ರಸೆಲ್, ಹಲ್ಸ್ (1950--) ೧೯೯೩
ಅಸಂಸಂ-ಭೌತಶಾಸ್ತ್ರ-ಹೊಸ ಬಗೆಯ ಪಲ್ಸಾರ್‍ಗಳ ಹಾಗೂ ಗುರುತ್ವದ ವಿಕಿರಣತೆಯ ಅನಾವರಣಗೊಳಿಸಿದಾತ.
ಹಲ್ಸ್, 28 ನವೆಂಬರ್ 1950ರಲ್ಲಿ ನ್ಯೂಯಾರ್ಕ್‍ನಲ್ಲಿ ಜನಿಸಿದನು. ಚಿಕ್ಕಂದಿನಿಂದಲೇ ಬಾಹ್ಯ ಜಗತ್ತನ್ನು ಕುರಿತಾಗಿ ಹಲ್ಸ್ ಅಪಾರ ಕುತೂಹಲ ಹೊಂದಿದ್ದನು. ಈತನ ವೈಜ್ಞಾನಿಕ ಹಂಬಲಕ್ಕೆ ತಂದೆ, ತಾಯಿಯ ಪ್ರೋತ್ಸಾಹ ದಕ್ಕಿತು. ಹಲ್ಸ್ ಪ್ರೌಢಶಾಲೆಗೆ ಬರುವ ವೇಳೆಗೆ ಭೌತ, ರಸಾಯನ, ಜೀವಶಾಸ್ತ್ರ ಗಣಿತಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದನು. ಇಂತಹ ಕುತೂಹಲ, ಹೊಂದಿದ್ದ ಹಲ್ಸಗೆ ಶಾಲಾ ಪಠ್ಯಕ್ರಮ, ಚಟುವಟಿಕೆ ಆಕರ್ಷಕವಾಗಿ ಕಾಣುತ್ತಿರಲಿಲ್ಲ. ತಂದೆ ತಾಯಿಗಳಿಗೆ ಆರ್ಥಿಕ ಹೊರೆಯಾಗದಂತಹ ಕಾಲೇಜನ್ನು ಆರಿಸಿಕೊಂಡ ಹಲ್ಸ್ ಶುಲ್ಕರಹಿತವಾದ ಕೂಪರ್ ಯೂನಿಯನ್ ಕಾಲೇಜನ್ನು ಸೇರಿದನು. ಇಲ್ಲಿ ಐಬಿಎಂ-1620 ಗಣಕ ಲಭ್ಯವಿದ್ದಿತು. ಫೋರ್ಟ್ರಾನ್ (ForTran=Formula TRANslation) ಕ್ರಮವಿಧಿ ಭಾಷೆ ಕಲಿತ ಹಲ್ಸ್ ಸಮಸ್ಯೆಗಳ ಪರಿಹಾರಕ್ಕೆ ಗಣಕ ಬಳಸುವ ಅನುಕೂಲ ಕಂಡುಕೊಂಡನು. ಭೌತಶಾಸ್ತ್ರದ ಅಧ್ಯಯನಕ್ಕಾಗಿ 1970ರಲ್ಲಿ ಮೆಸಾಚುಸೆಟ್ಸ್ ವಿಶ್ವವಿದ್ಯಾಲಯ ಸೇರಿ ರೇಡಿಯೋ ಖಗೋಳಶಾಸ್ತ್ರದಲ್ಲಿ ಪರಿಶ್ರಮಿಸಬೇಕೆಂದು ಬಯಸಿದನಾದರೂ ಮೂಲ ಸೌಕರ್ಯಗಳ ಕೊರತೆಯಿಂದ ಅದು ಸಾಧ್ಯವಾಗದೇ ಹೋಂiತು. 1975ರಲ್ಲಿ ಡಾಕ್ಟರೇಟ್ ಗಳಿಸಿದ ಹಲ್ಸ್, ವರ್ಜೀನಿಯಾದ ಚಾರ್ಲೊಟ್ಸ್‍ವಿಲ್ಲೆಯಲ್ಲಿರುವ ರೇಡಿಯೋ ಅಸ್ಟ್ರಾನಮಿ ಅಬ್ಸರ್ವೇಟರಿ ಸೇರಿ ಪಲ್ಸಾರ್‍ಗಳ ಅಧ್ಯಯನದತ್ತ ಗಮನವನ್ನು ಕೇಂದ್ರೀಕರಿಸಿದನು. 1977ರಲ್ಲಿ ಪ್ರಿನ್ಸ್’ಟನ್ ವಿಶ್ವವಿದ್ಯಾಲಯದ ಪ್ಲಾಸ್ಮಾ ಫಿಸಿಕ್ಸ್ ಲ್ಯಾಬೋರೇಟರಿಯಲ್ಲಿನ ಸೈದ್ಧಾಂತಿಕ ಸಂಶೋಧನಾ ತಂಡ ಸೇರಿದನು. ಇಲ್ಲಿ ಔಷ್ಣಿಕಬೈಜಿಕ ಸದಳನ (ThermoNuclear Fusion) , ಅಧಿಕ ತಾಪಮಾನ ಪ್ಲಾಸ್ಮಾದಲ್ಲಿನ ಕಲುಷಿತಗಳ ನಿವಾರಣೆ ಕುರಿತಾಗಿ ಪರಿಶ್ರಮಿಸಿದನು. ಇದರಫಲವಾಗಿ ತಟಸ್ಥ ಜಲಜನಕ ಮತ್ತು ಆವಿಷ್ಟಿತ ಅಯಾನ್‍ಗಳ ಮಧ್ಯದ ಪ್ರತಿಕ್ರಿಯೆಗಳನ್ನು ಅರಿಯಲು ಗಣಕ ಕ್ರಮವಿಧಿಗಳನ್ನು ತಯಾರಿಸಿದನು. ಈ ಕ್ರಮ ವಿಧಿಯನ್ನು ಈಗ ಅಂತಾರಾಷ್ಟ್ರೀಯ ಪರಮಾಣು ಚೈತನ್ಯ ಸಂಸ್ಥೆ ಶಿಷ್ಟ ಮಾದರಿಯಾಗಿ ಅಂಗೀಕರಿಸಿದೆ. ಹಲ್ಸ್ ಪ್ಯೂರ್ಟೋರಿಕೊದಲ್ಲಿರುವ ಅರೆಸಿಬೋ ವೀಕ್ಷಣಾಲಯದಲ್ಲಿ ಟೇಲರ್ ಸಾಂಗತ್ಯದಲ್ಲಿ ಪಲ್ಸಾರ್‍ಗಳ ವ್ಯಾಪಕ ಸರ್ವೆ ನಡೆಸಿದನು. ಈ ಕಾರ್ಯದಿಂದಾಗಿ 1974ರಲ್ಲಿ ದ್ವಿಕಾಯ ಪಲ್ಸಾರ್ (Binary Pulsar) ಪಿಎಸ್‍ಅರ್‍ಬಿ 1913+16 ಪತ್ತೆಯಾಯಿತು. ಈ ಪಲ್ಸಾರ್ ಜೋಡಿ ಕಾಯಗಳಿಂದಾಗಿದೆ. ಇದರಲ್ಲಿ ಪಲ್ಸಾರ್‍ನೊಂದಿಗೆ ದೃಗ್ಗೋಚರವಾಗದ ಕಪ್ಪು ತಾರೆಯೊಂದು ಸಮ್ಮಿಳಿತಗೊಂಡಿದೆ. ಪಲ್ಸಾರ್‍ನೊಂದಿಗೆ ಸಮ್ಮಿಳಿತಗೊಂಡಿರುವ ಈ ಕಪ್ಪು ನ್ಯೂಟ್ರಾನ್ ತಾರೆಯ ಆವರ್ತನೆಯಿಂದ ನಿರ್ದಿಷ್ಟಾವಧಿಯಲ್ಲಿ ರೇಡಿಯೋ ತರಂಗಗಳ ವ್ಯಾಪ್ತಿಯ ಉತ್ಸರ್ಜನೆಗಳು (Emissions) ಸಾಂದ್ರಿತ ವಲಯದ ಸನಿಹದಲ್ಲಾಗುತ್ತಿದೆ. ಈ ದ್ವಿಕಾಯ ಪಲ್ಸಾರ್‍ಗಳ ಮೇಲೆ ಬಹು ನಿಖರವಾದ ಪರೀಕ್ಷೆಗಳನ್ನು ನಡೆಸಿ ಹಲ್ಸ್ ಹಾಗೂ ಟೇಲರ್ ಸಾಮಾನ್ಯ ಸಾಪೇಕ್ಷ ಸಿದ್ಧಾಂತ ಮುನ್ನುಡಿದಂತೆ ಗುರುತ್ವ ವಿಕಿರಣತೆಯನ್ನು ಗುರುತಿಸಿದ್ದಾರೆ. 1918ರಲ್ಲಿ ಇಂತಹ ಸ್ಥಿತಿಗಳ ಕಾಯದಿಂದ ಗುರುತ್ವ ವಿಕಿರಣಗಳು ಹೊರ ಹೊಮ್ಮುವುದೆಂದು ತನ್ನ ಸಾಪೇಕ್ಷ ಸಿದ್ಧಾಂತದಲ್ಲಿ ಐನ್‍ಸ್ಟೀನ್ ವಿವರಿಸಿದ್ದನು. 1979ರಲ್ಲಿ ಇತರ ವಿಜ್ಞಾನಿಗಳು ಈ ಬಗೆಯ ಪಲ್ಸಾರ್ ಕಕ್ಷೆಗಳಲ್ಲಿನ ಚಲನೆಗಳಲ್ಲಿ ಅಲ್ಪ ವೇಗೋತ್ಕರ್ಷಗಳನ್ನು ಗುರುತಿಸಿ ಇವುಗಳು ಗುರುತ್ವದ ಅಲೆಗಳನ್ನು ಹೊಮ್ಮಿಸುವುದೆಂದು ಖಚಿತಪಡಿಸಿದ್ದಾರೆ. ಹೊಸ ಬಗೆಯ ಪಲ್ಸಾರ್‍ಗಳ ಹಾಗೂ ಗುರುತ್ವದ ವಿಕಿರಣತೆಯ ಅನಾವರಣಕ್ಕಾಗಿ ಹಲ್ಸ್ 1993ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/5/2019