ ಡಾಕ್ಟರೇಟ್ ಪೂರ್ಣಗೊಳಿಸಿ ಅರ್ಬಾನ್ ಕ್ಯಾಂಪೇನ್‍ನಲ್ಲಿದ್ದ ಇಲಿನಾಯ್ ವಿಶ್ವವಿದ್ಯಾಲಯದ ಡೇವಿಡ್ ಪೈನ್ ನೇತೃತ್ವದ ಸಂಶೋಧನಾ ತಂಡವನ್ನು ಅಂಥೊನಿ ಸೇರಿದನು. ಇಲ್ಲಿ ದ್ರವ ಜಲಜನಕ ಅತಿಪ್ರವಾಹಿ ಸ್ಥಿತಿಯನ್ನು ಕುರಿತಾಗಿ ಆರಂಭಿಕ ಅಧ್ಯಯನಗಳನ್ನು ನಡೆಸಿದನು. 1967ರಲ್ಲಿ ಟೋಕಿಯೋದ ಕ್ಯೋಟೋ ವಿಶ್ವವಿದ್ಯಾಲಯಕ್ಕೆ ಹೋಗಿ ಟೆಕೆಯೇ ಮಟ್ಸಬ್ಲರ್‍ನ ಮಾರ್ಗದರ್ಶನ ಪಡೆದನು. ಇಲ್ಲಿರುವಾಗ ಅಂಥೊನಿ, ಇಂಗ್ಲಿಷ ಮಾತನಾಡುವ ವಿದೇಶಿಯರಿಂದ ದೂರವುಳಿದು ಜಪಾನಿಯರೊಂದಿಗೆ ಬೆರೆತು, ಅವರ ಭಾಷೆಯಲ್ಲಿ ಪರಿಣಿತಿ ಗಳಿಸಿದನು. ಇದರಿಂದ ಸಹಪಾಠಿಗಳು ಅಂಥೊನಿ ಸಿಐಎ ಏಜೆಂಟನಾಗಿರಬೇಕೆಂದು ಭಾವಿಸಿ ದೂರ ಸರಿದರು. 1967ರಲ್ಲಿ ಸಸ್ಸೆಕ್ಸ್ “ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ಸೇರಿದನು. 1980 ರಿಂದ ಗಾಜಿನ ನಿಮ್ನ ತಾಪಮಾನಗಳ ಗುಣ ಲಕ್ಷಣ, ಕ್ವಾಂಟಂ ಸಿದ್ಧಾಂತದ ಇತಿ ಮಿತಿಗಳಲ್ಲಿ ಸಂಶೋಧನಾಶೀಲನಾಗಿದ್ದಾನೆ. ಅಂಥೊನಿ 2003ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/16/2019