ಹರ್ಬರ್ಟ್, ಕ್ರೊಯೆಮರ್ (1928--) ೨೦೦೦
ಜರ್ಮನಿ -ಭೌತಶಾಸ್ತ್ರ- ಅಸಮ ರಾಚನಿಕ ಎಲೆಕ್ಟ್ರಾನಿಕ್ ಸಾಧನಗಳ ಕ್ರಾಂತಿಗೆ ಕಾರಣನಾದಾತ.
ಕ್ರೊಯೆಮರ್ 25 ಆಗಸ್ಟ್ 1928ರಂದು ವೀಮರ್‍ನಲ್ಲಿ ಜನಿಸಿದನು. ಈತನ ತಂದೆ ತಾಯಿಗಳು ಕುಶಲಕರ್ಮಿಗಳಾಗಿದ್ದು ತಮ್ಮಮಕ್ಕಳು ಅತ್ಯುತ್ತಮ ವಿದ್ಯಾಭ್ಯಾಸ ಹೊಂದಬೇಕೆಂದು ಹೆಬ್ಬಯಕೆ ಹೊಂದಿದ್ದರು. ಪಠ್ಯಕ್ರಮಗಳ ಏಕಾತನೆಯಿಂದ ಆಗಾಗ್ಗೆ ಬೇಸರಗೊಳ್ಳುತ್ತಿದ್ದ ಕ್ರೋಯೆಮರ್ ತುಂಟ ವಿದ್ಯಾರ್ಥಿಯೆಂದು ಶಾಲೆಯಲ್ಲಿ ಗುರುತಿಸಲ್ಪಟ್ಟಿದ್ದನು.
1947ರಲ್ಲಿ ಜೆನಾ ವಿಶ್ವವಿದ್ಯಾಲಯ ಸೇರಿದನು. ಬೇಸಿಗೆಯ ರಜಾ ದಿನಗಳಲ್ಲಿ ಬರ್ಲಿನ್‍ನ ಸೀಮೆನ್ಸ್ ಕಂಪನಿಯಲ್ಲಿ ಕೆಲಸ ಮಾಡಿದನು. ತನ್ನ ಪ್ರಾಧ್ಯಾಪಕರೊಬ್ಬರ ಶಿಫಾರಸ್ಸಿನ ಮೇರೆಗೆ ಗಟ್ಟಿಂಜೆನ್‍ನಲ್ಲಿದ್ದ ಮುಂದೆ 1989ರಲ್ಲಿ ನೊಬೆಲ್ ಪುರಸ್ಕೃತನಾದ ವೂಲ್ಫ್ ಗ್ಯಾಂಗ್ ಪೌಲ್‍ನನ್ನು ಬೇಟಿಯಾದನು. ಪೌಲ್, ಕನ್ನಡಿಯಲ್ಲಿ ಬಿಂಬ ಎಡ ಬಲವಾಗಿ ಬದಲಾಗುವುದೇ ಹೊರತು, ಮೇಲೆ ಕೆಳಗೆ ಏಕಲ್ಲ? ಎಂದು ಪ್ರಶ್ನಿಸಿದನು. ಇದಕ್ಕೆ ನಿಶ್ಚಿತ ಉತ್ತರ ಕ್ರೊಯೆಮರ್‍ಗೆ ತಿಳಿದಿರಲಿಲ್ಲ. ಇದರಿಂದ ಕ್ರೊಯೆಮರ್‍ಗೆ ತನ್ನ ಜ್ಞಾನದ ಇತಿಮಿತಿಗಳ ಅರಿವಾಯಿತು. ಆದರೆ ಕೆಲ ಸಮಯದ ನಂತರ ಪೌಲ್‍ನಿಂದ ಆಹ್ವಾನ ಬಂದಿತು. 1939ರಲ್ಲಿ ಘನದ ಮೇಲ್ಮೈಗಳ ವಾಹಕತೆ ಕುರಿತಾಗಿ ಸಂಶೋಧನೆ ನಡೆಸಿದನು. ಇಲ್ಲಿ ಕ್ರೋಯೆಮರ್ ಮಾರ್ಗದರ್ಶಕನಾಗಿದ್ದ ಸೌಟೆರ್‍ಗೆ ವಿದ್ಯಾರ್ಥಿಗಳು ದೀರ್ಘಕಾಲ ಯಾರೊಬ್ಬರ ಕೆಳಗೆ ಕೆಲಸ ಮಾಡುವುದನ್ನು ಒಪ್ಪುತ್ತಿರಲಿಲ್ಲ. ಸ್ವತಂತ್ರವಾಗಿ ಚಿಂತಿಸುವುದೇ ನಿಜವಾದ ವಿದ್ಯಾಭ್ಯಾಸವೆಂಬುದು ಸೌಟೆರ್‍ನ ಖಚಿತ ನಿಲುವಾಗಿದ್ದಿತು. ಆದ್ದರಿಂದ 24 ವರ್ಷ ತುಂಬುವುದರೊಳಗಾಗಿ ಕ್ರೊಯೆಮರ್ ಡಾಕ್ಟರೇಟ್ ಗಳಿಸಿದನು. 1952ರ ವೇಳೆಗೆ ಸೈದ್ಧಾಂತಿಕ ಭೌತಶಾಸ್ತ್ರಜ್ಞರಿಗೆ ವೃತ್ತಿಯ ಅವಕಾಶಗಳೇ ಇರಲಿಲ್ಲ. ಆದ್ದರಿಂದ ಕ್ರೊಯೆಮೆರ್ ಸೆಂಟ್ರಾಲ್ ಟೆಲೆಕಮ್ಯುನೀಕೇಷನ್ ಲ್ಯಾಬೋರೇಟರಿಯಲ್ಲಿ ಅರೆವಾಹಕಗಳ ಪರಿಣಿತನಾಗಿ ಸೇರಿದನು. ಈ ಸಂಸ್ಥೆಯಲ್ಲಿ ಎದುರಾಗುತ್ತಿದ್ದ ಸಮಸ್ಯೆಗಳಿಗೆ ಸೈದ್ಧಾಂತಿಕ ಪರಿಹಾರ ಒದಗಿಸುತ್ತಿದ್ದ ಕ್ರೊಯೆಮರ್‍ಗೆ ಅಸಮ ರಾಚನಿಕ ದ್ವಿಧೃವ ಟ್ರಾನ್ಸಿಸ್ಟರ್ ಪರಿಕಲ್ಪನೆ ಬಂದಿತು. 1954ರಲ್ಲಿ ಅಸಂಸಂ, ನ್ಯೂಜೆರ್ಸಿಯಲ್ಲಿ ಆರ್‍ಸಿಎ ಪ್ರಯೋಗಾಲಯ ಸೇರಿದನು. ಅಲ್ಲಿರುವಾಗ ಜರ್ಮೇನಿಯಂ, ಸಿಲಿಕಾನ್ ಮಿಶ್ರಲೋಹಗಳ ಉತ್ಸರ್ಜಕ ನಿರ್ಮಿಸಿದನು. 1963ರಲ್ಲಿ ಪೌಲೋ ಆಲ್ಟೋದಲ್ಲಿರುವ ವೇರಿಯನ್ ಅಸೋಸಿಯೇಟ್ಸ್ ಕಂಪನಿಯಲ್ಲಿ ಕೆಲಸ ಮಾಡಿದನು. ಈ ಸಮಯದಲ್ಲಿ ಸಾಮಾನ್ಯ ತಾಪಮಾನದಲ್ಲಿ ಹೊಸದಾಗಿ ಪ್ರಸ್ತಾವಿತಗೊಂಡಿರುವ ಡಯೋಡ್ ಲೇಸರ್ ಕಾರ್ಯನಿರ್ವಹಿಸದೆಂದು ಡಾ ಸಾಲ್ ಮಿಲ್ಲರ್ ವಿವರಿಸಿದನು. ಇದನ್ನು ಒಪ್ಪದ ಕ್ರೊಯೆಮರ್, ಲೇಖನವೊಂದನ್ನು ಪ್ರಕಟಿಸಿದನು. ಅಸಮ ರಾಚನಿಕ ಎಲೆಕ್ಟ್ರಾನಿಕ್ ಸಾಧನಗಳ ಕ್ರಾಂತಿಗೆ ಕ್ರೊಯೆಮರ್ ನೀಡಿದ ಕೊಡುಗೆಗಳಿಗಾಗಿ 2000ರಲ್ಲಿ ನೊಬೆಲ್ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019